
ಬೆಂಗಳೂರು (ನ.29): ರಾಜ್ಯ ಸರ್ಕಾರವು ರೈತರ ಹಿತದೃಷ್ಟಿಯಿಂದ ಮಹತ್ವದ ನಿರ್ಧಾರ ಕೈಗೊಳ್ಳುವ ಮೂಲಕ ರಾಜ್ಯದ ರೈತರಿಗೆ ಭರ್ಜರಿ ಗುಡ್‌ನ್ಯೂಸ್ ನೀಡಿದೆ. ಮಾರುಕಟ್ಟೆಯಲ್ಲಿನ ಬೆಲೆ ಇಳಿಕೆಯಿಂದ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಲು, ಕೆಎಂಎಫ್ ಮೂಲಕ ಬೃಹತ್ ಪ್ರಮಾಣದಲ್ಲಿ ಮೆಕ್ಕೆಜೋಳ ಖರೀದಿಸಲು ನಿರ್ಧರಿಸಲಾಗಿದೆ.
ಕೆಎಂಎಫ್ ಡಿಸೆಂಬರ್ 1, 2025 ರಿಂದ ರಾಜ್ಯದಾದ್ಯಂತ 50,000 ಮೆಟ್ರಿಕ್ ಟನ್ ಮೆಕ್ಕೆಜೋಳವನ್ನು ನೇರವಾಗಿ ರೈತರಿಂದಲೇ ಖರೀದಿಸಲಿದೆ ಎಂದು ಕೆಎಂಎಫ್ ಎಂಡಿ ಶಿವಸ್ವಾಮಿ ಮಾಹಿತಿ ನೀಡಿದ್ದಾರೆ. ಈ ಖರೀದಿಗೆ ಪ್ರತಿ ಟನ್‌ಗೆ ₹2,400 ದರವನ್ನು ನಿಗದಿಪಡಿಸಲಾಗಿದೆ. ಇದು ಕನಿಷ್ಠ ಬೆಂಬಲ ಬೆಲೆ (MSP) ದರದಲ್ಲಿ ನಡೆಯುತ್ತಿದ್ದು, ಇದರಿಂದ ರೈತರಿಗೆ ಉತ್ತಮ ಬೆಲೆ ಸಿಗುವ ನಿರೀಕ್ಷೆ ಇದೆ. ಗುಣಮಟ್ಟದ ಆಧಾರದ ಮೇಲೆ ದರದಲ್ಲಿ ಅಲ್ಪ ವ್ಯತ್ಯಾಸವಿರಬಹುದು, ಆದರೆ ಮೆಕ್ಕೆಜೋಳದ ತೇವಾಂಶವು ಕಡ್ಡಾಯವಾಗಿ 14 ಡಿಗ್ರಿ ಇರುವಂತೆ ನೋಡಿಕೊಳ್ಳಬೇಕು. ಪ್ರತಿಯೊಬ್ಬ ರೈತರಿಂದ ಗರಿಷ್ಠ 25 ಟನ್ ಮೆಕ್ಕೆಜೋಳವನ್ನು ಮಾತ್ರ ಖರೀದಿಸಲಾಗುತ್ತದೆ. ಈ ಹಿಂದೆ ಟೆಂಡರ್ ಮೂಲಕ ₹2,150-₹2,250 ದರದಲ್ಲಿ ಖರೀದಿಸಲಾಗುತ್ತಿತ್ತು. ಆದರೆ, ಸರ್ಕಾರದ ಸೂಚನೆಯಂತೆ ಈ ಬಾರಿ ದರವನ್ನು ಹೆಚ್ಚಿಸಲಾಗಿದೆ.
ಮೆಕ್ಕೆಜೋಳ ಮಾರಾಟ ಮಾಡಲು ಬಯಸುವ ರೈತರು ಮೊದಲು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ. ಕೃಷಿ ಇಲಾಖೆ, ಇ-ಗವರ್ನೆನ್ಸ್, ಮತ್ತು NIC ಮೂಲಕ ರೈತರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ನಂತರ, ರೈತರಿಗೆ ಖರೀದಿ ಕೇಂದ್ರಕ್ಕೆ ಬರುವ ಕುರಿತು SMS ಮೂಲಕ ಮಾಹಿತಿ ಕಳುಹಿಸಲಾಗುತ್ತದೆ. ಈ ಸಂದೇಶ ಬಂದ ನಂತರ ರೈತರು ಗೊತ್ತುಪಡಿಸಿದ ಖರೀದಿ ಕೇಂದ್ರದಲ್ಲಿ ತಮ್ಮ ಮೆಕ್ಕೆಜೋಳವನ್ನು ಮಾರಾಟ ಮಾಡಬೇಕು.
ಖರೀದಿ ಕೇಂದ್ರ ಎಲ್ಲೆಲ್ಲಿ?
ಖರೀದಿ ಪ್ರಕ್ರಿಯೆಯನ್ನು ಸುಗಮಗೊಳಿಸಲು ರಾಜ್ಯದ ಐದು ಕಡೆಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಅವುಗಳೆಂದರೆ: ತುಮಕೂರಿನ ಗುಬ್ಬಿ, ಶಿವಮೊಗ್ಗದ ಶಿಕಾರಿಪುರ, ಧಾರವಾಡ, ಹಾಸನ ಮತ್ತು ಬೆಂಗಳೂರಿನ ರಾಜನಕುಂಟೆ. ಡಿಸೆಂಬರ್ 1 ರಿಂದಲೇ ಈ ಕೇಂದ್ರಗಳಲ್ಲಿ ಖರೀದಿ ಪ್ರಕ್ರಿಯೆ ಆರಂಭವಾಗಲಿದ್ದು, ಇದರಿಂದ ರಾಜ್ಯದ ರೈತರಿಗೆ ತಮ್ಮ ಉತ್ಪನ್ನಕ್ಕೆ ನ್ಯಾಯಯುತ ಬೆಲೆ ಸಿಗುವಂತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