ಐಸಿಸ್‌ ಉಗ್ರರ ಚಿಕಿತ್ಸೆಗಾಗಿ ಬೆಂಗ್ಳೂರು ಡಾಕ್ಟರ್‌ ಆ್ಯಪ್‌: ಶಸ್ತ್ರಾಸ್ತ್ರ ಪೂರೈಕೆಗೂ ಬಳಕೆ!

By Kannadaprabha NewsFirst Published Aug 19, 2020, 7:21 AM IST
Highlights

ಐಸಿಸ್‌ ಉಗ್ರರ ಚಿಕಿತ್ಸೆಗಾಗಿ ಬೆಂಗ್ಳೂರು ಡಾಕ್ಟರ್‌ ಆ್ಯಪ್‌!| ರಹಸ್ಯವಾಗಿ ಶಸ್ತ್ರಾಸ್ತ್ರ ಪೂರೈಕೆಗೂ ಆ್ಯಪ್‌| ಎನ್‌ಐಎ ತನಿಖೆಯಿಂದ ಬಯಲು| ರಾಮಯ್ಯ ಆಸ್ಪತ್ರೇಲಿ ನೇತ್ರತಜ್ಞನಾಗಿದ್ದ ಶಂಕಿತ ಉಗ್ರ ಅಬ್ದುರ್‌ ರೆಹಮಾನ್‌

ಬೆಂಗಳೂರು(ಆ.19): ಜಾಗತಿಕ ಮಟ್ಟದ ಅತ್ಯುಗ್ರ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್‌ ಸ್ಟೇಟ್ಸ್‌ (ಐಸಿಸ್‌)ನ ಉಗ್ರರಿಗೆ ವೈದ್ಯಕೀಯ ಸೇವೆ ಒದಗಿಸಲು ಹಾಗೂ ಶಸ್ತ್ರಾಸ್ತ್ರ ಪೂರೈಕೆ ಮಾಡಲು ರಹಸ್ಯವಾಗಿ ಸಂವಹನ ನಡೆಸುವ ಪ್ರತ್ಯೇಕ ‘ಆ್ಯಪ್‌’ಗಳನ್ನು ಬೆಂಗಳೂರು ಮೂಲದ ನೇತ್ರ ವೈದ್ಯನೊಬ್ಬ ಅಭಿವೃದ್ಧಿಪಡಿಸುತ್ತಿದ್ದ ಎಂಬ ಸ್ಫೋಟಕ ಸಂಗತಿಯನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬಯಲುಗೊಳಿಸಿದೆ.

ಬಸವನÜಗುಡಿ ನಿವಾಸಿ ಡಾ.ಅಬ್ದುರ್‌ ರೆಹಮಾನ್‌ (28) ಎಂಬಾತನೇ ಶಂಕಿತ ಉಗ್ರನಾಗಿದ್ದು, ಬೆಂಗಳೂರಿನಲ್ಲಿ ಆರೋಪಿಯ ಮನೆ ಸೇರಿದಂತೆ ಮೂರು ಸ್ಥಳಗಳ ಮೇಲೆ ದಾಳಿ ನಡೆಸಿ ಮೊಬೈಲ್‌, ಕೆಮಿಕಲ್‌, ಲ್ಯಾಪ್‌ಟಾಪ್‌ ಸೇರಿದಂತೆ ಇನ್ನಿತರ ದಾಖಲೆಗಳನ್ನು ಜಪ್ತಿ ಮಾಡಿದೆ. ಐಸಿಎಸ್‌ ನಂಟಿನ ಅನುಮಾನದ ಮೇರೆಗೆ ಸೋಮವಾರ ಆತನನ್ನು ಎನ್‌ಐಎ ಐಜಿಪಿ ಸೋನಿಯಾ ನಾರಂಗ್‌ ನೇತೃತ್ವದ ತಂಡ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಮಹತ್ವದ ಸಂಗತಿ ಬೆಳಕಿಗೆ ಬಂದಿದೆ.

