ಕೊರೋನಾ ಆತಂಕದ ನಡುವೆಯೇ ಶಾಕಿಂಗ್ ಮಾಹಿತಿ| ಇತ್ತ ದಿನೇ ದಿನೇ ಹೆಚ್ಚತ್ತಿವೆ ಪ್ರಕರಣಗಳು, ಆದರೆ ಅತ್ತ ಕೊರೋನಾ ವಕ್ಕರಿಸಿರುವ ವಿಚಾರವೇ ತಿಳೀತಿಲ್ಲ|
ಬೆಂಗಳೂರು(ಜೂ.06): ರಾಜ್ಯದಲ್ಲಿ ಹಾಲಿ ಇರುವ ಸಕ್ರಿಯ ಕೊರೋನಾ ಸೋಂಕಿತರದಲ್ಲಿ ಶೇ.98ರಷ್ಟುಮಂದಿಗೆ ಸೋಂಕಿನ ಲಕ್ಷಣಗಳೇ ಇಲ್ಲ. ಉಳಿದ ಶೇ.2ರಷ್ಟುಸೋಂಕಿತರಿಗೆ ಮಾತ್ರ ಸೋಂಕಿನ ಲಕ್ಷಣಗಳು ಕಂಡುಬಂದಿವೆ. ಆಶ್ಚರ್ಯವಾದರೂ ಇದು ಸತ್ಯ.
ವರ್ಷಾಂತ್ಯದಲ್ಲಿ ಎಲ್ಲರಿಗೂ ಕೊರೋನಾ ವೈರಸ್ ವ್ಯಾಕ್ಸೀನ್
ಸ್ವತಃ ಆರೋಗ್ಯ ಇಲಾಖೆಯೇ ಈ ಬಗ್ಗೆ ಮಾಹಿತಿ ಪ್ರಕಟಿಸಿದೆ. ಜೂನ್ 5ರ ವರೆಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 4,835 ಆಗಿದೆ. ಈ ಪೈಕಿ ಇದುವರೆಗೂ 1688 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನುಳಿದ 3088 ಜನರು ಸಕ್ರಿಯ ಸೋಂಕಿತರಾಗಿದ್ದು ನಿಗದಿತ ಕೋವಿಡ್ ಚಿಕಿತ್ಸಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 3017 ಮಂದಿಗೆ (ಶೇ.98) ಜ್ವರ, ಕೆಮ್ಮು, ನೆಗಡಿ ಸೇರಿದಂತೆ ಕೊರೋನಾ ಸೋಂಕಿನ ಯಾವುದೇ ಲಕ್ಷಣಗಳೂ ಕಂಡುಬಂದಿಲ್ಲ. ಆದರೆ, ಪರೀಕ್ಷೆಯಲ್ಲಿ ಮಾತ್ರ ಕೋವಿಡ್ 19 ಪಾಸಿಟಿವ್ ಬಂದಿದೆ.
ಇನ್ನುಳಿದ 71 ಜನರಿಗೆ (ಶೇ.2) ಮಾತ್ರ ಸೋಂಕಿನ ಲಕ್ಷಣಗಳು ಕಂಡುಬಂದಿವೆ ಎಂದು ಆರೋಗ್ಯ ಇಲಾಖೆ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿರುವ ಮಾಹಿತಿ ಹೇಳುತ್ತದೆ.