ಇನ್ಮುಂದೆ ಎಲ್ಲ ಶಾಲಾ ಮಕ್ಕಳಿಗೂ ‘ಕರ್ನಾಟಕ ದರ್ಶನ’ ಪ್ರವಾಸ!

By Web DeskFirst Published Dec 8, 2019, 3:45 PM IST
Highlights

ಎಲ್ಲ ಶಾಲಾ ಮಕ್ಕಳಿಗೂ ‘ಕರ್ನಾಟಕ ದರ್ಶನ’ ಪ್ರವಾಸ| ಎಸ್ಸಿ, ಎಸ್ಟಿವಿದ್ಯಾರ್ಥಿಗಳಿಗೆ ಸೀಮಿತವಾಗಿದ್ದ ಕಾರ‍್ಯಕ್ರಮ| ಮುಂದಿನ ವರ್ಷ ಎಲ್ಲರಿಗೂ ವಿಸ್ತರಣೆ: ಸಿ.ಟಿ.ರವಿ| ಬಾದಾಮಿ, ಬೇಲೂರು, ಹಂಪಿಯಲ್ಲಿ 3ಸ್ಟಾರ್‌ ಹೋಟೆಲ್‌| ಸಚಿವರಿಂದ 100 ದಿನಗಳ ಸಾಧನಾ ಹೊತ್ತಿಗೆ ಬಿಡುಗಡೆ

ಬೆಂಗಳೂರು[ಡಿ.08]: ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಪರಿಶಿಷ್ಟಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಸೀಮಿತವಾಗಿದ್ದ ‘ಕರ್ನಾಟಕ ದರ್ಶನ’ ಶೈಕ್ಷಣಿಕ ಪ್ರವಾಸವನ್ನು ಮುಂದಿನ ಸಾಲಿನಿಂದ ಎಲ್ಲಾ ವರ್ಗಗಳ ವಿದ್ಯಾರ್ಥಿಗಳಿಗೂ ವಿಸ್ತರಿಸಲಾಗುವುದು. ಅಲ್ಲದೆ, ಜಾತಿ ಕೇಂದ್ರಿತವಾಗಿ ನಡೆಯುತ್ತಿರುವ ಮಹಾತ್ಮರ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ ಹೇಳಿದ್ದಾರೆ.

ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಕ್ಕರೆ ಸಚಿವರಾಗಿ 100 ದಿನ ಪೂರೈಸಿರುವ ಹಿನ್ನೆಲೆಯಲ್ಲಿ ಶನಿವಾರ ವಿಧಾನಸೌಧದಲ್ಲಿ ಮೂರು ಇಲಾಖೆಗಳ ಸಾಧನೆಗಳ ಕುರಿತು ‘ಹೆಜ್ಜೆ ಗುರುತು’ ಕಿರು ಹೊತ್ತಿಗೆ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸರ್ಕಾರಿ ಶಾಲೆಗಳ ಪರಿಶಿಷ್ಟಜಾತಿ, ಪಂಗಡ ವಿದ್ಯಾರ್ಥಿಗಳು, ಸ್ಕೌಟ್ಸ್‌ ಅಂಡ್‌ ಗೈಡ್ಸ್‌ ವಿದ್ಯಾರ್ಥಿಗಳಿಗೆ ಮಾತ್ರ ಕರ್ನಾಟಕ ದರ್ಶನ ಪ್ರವಾಸ ಸೀಮಿತವಾಗಿತ್ತು. ಈ ವರ್ಷ ವಿಕಲಚೇತನ ವಿದ್ಯಾರ್ಥಿಗಳಿಗೂ ಅವಕಾಶ ಕಲ್ಪಿಸಿದ್ದು, ಮುಂದಿನ ವರ್ಷದಿಂದ ಎಲ್ಲಾ ವರ್ಗಗಳ ವಿದ್ಯಾರ್ಥಿಗಳಿಗೂ ಪ್ರವಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಈ ಮೂಲಕ ಮಕ್ಕಳಲ್ಲಿ ಜಾತಿ ತಾರತಮ್ಯ ಹೋಗÜಲಾಡಿಸಲಾಗುವುದು ಎಂದು ಹೇಳಿದರು.

ನಿಮ್ಮೆಲ್ಲರ ಆಶೀರ್ವಾದದೊಂದಿಗೆ ರಾಜ್ಯದಲ್ಲಿ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಸಕ್ಕರೆ ಮಂತ್ರಿಯಾಗಿ ನೂರು ದಿನಗಳು ಪೂರೈಸಿದ್ದೇನೆ.