ಕಳೆದ 2015ರಲ್ಲಿ ಬೆಂಗಳೂರಿನಲ್ಲೇ ಕುಳಿತು ಐಸಿಸ್‌ ಸಂಘಟನೆಯ ಅಧಿಕೃತ ಟ್ವೀಟರ್‌ ಖಾತೆ ನಿರ್ವಹಿಸುತ್ತಿದ್ದ ಮೆಹದಿ ಬಿಸ್ವಾಸ್‌ ಸಿಕ್ಕಿಬಿದ್ದಿದ್ದ. ಈಗ ಅದೇ ಸಂಘಟನೆಯ ಮತ್ತೊಬ್ಬ ಪ್ರಮುಖ ಸೆರೆಯಾಗಿರುವುದು ಆತಂಕ ಮೂಡಿಸಿದೆ.

ಜಗತ್ತಿನಲ್ಲಿ ಎಲ್ಲೇ ವಿಧ್ವಂಸಕ ಕೃತ್ಯದ ವೇಳೆ ಗಾಯಗೊಳ್ಳುವ ಐಸಿಸ್‌ ಶಂಕಿತ ಉಗ್ರರಿಗೆ ವೈದ್ಯಕೀಯ ಸೇವೆ ಒದಗಿಸಲು ಹಾಗೂ ಶಸ್ತ್ರಾಸ್ತ್ರ ಪೂರೈಕೆ ಮಾಡಲು ರಹಸ್ಯವಾಗಿ ಸಂವಹನ ನಡೆಸುವ ಉದ್ದೇಶದಿಂದ ಅಬ್ದುರ್‌ ಆ್ಯಪ್‌ಗಳನ್ನು ರೂಪಿಸುತ್ತಿದ್ದ. ಇದಕ್ಕಾಗಿ ಐಸಿಸ್‌ ತವರೂರು ಸಿರಿಯಾದಲ್ಲಿ ತರಬೇತಿ ಪಡೆದಿದ್ದ ಎಂದು ಐಜಿಪಿ ಸೋನಿಯಾ ನಾರಂಗ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಕಾಶ್ಮೀರಿ ದಂಪತಿ ಜತೆ ವೈದ್ಯನ ಸಂಪರ್ಕ:

ಪೌರತ್ವ ತಿದ್ದುಪಡ್ಡಿ ಕಾಯ್ದೆ ವಿರೋಧಿಸಿ ದೇಶದ ವಿವಿಧೆಡೆ ವಿಧ್ವಂಸಕ ಕೃತ್ಯ ಎಸಗಲು ಐಸಿಸ್‌ ಸೋದರ ಸಂಘಟನೆ ಇಸ್ಲಾಮಿಕ್‌ ಸ್ಟೇಟ್‌ ಖೋರಾಸಾನ್‌ ಪ್ರಾಂತ್ಯ (ಐಎಸ್‌ಕೆಪಿ) ಯೋಜಿಸಿತ್ತು. ಇದೇ ಮಾಚ್‌ರ್‍ನಲ್ಲಿ ಐಸಿಸ್‌ ಸಂಚು ಬಯಲುಗೊಳಿಸಿದ ಎನ್‌ಐಎ ತಂಡವು, ಆ ಸಂಘಟನೆಯಲ್ಲಿ ನಿರತರಾಗಿದ್ದ ಕಾಶ್ಮೀರ ಮೂಲದ ಜಹಾನ್‌ಝೈಬ್‌ ಸಾಮಿ ವಾನಿ ಹಾಗೂ ಆತನ ಪತ್ನಿ ಹೀನಾ ಬಶೀರ್‌ ಬೇಗ್‌ರನ್ನು ದೆಹಲಿಯಲ್ಲಿ ಬಂಧಿಸಿತು. ಈ ಸತಿ-ಪತಿಗೆ ತಿಹಾರ್‌ ಜೈಲಿನಲ್ಲಿರುವ ಮತ್ತೊಬ್ಬ ಐಸಿಸ್‌ ಮುಖಂಡ ಅಬ್ದುಲ್‌ ಬಶೀತ್‌ ಜತೆ ಸಂಪರ್ಕ ಬೆಳಕಿಗೆ ಬಂದಿತ್ತು. ಬಳಿಕ ಕಾಶ್ಮೀರದ ದಂಪತಿಯ ಸಂಪರ್ಕ ಜಾಲವನ್ನು ಮತ್ತಷ್ಟುಶೋಧಿಸಿದಾಗ ಪುಣೆ ಹಾಗೂ ಬೆಂಗಳೂರಿನಲ್ಲಿ ಅವರ ಜಾಲ ಹರಡಿರುವುದು ಗೊತ್ತಾಗಿದೆ.

