
ಬೆಂಗಳೂರು (ಆ.02): ಪ್ರಥಮ ಬಾರಿಗೆ, ನಮ್ಮ ಮೆಟ್ರೋದಲ್ಲಿ ಮಾನವ ಯಕೃತ್ತನ್ನು ಶಸ್ತ್ರಚಿಕಿತ್ಸೆಗಾಗಿ ಸಾಗಿಸಲು ಸಹಕಾರ ನೀಡಿದೆ. ಶುಕ್ರವಾರ, ಆಗಸ್ಟ್ 1, 2025ರ ರಾತ್ರಿ 8:38ಕ್ಕೆ, ಯಕೃತ್ತನ್ನು ವೈದ್ಯರೊಬ್ಬರು ಮತ್ತು ಏಳು ಮಂದಿ ವೈದ್ಯಕೀಯ ಸಿಬ್ಬಂದಿಯೊಂದಿಗೆ ವೈದೇಹಿ ಆಸ್ಪತ್ರೆಯಿಂದ ವೈಟ್‌ಫೀಲ್ಡ್ ಮೆಟ್ರೋ ನಿಲ್ದಾಣಕ್ಕೆ ಆಂಬ್ಯುಲೆನ್ಸ್ ಮೂಲಕ ಸುರಕ್ಷಿತವಾಗಿ ಸಾಗಿಸಲಾಯಿತು. ಮೆಟ್ರೋ ನಿಲ್ದಾಣಕ್ಕೆ ತಲುಪಿದ ತಕ್ಷಣ, ಸಹಾಯಕ ಭದ್ರತಾ ಅಧಿಕಾರಿ (ASO) ಮತ್ತು ಮೆಟ್ರೋ ಸಿಬ್ಬಂದಿ ತಂಡವನ್ನು ಸ್ವೀಕರಿಸಿ, ದಾಖಲೆ ಕಾರ್ಯ ಮತ್ತು ಭದ್ರತಾ ಪರಿಶೀಲನೆಗಳನ್ನು ಸಂಯೋಜಿಸಿದರು.
ಆ ಬಳಿಕ, ಯಕೃತ್ತನ್ನು ಹೊತ್ತ ಮೆಟ್ರೋ ರೈಲು ರಾತ್ರಿ 8:42ಕ್ಕೆ ವೈಲ್ಡ್ ನಿಲ್ದಾಣದಿಂದ ಹೊರಟು, ರಾತ್ರಿ 9:48ಕ್ಕೆ ರಾಜರಾಜೇಶ್ವರಿ ನಗರ (RR ನಗರ) ಮೆಟ್ರೋ ನಿಲ್ದಾಣಕ್ಕೆ ತಲುಪಿತು. ಅಲ್ಲಿ ಮತ್ತೊಬ್ಬ ASO ಮತ್ತು ಮೆಟ್ರೋ ಸಿಬ್ಬಂದಿ ವೈದ್ಯಕೀಯ ತಂಡವನ್ನು ಸ್ವಾಗತಿಸಿ, ಕಾಯುತ್ತಿರುವ ಆಂಬ್ಯುಲೆನ್ಸ್‌ಗೆ ವರ್ಗಾವಣೆ ಮಾಡುವಲ್ಲಿ ನೆರವಾದರು. ಅಂಗಾಂಗ ಶಸ್ತ್ರಚಿಕಿತ್ಸೆಗೆ ಅಗತ್ಯವಾದ ಸಮಯಕ್ಕೆ ಅಂಗವನ್ನು ಸ್ಪರ್ಶ ಆಸ್ಪತ್ರೆಗೆ ಸುರಕ್ಷಿತವಾಗಿ ತಲುಪಿಸಲಾಯಿತು.
ಈ ಜೀವ ಉಳಿಸುವ ಕಾರ್ಯಾಚರಣೆಯಲ್ಲಿ ಸಮಯೋಚಿತ ಸಹಕಾರ ಮತ್ತು ಜವಾಬ್ದಾರಿಯನ್ನು ತೋರ್ಪಡಿಸಿದ ಸಹಾಯಕ ಭದ್ರತಾ ಅಧಿಕಾರಿಗಳು, ಹೋಮ್ ಗಾರ್ಡುಗಳು ಮತ್ತು ಮೆಟ್ರೋ ಸಿಬ್ಬಂದಿಗೆ ವೈದ್ಯಕೀಯ ತಂಡದವರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಈ ಕಾರ್ಯಚರಣೆ ಗೃಹ ಮತ್ತು ನಗರ ವ್ಯವಹಾರಗಳ ಸಚಿವಾಲಯ (MoHUA) ಮತ್ತು ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ಸಂಯುಕ್ತ ಕಾರ್ಯವಿಧಾನ ಆದೇಶ (JPO)ದ ಮಾರ್ಗಸೂಚಿಗಳಡಿ ನೆರವೇರಿಸಲಾಯಿತು. ಇದು ಮೆಟ್ರೋ ರೈಲು ಮೂಲಕ ಅಂಗಾಂಗ ಸಾಗಣೆ ನಡೆಸಿದ ದೇಶದ ಎರಡನೇ ಸಾಧನೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