ಗಂಗಾವತಿಯಲ್ಲಿ ಜನಾರ್ದನ ರೆಡ್ಡಿ ವಾಸ್ತವ್ಯ, ಶೀಘ್ರ ಗೃಹಪ್ರವೇಶ

Published : Dec 06, 2022, 03:00 AM IST
ಗಂಗಾವತಿಯಲ್ಲಿ ಜನಾರ್ದನ ರೆಡ್ಡಿ ವಾಸ್ತವ್ಯ, ಶೀಘ್ರ ಗೃಹಪ್ರವೇಶ

ಸಾರಾಂಶ

ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಗಂಗಾವತಿ ಮೂಲಕ ತಮ್ಮ ರಾಜಕೀಯದ 2ನೇ ಇನ್ನಿಂಗ್ಸ್‌ ಆರಂಭಿಸುವ ಸುಳಿವು ನೀಡಿದ್ದಾರೆ. ಈಗಾಗಲೇ ಅವರು ಗಂಗಾವತಿಯಲ್ಲಿ ಮನೆ ಖರೀದಿಸಿದ್ದು, ಶೀಘ್ರ ಶುಭ ಮುಹೂರ್ತದಲ್ಲಿ ಗೃಹಪ್ರವೇಶ ಮಾಡಿ ಮುಂದಿನ ರಾಜಕೀಯ ಹೆಜ್ಜೆಗಳ ಬಗ್ಗೆ ತಿಳಿಸುತ್ತೇನೆ ಎಂದು ಸ್ವತಃ ರೆಡ್ಡಿ ಅವರೇ ಹೇಳಿದ್ದಾರೆ.

ಕೊಪ್ಪಳ (ಡಿ.06): ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಗಂಗಾವತಿ ಮೂಲಕ ತಮ್ಮ ರಾಜಕೀಯದ 2ನೇ ಇನ್ನಿಂಗ್ಸ್‌ ಆರಂಭಿಸುವ ಸುಳಿವು ನೀಡಿದ್ದಾರೆ. ಈಗಾಗಲೇ ಅವರು ಗಂಗಾವತಿಯಲ್ಲಿ ಮನೆ ಖರೀದಿಸಿದ್ದು, ಶೀಘ್ರ ಶುಭ ಮುಹೂರ್ತದಲ್ಲಿ ಗೃಹಪ್ರವೇಶ ಮಾಡಿ ಮುಂದಿನ ರಾಜಕೀಯ ಹೆಜ್ಜೆಗಳ ಬಗ್ಗೆ ತಿಳಿಸುತ್ತೇನೆ ಎಂದು ಸ್ವತಃ ರೆಡ್ಡಿ ಅವರೇ ಹೇಳಿದ್ದಾರೆ. ಈ ಮೂಲಕ ಜನಾರ್ದನ ರೆಡ್ಡಿ ಅವರು ಮುಂದಿನ ಚುನಾವಣೆ ಹೊತ್ತಿಗೆ ಹೊಸ ಪಕ್ಷ ಕಟ್ಟಬಹುದು ಎಂಬ ಪುಕಾರುಗಳಿಗೆ ರೆಕ್ಕೆಪುಕ್ಕ ಬಂದಂತಾಗಿದೆ.

ಹನುಮ ಜಯಂತಿ ಸಂದರ್ಭದಲ್ಲಿ ಸೋಮವಾರ ಹನುಮಮಾಲೆ ಧರಿಸಿ ಅಂಜನಾದ್ರಿ ಬೆಟ್ಟಹತ್ತಿದ ಅವರು ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಗಂಗಾವತಿಯಲ್ಲಿ ಮನೆ ಖರೀದಿಸಿದ್ದೇನೆ. ಇನ್ನು ಕೆಲ ದಿನದಲ್ಲಿ ಗೃಹಪ್ರವೇಶ ಮಾಡುತ್ತೇನೆ. ಇಂದು ರಾಜಕೀಯ ವಿಚಾರ ಮಾತನಾಡಲಾರೆ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ವಿವರಿಸುತ್ತೇನೆ. ಯಾವುದನ್ನೂ ಮುಚ್ಚಿಡುವುದಿಲ್ಲ. ನಾನು ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿ, ಹಾಗೆಯೇ ಮುಂದುವರಿಯುತ್ತೇನೆ ಎಂದರು.