ಅಂತೆಯೇ ಪುಣೆಯಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿನಿ ಸಾದಿಯಾ ಅನ್ವರ್‌ ಶೇಕಿ ಹಾಗೂ ನಬೀಲ್‌ ಸಿದ್ದಿಕ್‌ ಖಾತ್ರಿ ಎನ್‌ಐಎ ಬಲೆಗೆ ಬಿದ್ದಿದ್ದರು. ನಂತರ ತನಿಖೆ ಮುಂದುವರೆಸಿದಾಗ ಬೆಂಗಳೂರಿನ ನೇತ್ರ ವೈದ್ಯ ಅಬ್ದುರ್‌ ರೆಹಮಾನ್‌ ಸೆರೆಯಾಗಿದ್ದಾನೆ ಎಂದು ಸೋನಿಯಾ ನಾರಂಗ್‌ ವಿವರಿಸಿದ್ದಾರೆ.

ಮೂರು ಸ್ನೇಹಿತರೂ ಎನ್‌ಐಎ ವಶಕ್ಕೆ

ಅಬ್ದುರ್‌ ಬಂಧನ ಬೆನ್ನಲ್ಲೇ ಆತನ ಮೂವರು ಸ್ನೇಹಿತರನ್ನು ಎನ್‌ಐಎ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದೆ. ಆದರೆ ಅಬ್ದುರ್‌ ಹೊರತುಪಡಿಸಿ ಮತ್ಯಾರನ್ನೂ ಬಂಧಿಸಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅಬ್ದುರ್‌ ಜತೆ ಆತನ ಗೆಳೆಯರು ಕೂಡಾ ಸಿರಿಯಾಕ್ಕೆ ಹೋಗಿ ಬಂದಿರುವ ಅನುಮಾನವಿದೆ. ಈ ನಿಟ್ಟಿನಲ್ಲಿ ವಿಚಾರಣೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಬ್ದುರ್‌ ಚಟುವಟಿಕೆ ಗೊತ್ತಿಲ್ಲ: ಎಂ.ಎಸ್‌.ರಾಮಯ್ಯ ಆಸ್ಪತ್ರೆ

ತಮ್ಮ ಕಾಲೇಜಿನಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿದ್ದ ಡಾ.ಅಬ್ದುರ್‌ ರೆಹಮಾನ್‌ನ ಐಸಿಸ್‌ ಸಂಘಟನೆ ಚಟುವಟಿಕೆಗಳ ಬಗ್ಗೆ ಮಾಹಿತಿ ಇಲ್ಲ ಎಂದು ಎಂ.ಎಸ್‌.ರಾಮಯ್ಯ ವೈದ್ಯಕೀಯ ಕಾಲೇಜು ಸ್ಪಷ್ಟಪಡಿಸಿದೆ.

ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದಲ್ಲಿ 2014ರಲ್ಲಿ ಎಂಬಿಬಿಎಸ್‌ ಮುಗಿಸಿದ್ದ ಅಬ್ದುರ್‌, 2017ರಲ್ಲಿ ಸರ್ಕಾರದ ಕೋಟಾದಲ್ಲಿ ನೇತ್ರ ಚಿಕಿತ್ಸೆ ಕುರಿತು ಸ್ನಾಕೋತ್ತರ ಪದವಿ (ಎಂಎಸ್‌)ಗೆ ಎಂ.ಎಸ್‌.ರಾಮಯ್ಯ ವೈದ್ಯಕೀಯ ಕಾಲೇಜಿಗೆ ಸೇರಿದ್ದ. 2020ರ ಜುಲೈನಲ್ಲಿ ಎಂಎಸ್‌ ಪಾಸ್‌ ಆಗಿದ್ದಾನೆ. ಕಾಲೇಜಿನ ಹೊರಗಡೆ ಆತನ ಚಟುವಟಿಕೆಗಳ ಕುರಿತು ತಮಗೆ ತಿಳಿದಿಲ್ಲ ಎಂದು ಎಂ.ಎಸ್‌.ರಾಮಯ್ಯ ಕಾಲೇಜಿನ ರಿಜಿಸ್ಟ್ರಾರ್‌ ಡಾ.ಹೇಮಂತ್‌ ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಸಿರಿಯಾಗೆ ಹೋಗಿ ಬಂದಿದ್ದ ನೇತ್ರತಜ್ಞ

