
ಮೈಸೂರು (ಅ.28): ಸದ್ಯಕ್ಕೆ ಸಾರಿಗೆ ಬಸ್ ದರ ಹೆಚ್ಚಳ ಮಾಡುವ ಯಾವ ಪ್ರಸ್ತಾಪವಿಲ್ಲ ಎಂದು ಸಾರಿಗೆ ಸಚಿವ ಶ್ರೀ ರಾಮುಲು ತಿಳಿಸಿದ್ದಾರೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಿಗೆ ಸಾರಿಗೆ ಬಸ್ಸುಗಳ ನಿಯೋಜನೆ ಮಾಡಲು ಆದ್ಯತೆ ನೀಡಲಾಗಿದ್ದು, ಎಲೆಕ್ಟ್ರಿಕ್ ಬಸ್ಸುಗಳನ್ನು ಸೇವೆಗೆ ಸಮರ್ಪಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕಾಂಗ್ರೆಸ್ಸಿನಿಂದ ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಕ್ಕಿಲ್ಲ: ಸಾಮಾಜಿಕ ನ್ಯಾಯ ಬೊಬ್ಬೆ ಹೊಡೆಯುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿಯವರೆಗೂ ದಲಿತರು ಮತ್ತು ಹಿಂದುಳಿದವರನ್ನು ರಾಜಕೀಯವಾಗಿ ತುಳಿಯುತ್ತ ಬಂದು ಮೀರ್ ಸಾದಿಕ್‌ತನ ಪ್ರದರ್ಶಿಸಿದ್ದಾರೆ ಎಂದು ಶ್ರೀರಾಮುಲು ಆರೋಪಿಸಿದರು. ಹಿಂದುಳಿದ ವರ್ಗಗಳ ನಾಯಕರ ಬಗ್ಗೆ ಅಸೂಯೆ ಪಡುವ ಸಿದ್ದರಾಮಯ್ಯ ಈವರೆಗೂ ಅವಕಾಶವಾದಿ ರಾಜಕೀಯ ಮಾಡಿಕೊಂಡು ಬಂದಿದ್ದಾರೆ ಎಂದು ಕಿಡಿಕಾರಿದ ಅವರು, ದಲಿತ ರಾಜಕಾರಣಿಗಳಾದ ಮಲ್ಲಿಕಾರ್ಜುನ ಖರ್ಗೆ, ಡಾ.ಜಿ. ಪರಮೇಶ್ವರ್, ವಿ. ಶ್ರೀನಿವಾಸಪ್ರಸಾದ್, ಹಿಂದುಳಿದ ವರ್ಗದ ನಾಯಕ ಎಚ್.ವಿಶ್ವನಾಥ್ ಅವರನ್ನು ತುಳಿಯುತ್ತಿದ್ದಾರೆ ಎಂದರು.
ನ.20ಕ್ಕೆ ಬಳ್ಳಾರಿಯಲ್ಲಿ ಬಿಜೆಪಿ ಬೃಹತ್ ಎಸ್‌ಟಿ ಸಮಾವೇಶ: ಸಚಿವ ಶ್ರೀರಾಮುಲು
ನನಗೆ ಅಧಿಕಾರಕ್ಕಿಂತ, ಸಮಾಜ ಮುಖ್ಯ: ಬಳ್ಳಾರಿಯಲ್ಲಿ ನ.20ರಂದು ನಡೆಯುವ ಪ.ಪಂಗಡ ಸಮಾವೇಶದ ಮೂಲಕ ರಾಜ್ಯ, ರಾಷ್ಟ್ರಕ್ಕೆ ಹೊಸ ಸಂದೇಶ ನೀಡುವ ಜೊತೆಗೆ ಶಕ್ತಿ ಪ್ರದರ್ಶನ ಆಗಬೇಕು ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದರು. ನಗರ ಬಿಜೆಪಿ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮೈಸೂರು ಜಿಲ್ಲೆಯಿಂದ ಈ ಸಮಾವೇಶಕ್ಕೆ 20 ರಿಂದ 30 ಸಾವಿರ ಮಂದಿ ಪಾಲ್ಗೊಳ್ಳಬೇಕು. ನನಗೆ ಅಧಿಕಾರಕ್ಕಿಂತ, ಸಮಾಜ ಮುಖ್ಯ. ಅದಕ್ಕಾಗಿ ನಾನು ಕೊನೆಯವರೆಗೂ ದುಡಿಯುತ್ತೇನೆ ಎಂದರು.
