ರಾಜ್ಯದಲ್ಲಿ ಕೊರೋನಾ ಚಂಡಮಾರುತ; ಒಂದೇ ದಿನ 515 ಕೇಸ್‌!

By Kannadaprabha News  |  First Published Jun 6, 2020, 7:11 AM IST

ರಾಜ್ಯದಲ್ಲಿ ಕೊರೋನಾ ಚಂಡಮಾರುತ; ನಿನ್ನೆ 515 ಕೇಸ್‌| ಒಂದೇ ದಿನ ಇಷ್ಟೊಂದು ಪ್ರಕರಣ ದಾಖಲಾಗಿದ್ದು ಇದೇ ಮೊದಲು, ಇವರಲ್ಲಿ 473 ಜನ ಮಹಾರಾಷ್ಟ್ರದಿಂದ ಬಂದವರು| ನಿನ್ನೆ ಉಡುಪಿ ಜಿಲ್ಲೆಯಲ್ಲಿ ಅತ್ಯಧಿಕ 204 ಮಂದಿಗೆ ವೈರಸ್‌| ಉಡುಪಿಯ ಸೋಂಕಿತರೆಲ್ಲ ಮಹಾರಾಷ್ಟ್ರ ವಾಪಸಿಗಳು!| ಈವರೆಗೆ 388 ಪ್ರಕರಣವೇ ಒಂದು ದಿನದ ಗರಿಷ್ಠವಾಗಿತ್ತು| ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 4835ಕ್ಕೆ ಏರಿಕೆ


ಬೆಂಗಳೂರು(ಜೂ.06): ಮಹಾರಾಷ್ಟ್ರದಿಂದ ನಿತ್ಯ ಬರುತ್ತಿರುವ ಕರೋನಾ ಚಂಡಮಾರುತಕ್ಕೆ ಸೋಂಕಿತರ ಸಂಖ್ಯೆ ದ್ವಿಗುಣ, ತ್ರಿಗುಣವಾಗುತ್ತಿದ್ದು, ಕರುನಾಡನ್ನು ಭಯ ಭೀತಗೊಳಿಸತೊಡಗಿದೆ. ಶುಕ್ರವಾರ ಒಂದೇ ದಿನ 515 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಈ ಪೈಕಿ 473 ಮಂದಿ ಮಹಾರಾಷ್ಟ್ರದಿಂದ ಹಿಂತಿರುಗಿದವರು ಎಂಬುದು ಗಮನಾರ್ಹ.

ಶುಕ್ರವಾರದ 515 ಪ್ರಕರಣ ರಾಜ್ಯದ ಈ ವರೆಗಿನ ಸಾರ್ವಕಾಲಿಕ ದಾಖಲೆಯಾಗಿದ್ದು, ಜೂನ್‌ 2ರಂದು ದೃಢಪಟ್ಟಿದ್ದ 388 ಪ್ರಕರಣಗಳ ದಾಖಲೆ ಮುರಿದಿದೆ. ಇದರೊಂದಿಗೆ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 4835ಕ್ಕೆ ಏರಿಕೆಯಾಗಿದೆ. ಆದರೆ, 83 ಜನ ಗುಣಮುಖರಾಗಿದ್ದು, ಬಿಡುಗಡೆಯಾದವರ ಸಂಖ್ಯೆ 1688ಕ್ಕೇರಿದೆ. 3088 ಜನ ಸಕ್ರಿಯ ಸೋಂಕಿತರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Tap to resize

Latest Videos

ಕೊರೋನಾ ಅಟ್ಟಹಾಸ: ಇಟಲಿ ಹಿಂದಿಕ್ಕಿ ಭಾರತ ಈಗ ನಂ.6!

ಮತ್ತೊಂದೆಡೆ ಕೊರೋನಾ ವೈರಸ್‌ ರಾಜ್ಯದಲ್ಲಿ ಹೊಸ ಮೈಲಿಗಲ್ಲು ದಾಖಲಿಸುತ್ತಲೇ ಸಾಗುತ್ತಿದೆ. ಆರಂಭದಲ್ಲಿ ಮೊದಲ 1000 ಸಂಖ್ಯೆ ದಾಖಲಿಸಲು ಎರಡು ತಿಂಗಳಿಗೂ ಹೆಚ್ಚು (66 ದಿನ) ಸಮಯ ತೆಗೆದುಕೊಂಡಿದ್ದ ಕೋವಿಡ್‌ ಶುಕ್ರವಾರದ 515 ಸಂಖ್ಯೆಯಿಂದ ಪ್ರತಿ ಎರಡು ದಿನಕೊಮ್ಮೆ 1000 ಸಂಖ್ಯೆಯಲ್ಲಿ ಏರುವ ಆತಂಕ ಸೃಷ್ಟಿಸಿದೆ.

