ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್ ! ಸ್ಟೇಷನ್ ಮಾಸ್ಟರ್ ಪರೀಕ್ಷೆಯಲ್ಲಿ ಕನ್ನಡಕ್ಕೆ ಇಲ್ಲ ಅವಕಾಶ?

Kannadaprabha News   | Kannada Prabha
Published : Feb 04, 2026, 06:29 AM IST
Indian Railway

ಸಾರಾಂಶ

ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಲಯದಲ್ಲಿ 'ಸ್ಟೇಷನ್ ಮಾಸ್ಟರ್' ಹುದ್ದೆಯ ಮುಂಬಡ್ತಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯನ್ನು ಕೈಬಿಡಲಾಗಿದೆ. ಕೇವಲ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಪರೀಕ್ಷೆ ನಡೆಸುವ ಈ ನಿರ್ಧಾರವು ಕನ್ನಡಪರ ಸಂಘಟನೆಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಹೋರಾಟದ ಎಚ್ಚರಿಕೆ ನೀಡಿವೆ.

ಹುಬ್ಬಳ್ಳಿ: ರೈಲ್ವೆ ಹುದ್ದೆಗಳ ಪರೀಕ್ಷೆಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಬರೆಯಲು ಅವಕಾಶವಿದ್ದರೂ ‘ಸ್ಟೇಷನ್ ಮಾಸ್ಟರ್’ ಹುದ್ದೆಗೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಇಲ್ಲದಾಗಿದೆ. ಇದು ಕನ್ನಡಪರ ಸಂಘಟನೆಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಲಯದಲ್ಲಿ ಕಳೆದ ಜ.31ರಂದು ಮುಂಬಡ್ತಿ ನೇಮಕಾತಿಗಾಗಿ ಅಧಿಸೂಚನೆ (ಯುಬಿಎಲ್‌ಡಿ /17834/2//ಎಸ್2376/ಎಂ16/ಓ16) ಹೊರಡಿಸಲಾಗಿದೆ. ಮಾರ್ಚ್‌ 2ರಂದು ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಸ್ಟೇಷನ್ ಮಾಸ್ಟರ್ (45 ಹುದ್ದೆ) ಪರೀಕ್ಷೆಗೆ ಕನ್ನಡ ಭಾಷೆಯನ್ನು ತೆಗೆದು ಹಾಕಿ ಕೇವಲ ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅಧಿಸೂಚನೆ ಹೊರಡಿಸಲಾಗಿದೆ. ಈಗಾಗಲೇ ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆದು ಆಯ್ಕೆಯಾದ ರೈಲ್ವೆ ನೌಕರರಿಗೆ ಈಗ ಇಲಾಖಾವಾರು ಆಂತರಿಕ ಪರೀಕ್ಷೆಯಲ್ಲಿ ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

2012ರಿಂದ ರೈಲ್ವೆ ಇಲಾಖೆಯ ಗ್ರೂಪ್ ‘ಸಿ’ ಹಾಗೂ ಗ್ರೂಪ್ ‘ಡಿ’ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸಲು ಆದೇಶಿಸಲಾಗಿದೆ. ಈಗಾಗಲೇ ರೈಲ್ವೆ ಮಂತ್ರಿಗಳು ರೈಲ್ವೆ ನೇಮಕಾತಿ ಪರೀಕ್ಷೆಗಳನ್ನು ಪ್ರಾದೇಶಿಕ ಭಾಷೆಯಲ್ಲೇ ನಡೆಸಬೇಕೆಂದು ಸ್ಪಷ್ಟವಾಗಿ ಆದೇಶ ನೀಡಿದ್ದರೂ ಸಹ ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಪರೀಕ್ಷೆಗೆ ಅವಕಾಶ ನೀಡಲಾಗಿದೆ.

