Farmers Welfare: ರೈತರ ಆದಾಯ ಹೆಚ್ಚಳಕ್ಕೆ 2ನೇ ಕೃಷಿ ನಿರ್ದೇಶನಾಲಯ: ಮುಖ್ಯಮಂತ್ರಿ ಬೊಮ್ಮಾಯಿ ಘೋಷಣೆ!

By Kannadaprabha News  |  First Published Dec 28, 2021, 6:07 AM IST

*ಸಮಗ್ರ, ನೈಸಕರ್ಗಿಕ ಕೃಷಿಗೆ ಬಜೆಟ್‌ನಲ್ಲಿ ಹೆಚ್ಚು ಅನುದಾನ
*ಕೃಷಿಯೇತರ ಆದಾಯ ಹೆಚ್ಚಳಕ್ಕೆ ಮೀನುಗಾರಿಕೆಗೆ ಪ್ರೋತ್ಸಾಹ


ಬೆಂಗಳೂರು: ಕೃಷಿಕರ ಆದಾಯ ಹೆಚ್ಚಿಸಲು ಶೀಘ್ರವೇ ನೂತನ ಕೃಷಿ ನಿರ್ದೇಶನಾಲಯ ಸ್ಥಾಪಿಸಿ ಅಗತ್ಯ ಹಣಕಾಸು ನೆರವು ನೀಡಲಾಗುವುದು. ಸಮಗ್ರ ಮತ್ತು ನೈಸರ್ಗಿಕ ಕೃಷಿಗೂ ಬಜೆಟ್‌ನಲ್ಲಿ ಹೆಚ್ಚು ಅನುದಾನ ಮೀಸಲಿಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಘೋಷಿಸಿದರು. ಸೋಮವಾರ ನಗರದ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಕೃಷಿ ಭವನದ ಎರಡನೇ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೃಷಿಗೆ (Agriculture) ಆದ್ಯತೆ ನೀಡಲು ಆಗಾಗಲೇ ಕೃಷಿ ನಿರ್ದೇಶನಾಲಯ ಸ್ಥಾಪಿಸಲಾಗಿದೆ. ಕೃಷಿಕರ ಆದಾಯ ಹೆಚ್ಚಿಸುವ ದೃಷ್ಟಿಯಿಂದ ಎರಡನೇ ಕೃಷಿ ನಿರ್ದೇಶನಾಲಯ ಸ್ಥಾಪಿಸಲು ಈಗಾಗಲೇ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಬೆಂಗಳೂರಿನಲ್ಲಿ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಕೃಷಿ ಭವನದ 2ನೇ ಕಟ್ಟಡವನ್ನು ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಕೃಷಿ ಸಚಿವ ಬಿ.ಸಿ.ಪಾಟೀಲ್‌ ಮತ್ತಿತರರು ಹಾಜರಿದ್ದರು.

