ಕರಾವಳಿ, ಮಲೆನಾಡಿನಲ್ಲಿ ಇನ್ನೂ 4 ದಿನ ಭಾರೀ ಮಳೆ

By Kannadaprabha NewsFirst Published Aug 7, 2022, 1:30 AM IST
Highlights

ಭಾನುವಾರದ ಬಳಿಕ ರಾಜ್ಯದ ಇತರ ಜಿಲ್ಲೆಗಳಲ್ಲಿ ಮಳೆ ಕಡಿಮೆಯಾಗುವ ಸಾಧ್ಯತೆ

ಬೆಂಗಳೂರು(ಆ.07):  ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಿಗೆ ಮುಂದಿನ ನಾಲ್ಕು ದಿನಗಳ ಕಾಲ ಭಾರಿ ಮಳೆಯ ಆರೆಂಜ್‌ ಅಲರ್ಚ್‌ ಪ್ರಕಟಿಸಲಾಗಿದೆ. ಭಾನುವಾರದ ಬಳಿಕ ರಾಜ್ಯದ ಇತರ ಜಿಲ್ಲೆಗಳಲ್ಲಿ ಮಳೆ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭಾನುವಾರ ಬೆಳಗ್ಗೆ 8.30ರ ತನಕ ಕೊಡಗು, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ಉತ್ತರ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗೆ ಅತ್ಯಂತ ಭಾರಿ ಮಳೆಯ ರೆಡ್‌ ಅಲರ್ಟ್‌ ಇರಲಿದೆ. ಇದೇ ಅವಧಿಯಲ್ಲಿ ಯಾದಗಿರಿ, ಬೀದರ್‌, ಕಲಬುರಗಿ ಜಿಲ್ಲೆಗೆ ಭಾರಿ ಮಳೆಯ ಆರೆಂಜ್‌ ಅಲರ್ಟ್‌, ರಾಯಚೂರು, ವಿಜಯಪುರ, ಬೆಳಗಾವಿ, ದಾವಣಗೆರೆ, ರಾಮನಗರ, ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗೆ ಯೆಲ್ಲೋ ಅಲರ್ಟ್‌ ನೀಡಲಾಗಿದೆ. ಈ ಎಲ್ಲ ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆ ಅಪ್ಪಳಿಸುವ ಸಾಧ್ಯತೆಯಿದೆ.

ಭಾನುವಾರದಿಂದ ಗುರುವಾರದ ತನಕ ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಾದ ಕೊಡಗು, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಭರ್ಜರಿ ಮಳೆ ಮುಂದುವರಿಯಲಿದ್ದು ಆರೆಂಜ್‌ ಅಲರ್ಟ್‌ ನೀಡಲಾಗಿದೆ. ಹಾಸನದಲ್ಲಿ ಭಾನುವಾರ ಆರೆಂಜ್‌ ಅಲರ್ಟ್‌ ಆ ಬಳಿಕ ಯೆಲ್ಲೋ ಅಲರ್ಟ್‌ ಇರಲಿದೆ. ಉಳಿದಂತೆ ಸೋಮವಾರ ಬೆಳಗ್ಗೆ 8.30ರ ತನಕ ಮೈಸೂರು, ಚಾಮರಾಜನಗರ, ದಾವಣಗೆರೆ, ಕೊಪ್ಪಳ, ರಾಯಚೂರು, ಯಾದಗಿರಿ, ವಿಜಯಪುರ, ಕಲಬುರಗಿ ಮತ್ತು ಬೀದರ್‌ ಜಿಲ್ಲೆಗೆ ಯೆಲ್ಲೋ ಅಲರ್ಟ್‌ ಇರಲಿದೆ.

ಕೊಡಗು- ಮಡಿಕೇರಿಯಲ್ಲಿ ಕಂಡು ಕೇಳರಿಯದ ಮೇಘಸ್ಪೋಟ, ಭೂಕುಸಿತ ಕಂಟಕ

ಶನಿವಾರ ಬೆಳಗ್ಗೆ 8.30ಕ್ಕೆ ಪೂರ್ಣಗೊಂಡ 24 ಗಂಟೆ ಅವಧಿಯಲ್ಲಿ ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಮುಂಗಾರು ಚುರುಕಾಗಿತ್ತು. ಚಿಕ್ಕಮಗಳೂರಿನ ಕೊಟ್ಟಿಗೆಹಾರದಲ್ಲಿ 21 ಸೆಂ. ಮೀ, ಉತ್ತರ ಕನ್ನಡದ ಗೋಕರ್ಣ, ಅಂಕೋಲಾ ತಲಾ 16, ಕಾರವಾರ 15, ಉಡುಪಿಯ ಕೊಲ್ಲೂರು 14, ಉಡುಪಿ, ಉತ್ತರ ಕನ್ನಡದ ಬೆಳ್ಳಕೇರಿ, ಹೊನ್ನಾವರ, ಗೇರುಸೊಪ್ಪ, ಕುಮಟಾದಲ್ಲಿ ತಲಾ 13 ಸೆಂ.ಮೀ ಮಳೆಯಾಗಿದೆ.
 

click me!