ಬೆಂಗಳೂರಿನ ಎಂ.ಎಸ್‌.ರಾಮಯ್ಯ ವೈದ್ಯಕೀಯ ಕಾಲೇಜಿನಲ್ಲಿ ನೇತ್ರ ತಜ್ಞನಾಗಿ ಕಾರ್ಯನಿರ್ವಹಿಸುತ್ತಿದ್ದ‡ ಅಬ್ದುರ್‌ ರೆಹಮಾನ್‌, ತನ್ನ ಕುಟುಂಬದ ಜತೆ ಬಸವನಗುಡಿಯಲ್ಲಿ ನೆಲೆಸಿದ್ದ. ಮುಸ್ಲಿಂ ಮೂಲಭೂತವಾದದಿಂದ ಪ್ರಭಾವಿತನಾಗಿದ್ದ ವೈದ್ಯನಿಗೆ ಐಸಿಎಸ್‌ ಮೇಲೆ ವಿಪರೀತ ಒಲವು ಬೆಳೆಯಿತು. ಎಂಬಿಬಿಎಸ್‌ ವ್ಯಾಸಂಗ ಮುಗಿಸಿದ ಬಳಿಕ ಅಬ್ದುರ್‌, 2014ರಲ್ಲಿ ಐಸಿಸ್‌ ತವರೂರು ಸಿರಿಯಾ ದೇಶಕ್ಕೆ ಹೋಗಿದ್ದ. ಅಲ್ಲಿ 10 ದಿನಗಳ ಕಾಲ ವೈದ್ಯಕೀಯ ಶಿಬಿರದಲ್ಲಿ ಪಾಲ್ಗೊಂಡು ಗಾಯಗೊಂಡಿದ್ದ ಶಂಕಿತ ಉಗ್ರರ ಆರೈಕೆ ಮಾಡಿ ಭಾರತಕ್ಕೆ ಮರಳಿದ್ದ. ನಂತರ ಐಎಸ್‌ಕೆಪಿಯ ಕಾಶ್ಮೀರ ಮೂಲದ ಜಹಾನ್‌ಝೈಬ್‌ ದಂಪತಿ ಜತೆ ಅಬ್ದುರ್‌ ನಿಕಟ ಸಂಪರ್ಕ ಬೆಳೆಯಿತು.

ಸಿರಿಯಾದಿಂದ ಬಂದ ಬಳಿಕ, ಐಸಿಸ್‌ ಸಂಘಟನೆಯ ವೈದ್ಯಕೀಯ ಸೇವೆ ಹಾಗೂ ಶಸ್ತ್ರಾಸ್ತ್ರ ಪೂರೈಕೆಗಾಗಿ ಆನ್‌ಲೈನ್‌ನಲ್ಲಿ ಅತ್ಯಂತ ಗೌಪ್ಯವಾಗಿ ಆ್ಯಪ್‌ ಅಭಿವೃದ್ಧಿಪಡಿಸಲು ಸಿದ್ಧತೆ ನಡೆಸಿದ್ದ. ಈ ಆ್ಯಪ್‌ಗಳಲ್ಲೇ ಐಸಿಸ್‌ ಬಗ್ಗೆ ಅನುಕಂಪ ಹೊಂದಿರುವ ವೈದ್ಯರನ್ನು ಒಟ್ಟುಗೂಡಿಸಿ, ಬಳಿಕ ಆ ವೈದ್ಯರ ಮೂಲಕ ಸಂಘಟನೆಯ ಸದಸ್ಯರ ಆರೈಕೆಗೆ ಅಬ್ದುರ್‌ ಯೋಜಿಸಿದ್ದ. ಅದೇ ರೀತಿ ವಿಧ್ವಂಸಕ ಕೃತ್ಯಕ್ಕೆ ಸಜ್ಜಾಗುವ ಐಸಿಸ್‌ ಉಗ್ರರಿಗೆ ಶಸ್ತ್ರಾಸ್ತ್ರ ಸರಬರಾಜಿಗೆ ಮತ್ತೊಂದು ಆ್ಯಪ್‌ ಸಿದ್ಧಪಡಿಸುತ್ತಿದ್ದ ಎಂದು ತಿಳಿದು ಬಂದಿದೆ.

click me!