ಮೇ 15ರಂದು 1000 ದಾಟಿದ್ದ ಸೋಂಕಿತರ ಸಂಖ್ಯೆ ನಂತರದ ಹತ್ತು ದಿನಗಳಲ್ಲಿ (ಮೇ 24ಕ್ಕೆ) 2000, ಮುಂದಿನ ಒಂದೇ ವಾರದಲ್ಲಿ (ಮೇ 31ಕ್ಕೆ) 3000 ಗಡಿ ದಾಡಿತ್ತು. ಬಳಿಕ ಜೂನ್‌ 1ರಿಂದ 3ರವರೆಗಿನ ಮೂರೇ ದಿನಗಳಲ್ಲಿ ಸಾವಿರ ಸಂಖ್ಯೆಯಲ್ಲಿ ಹೆಚ್ಚಾಗಿ 4000 ಸಂಖ್ಯೆ ದಾಟಿತ್ತು. ಈಗ ಒಂದೇ ದಿನ 515ರ ಸಂಖ್ಯೆ ದಾಖಲಿಸುವ ಮೂಲಕ ಪ್ರತಿ ಎರಡು ದಿನಕ್ಕೆ ಸಾವಿರ ಸಂಖ್ಯೆಯಲ್ಲಿ ಹೆಚ್ಚಾಗುವತ್ತ ಹೆಜ್ಜೆ ಇಟ್ಟಿದೆ. ಮುಂದಿನ ಕೆಲವೇ ದಿನಗಳಲ್ಲಿ ನಿತ್ಯವೂ ಸಾವಿರ ಸಂಖ್ಯೆಯಲ್ಲಿ ಸೋಂಕು ತಾಂಡವವಾಡತೊಡಗಿದರೂ ಆಶ್ಚರ್ಯವಿಲ್ಲ.

ಉಡುಪಿಗೆ ‘ಮಹಾ’ ಸುನಾಮಿ:

ಶುಕ್ರವಾರದ 515 ಪ್ರಕರಣಗಳಲ್ಲಿ ಜಿಲ್ಲಾವಾರು ಉಡುಪಿ ಜಿಲ್ಲೆಯಲ್ಲೇ 204 ಜನರಿಗೆ ಸೋಂಕು ದೃಢಪಟ್ಟಿದ್ದು, ಇವರೆಲ್ಲರೂ ಮಹಾರಾಷ್ಟ್ರದಿಂದ ಹಿಂತಿರುಗಿದವರಾಗಿದ್ದಾರೆ. ಇನ್ನು, ಯಾದಗಿರಿ 74, ವಿಜಯಪುರ 53, ಕಲಬುರಗಿಯಲ್ಲಿ 42, ಬೀದರ್‌ 39, ಬೆಳಗಾವಿ 36, ಮಂಡ್ಯ 13, ಬೆಂಗಳೂರು ಗ್ರಾಮಾಂತರ 12,ಬೆಂಗಳೂರು ನಗರ 10, ದಕ್ಷಿಣ ಕನ್ನಡ 8, ಉತ್ತರ ಕನ್ನಡ 7, ಹಾಸನ, ಚಿಕ್ಕಬಳ್ಳಾಪುರ, ಧಾರವಾಡ ತಲಾ 3, ಹಾವೇರಿ, ರಾಮನಗರ ತಲಾ 2, ಬಾಗಲಕೋಟೆ, ದಾವಣಗೆರೆ, ಬಳ್ಳಾರಿ, ಕೋಲಾರ ತಲಾ ಒಂದೊಂದು ಪ್ರಕರಣಗಳು ದೃಢಪಟ್ಟಿವೆ. ಇವುಗಳಲ್ಲಿ 476 ಪ್ರಕರಣಗಳು ಮಹಾರಾಷ್ಟ್ರ ಪ್ರವಾಸದ ಹಿನ್ನೆಲೆಯವಾಗಿವೆ. ಈ ಪೈಕಿ 10 ವರ್ಷದೊಳಗಿನ 24 ಮಕ್ಕಳೂ ಇದ್ದಾರೆ.