ಇಷ್ಟು ದಿನ ಪ್ರಾಮಾಣಿಕವಾಗಿ, ಜನಪರವಾಗಿ, ರಾಜ್ಯ ಹಿತಾಸಕ್ತಿಯಲ್ಲಿ ಹಲವು ಕೆಲಸಗಳನ್ನು ಮಾಡಿದ್ದೇನೆ ಎಂಬುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. pic.twitter.com/VI06VTy2IM

— C T Ravi 🇮🇳 ಸಿ ಟಿ ರವಿ (@CTRavi_BJP)

ಮಹಾತ್ಮರ ಜಯಂತಿಗಳನ್ನು ಜಾತಿ ಕೇಂದ್ರಿತವಾಗಿ ಆಚರಿಸುತ್ತಿರುವ ಬಗ್ಗೆ ಆರೋಪಗಳಿವೆ. ಕಾರ್ಯಕ್ರಮಗಳು ಜಾತಿ ಬಲ ಪ್ರದರ್ಶಿಸುವ ವೇದಿಕೆಗಳಾಗಿ ಬದಲಾಗುವುದನ್ನು ತಪ್ಪಿಸಲು ಹಾಗೂ ಅರ್ಥಪೂರ್ಣವಾಗಿ ಎಲ್ಲಾ ಸಮಾಜಗಳಿಗೂ ಅವರ ಸಂದೇಶಗಳನ್ನು ಸಾರುವ ರೀತಿಯಲ್ಲಿ ಆಚರಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಸಮಾಜ ಸುಧಾರಕರು, ಚಿಂತಕರು, ಪ್ರಗತಿಪರರು ಹಾಗೂ ಸಾರ್ವಜನಿಕರ ಅಭಿಪ್ರಾಯ ಕೇಳಿದ್ದೇವೆ. ಸೂಕ್ತ ರೂಪುರೇಷೆ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದು ಸಿ.ಟಿ. ರವಿ ತಿಳಿಸಿದರು.

ಪ್ರವಾಸೋದ್ಯಮ ಅಭಿವೃದ್ಧಿ:

ಸರ್ಕಾರಗಳಿಗೆ ಪ್ರವಾಸೋದ್ಯಮ ಆದ್ಯತಾ ವಿಷಯವಲ್ಲ. ಹೀಗಾಗಿ ಆರ್ಥಿಕ ಸಮಸ್ಯೆ ಇರುತ್ತದೆ. ರಾಜ್ಯದಲ್ಲಿ ಅತಿ ಹೆಚ್ಚು ಪ್ರವಾಸಿ ತಾಣಗಳಿದ್ದು ಅವುಗಳನ್ನು ಖಾಸಗಿ ಸಹಭಾಗಿತ್ವದಡಿ ಅಭಿವೃದ್ಧಿಪಡಿಸಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ವರದಿ ಸಲ್ಲಿಸಲು ಡಾ. ಸುಧಾಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಪ್ರವಾಸೋದ್ಯಮ ಟಾಸ್ಕ್‌ಫೋರ್ಸ್‌ ರಚಿಸಿದ್ದು, ವರದಿ ಆಧರಿಸಿ ಖಾಸಗಿ ಸಹಭಾಗಿತ್ವದಲ್ಲಿ ಹೂಡಿಕೆ ಮಾಡಲು ಮುಂದೆ ಬರುವವರಿಗಾಗಿ ಹೂಡಿಕೆದಾರರ ಸಮಾವೇಶ ನಡೆಸಲು ಚಿಂತನೆ ಇದೆ ಎಂದರು.

‘ಗೋಲ್ಡನ್‌ ಚಾರಿಯೆಟ್‌’ ಪುನಾರಂಭ:

ಪ್ರವಾಸೋದ್ಯಮ ಇಲಾಖೆ ಬಗ್ಗೆ ಮಾತನಾಡಿ, ಗೋಲ್ಡನ್‌ ಚಾರಿಯೆಟ್‌ ರೈಲು ಸೇವೆ ಪುನರ್‌ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು. 7 ವರ್ಷದ ಹಿಂದೆ ನಷ್ಟದ ಕಾರಣದಿಂದಾಗಿ ಸೇವೆ ಸ್ಥಗಿತಗೊಳಿಸಲಾಗಿತ್ತು. ಇದೀಗ ಖಾಸಗಿ ಸಹಭಾಗಿತ್ವದಲ್ಲಿ ಚಾಲನೆ ನೀಡುತ್ತಿದ್ದು ನಷ್ಟದ ಪ್ರಶ್ನೆ ಬರುವುದಿಲ್ಲ. ಬಾದಾಮಿ, ಬೇಲೂರು, ಹಂಪಿ, ವಿಜಯಪುರದಲ್ಲಿ 3-ಸ್ಟಾರ್‌ ಹೋಟೆಲ್‌ ನಿರ್ಮಿಸಲು ಡಿಪಿಆರ್‌ ಸಿದ್ಧಪಡಿಸಲಾಗುತ್ತಿದೆ ಎಂದರು. ರಾಜ್ಯದಲ್ಲಿ 18 ಸಕ್ಕರೆ ಕಾರ್ಖಾನೆಗಳಿವೆ. ಮಂಡ್ಯದ ಮೈಷುಗರ್ಸ್‌ ಕಾರ್ಖಾನೆ ಪುನಶ್ಚೇತನಕ್ಕೆ 504 ಕೋಟಿ ರು. ವ್ಯಯಿಸಲಾಗಿದೆ. ಆದರೂ ಅದರ ಪುನಶ್ಚೇತನ ಸಾಧ್ಯವಾಗಿಲ್ಲ. ಹೀಗಾಗಿ ಖಾಸಗಿ ಸಹಭಾಗಿತ್ವದಲ್ಲಿ ಪುನರಾರಂಭಿಸಲು ಅಧ್ಯಯನ ನಡೆಸಲಾಗುತ್ತಿದೆ ಎಂದರು.

