ಆಸ್ತಿ ಸಿಕ್ಕ ಬಳಿಕ ಹೆತ್ತವರ ನಿರ್ಲಕ್ಷಿಸಿದರೆ ಆಸ್ತಿ ವಾಪಸ್| ಕೊಪ್ಪಳ ಉಪ ವಿಭಾಗಾಧಿಕಾರಿಗಳ ಕೋರ್ಟ್ ಮಹತ್ವದ ತೀರ್ಪು| ಮಕ್ಕಳ ಹೆಸರಿಗೆ ವರ್ಗಾವಣೆಯಾಗಿದ್ದ ಆಸ್ತಿ ಹಕ್ಕು ರದ್ದು| ವಯಸ್ಸಾದ ಅಪ್ಪ ಅಮ್ಮನನ್ನು ನಿರ್ಲಕ್ಷಿಸುವ ಮಕ್ಕಳಿಗೆ ಪಾಠ
ಸೋಮರಡ್ಡಿ ಅಳವಂಡಿ
ಕೊಪ್ಪಳ[ಡಿ.08]: ವಯಸ್ಸಾದ ತಂದೆ ತಾಯಿಯಿಂದ ಆಸ್ತಿಯನ್ನು ತಮ್ಮ ಹೆಸರಿಗೆ ಬರೆಸಿಕೊಂಡ ಬಳಿಕ ಬೇಕಾಬಿಟ್ಟಿನಡೆಸಿಕೊಳ್ಳುವ ಮಕ್ಕಳಿಗೆ ಕೇಂದ್ರ ಸರ್ಕಾರ ಶಿಕ್ಷೆಗೆ ಅರ್ಹರು ಎಂದು ಕೇಂದ್ರ ಸರ್ಕಾರ ಕಾನೂನು ರೂಪಿಸಿರುವ ಬೆನ್ನಲ್ಲೇ ಕೊಪ್ಪಳ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಹೆತ್ತವರನ್ನು ಸರಿಯಾಗಿ ನೋಡಿಕೊಳ್ಳದೇ, ಅಗತ್ಯ ಚಿಕಿತ್ಸೆ ಒದಗಿಸದ ಮಕ್ಕಳಿಗೆ ಛೀಮಾರಿ ಹಾಕಿರುವ ನ್ಯಾಯಾಲಯ ಆಸ್ತಿಯನ್ನು ಮರಳಿ ಪಾಲಕರಿಗೆ ವರ್ಗಾಯಿಸುವ ಮೂಲಕ ಖಡಕ್ ಎಚ್ಚರಿಕೆ ನೀಡಿದೆ.
ಕೊಪ್ಪಳ ಹಿರಿಯ ನಾಗರಿಕರ ಪಾಲನೆ- ಪೋಷಣೆ ಮತ್ತು ಕ್ಷೇಮಾಭಿವೃದ್ಧಿ ನ್ಯಾಯಮಂಡಳಿಯ ಮುಖ್ಯಸ್ಥರೂ ಆಗಿರುವ ಉಪವಿಭಾಗಾಧಿಕಾರಿ ಸಿ.ಡಿ.ಗೀತಾ ಅವರು, ಮಕ್ಕಳಿಗೆ ನೀಡಿದ್ದ ಆಸ್ತಿ ಹಕ್ಕು ರದ್ದು ಮಾಡಿದ್ದು, ಕೂಡಲೇ ಹೆತ್ತವರಿಗೆ ವರ್ಗಾವಣೆ ಮಾಡುವಂತೆ ತೆರೆದ ನ್ಯಾಯಾಲಯದಲ್ಲಿಯೇ ಶುಕ್ರವಾರ ಆದೇಶ ಮಾಡಿದ್ದಾರೆ.