ರೈಲ್ವೆ ಪರೀಕ್ಷೆಗಳನ್ನು ರೈಲ್ವೆ ಬೋರ್ಡ್ ಗೈಡ್‌ಲೈನ್ಸ್‌ನಂತೆ ಸಿಬಿಟಿ (ಕಂಪ್ಯೂಟರ್ ಬೇಸ್) ಮೂಲಕ ನಡೆಸಲಾಗುತ್ತಿದೆ. ಹೀಗಾಗಿ ಇಲ್ಲಿ ಇಂಗ್ಲಿಷ್ ಮತ್ತು ಹಿಂದಿ ಮಾತ್ರ ಬಳಸಲಾಗುತ್ತಿದೆ. ತಾಂತ್ರಿಕ ಕಾರಣದಿಂದಾಗಿ ಕನ್ನಡದಲ್ಲಿ ಪರೀಕ್ಷೆ ನಡೆಸಲು ಸಾಧ್ಯವಾಗುತ್ತಿಲ್ಲ. ಆಗಿರುವ ಸಮಸ್ಯೆಯನ್ನು ಶೀಘ್ರದಲ್ಲಿಯೇ ಸರಿಪಡಿಸಲಾಗುವುದು ಎಂಬುದು ರೈಲ್ವೆ ಇಲಾಖೆಯ ಅಧಿಕಾರಿಗಳ ಮಾತು.

ಕನ್ನಡಿಗರ ಆಕ್ರೋಶ:

ನೈಋತ್ಯ ರೈಲ್ವೆ ಇಲಾಖೆಯ ಈ ನಡೆಗೆ ಕನ್ನಡಪರ ಸಂಘಟನೆಗಳು, ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕನ್ನಡ ಭಾಷೆ ಸೇರಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿವೆ.

ಆದೇಶ ಹಿಂಪಡೆಯಲಿ :

ರೈಲ್ವೆಯ ಯಾವುದೇ ಪರೀಕ್ಷೆಯಿರಲಿ, ಅದನ್ನು ಕನ್ನಡದಲ್ಲಿಯೇ ಕಡ್ಡಾಯವಾಗಿ ನಡೆಸಬೇಕು. ಕನ್ನಡಿಗರು ಇನ್ನೊಂದು ಭಾಷೆಯನ್ನು ಕಲಿತು ಪರೀಕ್ಷೆ ಬರೆಯಬೇಕಾದ ಅನಿವಾರ್ಯ ಪರಿಸ್ಥಿತಿಯನ್ನು ಎಂದಿಗೂ ಒಪ್ಪುವುದಿಲ್ಲ. ಈ ಆದೇಶವನ್ನು ತಕ್ಷಣ ಹಿಂಪಡೆಯದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ್ರ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಆಯ್ಕೆಯಾದ ರೈಲ್ವೆ ನೌಕರರಿಗೆ ಇಲಾಖಾವಾರು ಆಂತರಿಕ ಪರೀಕ್ಷೆ ಇದಾಗಿದೆ. ಸಿಬಿಟಿ ಬೇಸ್‌ನಲ್ಲಿ ಪರೀಕ್ಷೆ ನಡೆಯುತ್ತಿರುವುದರಿಂದ ಇಂಗ್ಲಿಷ್‌, ಹಿಂದಿ ಭಾಷೆ ಮಾತ್ರ ತೋರಿಸುತ್ತಿದೆ. ಆಗಿರುವ ಸಮಸ್ಯೆ ಕುರಿತು ರೈಲ್ವೆ ಬೋರ್ಡ್‌ನ ಗಮನಕ್ಕೆ ತರಲಾಗಿದೆ. ಅಲ್ಲಿಂದ ಮಾಹಿತಿ ಬಂದ ಬಳಿಕ ತಿಳಿಸಲಾಗುವುದು.

- ಮಂಜುನಾಥ ಕನಮಡಿ, ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜಿ ರಾಮ್‌ ಜಿ ರದ್ದು ಮಾಡಿ, ನರೇಗಾ ಮರುಸ್ಥಾಪಿಸಿ : ಸಿದ್ದು
ಸಚಿವ ತಿಮ್ಮಾಪುರ ರಾಜೀನಾಮೆಗೆ ಅಹೋರಾತ್ರಿ ಧರಣಿ