ಚಾಮರಾಜನಗರ ಸ್ಪರ್ಧೆ ಚರ್ಚೆಗೆ ತೆರೆ ಎಳೆದ-ನಿಖಿಲ್ ಕುಮಾರಸ್ವಾಮಿ! ಅಪ್ಪ, ಅಜ್ಜನ ಕರ್ಮಭೂಮಿ ಬಿಟ್ಟು ಬೇರೆಡೆ ಹೋಗಲ್ಲ!

Published : Feb 02, 2026, 01:26 PM IST
Nikhil Kumaraswamy

ಸಾರಾಂಶ

ಚಾಮರಾಜನಗರದಿಂದ ಸ್ಪರ್ಧಿಸುವ ಊಹಾಪೋಹಗಳಿಗೆ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ತೆರೆ ಎಳೆದಿದ್ದಾರೆ. ರಾಮನಗರವು ತಮ್ಮ ತಂದೆಯ ಕರ್ಮಭೂಮಿ ಮತ್ತು ತಾತನಿಗೆ ರಾಜಕೀಯ ಮರುಜನ್ಮ ನೀಡಿದ ಪುಣ್ಯಭೂಮಿ, ಹಾಗಾಗಿ ಆ ಮಣ್ಣನ್ನು ಬಿಟ್ಟು ಎಲ್ಲಿಗೂ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಚಿಕ್ಕಮಗಳೂರು (ಫೆ.02): ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಚಾಮರಾಜನಗರ ಲೋಕಸಭಾ ಅಥವಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಊಹಾಪೋಹಗಳಿಗೆ ಸ್ವತಃ ನಿಖಿಲ್ ಅವರೇ ಇಂದು ಸ್ಪಷ್ಟನೆ ನೀಡುವ ಮೂಲಕ ತೆರೆ ಎಳೆದಿದ್ದಾರೆ.

ಕಳೆದ ಕೆಲ ದಿನಗಳಿಂದ ರಾಜ್ಯ ರಾಜಕೀಯ ವಲಯದಲ್ಲಿ, ವಿಶೇಷವಾಗಿ ಜೆಡಿಎಸ್ ಪಾಳಯದಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ಮುಂದಿನ ನಡೆ ಬಗ್ಗೆ ತೀವ್ರ ಚರ್ಚೆಗಳು ನಡೆಯುತ್ತಿದ್ದವು. ಈ ಹಿನ್ನೆಲೆಯಲ್ಲಿ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ರಾಮನಗರ ಜಿಲ್ಲೆ ನನ್ನ ತಂದೆಯವರ ಕರ್ಮಭೂಮಿ. 1994ರಲ್ಲಿ ಹಾಸನದಿಂದ ಬಂದಂತಹ ನಮ್ಮ ತಾತ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ರಾಜಕೀಯವಾಗಿ ಮರುಜನ್ಮ ನೀಡಿದ ಪುಣ್ಯ ಭೂಮಿ ಅದು. ಅಂತಹ ಮಣ್ಣನ್ನು ಬಿಟ್ಟು ನಾನು ಎಲ್ಲಿಗೂ ಹೋಗುವುದಿಲ್ಲ' ಎಂದು ಭಾವುಕರಾಗಿ ನುಡಿದರು.

ಕಾರ್ಯಕರ್ತರೇ ನನ್ನ ಶಕ್ತಿ

ರಾಮನಗರದಲ್ಲಿನ ತಮ್ಮ ರಾಜಕೀಯ ಅಸ್ತಿತ್ವದ ಬಗ್ಗೆ ಮಾತನಾಡಿದ ನಿಖಿಲ್, 'ರಾಮನಗರ ಜಿಲ್ಲೆಯಲ್ಲಿ ನನ್ನನ್ನೇ ನಂಬಿರುವ ಸಾವಿರಾರು ಕಾರ್ಯಕರ್ತರಿದ್ದಾರೆ, ಪಕ್ಷದ ಹಿರಿಯ ಮುಖಂಡರಿದ್ದಾರೆ ಮತ್ತು ನಮ್ಮ ಕುಟುಂಬವನ್ನು ಪ್ರೀತಿಸುವ ಒಂದು ದೊಡ್ಡ ವರ್ಗವೇ ಅಲ್ಲಿದೆ. ಅವರನ್ನು ನಡುನೀರಿನಲ್ಲಿ ಕೈಬಿಟ್ಟು ಬೇರೆ ಕ್ಷೇತ್ರಕ್ಕೆ ವಲಸೆ ಹೋಗುವ ಜಾಯಮಾನ ನಮ್ಮದಲ್ಲ. ಬೇರೆ ಯಾವುದೇ ಕ್ಷೇತ್ರದಲ್ಲಿ ನಾನು ಚುನಾವಣೆಗೆ ಸ್ಪರ್ಧಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ' ಎಂದು ಸ್ಪಷ್ಟಪಡಿಸಿದರು.

