ನಲಪಾಡ್‌ ವಿಚಾರಣೆಗೆ 8 ವಾರ ತಡೆ!

By Web DeskFirst Published Dec 17, 2018, 10:49 AM IST
Highlights

ಉದ್ಯಮಿ ಪುತ್ರನ ಮೇಲಿನ ಮಾರಣಾಂತಿಕ ಹಲ್ಲೆ ಪ್ರಕರಣ| ಅಧೀನ ಕೋರ್ಟ್‌ನ ವಿಚಾರಣೆಗೆ ಮಧ್ಯಂತರ ತಡೆ ನೀಡಿದ ಹೈಕೋರ್ಟ್‌

ಬೆಂಗಳೂರು[ಡಿ.17]: ಉದ್ಯಮಿ ಲೋಕನಾಥ್‌ ಪುತ್ರ ವಿದ್ವತ್‌ ಮೇಲಿನ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಹ್ಯಾರಿಸ್‌ ಪುತ್ರ ಮೊಹಮ್ಮದ್‌ ನಲಪಾಡ್‌ ವಿರುದ್ಧದ ಅಧೀನ ನ್ಯಾಯಾಲಯದ ವಿಚಾರಣೆಗೆ ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಪ್ರಕರಣದ ಸಂಬಂಧ ತಮ್ಮ ವಿರುದ್ಧ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಸಲ್ಲಿಸಿದ್ದ ದೋಷಾರೋಪ ಪಟ್ಟಿಮತ್ತು ಅಧೀನ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಮೊಹಮ್ಮದ್‌ ನಲಪಾಡ್‌ ಹೈಕೋರ್ಟ್‌ಗೆ ಕ್ರಿಮಿನಲ್‌ ಅರ್ಜಿ ಸಲ್ಲಿಸಿದ್ದರು.

ಲಂಡನ್’ಗೆ ಹೋಗ್ಬೇಕು: ಹೈಕೋರ್ಟಿಗೆ ನಲಪಾಡ್ ಅರ್ಜಿ

ಇತ್ತೀಚೆಗೆ ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪ್ರಕರಣ ಕುರಿತ ನಗರದ 66ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ಕೋರ್ಟ್‌ ವಿಚಾರಣೆಗೆ ಎಂಟು ವಾರಗಳ ಕಾಲ ಮಧ್ಯಂತರ ತಡೆಯಾಜ್ಞೆ ನೀಡಿತು. ಅಲ್ಲದೆ, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ಕಬ್ಬನ್‌ ಪಾರ್ಕ್ ಠಾಣೆ ಮತ್ತು ಸಿಸಿಬಿ ಇನ್ಸ್‌ಪೆಕ್ಟರ್‌ಗಳಿಗೆ ನೋಟಿಸ್‌ ಜಾರಿಗೊಳಿಸಿ ಎಂಟು ವಾರಗಳ ಕಾಲ ವಿಚಾರಣೆ ಮುಂದೂಡಿದೆ.

ವಿಚಾರಣೆ ವೇಳೆ ನಲಪಾಡ್‌ ಪರ ವಕೀಲರು ವಾದ ಮಂಡಿಸಿ, ಸಿಸಿಬಿಗೆ ಪೊಲೀಸ್‌ ಠಾಣಾ ಮಾನ್ಯತೆ ಇಲ್ಲ. ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ನಿಯಮಗಳ್ವಯ ತನಿಖಾ ವರದಿ ಸಲ್ಲಿಸಲು ಸಿಸಿಬಿಗೆ ಅವಕಾಶವಿಲ್ಲ. ಪ್ರಕರಣ ದಾಖಲಿಸಿಕೊಂಡ ಠಾಣಾ ಇನ್ಸ್‌ಪೆಕ್ಟರ್‌ ದೋಷಾರೋಪ ಪಟ್ಟಿಸಲ್ಲಿಸಬೇಕು. ಹೀಗಿದ್ದರೂ ಸಿಸಿಬಿ ಪೊಲೀಸರು ಅಧೀನ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಸಲ್ಲಿಸಿರುವುದು ಕಾನೂನುಬಾಹಿರ ಕ್ರಮವಾಗಿದ್ದು, ಅದನ್ನು ರದ್ದುಪಡಿಸಬೇಕು ಎಂದು ಕೋರಿದರು.

ಅಲ್ಲದೆ, ಅರ್ಜಿ ಇತ್ಯರ್ಥವಾಗುವರೆಗೂ ಅಧೀನ ನ್ಯಾಯಾಲಯದ ವಿಚಾರಣೆಗೆ ತಡೆಯಾಜ್ಞೆ ನೀಡಬೇಕು ಎಂದು ಮಧ್ಯಂತರ ಮನವಿ ಮಾಡಿದರು.

‘ನಾನು ಅಹಂಕಾರಿ ಅಲ್ಲ, ಕ್ರೂರಿಯೂ ಅಲ್ಲ’

ಪ್ರಕರಣವೇನು?:

ಮೊಹಮ್ಮದ್‌ ನಲಪಾಡ್‌ ಮತ್ತವರ ಸಹಚರರು 2018ರ ಫೆಬ್ರವರಿ 17ರಂದು ರಾತ್ರಿ ನಗರದ ಫರ್ಜಿ ಕಫೆಯಲ್ಲಿ ವಿದ್ವತ್‌ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿದ್ದಾರೆ. ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ನಲಪಾಡ್‌ 116 ದಿನಗಳನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಳೆದಿದ್ದು, ಹೈಕೋರ್ಟ್‌ 2018ರ ಜೂನ್‌ 14ರಂದು ಷರತ್ತುಬದ್ಧ ಜಾಮೀನು ನೀಡಿತ್ತು.

click me!