Covid Self Test Kit: ಕೊರೋನಾ ಸ್ವ ಪರೀಕ್ಷಾ ಕಿಟ್‌ ಖರೀದಿಗೆ ಹೆಸರು, ವಿಳಾಸ ಕಡ್ಡಾಯ!

By Kannadaprabha News  |  First Published Jan 18, 2022, 7:26 AM IST

*ಔಷಧದಂಗಡಿಗಳು ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ಸಲ್ಲಿಸಬೇಕು
*ಪಾಸಿಟಿವ್‌ ಬಂದರೆ ವೈದ್ಯರನ್ನು ಕಾಣಲು ಹೇಳಬೇಕು: ಸುತ್ತೋಲೆ
*ಜ್ವರ, ಶೀತ, ಕೆಮ್ಮು ಹೆಚ್ಚಳಕ್ಕೂ ಕೋವಿಡ್‌ಗೂ ಸಂಬಂಧವಿಲ್ಲ: ಸುಧಾಕರ್‌


ಬೆಂಗಳೂರು (ಜ. 18): ಕೊರೋನಾ ಸ್ವಯಂ ಪರೀಕ್ಷೆ ವೇಳೆ ಸೋಂಕು ದೃಢಪಟ್ಟರೂ ಸರ್ಕಾರಕ್ಕೆ ಮಾಹಿತಿ ನೀಡದೇ ಇರುವ ಪ್ರಕರಣಗಳು ವರದಿಯಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಸ್ವಯಂ ಪರೀಕ್ಷೆ ಸಾಧನಗಳನ್ನು ಖರೀದಿಸಿರುವವರ ಸಂಪೂರ್ಣ ಮಾಹಿತಿಯನ್ನು ಆರೋಗ್ಯ ಇಲಾಖೆಗೆ ಸಲ್ಲಿಸುವಂತೆ ಔಷಧಿ ಅಂಗಡಿಗಳಿಗೆ ಸೂಚನೆ ನೀಡಿದೆ. ಹೋಮ್‌ ಸೇಫ್‌ ಕಿಟ್‌ಗಳನ್ನು ಕೊಂಡುಕೊಳ್ಳುವವರ ಹೆಸರು, ವಿಳಾಸ, ದೂರವಾಣಿ ಸಂಖ್ಯೆಯ ಮಾಹಿತಿ ಪಡೆದು ಪ್ರತಿ ದಿನ ಸಂಜೆ ಆರು ಗಂಟೆಯ ಒಳಗೆ ಆರೋಗ್ಯ ಇಲಾಖೆಗೆ ಸಲ್ಲಿಸಬೇಕು. ಪರೀಕ್ಷೆಯಲ್ಲಿ ಪಾಸಿಟಿವ್‌ ಬಂದ ಸೋಂಕಿತರು ತಮ್ಮ ಹತ್ತಿರದ ಸರ್ಕಾರಿ ಆಸ್ಪತ್ರೆ ಅಥವಾ ವೈದ್ಯರನ್ನು ಸಂಪರ್ಕಿಸುವಂತೆ ಕಿಟ್‌ ನೀಡುವಾಗಲೇ ಔಷಧಿ ಅಂಗಡಿ ವ್ಯಾಪಾರಸ್ಥರು ಗ್ರಾಹಕರಿಗೆ ತಿಳಿಸಬೇಕು ಎಂದು ಸರ್ಕಾರ ಸುತ್ತೋಲೆಯಲ್ಲಿ ತಿಳಿಸಿದೆ.