ಸೋಲು-ಗೆಲುವು ಸಹಜ

ಇದೇ ವೇಳೆ ಕಳೆದ ಚುನಾವಣೆಯ ಫಲಿತಾಂಶಗಳ ಬಗ್ಗೆಯೂ ಮುಕ್ತವಾಗಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಪಕ್ಷಕ್ಕೆ ಸಣ್ಣಪುಟ್ಟ ಹಿನ್ನೆಡೆಗಳಾಗಿರಬಹುದು, ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ರಾಜಕೀಯದಲ್ಲಿ ಏರುಪೇರುಗಳು ಸರ್ವೇ ಸಾಮಾನ್ಯ. ಕಳೆದ ನಾಲ್ಕು ಚುನಾವಣೆಗಳಲ್ಲಿ ರಾಮನಗರದ ಜನತೆ ನಮ್ಮ ಕೈಬಿಟ್ಟಿರಲಿಲ್ಲ. ಆದರೆ ಕೆಲವೊಮ್ಮೆ ಕಾಲಘಟ್ಟದಲ್ಲಿ ಬದಲಾವಣೆಗಳಾಗುತ್ತವೆ. ಅದೆಲ್ಲವನ್ನೂ ನಾವು ಸಮತೋಲನದಿಂದ ಸ್ವೀಕರಿಸಬೇಕು ಎಂದು ಅಭಿಪ್ರಾಯಪಟ್ಟರು.

ಅಭಿವೃದ್ಧಿಯೇ ನಮ್ಮ ಮಂತ್ರ

ದೇವೇಗೌಡರ ಕುಟುಂಬ ರಾಮನಗರ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಅಪಾರ ಶ್ರಮ ಹಾಕಿದೆ. ಅಲ್ಲಿನ ನೀರಾವರಿ, ರಸ್ತೆ ಅಭಿವೃದ್ಧಿ ಸೇರಿದಂತೆ ಮೂಲಸೌಕರ್ಯಗಳ ವೃದ್ಧಿಗೆ ನಾವು ಪ್ರಾಮಾಣಿಕವಾಗಿ ದುಡಿದಿದ್ದೇವೆ. ಈ ಅಭಿವೃದ್ಧಿ ಕೆಲಸಗಳೇ ನಮಗೆ ಶ್ರೀರಕ್ಷೆಯಾಗಲಿದ್ದು, ಮುಂದಿನ ದಿನಗಳಲ್ಲಿ ಮತ್ತೆ ಜನರ ವಿಶ್ವಾಸಗಳಿಸುತ್ತೇವೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು. ಈ ಮೂಲಕ ಚಾಮರಾಜನಗರದಿಂದ ಸ್ಪರ್ಧೆ ಎಂಬ ಸುದ್ದಿಗಳಿಗೆ ಪೂರ್ಣವಿರಾಮ ಇಟ್ಟರು.

ಜಾತಿಗಣತಿ ರಾಜಕೀಯ ಉದ್ದೇಶದ ತಂತ್ರವಾಗಬಾರದು

ಮುಂದಿನ ಒಂದು ತಿಂಗಳೊಳಗೆ ಜಾತಿ ಜನಗಣತಿ ವರದಿ ಬಿಡುಗಡೆ ಮಾಡುವ ಸರ್ಕಾರದ ನಿರ್ಧಾರದ ಕುರಿತು ಪ್ರತಿಕ್ರಿಯಿಸಿದ ನಿಖಿಲ್ ಕುಮಾರಸ್ವಾಮಿ, 'ಜಾತಿಗಣತಿಯು ಕೇವಲ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಯ ಹಿತದೃಷ್ಟಿಯಿಂದ ನಡೆಯಬೇಕೇ ಹೊರತು, ಇದು ರಾಜಕೀಯ ಉದ್ದೇಶದ ತಂತ್ರವಾಗಬಾರದು. ಸರ್ಕಾರದ ಲೋಪದೋಷಗಳು ಹಾಗೂ ಸಮಸ್ಯೆಗಳು ಎದುರಾದಾಗ ಜನರನ್ನು ದಿಕ್ಕು ತಪ್ಪಿಸಲು ಇಂತಹ ವಿಚಾರಗಳನ್ನು ಮುನ್ನೆಲೆಗೆ ತರುವುದು ಸರಿಯಲ್ಲ ಎಂದು ಆಕ್ಷೇಪಿಸಿದ ಅವರು, ಜಾತಿಗಣತಿಯನ್ನು ನಾವು ಸ್ವಾಗತಿಸುತ್ತೇವೆ, ಆದರೆ ಈ ವರದಿಯು ಅತ್ಯಂತ ಪಾರದರ್ಶಕವಾಗಿರಬೇಕು ಮತ್ತು ಸರ್ಕಾರದ ಉದ್ದೇಶವು ಜನಪರವಾಗಿರಬೇಕೇ ಹೊರತು ರಾಜಕೀಯ ಪ್ರೇರಿತವಾಗಿರಬಾರದು ಎಂದು ಒತ್ತಾಯಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಉದ್ಯಮಿ ಸಿಜೆ ರಾಯ್‌‌ ಆತ್ಮ*ಹತ್ಯೆ‌ ಕೇಸ್ ಹಿಂದೆ ರಾಜಕಾರಣಿಗಳ‌ ಕೈವಾಡದ ಶಂಕೆ! ಶಾಸಕ ಎ ಮಂಜು ಹೇಳಿದ್ದೇನು?
ಬೆಂಗಳೂರು ಉದ್ಯಮಿ ಸಿ.ಜೆ. ರಾಯ್ ಆತ್ಮ*ಹತ್ಯೆ ಪ್ರಕರಣ: ಡೆತ್ ನೋಟ್ ಬಗ್ಗೆ ಎಸ್‌ಐಟಿ ಮಹತ್ವದ ಮಾಹಿತಿ