ನಮೋ ನವ ಸಂಕಲ್ಪ : ವಿಕಸಿತ ಕರ್ನಾಟಕ, ವಿಕಸಿತ ಭಾರತಕ್ಕಾಗಿ

Kannadaprabha News   | Kannada Prabha
Published : Nov 29, 2025, 05:03 AM IST
PM Modi Visits Udupi

ಸಾರಾಂಶ

2047ರ ಅಮೃತ ಕಾಲದ ಗುರಿಯನ್ನು ನನಸಾಗಿಸಲು ಭಾರತೀಯರೆಲ್ಲರೂ ತಮ್ಮ ಕರ್ತವ್ಯ ನಿಭಾಯಿಸಬೇಕು. ‘ವಿಕಸಿತ ಕರ್ನಾಟಕ; ವಿಕಸಿತ ಭಾರತ’ಕ್ಕಾಗಿ ದೇಶದ ನಾಗರಿಕರು ‘ನವ ಸಂಕಲ್ಪ’ ತೊಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.

ಉಡುಪಿ : 2047ರ ಅಮೃತ ಕಾಲದ ಗುರಿಯನ್ನು ನನಸಾಗಿಸಲು ಭಾರತೀಯರೆಲ್ಲರೂ ತಮ್ಮ ಕರ್ತವ್ಯ ನಿಭಾಯಿಸಬೇಕು. ‘ವಿಕಸಿತ ಕರ್ನಾಟಕ; ವಿಕಸಿತ ಭಾರತ’ಕ್ಕಾಗಿ ದೇಶದ ನಾಗರಿಕರು ‘ನವ ಸಂಕಲ್ಪ’ ತೊಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.

ಶುಕ್ರವಾರ ಉಡುಪಿಗೆ ಭೇಟಿ ನೀಡಿದ್ದ ಮೋದಿ 1 ಕಿ.ಮೀ. ರೋಡ್‌ ಶೋ ನಡೆಸಿ, ಉಡುಪಿ ಶ್ರೀಕೃಷ್ಣಮಠದಲ್ಲಿ ಕೃಷ್ಣನ ದರ್ಶನ ಪಡೆದರು. ಬಳಿಕ ಚಿನ್ನದ ಲೇಪನ ಮಾಡಿರುವ ಕನಕನ ಕಿಂಡಿಯನ್ನು ಲೋಕಾರ್ಪಣೆಗೊಳಿಸಿದರು. ಉಡುಪಿಯಲ್ಲಿ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಆಯೋಜಿಸಿರುವ ‘ಲಕ್ಷ ಕಂಠ ಗೀತಾ ಪಾರಾಯಣ’ದಲ್ಲಿ ಶುಕ್ರವಾರ ಪಾಲ್ಗೊಂಡು 10 ಶ್ಲೋಕ ಪಠಿಸಿ ಅವರು ಮಾತನಾಡಿದರು. ಭಗವದ್ಗೀತೆ ಪ್ರತಿಯೊಬ್ಬರಿಗೂ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಂತೆ ಹೇಳುತ್ತದೆ. ಅದರಂತೆ ವರ್ತಮಾನ ಮತ್ತು ಭವಿಷ್ಯಕ್ಕಾಗಿ ನಾವೆಲ್ಲರೂ 9 ಕರ್ತವ್ಯಗಳನ್ನು ಸಂಕಲ್ಪಿಸೋಣ ಎಂದು ಸಲಹೆ ನೀಡಿದರು.

ಮೋದಿಯ ‘ನವ ಸಂಕಲ್ಪ’:

ಜಲಮೂಲಗಳ ಸಂರಕ್ಷಣೆ ಮಾಡಿ. ತಾಯಿಯ ಹೆಸರಿನಲ್ಲಿ ಕನಿಷ್ಠ 1 ಗಿಡ ನೆಟ್ಟು ಬೆಳೆಸಿ. ಕನಿಷ್ಠ ಒಬ್ಬ ಬಡವನಿಗಾದರೂ ಸಹಾಯ ಮಾಡಿ, ಬಡವರ ಜೀವನ ಸುಧಾರಿಸಿ. ಸ್ವದೇಶಿ- ಆತ್ಮ ನಿರ್ಭರ ವಿಚಾರಧಾರೆ ಬೆಳೆಸಿಕೊಳ್ಳಿ. ಸಹಜ, ಪ್ರಾಕೃತಿಕ ಕೃಷಿಗೆ ಉತ್ತೇಜನ ನೀಡಿ. ಆರೋಗ್ಯಪೂರ್ಣ ಜೀವನಶೈಲಿ ಅಳವಡಿಸಿಕೊಳ್ಳಿ, ಊಟದಲ್ಲಿ ಖಾದ್ಯತೈಲ ಬಳಕೆ ಕಡಿಮೆ ಮಾಡಿ, ಸಿರಿಧಾನ್ಯ ಬಳಸಿ. ಯೋಗ ಅಳವಡಿಸಿಕೊಳ್ಳಿ, ಎಲ್ಲರೂ ಯೋಗಿಗಳಾಗಿ. ನಮ್ಮ ಆಸ್ತಿಗಳಾದ ಹಸ್ತಲಿಪಿಗಳ ಸಂರಕ್ಷಣೆ ಮಾಡಿ. ದೇಶದ ಕನಿಷ್ಠ 50 ಪಾರಂಪರಿಕ ಸ್ಥಳಗಳಿಗೆ ಭೇಟಿ ನೀಡುವ ಸಂಕಲ್ಪ ಮಾಡಿ ಎಂದು ಮೋದಿ ಕರೆ ನೀಡಿದರು.

