
ಬೆಂಗಳೂರು(ಜ.18): ಅಭಿವೃದ್ಧಿ ವಿಚಾರದಲ್ಲಿ ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಸಹಕಾರ ನೀಡುತ್ತಿಲ್ಲ ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.
ಶುಕ್ರವಾರ ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಪುನಶ್ವೇತನ ವಿಚಾರಕ್ಕೆ ರಾಜ್ಯ ಸರ್ಕಾರ ತಮ್ಮ ಜತೆ ಚರ್ಚೆ ಮಾಡಿಲ್ಲ. ನನ್ನ ತವರು ರಾಜ್ಯ ಎನ್ನುವ ಕಾರಣಕ್ಕೆ ನಾನು ಕೆಲಸ ಮಾಡುತ್ತಿದ್ದೇನೆ. ಆದರೆ, ಕರ್ನಾಟಕ ಸರ್ಕಾರ ಸಹಕಾರ ನೀಡುತ್ತಿಲ್ಲ. ಬದಲಿಗೆ ಪ್ರತಿನಿತ್ಯ ಪ್ರಧಾನಿಯನ್ನು ನಿಂದಿಸುವುದೇ ಆಗಿದೆ. ದಿನವೂ ಪ್ರಧಾನಿಯನ್ನು ನಿಂದಿಸಿದರೆ ರಾಜ್ಯ ಅಭಿವೃದ್ಧಿ ಆಗುತ್ತದೆಯೇ ಎಂದು ಕಿಡಿಕಾರಿದರು.
ಎಚ್‌ಡಿಕೆ ಮತ್ತೊಮ್ಮೆ ಸಿಎಂ ಆಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ: ಮಾಜಿ ಸಚಿವ ಸಾ.ರಾ.ಮಹೇಶ್
ವೈಜಾಗ್ ಸ್ಟೀಲ್ ವಿಚಾರವಾಗಿ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಅನೇಕ ಸಲ ನನ್ನನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಹಲವು ಬಾರಿ ಕರೆ ಮಾಡಿ ಮಾತುಕತೆ ನಡೆಸಿದ್ದರು. ಅವರ ರಾಜ್ಯದ ಅಭಿವೃದ್ಧಿ ಬಗ್ಗೆ ಅವರಿಗೆಷ್ಟು ಬದ್ಧತೆ ಇದೆ ಎಂಬುದನ್ನು ನೋಡಿ ಇವರು ಕಲಿಯಬೇಕು. ರಾಜಕೀಯ ದ್ವೇಷ ಕಾರಣಕ್ಕೆ ರಾಜ್ಯದಲ್ಲಿ ಏನೇ ಮಾಡಲು ಹೋದರೂ ರಾಜ್ಯ ಸರ್ಕಾರ ಅಡ್ಡಿಪಡಿಸುವುದನ್ನೇ ಪರಿಪಾಠ ಮಾಡಿಕೊಂಡಿದೆ ಎಂದು ಟೀಕಿಸಿದರು.
ಕರ್ನಾಟಕ ಸರ್ಕಾರದಿಂದ ಈವರೆಗೆ ಒಂದೇ ಒಂದು ಪತ್ರ ಬಂದಿಲ್ಲ. ಏಳು ತಿಂಗಳು ಕಳೆದರೂ ನನ್ನನ್ನು ಯಾರೂ ಭೇಟಿಯಾಗಿಲ್ಲ. ಕುದುರೆಮುಖ ಕಂಪನಿಯ ವಿಚಾರದಲ್ಲಿ ರಾಜ್ಯ ಸರ್ಕಾರ ಕೊಟ್ಟ ಕಿರುಕುಳ ನೀಡಿದೆ. ಕನಿಷ್ಠ ಸೌಜನ್ಯಕ್ಕೂ ಪತ್ರ ಬರೆಯಲಿಲ್ಲ. ಆ ಕಂಪನಿ ಮುಚ್ಚುವ ಹಂತಕ್ಕೆ ಬಂದಿದೆ. ರಾಜ್ಯ ಸರ್ಕಾರದ ತಪ್ಪಿಗೆ ನೂರಾರು ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಕುದುರೆಮುಖ ಕಂಪನಿಗೆ ಗಣಿ ಇಲ್ಲ ಎನ್ನುವ ಕಾರಣಕ್ಕೆ ದೇವದಾರಿ ಗಣಿ ಯೋಜನೆಗೆ ಹಣಕಾಸು ಅನುಮೋದನೆಗೆ ಹಸಿರು ನಿಶಾನೆ ನೀಡಿದ್ದೆ. ಆದರೆ ನಾನೇ ಗಣಿಗಾರಿಕೆಗೆ ಒಪ್ಪಿಗೆ ಕೊಟ್ಟೆ ಎಂಬುದಾಗಿ ಕಾಂಗ್ರೆಸ್ ಸರ್ಕಾರ ಅಪಪ್ರಚಾರ ಮಾಡಿತು ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಕುಮಾರಸ್ವಾಮಿ, ಜನಾರ್ದನ ರೆಡ್ಡಿ ಪ್ರಾಸಿಕ್ಯೂಷನ್‌ಗೆ ಅನುವಾದಿತ ವರದಿ?
ಎಚ್‌ಎಂಟಿಗೂ ಅಡ್ಡಿ:
ವೈಜಾಗ್ ಸ್ಟೀಲ್‌ನಂತೆ ಮಂಗಳೂರು ಸಮುದ್ರ ದಂಡೆಯಲ್ಲಿರುವ ಕಾರ್ಖಾನೆ ಸಂಕಷ್ಟದಲ್ಲಿದೆ. ಹೇಗಾದರೂ ಅದನ್ನು ಉಳಿಸಬೇಕು ಎನ್ನುವ ಕಾರಣಕ್ಕೆ ನಾನು ಕುದುರೆಮುಖ ಕಂಪನಿಯನ್ನು ರಾಷ್ಟ್ರೀಯ ಖನಿಜಾಭಿವೃದ್ಧಿ ನಿಗಮದಲ್ಲಿ ವಿಲೀನ ಮಾಡುವ ಪ್ರಯತ್ನ ಮಾಡುತ್ತಿದ್ದೇನೆ. ಅಲ್ಲದೇ, ಇಡೀ ದೇಶದ ಹೆಮ್ಮೆಯ ಕಂಪನಿಯಾಗಿದ್ದ ಎ ಚ್‌ಎಂಟಿ ಬಗ್ಗೆ ರಾಜ್ಯ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ ಗಮನಿಸಿದರೆ ಅದರ ಜಾಗ ಹೊಡೆಯಲು ಹೊರಟ್ಟಿದ್ದಾರೆ ಎನಿಸುತ್ತದೆ. ಆರಂಭದಲ್ಲಿಯೇ ಕಂಪನಿ ಮೈಸೂರು ಮಹಾರಾಜರಿಂದ ಹಣ ಕೊಟ್ಟು ಭೂಮಿ ಖರೀದಿ ಮಾಡಿದೆ. ಅದಕ್ಕೆ ದಾಖಲೆಗಳು ಇವೆ. ಆ ಕಂಪನಿಗೆ ಜೀವದಾನ ಮಾಡಲು ಹೊರಟರೆ ಅದಕ್ಕೂ ರಾಜ್ಯ ಸರ್ಕಾರ ಕೊಕ್ಕೆ ಹಾಕಲು ಬರುತ್ತಿದೆ. ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