
ದಾವಣಗೆರೆ (ಫೆ.10): 80 ಶಾಸಕರ ಬೆಂಬಲ ಎಂಬುದು ಪ್ರಶ್ನೆಯಲ್ಲ. ಸಮರ್ಥರಿಗೆ, ಪಕ್ಷವನ್ನು ಮುನ್ನಡೆಸುವ ಸಾಮರ್ಥ್ಯ ಇರುವವರಿಗೆ ಅವಕಾಶ ಸಿಕ್ಕೇ ಸಿಗುತ್ತದೆ. ಆದರೆ, ಅಂತಹ ಸಂದರ್ಭ ಇನ್ನೂ ಬಂದಿಲ್ಲ. ಬಂದಾಗ ಅದರ ಬಗ್ಗೆ ಚರ್ಚೆ ಮಾಡೋಣ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಪಾದಿಸಿದ್ದಾರೆ.
ಹರಿಹರ ತಾ.ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಪೀಠದಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದರು. ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ 80-90 ಶಾಸಕರ ಬೆಂಬಲವಿದ್ದು, ಅವರಿಗೆ ಸಿಎಂ ಆಗಲು ಅವಕಾಶ ನೀಡಿ ಎಂದು ಹೈಕಮಾಂಡ್‌ಗೆ ಮನವಿ ಮಾಡಿದ್ದೇವೆ ಎಂಬ ರಾಮನಗರ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಹೇಳಿಕೆಗೆ ತಿರುಗೇಟು ನೀಡಿದರು.
ಅಧಿಕಾರ ಹಂಚಿಕೆ ಸಂಬಂಧದ ಗೊಂದಲ ಬಗೆಹರಿಸಬೇಕು ಎಂಬ ಶಾಸಕ ಬಸವರಾಜ ಶಿವಗಂಗಾ ಆಗ್ರಹ ಕುರಿತು ಪ್ರತಿಕ್ರಿಯಿಸಿ, ಸಿಎಂ ಕುರ್ಚಿ ಗೊಂದಲ ಯಾವಾಗ ಬಗೆಹರಿಯುತ್ತದೆ ಎಂದು ನಾನೂ ಕಾಯುತ್ತಿದ್ದೇನೆ. ಅಧಿಕಾರ ಹಂಚಿಕೆ ವಿಚಾರವಾಗಿ ನಿರ್ಮಾಣವಾದ ಗೊಂದಲ ಶೀಘ್ರ ಬಗೆಹರಿಯುವ ನಿರೀಕ್ಷೆ ಇತ್ತು. ಆದರೆ, ಈ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನ ಕೈಗೊಳ್ಳಬೇಕು, ಅಲ್ಲಿಯವರೆಗೆ ಕಾಯಬೇಕು. ಆದರೆ, ಈ ವಿಷಯವಾಗಿ ಹೈಕಮಾಂಡ್ ಸ್ಪಷ್ಟ ನಿರ್ಧಾರ ಕೈಗೊಳ್ಳದೇ ಇರಲು ಕಾರಣ ಏನು ಎಂಬುದು ಗೊತ್ತಾಗುತ್ತಿಲ್ಲ ಎಂದರು.
ಶಾಸಕ ಯತೀಂದ್ರ ಅವರೇ ನಮ್ಮ ಹೈಕಮಾಂಡ್ ಎಂಬ ಡಿಕೆಶಿ ವ್ಯಂಗ್ಯದ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಈ ವ್ಯವಸ್ಥೆಯಲ್ಲಿ ಡಿ.ಕೆ.ಶಿವಕುಮಾರ್ ಹೇಳಿದಂತೆ ಎಲ್ಲರೂ ಹೈಕಮಾಂಡೇ. ಎಲ್ಲರೂ ದೊಡ್ಡವರೇ. ಯಾರೂ ಸಣ್ಣವರು ಎಂದು ಹೇಳುವುದಕ್ಕೆ ಆಗುವುದಿಲ್ಲ. ಈ ನಿಟ್ಟಿನಲ್ಲಿ ಗೊಂದಲ ಬೇಗ ಬಗೆಹರಿಯಬೇಕು. ಕಾಂಗ್ರೆಸ್ ಗಟ್ಟಿಯಾಗಬೇಕು ಎಂದರು.
ಸಂಪುಟ ಪುನಾರಚನೆ ಕುರಿತು ಪ್ರತಿಕ್ರಿಯಿಸಿ, ಇದಕ್ಕೆ ಹೈಕಮಾಂಡ್ ಒಪ್ಪಿಗೆ ಸಿಗಬೇಕಿದೆ. ತುಂಬಾ ಜನ ಸೀನಿಯರ್‌ಗಳಿದ್ದು, ಸಚಿವರಾಗಬೇಕೆಂದು ಅನೇಕರು ಕಾಯುತ್ತಿದ್ದಾರೆ. ಆದರೆ, ನಮ್ಮ ವರಿಷ್ಠರು ಹೇಳುವವರೆಗೂ ಕಾಯಬೇಕಾಗುತ್ತದೆ ಎಂದು ಹೇಳಿದರು.
ದಾವಣಗೆರೆ ವಾಲ್ಮೀಕಿ ಜನ ಜಾಗೃತಿ ಜಾತ್ರಾ ಮಹೋತ್ಸವ ವೇಳೆ ಸಿಎಂ ಸಿದ್ದರಾಮಯ್ಯ ಆಗಮಿಸಿದ ಬಳಿಕ ವೇದಿಕೆಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಆಗಮಿಸಿದರು. ಈ ವೇಳೆ ಕಾರ್ಯಕ್ರಮ ನಿರೂಪಿಸುತ್ತಿದ್ದ ನಿರೂಪಕರು, ಜಾರಕಿಹೊಳಿಗೆ ಸ್ವಾಗತ ಕೋರುತ್ತಾ, ‘ಭವಿಷ್ಯದ ನಾಯಕ, ಮುಂದಿನ ಸಿಎಂ ಸತೀಶ್ ಜಾರಕಿಹೊಳಿ’ ಎಂದು ಸಂಬೋಧಿಸಿದರು. ಈ ವೇಳೆ ಶಿಳ್ಳೆ, ಚಪ್ಪಾಳೆ ಹಾಕಿ ಅಭಿಮಾನಿಗಳು ಹರ್ಷೋದ್ಘಾರ ವ್ಯಕ್ತಪಡಿಸಿದರು. ಬಳಿಕ, ಸಮಾರಂಭದಲ್ಲಿ ಸತೀಶ್ ಜಾರಕಿಹೊಳಿ ಮಾತನಾಡಿದರು. ಅವರ ಭಾಷಣದ ಕೊನೆಯಲ್ಲಿ ಮತ್ತೊಮ್ಮೆ ಅಭಿಮಾನಿಗಳು ‘ಸತೀಶ್ ಜಾರಕಿಹೊಳಿ ಮುಂದಿನ ಸಿಎಂ’ ಎಂದು ಘೋಷಣೆ ಕೂಗಿದರು.
ಕಾರ್ಯಕ್ರಮದಲ್ಲಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಶ್ರೀ, ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀ, ಸಚಿವ ಮಹದೇವಪ್ಪ, ಯತೀಂದ್ರ ಮತ್ತಿತರರು ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