ಮಂಡ್ಯದಲ್ಲಿ ARAI ಕೇಂದ್ರ ಸ್ಥಾಪನೆಗೆ ಬಸರಾಳು ಬಳಿ 105 ಎಕರೆ ಭೂಮಿ ಲಭ್ಯ: ಕುಮಾರಸ್ವಾಮಿಗೆ ಪತ್ರ ಬರೆದ ಎಂ.ಬಿ. ಪಾಟೀಲ

Published : Feb 09, 2026, 10:25 PM IST
HD Kumaraswamy MB Patil

ಸಾರಾಂಶ

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕೋರಿಕೆಯಂತೆ, ಮಂಡ್ಯದಲ್ಲಿ ದೇಶದ ಮೊದಲ ನಿರ್ಮಾಣ ಕಾಮಗಾರಿ ಪರೀಕ್ಷಾ ಸ್ಥಾವರ ಸ್ಥಾಪನೆಗೆ 105 ಎಕರೆ ಜಮೀನು ಲಭ್ಯವಿದೆ ಎಂದು ಸಚಿವ ಎಂ.ಬಿ. ಪಾಟೀಲರು ಪತ್ರದ ಮೂಲಕ ತಿಳಿಸಿದ್ದಾರೆ. ಭೂಮಿ ಪರಿಶೀಲಿಸಿ, ಯೋಜನೆಗೆ ಚಾಲನೆ ನೀಡಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದಿದ್ದಾರೆ.

ಬೆಂಗಳೂರು (ಫೆ.09): ದೇಶದ ಪ್ರಪ್ರಥಮ ನಿರ್ಮಾಣ ಕಾಮಗಾರಿ ಮತ್ತು ಮೂಲಸೌಕರ್ಯ ಸಾಧನ ಪರೀಕ್ಷಾ ಮೂಲಸೌಕರ್ಯ ಸ್ಥಾವರ (Construction Equipment Testing Infrastructure) ನಿರ್ಮಾಣಕ್ಕೆ ತಾವು ಮಂಡ್ಯ ಜಿಲ್ಲೆಯಲ್ಲಿ ಅಪೇಕ್ಷಿಸಿದ್ದ 100 ಎಕರೆ ಜಮೀನು ಲಭ್ಯವಿದೆ. ಈ ಸಂಬಂಧ ಭಾರತೀಯ ಆಟೋಮೋಟೀವ್ ಸಂಶೋಧನಾ ಒಕ್ಕೂಟಕ್ಕೆ (ARAI-ಎ.ಆರ್.ಎ.ಐ) ಸೂಕ್ತ ನಿರ್ದೇಶನ ನೀಡಿ, ಯೋಜನಾ ಪ್ರಸ್ತಾವನೆ ಕಳಿಸಿಕೊಡಲು ಸೂಚಿಸಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.

ಪಾಟೀಲರ ಪತ್ರದಲ್ಲಿ ಏನಿದೆ?

ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಜನವರಿ 8ರಂದು ಈ ಸ್ಥಾವರಕ್ಕಾಗಿ ಮಂಡ್ಯ ಜಿಲ್ಲೆಯಲ್ಲಿ 100 ಎಕರೆ ಭೂಮಿ ಮಂಜೂರು ಮಾಡುವಂತೆ ಕೋರಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು. ಆ ಪತ್ರಕ್ಕೆ ಸೋಮವಾರ ಉತ್ತರಿಸಿರುವ ಎಂ.ಬಿ. ಪಾಟೀಲರು, 'ಮಂಡ್ಯ ತಾಲೂಕಿನ ಬಸರಾಳು ಹೋಬಳಿಯ ಮುದ್ದನಘಟ್ಟ ಮತ್ತು ಹೆಗ್ಗಡಿತಿಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ 105 ಎಕರೆ ಸರ್ಕಾರಿ ಭೂಮಿ ಲಭ್ಯವಿದೆ ಎಂದು ಜಿಲ್ಲಾಧಿಕಾರಿಗಳಿಂದ ಮಾಹಿತಿ ಬಂದಿದೆ. ಈ ಭೂಮಿಯು ಮಂಡ್ಯ-ನಾಗಮಂಗಲ ರಾಜ್ಯ ಹೆದ್ದಾರಿಯಿಂದ ಕೇವಲ 500 ಮೀಟರ್ ದೂರದಲ್ಲಿದೆ' ಎಂದು ತಿಳಿಸಿದ್ದಾರೆ.

ಹಿಂದಿನ ಟೀಕೆಗೆ ತಿರುಗೇಟು:

ಈ ಯೋಜನೆಯ ಜಾಗದ ವಿಚಾರವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಈ ಹಿಂದೆ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದರು. 'ಕೇಂದ್ರದ ಮಹತ್ವದ ಯೋಜನೆಗೆ ರಾಜ್ಯ ಸರ್ಕಾರ ಸರಿಯಾದ ಜಾಗವನ್ನು ನೀಡುತ್ತಿಲ್ಲ. ಉದ್ದೇಶಪೂರ್ವಕವಾಗಿ ಯೋಜನೆಗೆ ಅಡ್ಡಿಪಡಿಸಲಾಗುತ್ತಿದೆ' ಎಂಬರ್ಥದಲ್ಲಿ ಅವರು ಟೀಕೆ ಮಾಡಿದ್ದರು.