ಸಾಹಿತಿಗಳಿಂದ ನನ್ನ ತಾಳ್ಮೆ ಹೆಚ್ಚಾಗಿದೆ:

ಸಾಹಿತಿಗಳು ತಮ್ಮ ಅನುಭವದ ಆಧಾರದಲ್ಲಿ ಪ್ರತಿ ವಿಚಾರವನ್ನೂ ವಿಸ್ತಾರವಾಗಿ ಮಾತನಾಡುತ್ತಾರೆ. ನಾವು ಎರಡು ನಿಮಿಷದಲ್ಲಿ ಹೇಳುವ ವಿಚಾರವನ್ನು ಅವರು 20 ನಿಮಿಷ ಹೇಳುತ್ತಾರೆ. ಹೀಗಾಗಿ ಅವರೊಂದಿಗಿನ ಒಡನಾಟದಿಂದ ನನ್ನ ತಾಳ್ಮೆ ಹಾಗೂ ಜ್ಞಾನ ಎರಡೂ ಹೆಚ್ಚಾಗಿದೆ ಎಂದಯ ಸಚಿವ ಸಿ.ಟಿ. ರವಿ ವ್ಯಂಗ್ಯದ ಧಾಟಿಯಲ್ಲಿ ಹೇಳಿದರು.

ಕನ್ನಡ ಶಾಸ್ತ್ರೀಯ ಭಾಷಾ ಅಧ್ಯಯನ ಕೇಂದ್ರದ ಕುರಿತ ಗೊಂದಲಗಳು ಬಗೆಹರಿದಿದ್ದು, ಮೈಸೂರು ವಿಶ್ವವಿದ್ಯಾಲಯ 3 ಎಕರೆ ವ್ಯಾಪ್ತಿಯಲ್ಲಿ ನಿರ್ಮಾಣಗೊಳ್ಳಲಿದೆ ಎಂದು ಭರವಸೆ ನೀಡಿದರು.

ಗ್ರಾಮಗಳ ಇತಿಹಾಸ, ಸಂಸ್ಕೃತಿ ಪರಿಚಯಿಸಲು ಕಾರ್ಯಕ್ರಮ

ಜನವರಿಯೊಳಗೆ ರಾಜ್ಯದ ಎಲ್ಲ ಗ್ರಾಮಗಳ ಇತಿಹಾಸ, ಸಂಸ್ಕೃತಿಯ ಮಾಹಿತಿ ಕ್ರೋಢೀಕರಿಸಿ ವಿಕಿಪೀಡಿಯಾ ಮಾದರಿಯಲ್ಲಿ ಮುಕ್ತವಾಗಿ ಸಾರ್ವಜನಿಕರಿಗೆ ಒದಗಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಸಚಿವ ಸಿ.ಟಿ. ರವಿ ಮಾಹಿತಿ ನೀಡಿದರು.

ಸರ್ಕಾರ ಉಳಿಸಿಕೊಳ್ಳಲು ಉಪ ಚುನಾವಣೆಗೆ ಹೋಗಿದ್ದೆವು

ಸರ್ಕಾರ ಉಳಿಸಿಕೊಳ್ಳಲು ಹಲವು ದಿನಗಳ ಕಾಲ ಉಪ ಚುನಾವಣೆಯಲ್ಲಿ ತೊಡಗಿಸಿಕೊಂಡಿದ್ದೆವು ಎಂದು ಸಚಿವ ಸಿ.ಟಿ. ರವಿ ಹೇಳಿದರು.

100 ದಿನಗಳಲ್ಲಿ ಸಚಿವರಾಗಿ ನಿಮ್ಮ ಸಾಧನೆಯೇನು ಎಂಬ ಪ್ರಶ್ನೆಗೆ ಸಿ.ಟಿ. ರವಿ ನೀಡಿದ ಉತ್ತರವಿದು. ಸರ್ಕಾರ ಉಳಿದರೆ ಮಾತ್ರ ನಾವು ಸಚಿವರಾಗಿ ಮುಂದುವರೆಯಬಹುದು. ಮಾಜಿ ಸಚಿವರಾದರೆ ನಮ್ಮಿಂದ ಕಾರ್ಯಕ್ರಮಗಳು ನೀಡಲು ಸಾಧ್ಯವಿಲ್ಲ. ಹೀಗಾಗಿ ಮೊದಲು ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಉಪ ಚುನಾವಣೆಯಲ್ಲಿ ತೊಡಗಿಸಿಕೊಂಡಿದ್ದೆವು ಎಂದರು.

click me!