'ವಿಷ ಪ್ರಸಾದ' ರೂವಾರಿಗಳ ಬಂಧನ ಸಾಧ್ಯತೆ: ವಿಷವುಣಿಸಿದ್ದೇಕೆ?

By Web DeskFirst Published Dec 16, 2018, 12:00 PM IST
Highlights

ಇಂದು ವಿಷ ಪ್ರಸಾದ ರೂವಾರಿಗಳ ಬಂಧನ ಸಾಧ್ಯತೆ| ಚುರುಕುಗೊಂಡ ಪೊಲೀಸರ ತನಿಖೆ| ಗೋಪುರ ನಿರ್ಮಾಣ ವಿರೋಧಿಸುತ್ತಿದ್ದವರ ಕೃತ್ಯ ಶಂಕೆ

ಚಾಮರಾಜನಗರ[ಡಿ.16]: ಮಾರಮ್ಮನ ದೇವಸ್ಥಾನದಲ್ಲಿ ವಿಷ ಪ್ರಸಾದ ಸೇವಿಸಿ ಸಂಭವಿಸಿದ ದುರಂತಕ್ಕೆ ಸಂಬಂಧಿಸಿದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ.

ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿ ದೇಗುಲದ ಧರ್ಮದರ್ಶಿ ಚಿನ್ನಪ್ಪಿ, ಅರ್ಚಕ ಮಹದೇವ ಹಾಗೂ ದೇಗುಲದ ಮೇಲ್ವಿಚಾರಕ ಮಾದೇಶ್‌ರನ್ನು ವಶಕ್ಕೆ ಪಡೆದಿರುವ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಶನಿವಾರ ಮಹದೇವ ಅವರನ್ನು ಘಟನಾ ಸ್ಥಳಕ್ಕೆ ಕರೆದುಕೊಂಡು ಬಂದ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಮೂಲಗಳ ಪ್ರಕಾರ, ಘಟನೆಗೆ ಸಂಬಂಧಿಸಿ ಭಾನುವಾರ ಕೆಲ ಆರೋಪಿಗಳನ್ನು ಬಂಧಿಸುವ ಸಾಧ್ಯತೆ ಇದೆ.

ಚಾಲಕನಿಂದ 37 ಮಂದಿ ಜೀವ ಉಳೀತು!: ಬೆಳಗ್ಗೆ ಬೈಸಿಕೊಂಡವನಿಗೆ ಸಂಜೆ ದೇವರ ಪಟ್ಟ!

ಇತ್ತೀಚಿನ ವರ್ಷಗಳಲ್ಲಿ ಮಾರಮ್ಮ ದೇಗುಲದ ಪ್ರಸಿದ್ಧಿ ಹೆಚ್ಚಾಗುತ್ತಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿದ್ದರಿಂದ ದೇವಸ್ಥಾನದ ಆದಾಯವೂ ದ್ವಿಗುಣಗೊಂಡಿತ್ತು. ಈ ಹಿನ್ನೆಲೆಯಲ್ಲಿ .1.50 ಕೋಟಿ ವೆಚ್ಚದಲ್ಲಿ ದೇವಸ್ಥಾನದ ಗೋಪುರ ನಿರ್ಮಾಣ ಕಾರ್ಯಕ್ಕೆ ದೇವಸ್ಥಾನದ ಟ್ರಸ್ಟ್‌ ಮುಂದಾಗಿತ್ತು. ಅದಕ್ಕಾಗಿಯೇ ಶುಕ್ರವಾರ ಪೂಜೆ ಹಮ್ಮಿಕೊಳ್ಳಲಾಗಿತ್ತು. ಆದರೆ, ಗೋಪುರ ನಿರ್ಮಾಣ ಮಾಡುವುದು ಕೆಲವರಿಗೆ ಇಷ್ಟವಿರಲಿಲ್ಲ. ಈ ವೈಮನಸ್ಸು 11 ಮಂದಿಯ ಪಾಲಿಗೆ ವಿಷವಾಗಿದೆ ಎಂಬುದು ಸದ್ಯ ಬಲವಾಗಿ ಕೇಳಿಬರುತ್ತಿರುವ ಆರೋಪ.

ಈ ನಡುವೆ, ಕೆಲವರು ಸುಳ್ವಾಡಿ ಮತ್ತು ಬರಗೂರು ಮೂಲದ ಭಕ್ತರ ನಡುವಿನ ಹಳೇ ವಿವಾದ ಮುಂದಿಟ್ಟುಕೊಂಡು ಹಾಗೂ ದೇವಸ್ಧಾನದ ಅಭಿವೃದ್ಧಿ ಸಹಿಸದೆ ಪ್ರಸಾದದಲ್ಲಿ ವಿಷ ಪ್ರಶಾನ ಮಾಡಿದ್ದಾರೆಂದು ಆರೋಪಿಸುತ್ತಿದ್ದಾರೆ.

ವಿಷ ಪ್ರಸಾದ: ಇನ್ನೂ 29 ಮಂದಿ ಸ್ಥಿತಿ ಗಂಭೀರ

ಪ್ರಯೋಗಾಲಯಕ್ಕೆ ವಿಷ ಪ್ರಸಾದ ರವಾನೆ

ಸುಳ್ವಾಡಿ ಮಾರಮ್ಮ ದೇವಸ್ಥಾನದಲ್ಲಿ 11 ಮಂದಿ ಸಾವು ಮತ್ತು 93 ಮಂದಿ ಅಸ್ವಸ್ಥರಾಗಲು ಕಾರಣವಾದ ವಿಷಹಾರವನ್ನು ಮೈಸೂರಿನ ಸಿಎಫ್‌ಟಿಆರ್‌ಐ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿದೆ. ಏತನ್ಮಧ್ಯೆ, ಕಾಗೆ ಮತ್ತು ಮೈನಾ ಹಕ್ಕಿಗಳ ಮಾದರಿಯನ್ನು ಪಶುಸಂಗೋಪನಾ ಇಲಾಖಾ ಅಧಿಕಾರಿಗಳು ಸಂಗ್ರಹಿಸಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆ.

click me!