ಭಗವದ್ಗೀತೆ ರಾಷ್ಟ್ರೀಯ ನೀತಿಗೆ ಪ್ರೇರಣೆ:

ಭಗವದ್ಗೀತೆ ಭಾರತದ ರಾಷ್ಟ್ರೀಯ ನೀತಿಗೆ ಪ್ರೇರಣೆಯಾಗಿದೆ. ಆದ್ದರಿಂದಲೇ ಭಾರತಕ್ಕೆ ಶಾಂತಿ ಸ್ಥಾಪನೆಯೂ ಗೊತ್ತು, ಶಾಂತಿಯ ರಕ್ಷಣೆಯೂ ಗೊತ್ತು ಎಂದು ಮೋದಿ ಪ್ರತಿಪಾದಿಸಿದರು.

ಗೀತೆಯನ್ನು ಅರ್ಜುನನಿಗೆ ಕೃಷ್ಣ ಬೋಧಿಸಿದ್ದು ಯುದ್ಧಭೂಮಿಯಲ್ಲಿ. ಶಾಂತಿ ಸ್ಥಾಪನೆಯಾಗಬೇಕಾದರೆ ಮೊದಲು ದುಷ್ಟರ ಅಂತ್ಯ ಆಗಬೇಕು ಎಂದು ಹೇಳಿದ್ದಾನೆ. ಅದೇ ನಮ್ಮ ಸಂಕಲ್ಪವಾಗಿದೆ. ಅದರಿಂದಲೇ ಪ್ರೇರಣೆಗೊಂಡು ಭಾರತದ ಪ್ರಮುಖ ನಗರಗಳ ರಕ್ಷಣೆಗೆ ‘ಸುದರ್ಶನ ಚಕ್ರ’ ನಿಯೋಜಿಸಿದ್ದೇವೆ, ಇದನ್ನು ಭೇದಿಸಲು ಯತ್ನಿಸುವವರು ಸರ್ವನಾಶವಾಗುತ್ತಾರೆ. ‘ಆಪರೇಷನ್ ಸಿಂದೂರ’ದಲ್ಲಿಯೂ ನಮ್ಮದು ಇದೇ ಸಂಕಲ್ಪ ಇತ್ತು ಎಂದರು.

ಹಿಂದಿನ ಸರ್ಕಾರಗಳಾಗಿದ್ದರೆ ಆಪರೇಷನ್‌ ಸಿಂದೂರದಂತಹ ಸಂದರ್ಭದಲ್ಲಿ ಕೈಕಟ್ಟಿಕೊಂಡು ಕುಳಿತಿರುತ್ತಿದ್ದವು. ಆದರೆ, ಇದು ಹೊಸ ಭಾರತ, ಯಾರಿಗೂ ತಲೆ ಬಾಗಿಸುವುದಿಲ್ಲ, ಕರ್ತವ್ಯದಲ್ಲಿ ಹಿಂಜರಿಯುವುದಿಲ್ಲ ಎಂದು ಮೋದಿ ಹೇಳಿದರು.

ಗೀತೆ, ‘ಸರ್ವಭೂತ ಹಿತೇ ರತಃ’ ಎಂದರೆ ಲೋಕಕಲ್ಯಾಣಕ್ಕಾಗಿ ಕೆಲಸ ಮಾಡುವಂತೆ ಕರೆ ನೀಡಿದೆ. ಇದರಿಂದ ಪ್ರೇರಣೆಗೊಂಡು ಕೇಂದ್ರ ಸರ್ಕಾರ ಆರೋಗ್ಯ ಭಾರತ, ನಾರಿ ಸುರಕ್ಷಾ, ಪಿಎಂ ಆವಾಸ್, ನಾರಿ ಶಕ್ತಿ ವಂದನ್... ಇತ್ಯಾದಿ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ವಿವರಿಸಿದರು.

