ಕಾಯ್ದೆಗೆ ತಿದ್ದುಪಡಿ ತಂದರೂ, ನಿಯಮಾವಳಿ ರೂಪಿಸದ ಸರ್ಕಾರ: ಅವಿಶ್ವಾಸ ಅಸಾಧ್ಯ!

By Web Desk  |  First Published Dec 16, 2018, 11:42 AM IST

30 ತಿಂಗಳೊಳಗೆ ಅವಿಶ್ವಾಸ ಅಸಾಧ್ಯ| ಸರ್ಕಾರ ಕಾಯ್ದೆಗೆ ತಿದ್ದುಪಡಿ ತಂದಿದ್ದರೂ ನಿಯಮಾವಳಿ ರೂಪಿಸಿಲ್ಲ| ಆಲ್ದೂರು ಗ್ರಾಪಂ ಅಧ್ಯಕ್ಷೆ ವಿರುದ್ಧದ ಅವಿಶ್ವಾಸ ನೋಟಿಸ್‌ ಹೈಕೋರ್ಟ್‌ನಲ್ಲಿ ರದ್ದು


ಬೆಂಗಳೂರು[ಡಿ.16]: ಗ್ರಾಮ ಪಂಚಾಯತಿ ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧ ನಿರ್ದಿಷ್ಟಆರೋಪಗಳು ಕಂಡುಬಂದಲ್ಲಿ ಅವರ ವಿರುದ್ಧ ಯಾವುದೇ ಸಮಯದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲು ಸರ್ಕಾರ ಈವರೆಗೂ ನಿಯಮಗಳನ್ನು ರೂಪಿಸದ ಕಾರಣ ಅಂತಹ ಅವಿಶ್ವಾಸ ನಿರ್ಣಯ ಕೈಗೊಳ್ಳಲು ಅವಕಾಶವಿಲ್ಲ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಪೂರ್ಣಿಮಾ ಸುಧಿನ್‌ ಎಂಬುವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಚಿಕ್ಕಮಗಳೂರು ಉಪವಿಭಾಗಾಧಿಕಾರಿ ನೀಡಿರುವ ನೋಟಿಸ್‌ ರದ್ದುಗೊಳಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎಸ್‌. ಸುನಿಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯ ಪೀಠ ಈ ಅಭಿಪ್ರಾಯಪಟ್ಟಿದ್ದು, ನೋಟಿಸ್‌ ರದ್ದುಪಡಿಸಿ ಆದೇಶಿಸಿದೆ.

Tap to resize

Latest Videos

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಮೂವತ್ತು ತಿಂಗಳ ಅಧಿಕಾರಾವಧಿ ಒಳಗೆ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರ ವಿರುದ್ಧ ಕೇಳಿಬರುವ ಭ್ರಷ್ಟಾಚಾರ, ಅಧಿಕಾರ ದುರುಪಯೋಗದ ಆರೋಪಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಕಾಯ್ದೆ-1993ರ ಕಲಂ 49 ಉಪ ನಿಯಮ (2)ರ ಅನುಸಾರ ಅವಿಶ್ವಾಸ ಗೊತ್ತುವಳಿ ಮಂಡಿಸಬಹುದು. ಆದರೆ, ಈ ಕುರಿತಂತೆ ಯಾವ ರೀತಿ ಮುಂದಿನ ಕ್ರಮ ಜರುಗಿಸಬಹುದು ಎಂಬುದರ ಕುರಿತು ಸರ್ಕಾರ ನಿಯಮಗಳನ್ನು ರೂಪಿಸಿಲ್ಲ. ಹೀಗಾಗಿ ನೋಟಿಸ್‌ ಕಾನೂನು ಬಾಹಿರವಾಗಿದ್ದು, ನೋಟಿಸ್‌ ರದ್ದುಗೊಳಿಸಬೇಕು ಎಂದು ನ್ಯಾಯಪೀಠಕ್ಕೆ ಕೋರಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರದ ಪರ ವಕೀಲರು, ಅವಿಶ್ವಾಸ ನಿರ್ಣಯ ಕೋರಿದ ಅರ್ಜಿಗಳಿಗೆ ಸಂಬಂಧಿಸಿದಂತೆ ಉಪ ವಿಭಾಗಾಧಿಕಾರಿ ನೋಟಿಸ್‌ ನೀಡಿ ಸಭೆ ಕರೆದು ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಆದ್ದರಿಂದ ಸಭೆ ಕರೆಯುವುದಕ್ಕೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ರಾಜ್ಯ ಸರ್ಕಾರ ಈ ಸಂಬಂಧ ಇನ್ನೂ ನಿಯಮಗಳನ್ನು ರೂಪಿಸದೇ ಇರುವ ಕಾರಣ ಉಪವಿಭಾಗಾಧಿಕಾರಿ ನೀಡಿರುವ ನೋಟಿಸ್‌ ಊರ್ಜಿತವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟು, ಅರ್ಜಿಯನ್ನು ಪುರಸ್ಕರಿಸಿತು.

click me!