ಸ್ವಯಂ ಪರೀಕ್ಷೆಗೆ ಒಳಗಾಗಿ ಸೋಂಕು ದೃಢಪಟ್ಟಬಹುತೇಕರು ಕೋವಿಡ್‌ ಮಾರ್ಗಸೂಚಿಯನ್ನು ಪಾಲಿಸುತ್ತಿಲ್ಲ. ಸೋಂಕು ಇರುವುದು ಖಚಿತವಾದರೂ ಹೋಮ್‌ ಐಸೋಲೇಷನ್‌ಗೆ ಒಳಗಾಗುತ್ತಿಲ್ಲ. ಸೂಕ್ತ ಚಿಕಿತ್ಸಾ ಕ್ರಮವನ್ನು ಪಾಲಿಸುತ್ತಿಲ್ಲ. ಸರ್ಕಾರಕ್ಕೂ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಆದ್ದರಿಂದ ಸರ್ಕಾರ ಹೋಮ್‌ ಸೇಫ್‌ ಕಿಟ್‌ ಮಾರಾಟದ ಮೇಲೆ ಕಣ್ಣಿಡಲು ಮುಂದಾಗಿದೆ. 500 ರು. ಗಳಿಂದ 2,000 ರು.ಗಳ ತನಕದ ಹೋಮ್‌ ಸೇಫ್‌ ಕಿಟ್‌ಗಳಿದ್ದು, 15 ನಿಮಿಷದಲ್ಲಿ ಕೊರೋನಾ ಸೋಂಕು ಇದೆಯೇ, ಇಲ್ಲವೇ ಎಂದು ತಿಳಿದುಕೊಳ್ಳಬಹುದಾಗಿದೆ.

Tap to resize

Latest Videos

undefined

ಇದನ್ನೂ ಓದಿ: Bengaluru Covid 19 Guidelines: ನಗರದಲ್ಲಿ ಮಾಸಾಂತ್ಯವರೆಗೂ ನಿಷೇಧಾಜ್ಞೆ ಜಾರಿ!

ಜ್ವರ, ಶೀತ, ಕೆಮ್ಮು ಹೆಚ್ಚಳಕ್ಕೂ ಕೋವಿಡ್‌ಗೂ ಸಂಬಂಧವಿಲ್ಲ: ರಾಜ್ಯದಲ್ಲಿ ಸದ್ಯ ಜ್ವರ, ಕೆಮ್ಮು, ಶೀತ ಪ್ರಕರಣ ಹೆಚ್ಚುತ್ತಿರುವುದಕ್ಕೂ ಕೋವಿಡ್‌-19ಕ್ಕೂ ಸಂಬಂಧ ಇಲ್ಲ. ಸಾರ್ವಜನಿಕರು ಅನಗತ್ಯ ಗೊಂದಲಗಳಿಗೆ ಕಿವಿಗೊಡಬಾರದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದಾರೆ.ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸೆಂಬರ್‌ನಿಂದ ಫೆಬ್ರವರಿ ಅಂತ್ಯದವರೆಗೆ ಇಂತಹ ಪ್ರಕರಣಗಳು ಇರುತ್ತವೆ. ಇದು ಸೀಸನಲ್‌ ಸಮಸ್ಯೆ ಎಂದರು.

ಹೆಚ್ಚು ಕೋವಿಡ್‌ ಪರೀಕ್ಷೆಗಳನ್ನು ನಡೆಸಿದಾಗ ಹೆಚ್ಚು ಪ್ರಕರಣಗಳು ವರದಿ ಆಗುವುದು ಸಹಜ. ಬೆಂಗಳೂರಿನಲ್ಲಿ ನಿಧಾನವಾಗಿ ಸೋಂಕಿನ ಪ್ರಮಾಣ ಇಳಿಕೆ ಆಗುತ್ತಿರುವುದು ಸಮಾಧಾನದ ಸಂಗತಿ. ಸೋಂಕು ನಿಯಂತ್ರಣಕ್ಕೆ ಜನರ ಸಹಕಾರ ಅತಿ ಮುಖ್ಯ ಎಂದು ಅವರು ತಿಳಿಸಿದರು.

ಬೆಳಗಾವಿ ಪ್ರಕರಣ ಬಗ್ಗೆ ಶೀಘ್ರ ವರದಿ: ಬೆಳಗಾವಿಯಲ್ಲಿ ರೂಬೆಲ್ಲಾ ಚುಚ್ಚುಮದ್ದು ಪಡೆದ ಬಳಿಕ ಮೂವರು ಮಕ್ಕಳು ಅಸುನೀಗಿರುವ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲು ಸೂಚಿಸಿದ್ದೇನೆ. ನೋಡಲ್‌ ಅಧಿಕಾರಿಗಳನ್ನು ತನಿಖೆಗೆ ಕಳುಹಿಸುತ್ತಿದ್ದು ಎರಡು ದಿನದಲ್ಲಿ ವರದಿ ಕೈಸೇರಲಿದೆ. ಸೆಪ್ಟಿಕ್‌ ಶಾರ್ಟ್‌ ಸಿಂಡ್ರೋಮ್‌ನಿಂದ ಮಕ್ಕಳು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಅದಾಗ್ಯೂ ಮತ್ತೊಂದು ವರದಿ ನೀಡಲು ಸೂಚಿಸಿದ್ದೇನೆ ಎಂದು ಸಚಿವ ಸುಧಾಕರ್‌ ಅವರು ತಿಳಿಸಿದರು.