ಹಿರಿಯ ನಾಗರಿಕರ ಜೀವನವನ್ನು ಸುಧಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ‘ಹಿರಿಯ ನಾಗರಿಕರ ಕಲ್ಯಾಣ ಕಾಯ್ದೆ-2007’ಕ್ಕೆ ತಿದ್ದುಪಡಿ ತಂದಿರುವ ಬೆನ್ನಲ್ಲೇ ಇಂತಹ ತೀರ್ಪು ನ್ಯಾಯಾಲಯದಿಂದ ಹೊರಬಿದ್ದಿರುವುದು ಹಿರಿಯ ನಾಗರಿಕರಲ್ಲಿ ನೆಮ್ಮದಿ ಮೂಡಿಸಿದೆ. ಆಸ್ತಿ ವರ್ಗಾವಣೆಯಾದ ಬಳಿಕ ಹೆತ್ತವರನ್ನು ಹೇಗೆ ಬೇಕಾದರೂ ನಡೆಸಬಹುದು ಎಂಬಂತೆ ವರ್ತಿಸುವ ಮಕ್ಕಳಿಗೆ ಎಚ್ಚರಿಕೆಯ ಗಂಟೆಯಾಗಿದೆ.
ಆಸ್ತಿ ಸಿಕ್ಕ ಬಳಿಕ ಬದಲಾದರು:
ಮಕ್ಕಳು ವಯಸ್ಸಿಗೆ ಬಂದಿದ್ದಾರೆ ಎನ್ನುವ ಕಾರಣಕ್ಕಾಗಿ ಗಂಗಾವತಿ ನಗರದ ಸತ್ಯನಾರಾಯಣಪೇಟೆ ಮನೋಹರ ದೇಸಾಯಿ(68) ಅವರು ತಮ್ಮ ಹೆಸರಿನಲ್ಲಿ ಇದ್ದ 3 ಎಕರೆ ಭೂಮಿಯನ್ನು ಮಕ್ಕಳಾದ ರಾಘವೇಂದ್ರ, ಯೋಗೇಶ, ವಿನಯ ದೇಸಾಯಿ ಅವರ ಹೆಸರಿಗೆ ವರ್ಗಾಯಿಸಿದ್ದರು. ಆದರೆ ಆಸ್ತಿ ವರ್ಗಾವಣೆಯಾದ ಬಳಿಕ ಮಕ್ಕಳು ವಯಸ್ಸಾಗಿರುವ ತಮ್ಮನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಮುಪ್ಪಿನ ಅವಸ್ಥೆಯಲ್ಲಿ ವೈದ್ಯಕೀಯ ಖರ್ಚು ವೆಚ್ಚಗಳಿಗೂ ಹಣ ನೀಡುತ್ತಿಲ್ಲ. ಇದೀಗ ಹೃದಯ ಕಾಯಿಲೆಯಿಂದಲೂ ಬಳಲುತ್ತಿದ್ದು ಇದಕ್ಕಾಗಿ ಚಿಕಿತ್ಸೆ ಪಡೆಯಬೇಕಿದೆ. ಶಸ್ತ್ರಚಿಕಿತ್ಸೆಗೂ ಹಣ ಬೇಕಾಗಿದೆ. ಆದಕ್ಕೆ ಬೇಕಾದ ವ್ಯವಸ್ಥೆಯನ್ನು ಮಕ್ಕಳು ಮಾಡುತ್ತಿಲ್ಲ. ನಾನು ದುಡಿಯುತ್ತಿದ್ದ ವೇಳೆಯಲ್ಲಿ ಖರೀದಿ ಮಾಡಿದ ಭೂಮಿಯನ್ನು ನನ್ನ ಸ್ವಂತ ಬಳಕೆಗೂ ನೀಡುತ್ತಿಲ್ಲ. ಹೀಗಾಗಿ ನನ್ನ ಮಕ್ಕಳ ಹೆಸರಿಗೆ ವರ್ಗಾಯಿಸಿರುವ ಭೂಮಿಯನ್ನು ಪುನಃ ನನಗೆ ‘ಪಾಲಕರ ಪೋಷಣೆ, ಸಂರಕ್ಷಣೆ, ಹಿರಿಯ ನಾಗರಿಕರ ರಕ್ಷಣಾ ಕಾಯ್ದೆ 2017’ರ ಅಡಿಯಲ್ಲಿ ನನಗೆ ನೀಡಬೇಕೆಂದು ಅರ್ಜಿ ಸಲ್ಲಿಸಿದ್ದರು.