Latest Videos

undefined

ಕೃಷಿಯೇತರ ಆದಾಯ ವೃದ್ಧಿಸುವ ನಿಟ್ಟಿನಲ್ಲೂ ಸರ್ಕಾರ ಕಾರ್ಯೋನ್ಮುಖ

ಕೃಷಿ ವಲಯದಲ್ಲಿ ಶೇ.1 ರಷ್ಟುಅಭಿವೃದ್ಧಿ ಆದರೆ ಕೈಗಾರಿಕೆಯಲ್ಲಿ (Industry) ಶೇ.4 ರಷ್ಟುಅಭಿವೃದ್ಧಿಯಾಗಲಿದೆ. ಇದರಿಂದಾಗಿ ಸೇವಾ ವಲಯದಲ್ಲಿ ಶೇ.10 ರಷ್ಟುಪ್ರಭಾವ ಬೀರಲಿದೆ. ಕೃಷಿ ವಲಯದ ಅಭಿವೃದ್ಧಿ ರಾಜ್ಯದ ಆರ್ಥಿಕ ಸ್ಥಿತಿಗೂ ಬಹಳ ಮುಖ್ಯವಾಗಿದೆ. ಕೃಷಿಯೇತರ ಆದಾಯ ವೃದ್ಧಿಸಲು ಮೀನುಗಾರಿಕೆ ಮತ್ತಿತರ ಚಟುವಟಿಕೆಗೆ ಪ್ರೋತ್ಸಾಹ ನೀಡಿ ಕೃಷಿಕರ ಆದಾಯ ಹೆಚ್ಚಿಸಲಾಗುವುದು. ಸಮಗ್ರ ಮತ್ತು ನೈಸರ್ಗಿಕ ಕೃಷಿಗೂ ಉತ್ತೇಜನ ನೀಡುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಹವಾಮಾನ ಆಧಾರಿತ 10 ಕೃಷಿ ವಲಯಗಳು ರಾಜ್ಯದಲ್ಲಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕು. ವರ್ಷದ ಎಲ್ಲ ಹವಾಮಾನದಲ್ಲಿಯೂ ಒಂದಲ್ಲಾ ಒಂದು ಬೆಳೆ ಬೆಳೆಯುವ ವಾತಾವರಣ ನಮ್ಮ ರಾಜ್ಯದಲ್ಲಿ ಮಾತ್ರವಿದೆ. ಹವಾಮಾನ ಆಧಾರಿತ ಕೃಷಿ ಚಟುವಟಿಕೆ ನಡೆಸಬೇಕು. ಭೂಮಿ ಅಷ್ಟೇ ಇದೆ. ಆದರೆ, ಕೃಷಿಕರ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಕೃಷಿಯೇತರ ಆದಾಯ ವೃದ್ಧಿಸುವ ನಿಟ್ಟಿನಲ್ಲೂ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.ಕೃಷಿ ಸಚಿವ ಬಿ.ಸಿ.ಪಾಟೀಲ್‌, ಇಲಾಖೆ ನಿರ್ದೇಶಕಿ ನಂದಿನಿ ಕುಮಾರಿ ಮತ್ತಿತರರು ಹಾಜರಿದ್ದರು.

ಸುಗ್ಗಿಗೆ ಕೆಲಸ ಮುಗಿದಂತಲ್ಲ : ಸಿಎಂ

ಸುಗ್ಗಿಯವರೆಗೂ ರೈತರು ಕಷ್ಟಪಟ್ಟು ದುಡಿದು ನಂತರ ತಮ್ಮ ಕರ್ತವ್ಯ ಮುಗಿಯಿತು ಎಂದು ಸುಮ್ಮನಾಗುತ್ತಾರೆ. ಆದರೆ ಬಳಿಕವೂ ಉತ್ಪಾದನೆಗಳ ಸಂರಕ್ಷಣೆ, ಗ್ರೇಡಿಂಗ್‌, ಗೋದಾಮು, ಮಾರುಕಟ್ಟೆ, ಆನ್‌ಲೈನ್‌ ಮಾರುಕಟ್ಟೆಬಗ್ಗೆಯೂ ಹೆಚ್ಚು ಆಸಕ್ತಿ ವಹಿಸಬೇಕು. ಹೀಗಾದರೆ ಮಾತ್ರ ಆದಾಯ ಪಡೆಯಲು ಸಾಧ್ಯ. ರೈತನಿಗೆ ಒಕ್ಕಲುತನವನ್ನು ಯಾರೂ ಹೇಳಿಕೊಡಬೇಕಿಲ್ಲ. ಹುಟ್ಟಿನಿಂದಲೇ ಬರಲಿದೆ. ಆದರೆ, ಯೋಗ್ಯ ಬೆಲೆ ಸಿಗುವಂತೆ ಮಾಡಲು ಮಧ್ಯದಲ್ಲಿನ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

ಇದನ್ನೂ ಓದಿ:

1) Bengaluru Development: ಸರ್ಕಾರ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಬದ್ಧ: ಬೊಮ್ಮಾಯಿ!

2) Badami Constituency: ಬಾದಾಮಿ ಕ್ಷೇತ್ರ ಗೊಂದಲ, ತಂದೆ ಬೆನ್ನಲ್ಲೇ ಪುತ್ರನಿಂದ ಸಿದ್ದುಗೆ ಸಂದೇಶ ರವಾನೆ

3) Karnataka Politicsಮಹತ್ವದ ಬೆಳವಣಿಗೆ, ಕರ್ನಾಟಕದತ್ತ ಬಿಜೆಪಿ ಹೈಕಮಾಂಡ್

click me!