2047 ವಿಕಸಿತ ಭಾರತದ ಕಾಲ:

ಗೀತೆ ಕರ್ಮ, ಕರ್ತವ್ಯ ಮತ್ತು ಕಲ್ಯಾಣಗಳನ್ನು ತಿಳಿಸುತ್ತದೆ. ಅದರಂತೆ ನಮ್ಮ ದೇಶಕ್ಕಾಗಿ ಕರ್ಮಗಳನ್ನು, ನಮ್ಮ ಕರ್ತವ್ಯದಂತೆ ಮಾಡಬೇಕು. ಆಗ ಮಾತ್ರ 2047 ಎಂಬುದು ಕೇವಲ ಭಾರತದ ಸ್ವಾತಂತ್ರ್ಯೋತ್ಸವದ ಅಮೃತ ಕಾಲವಾಗದೆ, ಅದು ವಿಕಸಿತ ಭಾರತದ ಕಾಲವೂ ಆಗುತ್ತದೆ ಎಂದು ಮೋದಿ ಕರೆ ನೀಡಿದರು.

ಶ್ರೀಗಳ ವೈಶ್ವಿಕ್ ಆಂದೋಲನ್:

ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು ಕೋಟಿ ಜನರಿಂದ ಗೀತೆಯನ್ನು ಬರೆಸಿ, ಲಕ್ಷ ಮಂದಿಯಿಂದ ಪಾರಾಯಣ ಮಾಡಿಸಿ, ನಮ್ಮ ಸನಾತನ ಪರಂಪರೆಯ ವಿಶ್ವಮಟ್ಟದ ಜನಾಂದೋಲನವನ್ನೇ ಮಾಡಿದ್ದಾರೆ. ಈ ಆಂದೋಲನ ನಮ್ಮ ಮುಂದಿನ ಪೀಳಿಗೆಯನ್ನು ಗೀತೆಯ ಜೊತೆ ಜೋಡಿಸಲಿದೆ. ಇದು ಆಧ್ಯಾತ್ಮಿಕ ಶಕ್ತಿಯ ಜೊತೆಗೆ ಸಾಮಾಜಿಕ ಶಕ್ತಿಯನ್ನೂ, ಏಕತೆಯ ಶಕ್ತಿಯನ್ನೂ ಹೆಚ್ಚಿಸಲಿದೆ ಎಂದು ಶ್ರೀಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಜನತೆ ನವಸಂಕಲ್ಪ

1. ಜಲ ಮೂಲಗಳ ಸಂರಕ್ಷಣೆ

2. ತಾಯಿಯ ಹೆಸರಿನಲ್ಲಿ ಗಿಡ ನೆಡುವುದು

3. ಕನಿಷ್ಠ ಒಬ್ಬ ಬಡವನಿಗಾದರೂ ಸಹಾಯ

4. ಸ್ವದೇಶಿ - ಆತ್ಮ ನಿರ್ಭರ ವಿಚಾರಧಾರೆ

5. ಸಹಜ, ಪ್ರಾಕೃತಿಕ ಕೃಷಿಗೆ ಉತ್ತೇಜನ

6. ಸಿರಿಧಾನ್ಯ ಬಳಕೆ, ಖಾದ್ಯ ತೈಲ ಕಡಿತ

7. ಜೀವನದಲ್ಲಿ ಯೋಗ ಅಳವಡಿಕೆ

8. ಹಸ್ತಲಿಪಿಗಳ ಸಂರಕ್ಷಣೆ ಮಾಡುವುದು

9. ಕನಿಷ್ಠ 50 ಪಾರಂಪರಿಕ ಸ್ಥಳಕ್ಕೆ ಭೇಟಿ

ಭಾರತ ಭಾಗ್ಯ ವಿದಾತ:

ಪಿಎಂ ಮೋದಿಗೆ ಬಿರುದು

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಡುಪಿ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ‘ಭಾರತ ಭಾಗ್ಯ ವಿದಾತ’ ಎಂಬ ಬಿರುದು ನೀಡಿ ಗೌರವಿಸಿದ್ದಾರೆ.

ಬೆಳ್ಳಿಯ ಕಡಗೋಲು,

ನವಿಲುಗರಿ ಪೇಟ

ಪ್ರಧಾನಿ ಮೋದಿ ಅವರಿಗೆ ಪುತ್ತಿಗೆ ಶ್ರೀಗಳು ಬೆಳ್ಳಿಯ ಕಡಗೋಲು ಸಹಿತ ಉಡುಪಿ ಕೃಷ್ಣನ ಚಿತ್ರ ಉಡುಗೊರೆ ನೀಡಿದರು. ನವಿಲುಗರಿಯ ಪೇಟವನ್ನೂ ತೊಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪರಪ್ಪನ ಅಗ್ರಹಾರ ಜೈಲಿನ ಅಕ್ರಮ ವಿಡಿಯೋ ವೈರಲ್: ರೇಪಿಸ್ಟ್ ಉಮೇಶ್ ರೆಡ್ಡಿ ಬಳ್ಳಾರಿಗೆ ಶಿಫ್ಟ್ ರಿಕ್ವೆಸ್ಟ್!
ಹಾವೇರಿ: ಮತ್ತೆ ಮುನ್ನಲೆಗೆ ಬಂದ ಹಿಜಾಬ್ VS ಕೇಸರಿ ವಿವಾದ: ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪರಸ್ಪರ ಸವಾಲು!