ಇದೀಗ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮಂಡಳಿ ಮಕ್ಕಳ ಹೆಸರಿನಲ್ಲಿ ಇದ್ದ ಆಸ್ತಿಯನ್ನು ರದ್ದು ಮಾಡಿ, ಮರಳಿ ತಂದೆಯ ಹೆಸರಿಗೆ ವರ್ಗಾಯಿಸುವಂತೆ ಆದೇಶ ನೀಡಿದೆ. ಈ ಬಗ್ಗೆ ತೀರ್ಪು ನೀಡಿರುವ ಉಪವಿಭಾಗಾಧಿಕಾರಿ ಸಿ.ಡಿ.ಗೀತಾ, ವಯಸ್ಸಾದವರನ್ನು ನೋಡಿಕೊಳ್ಳುವುದು ಮಕ್ಕಳ ಜವಾಬ್ದಾರಿಯಾಗಿದೆ. ಪ್ರಕರಣದ ವಿಚಾರಣೆಯನ್ನು ನಡೆಸಿ ಹಿರಿಯರಿಗೆ ಅನ್ಯಾಯವಾಗುತ್ತಿರುವುದಕ್ಕೆ ಅವಕಾಶ ನೀಡದೆ ನಿಯಮಾನುಸಾರ ತೀರ್ಪು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಇದೇವೇಳೆ ಕೊಪ್ಪಳದ ನಿವಾಸಿ ಮಹ್ಮದ ಸಿಕಂದರ ಬಿಳೇಕುದ್ರಿ ಅವರ ಪತ್ನಿಯ ಹೆಸರಲ್ಲಿದ್ದ ಮನೆಯನ್ನು ಅವರ ಮೂವರು ಮಕ್ಕಳು ವಂಚಿಸಿ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದರು. ಕುಷ್ಟಗಿ ತಾಲೂಕಿನ ತಾವರಗೇರಾ ಗ್ರಾಮದ ಶ್ಯಾಮಬಾಯಿ ಗುಡಸಲಿ ಅವರ ಹೆಸರಲ್ಲಿದ್ದ 4.21 ಎಕ್ರೆ ಆಸ್ತಿಯನ್ನು ಅವರ ಮೂವರು ಮಕ್ಕಳು ಬೆಳೆವಿಮೆ ಪರಿಹಾರ ಬಂದಿದೆ ಎಂದು ಸುಳ್ಳು ಹೇಳಿ ನೋಂದಣಿ ಕಚೇರಿಗೆ ಕರೆದುಕೊಂಡು ಹೋಗಿ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದರು. ಈ ಪ್ರಕರಣಗಳಲ್ಲೂ ಕೋರ್ಟ್ ಹಿರಿಯ ನಾಗರಿಕರ ಪರವಾಗಿ ನಿಂತಿದ್ದು ಹೆತ್ತವರಿಗೆ ಆಸ್ತಿ ಹಿಂದಿರುಗಿಸಲು ಆದೇಶಿಸಿದೆ.
ಕಾಯಿದೆ ಮಾಡಿದವರಿಗೆ ಪುಣ್ಯ ಬರಲಿ
ಆ ಕಾಯಿದೆ ಮಾಡಿದವರಿಗೆ ಪುಣ್ಯ ಬರಲಿ. ಇಂಥ ಕಾಯಿದೆ ಇಲ್ಲದಿದ್ದರೆ ನಮ್ಮಂಥವರು ಬದುಕುವುದು ದುಸ್ತರವಾಗುತ್ತಿತ್ತು. ಇದರಿಂದ ನನ್ನಂಥವರಿಗೆ ನ್ಯಾಯ ಸಿಕ್ಕಿದೆ. ಆದೇಶ ಕೈ ಸೇರಿದ ಮೇಲೆ ವಿವರವಾಗಿ ಹೇಳುತ್ತೇನೆ.
-ಮನೋಹರ ದೇಸಾಯಿ, ಹಿರಿಯ ನಾಗರಿಕ