ಈ ಟೀಕೆಗೆ ಪರೋಕ್ಷವಾಗಿ ಉತ್ತರಿಸಿದ ಎಂ.ಬಿ. ಪಾಟೀಲ, 'ಉದ್ದೇಶಿತ ಸ್ಥಾವರ ಸ್ಥಾಪಿಸಲು ನೀವು ಕೇಳಿದ್ದಕ್ಕಿಂತ ಹೆಚ್ಚಿನ ಭೂಮಿ ಲಭ್ಯವಿದೆ. ಆದ್ದರಿಂದ, ಭಾರತೀಯ ಆಟೋಮೋಟೀವ್ ಸಂಶೋಧನಾ ಒಕ್ಕೂಟದ (ARAI) ಪ್ರತಿನಿಧಿಗಳು ಮತ್ತು ನಿಮ್ಮ ಸಚಿವಾಲಯದ ತಂಡ ಎರಡೂ ರಾಜ್ಯಕ್ಕೆ ಭೇಟಿ ನೀಡಿ, ಈ ಭೂಮಿಯು ತಮಗೆ ಸೂಕ್ತವಾಗಿದೆಯೇ ಎನ್ನುವುದನ್ನು ತಕ್ಷಣ ಜಂಟಿ ಪರಿಶೀಲನೆ ನಡೆಸಿ ನಿರ್ಧರಿಸಬೇಕು' ಎಂದು ಕೋರಿದ್ದಾರೆ. ಪರಿಶೀಲನೆಯ ನಂತರ ಭೂಮಿ ಸೂಕ್ತವೆನಿಸಿದರೆ ಕೂಡಲೇ ಅದನ್ನು ಸ್ಥಾವರಕ್ಕೆ ಮಂಜೂರು ಮಾಡಲಾಗುವುದು ಎಂದು ಪಾಟೀಲ ತಮ್ಮ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

ಯೋಜನೆಯ ಮಹತ್ವ:

ಎ.ಆರ್.ಎ.ಐ. ಸ್ಥಾವರವು ನಿರ್ಮಾಣ ಮತ್ತು ಮೂಲಸೌಕರ್ಯ ಸಾಧನಗಳ ಪರೀಕ್ಷೆಗೆ ದೇಶದ ಪ್ರಪ್ರಥಮ ಅತ್ಯಾಧುನಿಕ ಮೂಲಸೌಕರ್ಯವನ್ನು ಒದಗಿಸಲಿದೆ. ಇದು ಮಂಡ್ಯ ಸೇರಿದಂತೆ ರಾಜ್ಯದ ಕೈಗಾರಿಕಾ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತರಲಿದೆ. ಈ ಹಿನ್ನೆಲೆಯಲ್ಲಿ, ಯೋಜನೆಯನ್ನು ತ್ವರಿತವಾಗಿ ಆರಂಭಿಸಲು ಬೇಕಾದ ಎಲ್ಲ ಸಹಕಾರವನ್ನು ರಾಜ್ಯ ಸರ್ಕಾರ ನೀಡಲು ಸಿದ್ಧವಿದೆ ಎಂದು ಪಾಟೀಲರು ತಿಳಿಸಿದ್ದಾರೆ. ಯೋಜನೆಯ ಕುರಿತು ಮುಂದಿನ ಎಲ್ಲಾ ವಿಚಾರಗಳಿಗಾಗಿ ಎ.ಆರ್.ಎ.ಐ. ಒಕ್ಕೂಟವು ನೇರವಾಗಿ ರಾಜ್ಯ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್. ಸೆಲ್ವಕುಮಾರ್ ಅವರೊಂದಿಗೆ ವ್ಯವಹರಿಸಬಹುದು ಎಂದು ಸಚಿವರು ತಮ್ಮ ಪತ್ರದಲ್ಲಿ ಸೂಚಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಿಲ್ಕಿ ಬ್ಯೂಟಿ ಮುಂದೆ ಸಿಲ್ಕ್‌ನಂತೆ ಜಾರಿದ ಕರ್ನಾಟಕ ಸರ್ಕಾರ; ಮೈಸೂರ್ ಸ್ಯಾಂಡಲ್ ಸೋಪ್ ಅಧಿಕೃತ ರಾಯಭಾರಿಯಾದ ತಮನ್ನಾ!
Gilli Nata: ಜೈಲಿಗೆ ಹೋಗಿ ನಟ ದರ್ಶನ್ ಭೇಟಿಯಾಗಲು ಪ್ರಯತ್ನಿಸಿದ್ದು ನಿಜ.. ಸತ್ಯ ಒಪ್ಪಿಕೊಂಡ ಗಿಲ್ಲಿ ನಟ!