ಜನಾರ್ದನ ರೆಡ್ಡಿಯಿಂದ ಹೊಸ ಪಕ್ಷ ಸ್ಥಾಪನೆ?: ಬಿಜೆಪಿಯಿಂದ ಮುನಿಸಿಕೊಂಡಿರುವ ರೆಡ್ಡಿ

ಬಳ್ಳಾರಿಗೆ ತೆರಳಲು ಸುಪ್ರಿಂ ಕೋರ್ಚ್‌ ತಡೆ ವಿಧಿಸಿದೆ. ಗಂಗಾವತಿ, ಬಳ್ಳಾರಿ ಎರಡೂ ನನಗೆ ಪ್ರಿಯವಾದ ಕ್ಷೇತ್ರ. ಈ ಹಿಂದೆಯೂ ಇಲ್ಲಿ ಅನೇಕ ಸಾರಿ ಬಂದಿದ್ದೇನೆ. ನನ್ನ ಅಭಿಮಾನಿಗಳು, ಹಿತೈಷಿಗಳಿದ್ದಾರೆ. ಎಲ್ಲ ದೃಷ್ಟಿಯಿಂದಲೂ ಗಂಗಾವತಿಯನ್ನು ನನ್ನ ವಾಸ್ತವ್ಯಕ್ಕೆ ಆಯ್ಕೆ ಮಾಡಿಕೊಂಡಿದ್ದೇನೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ನಾನು ಗಂಗಾವತಿಯಲ್ಲಿಯೇ ನೆಲೆಸಬೇಕಾಗಿದೆ. ಬಳ್ಳಾರಿಗೆ ಹತ್ತಿರ ಇರುವುದರಿಂದ ಇಲ್ಲಿಯೇ ವಾಸ್ತವ್ಯ ಮಾಡುತ್ತೇನೆ ಎಂದರು. ರಾಮುಲು ಜತೆ ಭಿನ್ನಮತ ಇಲ್ಲ: ನನ್ನ ಮತ್ತು ಶ್ರೀರಾಮುಲು ಅವರ ಮಧ್ಯೆ ಯಾವುದೇ ರಾಜಕೀಯ ಭಿನ್ನಾಭಿಪ್ರಾಯ ಮತ್ತು ಬಿರುಕು ಇಲ್ಲ. ನಮ್ಮಿಬ್ಬರ ನಡುವೆ ಬಿರುಕು, ಭಿನ್ನಾಭಿಪ್ರಾಯ ಈ ಜನ್ಮದಲ್ಲಿ ಸಾಧ್ಯವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಸ್ಪಷ್ಟಪಡಿಸಿದರು.

ಗಂಗಾವತಿಯಿಂದಲೇ ಸ್ಪರ್ಧೆ?: ಗಾಲಿ ಜನಾರ್ದನ ರೆಡ್ಡಿ ಅವರು ಗಂಗಾವತಿಯಿಂದಲೇ ಸ್ಪರ್ಧೆ ಮಾಡುತ್ತಾರೆ ಎನ್ನುವ ಸುದ್ದಿ ಕಳೆದೊಂದು ವರ್ಷದಿಂದಲೂ ಹರಿದಾಡುತ್ತಿದೆ.

61 ಲಕ್ಷಕ್ಕೆ ಮನೆ ಖರೀದಿಸಿದ ರೆಡ್ಡಿ: ಬಳ್ಳಾರಿ ಗಣಿ ಧಣಿ ಗಾಲಿ ಜನಾರ್ದನ ರೆಡ್ಡಿ ಅವರು ಗಂಗಾವತಿಯ ಕನಕಗಿರಿ ಮಾರ್ಗದಲ್ಲಿ ಕ್ರಿಯೇಟಿವ್‌ ಲೇಔಟ್‌ನಲ್ಲಿರುವ ವಿನಯ್‌ ಕುಮಾರ್‌ ಸುರಾನ ಅವರಿಗೆ ಸೇರಿದ ಮನೆಯನ್ನು 61 ಲಕ್ಷಕ್ಕೆ ಖರೀದಿಸಿದ್ದಾರೆ. ಅಲ್ಲದೆ ಅಕ್ಕಪಕ್ಕದ ಇನ್ನೂ ಎರಡು ಮನೆ ಮತ್ತು 2 ಎಕರೆ ಭೂಮಿ ಬಾಡಿಗೆ ಪಡೆದಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ಮನೆಯನ್ನು ವೀಕ್ಷಿಸಿರುವ ಜನಾರ್ದನ ರೆಡ್ಡಿ ಅವರು ಡಿ.9 ಅಥವಾ 10ರಂದು ನೋಂದಣಿ ಮಾಡಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಹುಲಿಗೆ ಬೇಟೆಗೆ ಸಿದ್ಧವಾದರೆ ಯಾರೂ ತಡೆಯಲಾಗದು: ಜನಾರ್ದನ ರೆಡ್ಡಿ

ಮನೆ ಖರೀದಿ ವಿಚಾರವನ್ನು ಸ್ವತಃ ರೆಡ್ಡಿ ಅವರೇ ಬಹಿರಂಗಪಡಿಸಿದ್ದಾರೆ. ರಾಜಕೀಯ ಭವಿಷ್ಯ ಮತ್ತು ನೆಮ್ಮದಿ ಜೀವನಕ್ಕಾಗಿ ಗಂಗಾವತಿಯಲ್ಲಿ ಮನೆ ಖರೀದಿಸಿರುವುದಾಗಿ ಸ್ಪಷ್ಟಪಡಿಸಿದ್ದು, ಇನ್ನು ಕೆಲ ದಿನದಲ್ಲೇ ಗೃಹಪ್ರವೇಶ ಮಾಡಿ ಮುಂದಿನ ವಿಚಾರ, ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ. ತಮ್ಮ ಮುಂದಿನ ರಾಜಕೀಯ ನಡೆಯನ್ನು ಗಂಗಾವತಿಯಿಂದಲೇ ಆರಂಭಿಸಲು ಜನಾರ್ದನ ರೆಡ್ಡಿ ನಿರ್ಧರಿಸಿದ್ದು, ಮನೆ ಪ್ರವೇಶದ ದಿನವೇ ತಮ್ಮ ಮುಂದಿನ ರಾಜಕೀಯ ತಂತ್ರ, ಹೆಜ್ಜೆಯ ಬಗ್ಗೆ ಹೇಳಲಿದ್ದಾರೆ ಎಂದು ಅವರ ಆಪ್ತರು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: ಕಾಂಗ್ರೆಸ್ ಮುಖಂಡ ಗಣೇಶ್ ಗೌಡ ಕೊಲೆ ರಹಸ್ಯ ರಿವೀಲ್ - ಪೊಲೀಸರ ಬಲೆಗೆ ಬಿದ್ದ ಮೂವರು!