ಸಮುದಾಯ ನನಗೆ ಎಲ್ಲವನ್ನೂ ನೀಡಿದೆ. ನನಗೆ ಬಂಧು, ಬಳಗವೆಲ್ಲ ನಮ್ಮ ಸಮಾಜವೇ ಆಗಿದೆ. ನಾನು ಕೊಟ್ಟಮಾತನ್ನು ಉಳಿಸಿಕೊಳ್ಳಲು ಮುಖ್ಯಮಂತ್ರಿಗಳು ಮೀಸಲಾತಿ ಘೋಷಿಸಿದ್ದಾರೆ. ಶ್ರೀರಾಮುಲು ಬೆಳೆಯಲು ಸಮಾಜ ಕಾರಣ, ನಮ್ಮ ನಾಯಕ ಸಮುದಾಯದವರು ಬಿಜೆಪಿ ಪರವಾಗಿ ಇರಬೇಕು. ಮುಂದೆಯೂ ಬಿಜೆಪಿ ಸರ್ಕಾರ ನಮ್ಮ ಸಮಾಜ ಗುರುತಿಸಬೇಕಾದರೆ ನಾವು ಬಿಜೆಪಿ ಪರ ನಿಲ್ಲಬೇಕು ಎಂದು ಹೇಳಿದರು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಪ.ಪಂಗಡಕ್ಕೆ ಅನುಕೂಲ ಕಲ್ಪಿಸಿದೆ. ನಾವು ಇದಕ್ಕಾಗಿ ಪ್ರಧಾನಿಗಳಿಗೆ ಮತ್ತು ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಬೇಕಿದೆ.
ಮೈಸೂರಿನಲ್ಲಿ ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರೂ ಪ.ಪಂಗಡಕ್ಕೆ ಸೇರಿದ ಶಿವಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು. ತಳವಾರ ಮತ್ತು ಪರಿವಾರ ಪದಗಳನ್ನು ಪ.ಪಂಗಡಕ್ಕೆ ಸೇರಿಸಲಾಯಿತು ಎಂದರು. ಮೈಸೂರು ಭಾಗದವರೇ ಮುಖ್ಯಮಂತ್ರಿ ಆಗಿದ್ದಾಗ 2017ರಲ್ಲಿ ಮೀಸಲಾತಿ ಹೆಚ್ಚಳ ಮಾಡುವ ಅವಕಾಶ ಇದ್ದರೂ ಮುಂದಾಗಲಿಲ್ಲ. ಬರೀ ಮಾತನಾಡಿಕೊಂಡು ಬಂದರೇ ಹೊರತು ಮೀಸಲಾತಿ ಬಗ್ಗೆ ಗಮನಿಸಲಿಲ್ಲ. ಸವಾಜ ಕಲ್ಯಾಣ ಇಲಾಖೆುಂಲ್ಲಿ ಇದ್ದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯನ್ನು ಪ್ರತ್ಯೇಕವಾಗಿ ಬೇರ್ಪಡಿಸಿ ಸಚಿವಾಲಯ ಮಾಡಲಾಯಿತು.
ಮುಂದೆ ರಾಜಕೀಯದಲ್ಲಿ ಇರ್ತೇನೋ, ಇಲ್ವೋ..?: ಸಚಿವ ಶ್ರೀರಾಮುಲು
ಅಂತೆಯೇ ನನ್ನನ್ನು ಮೊದಲ ಸಚಿವನನ್ನಾಗಿ ಮಾಡಲಾಯಿತು. ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಹೆಚ್ಚಳ ಆಗಬೇಕು ಎಂಬ ಬೇಡಿಕೆಯಿಂದ ಹಿಂದೆ ಸರಿಯಲಿಲ್ಲ ಎಂದರು. ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರಗಳು ಯಾವುದೇ ಸಹಾಯ ಮಾಡಲಿಲ್ಲ. ಬೆಂಗಳೂರಿನಲ್ಲಿ ವಾಲ್ಮೀಕಿ ಪುತ್ಥಳಿ ನಿರ್ಮಿಸಿದ್ದು ಬಿಟ್ಟರೆ ಬೇರೇನು ಕೆಲಸ ಮಾಡಲಿಲ್ಲ. ಈ ವಿಷಯದಲ್ಲಿ ಚರ್ಚೆಗೆ ಸಿದ್ಧನಿದ್ದೇನೆ. ಮೀಸಲಾತಿ ಹೆಚ್ಚಳ ಕುರಿತು ಸಚಿವ ಸಂಪುಟದಲ್ಲಿ ತೀರ್ಮಾನಿಸುತ್ತಿದ್ದಂತೆಯೇ ಅಪಸ್ವರ ತೆಗೆಯಲಾಗಿದೆ. ಆದರೆ, ಸರ್ಕಾರ ಸುಗ್ರೀವಾಜ್ಞೆ ಜಾರಿಗೊಳಿಸಿ ರಾತ್ರೋರಾತ್ರಿ ಅನುಷ್ಠಾನಗೊಳ್ಳುವಂತೆ ಮಾಡಲಾಗಿದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