
ಬೆಂಗಳೂರು (ಮಾ.31): ರಾಜ್ಯದಲ್ಲಿ ನಂದಿನಿ ಹಾಲಿನ ದರದಲ್ಲಿ 4 ರೂಪಾಯಿ ಏರಿಕೆ ಮಾಡಲಾಗಿದೆ. ಏರಿಕೆ ಮಾಡಿದ ದಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಸಹಕಾರ ಸಚಿವ ಕೆಎನ್ ರಾಜಣ್ಣ ಹಾಗೂ ಪಶುಸಂಗೋಪನಾ ಸಚಿವ ವೆಂಕಟೇಶ್ ಬೆಲೆ ಏರಿಕೆ ನಿರ್ಧಾರವನ್ನು ಸರ್ಮಥಿಸಿಕೊಂಡಿದ್ದರು. ಅದಕ್ಕೆ ಅವರು ನೀಡಿದ್ದ ಕಾರಣ ಏರಿಕೆಯಾಗಿರುವ ಎಲ್ಲಾ ನಾಲ್ಕು ರೂಪಾಯಿಯನ್ನು ರೈತರಿಗೆ ನೀಡಲಾಗುತ್ತದೆ ಎಂದು ಹೇಳಿದ್ದರು. ಅದಾದ ಕೆಲವೇ ಹೊತ್ತಿನಲ್ಲಿ ಟ್ವೀಟ್ ಮಾಡಿದ್ದ ಸಿಎಂ ಸಿದ್ದರಾಮಯ್ಯ ರೈತರ ಅಭ್ಯುದಯಕ್ಕೆ ಸರ್ಕಾರ ಬದ್ಧವಾಗಿದೆ. ಏರಿಕೆ ಆಗಿರುವ ಎಲ್ಲಾ ಮೊತ್ತ ರೈತರಿಗೆ ಹೋಗಲಿದೆ ಎಂದಿದ್ದರು.
ಆದರೆ, ಹೀಗೆ ಹೇಳುವ ಮೂಲಕ ಸಿದ್ದರಾಮಯ್ಯ ಸರ್ಕಾರ ಆ ಕಡೆ ಜನರ ಕಿವಿಗೂ, ಈ ಕಡೆ ರೈತರ ಕಿವಿಗೂ ಹೂ ಇಡುವ ಕೆಲಸ ಮಾಡಿದೆ. ಅದಕ್ಕೆ ಕಾರಣ ಹಾವೇರಿ ಹಾಲು ಒಕ್ಕೂಟದ ಕ್ರಮ. ಒಂದೆಡೆ ಸರ್ಕಾರ ಏರಿಕೆಯಾದ ಎಲ್ಲಾ ಹಣ ರೈತರಿಗೆ ಹೋಗಲಿದೆ ಎಂದಿದ್ದರೆ, ಇನ್ನೊಂದೆಡೆ ಹಾವೇರಿ ಹಾಲು ಒಕ್ಕೂಟ, ಹಾಲು ಉತ್ಪಾದಕರಿಗೆ ನೀಡುತ್ತಿದ್ದ ಹಣದಲ್ಲಿ ಬರೋಬ್ಬರಿ 3.50 ರೂಪಾಯಿ ಕಡಿತ ಮಾಡುವ ನಿರ್ಧಾರ ಮಾಡಿದೆ. ಹಾಲಿನ ಉತ್ಪಾದಕರು ಹಾಗೂ ಸಂಘಗಳಿಗೆ ನೀಡುತ್ತಿದ್ದ ಶೇಖರಣೆ ದರದಲ್ಲಿ ದಿಢೀರ್ ಎನ್ನುವಂತೆ ಕುಸಿತ ಮಾಡಲಾಗಿದ್ದು ಇದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾರ್ಚ್ 27 ರಂದು ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಗೌಡ ಆದೇಶ ಹೊರಡಿಸಿದ್ದು, 'ಆಕಳು ಹಾಲಿನ ದರವನ್ನು ಉತ್ಪಾದಕರಿಗೆ ₹ 27 (ಲೀಟರ್‌ಗೆ) ಮತ್ತು ಸಂಘಗಳಿಗೆ ₹ 28.05 ದರ ಪರಿಷ್ಕರಿಸಲಾಗಿದೆ.ಎಮ್ಮೆ ಹಾಲಿನ ದರವನ್ನು ಉತ್ಪಾದಕರಿಗೆ ₹ 39.50 ಹಾಗೂ ಸಂಘಗಳಿಗೆ ₹ 40.55 ದರ ಪರಿಷ್ಕರಣೆ ಮಾಡಲಾಗಿದೆ' ಎಂದು ತಿಳಿಸಿದ್ದಾರೆ.ಹಾವೇರಿ ಹಾಲು ಒಕ್ಕೂಟ ಸದ್ಯದ ಸ್ಥಿತಿಯಲ್ಲಿ ₹ 18 ಕೋಟಿ ನಷ್ಟದಲ್ಲಿದೆ. ಆಡಳಿತ ಮಂಡಳಿ ತೀರ್ಮಾನದಂತೆ ಉತ್ಪಾದಕರು ಹಾಗೂ ಸಂಘಗಳಿಗೆ ನೀಡುತ್ತಿದ್ದ ದರವನ್ನು ಕಡಿತ ಮಾಡಲಾಗಿದೆ ಎಂದು ದರ ಕಡಿತವನ್ನು ಸಮರ್ಥಿಸಿಕೊಂಡಿದ್ದಾರೆ.