ಇದನ್ನೂ ಓದಿChildren Death:ಬೆಳಗಾವಿ, ಚುಚ್ಚುಮದ್ದು ಪಡೆದ ಮಕ್ಕಳ ಸಾವಿನ ಸಮಗ್ರ ವರದಿ ಕೊಡಿ, ಬೊಮ್ಮಾಯಿ ಕಟ್ಟಪ್ಪಣೆ

ಬೆಂಗಳೂರಿನಲ್ಲಿ ಕೋವಿಡ್ ಸೋಂಕು ಇಳಿಕೆ: ರಾಜಧಾನಿಯಲ್ಲಿ ನಾಲ್ಕು ದಿನಗಳ ಬಳಿಕ ಕೊರೋನಾ ಸೋಂಕಿತರ (Covid 19) ಸಂಖ್ಯೆಯಲ್ಲಿ ಇಳಿಕೆಯಾಗಿದ್ದು, ಸೋಮವಾರ 15,947 ಜನರಲ್ಲಿ ಸೋಂಕು ಪತ್ತೆಯಾಗಿದೆ. ಐವರು ಸೋಂಕಿನಿಂದ ಮೃತಪಟ್ಟಿದ್ದಾರೆ. ಹೊಸ ಪ್ರಕರಣಗಳ ಪತ್ತೆಯಿಂದ ನಗರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1.57 ಲಕ್ಷಕ್ಕೆ ಹೆಚ್ಚಳವಾಗಿದೆ. ಹೊಸ ಸೋಂಕಿತರ ಪತ್ತೆಯಿಂದ ನಗರದಲ್ಲಿ ಈವರೆಗಿನ ಸೋಂಕಿತರ ಸಂಖ್ಯೆ 1,32,754ಕ್ಕೆ ಏರಿಕೆಯಾಗಿದೆ. 4888 ಮಂದಿ ಸೋಂಕಿತರು ಬಿಡುಗಡೆಯಾಗಿದ್ದು, ಇದುವರೆಗೆ 12,59,041 ಜನರು ಗುಣಮುಖರಾಗಿದ್ದಾರೆ. ಐವರ ಸಾವಿನಿಂದ ಈವರೆಗೆ ಸೋಂಕಿಗೆ ಬಲಿಯಾದವರ ಸಂಖ್ಯೆ 16,458ಕ್ಕೆ ಹೆಚ್ಚಳವಾಗಿದೆ.

ಪಾಲಿಕೆ ವ್ಯಾಪ್ತಿಯ ಬೆಳ್ಳಂದೂರು, ಬೇಗೂರು ಸೇರಿದಂತೆ 10 ವಲಯಗಳಲ್ಲಿ ಕಳೆದ ಏಳು ದಿನಗಳಲ್ಲಿ ಸೋಂಕಿತರಾಗುತ್ತಿರುವವರ ಸಂಖ್ಯೆ 200ರ ಗಡಿ ದಾಟಿದೆ. ಬೆಳ್ಳಂದೂರು 427, ಬೇಗೂರು 274, ನ್ಯೂತಿಪ್ಪಸಂದ್ರ 251, ರಾಜರಾಜೇಶ್ವರಿ ನಗರ 232, ಎಚ್‌ಎಸ್‌ಆರ್‌ ಲೇಔಟ್‌ 227, ಹೊರಮಾವು 226, ದೊಡ್ಡನೆಕ್ಕುಂದಿ 213, ಕೋರಮಂಗಲ 210 ಮತ್ತು ಹೆಮ್ಮಿಗೆಪುರ 217, ವಸಂತಪುರ 200 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

click me!