ರಾಜ್ಯದಲ್ಲಿ ಏರುತ್ತಿರುವ ಕೊರೋನಾ ಕೇಸ್ ನಡುವೆ ಬಯಲಾಯ್ತು ಶಾಕಿಂಗ್ ಮಾಹಿತಿ!

ಇತರೆ 39 ಪ್ರಕರಣಗಳಲ್ಲಿ ವಿಜಯಪುರದ 14 ಪ್ರಕರಣಗಳು ಕಂಟೈನ್ಮೆಂಟ್‌ ಪ್ರದೇಶದಿಂದ, ಉತ್ತರ ಕನ್ನಡ, ಬೆಂ.ಗ್ರಾಮಾಂತರದ ತಲಾ ಒಂದೊಂದು ಪ್ರಕರಣ ಆಂಧ್ರ ಪ್ರದೇಶ ಪ್ರವಾಸ ಹಿನ್ನೆಲೆಯಿಂದ, ರಾಮನಗರದ ಪಿ (ಪೇಶಂಟ್‌) 3313, ಕೋಲಾರದ ಪಿ.2418, ದಾವಣಗೆರೆಯ ಪಿ.3862, ಬೆಂಗಳೂರು ನಗರದ ಪಿ.2894, ಪಿ2834, ಬಳ್ಳಾರಿಯ ಪಿಬಿಎಲ್‌ಆರ್‌ 53, ಮಂಡ್ಯದ ಪಿ.3238 ರೋಗಿಗಳಿಂದ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ದಾವಣಗೆರೆಯಲ್ಲಿ ಪಿ.1942 ಸೇರಿ ಮೂವರು ರೋಗಿಗಳ ಸಂರ್ಪದಲ್ಲಿದ್ದ ಮೂವರಿಗೆ, ಯಾದಗಿರಿ, ದಕ್ಷಿಣ ಕನ್ನಡ, ಹಾವೇರಿ, ರಾಮನಗರದಲ್ಲಿ ತಲಾ ಒಂದೊಂದು ಪ್ರಕರಣದಲ್ಲಿ ಸೋಂಕಿಗೆ ಕಾರಣ ಇನ್ನೂ ಪತ್ತೆಯಾಗಿಲ್ಲ.

ಬೆಂಗಳೂರು ನಗರದಲ್ಲಿ ಇಂಡೋನೇಷ್ಯಾ, ತಮಿಳುನಾಡಿನಿಂದ ಬಂದ ತಲಾ ಒಬ್ಬರಿಗೆ, ದೆಹಲಿಯಿಂದ ಬಂದ ಮೂವರಿಗೆ, ಕಲಬುರಗಿಯಲ್ಲಿ ತೆಲಂಗಾಣ ಪ್ರಯಾಣದ ಇಬ್ಬರಿಗೆ ಸೋಂಕು ದೃಢಪಟ್ಟಿದೆ.

83 ಜನ ಬಿಡುಗಡೆ:

ಶುಕ್ರವಾರ ಹಾಸನದ 32 ಜನ, ಮಂಡ್ಯದ 13, ಬೆಂಗಳೂರು ನಗರದ 9, ದಾವಣಗೆರೆಯ 6, ವಿಜಯಪುರ, ಚಿತ್ರದುರ್ಗದಲ್ಲಿ ತಲಾ 3, ಧಾರವಾಡ, ಕಲಬುರಗಿಯಲ್ಲಿ ತಲಾ ಒಬ್ಬರು ಸೇರಿ ಸೋಂಕಿನಿಂದ ಗುಣಮುಖರಾದ ಒಟ್ಟು 83 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರಿಂದ ಒಟ್ಟು ಬಿಡುಗಡೆಯಾದವರ ಸಂಖ್ಯೆ 1688 ಆಗಿದೆ. 3088 ಜನ ಸಕ್ರಿಯ ಸೋಂಕಿತರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 59 ಜನ (ಇಬ್ಬರು ಆತ್ಮಹತ್ಯೆಗೊಳಗಾದ ಸೋಂಕಿತರ ಸೇರಿ) ಮೃತಪಟ್ಟಿದ್ದಾರೆ.

click me!