ಹಾವೇರಿಯ ಜಿಲ್ಲೆಯ ಹೆಚ್ಚಿನ ರೈತರಿಗೆ ಪಶುಸಂಗೋಪನೆಯೇ ಜೀವದ ಆಧಾರವಾಗಿದೆ. ಆಕಳು, ಎಮ್ಮೆಯ ಹಾಲನ್ನು ಸಂಘಗಳ ಡೇರಿಗಳಿಗೆ ನೀಡುತ್ತಾರೆ. ಸರ್ಕಾರ ದರ ಏರಿಕೆ ಮಾಡಿದ್ದಲ್ಲದೆ, ಎಲ್ಲಾ ನಾಲ್ಕು ರೂಪಾಯಿ ತಮಗೆ ಬರುವ ಕಾರಣದಿಂದ ಖುಷಿಯಲ್ಲಿದ್ದ ಉತ್ಪಾದಕರು ಮತ್ತು ಸಂಘದವರು ಈಗ ನ್ಯಾಯಯುತ ಬೆಲೆಯಿಂದ ವಂಚಿತರಾಗಿದ್ದಾರೆ.
2024 ರ ಅ.10 ರ ಹಾಲು ಒಕ್ಕೂಟದ ಆದೇಶದಂತೆ, ಆಕಳು ಹಾಲಿಗೆ ಉತ್ಪಾದಕರಿಗೆ ₹ 30.50 (ಪ್ರತಿ ಲೀಟರ್‌ಗೆ) ಹಾಗೂ ಸಂಘಗಳಿಗೆ ₹ 31.55 ದರ ನೀಡಲಾಗುತ್ತಿತ್ತು. ಎಮ್ಮೆ ಹಾಲಿಗೆ ಉತ್ಪಾದಕರಿಗೆ ₹ 43 ಹಾಗೂ ಸಂಘಗಳಿಗೆ ₹ 44.05 ದರ ನೀಡಲಾಗುತ್ತಿತ್ತು. ಇದೀಗ ಹಾಲಿನ ಶೇಖರಣೆ ದರವನ್ನು ₹ 3.50 ಕಡಿಮೆ ಮಾಡಿರುವುದು ಇವರ ಕೆಂಗಣ್ಣಿಗೆ ಗುರಿಯಾಗಿದೆ. ಸರ್ಕಾರ ಹಾಲಿನ ದರ ಏರಿಕೆ. ಆದರೆ, ರೈತರಿಗೆ ನೀಡುವ ದರ ಕಡಿಮೆ ಮಾಡಲಾಗಿದೆ. ಗ್ರಾಹಕರಿಂದ ಸಂಗ್ರಹ ಮಾಡಿದ ಹಣ ಎಲ್ಲಿಗೆ ಹೋಗುತ್ತದೆ ಅನ್ನೋದನ್ನ ತಿಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ನಾಳೆಯಿಂದ ಹಾಲು, ಮೊಸರು, ನೀರು, ಕರೆಂಟ್ ಎಲ್ಲಾನೂ ದುಬಾರಿ! ಏನ್ಮಾಡೋದು ಬಡಜನರ ಕಿಸೆಯಲ್ಲಿ ದುಡ್ಡೇ ಇಲ್ಲಾರೀ!
ಹಾಲು ಒಕ್ಕೂಟದ ಜಾಣತನ: 18 ಕೋಟಿ ನಷ್ಟದಲ್ಲಿರುವ ಹಾಲು ಒಕ್ಕೂಟ ಇದರಲ್ಲೂ ಚಾಲಾಕಿತನ ಮೆರೆದಿದೆ. ಸರ್ಕಾರ ಹಾಲಿ ದರ ಏರಿಕೆ ಮಾಡಲಿದೆ ಅನ್ನೋದು ಗೊತ್ತಾಗುತ್ತಿದ್ದಂತೆ ಉತ್ಪಾದಕರಿಗೆ ನೀಡುವ ದರದಲ್ಲಿ 3.50 ರೂಪಾಯಿ ಕಡಿಮೆ ಮಾಡಿದೆ. ಈಗ ಸರ್ಕಾರ 4 ರೂಪಾಯಿ ಏರಿಕೆಯನ್ನು ಏಪ್ರಿಲ್ 1 ರಿಂದ ಜಾರಿ ಮಾಡಿದೆ. ಎಲ್ಲಾ ನಾಲ್ಕು ರೂಪಾಯಿ ರೈತರಿಗೆ ಸಿಗಲಿದೆ ಎಂದಿರುವ ಕಾರಣ, ಹಿಂದಿನದಕ್ಕಿಂತ 50 ಪೈಸೆ ಹೆಚ್ಚಿನ ದರ ಸಿಗಲಿದೆ ಎಂದು ರೈತರಿಗೆ ಯಾಮಾರಿಸುವ ಕೆಲಸ ಮಾಡಿದೆ.
Breaking ಹಾಲಿನ ಬೆನ್ನಲ್ಲೇ ರಾಜ್ಯದ ಜನತಗೆ ಮತ್ತೊಂದು ಬೆಲೆ ಏರಿಕೆ ಶಾಕ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