
ಬೆಂಗಳೂರು : ರಾಜ್ಯವನ್ನು ಜಾಗತಿಕ ನಾವೀನ್ಯತಾ ಕೇಂದ್ರವಾಗಿ ಬಲಪಡಿಸುವ ಮಹತ್ವಾಕಾಂಕ್ಷೆಯೊಂದಿಗೆ ರೂಪಿಸಿರುವ ‘ಕರ್ನಾಟಕ ನವೋದ್ಯಮ ನೀತಿ- 2025-2030’ಕ್ಕೆ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದ್ದು, ನೀತಿಯಡಿ ಮುಂದಿನ 5 ವರ್ಷದಲ್ಲಿ 25,000 ಸ್ಟಾರ್ಟ್ ಅಪ್ ಹುಟ್ಟು ಹಾಕುವ ಗುರಿ ಹೊಂದಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ನೀತಿಗೆ ಅನುಮೋದನೆ ನೀಡಿದ್ದು, ಈ ಹೊಸ ನೀತಿ ಮುಂದಿನ ಐದು ವರ್ಷಗಳಲ್ಲಿ ರಾಜ್ಯದಲ್ಲಿ 25,000 ಹೊಸ ಸ್ಟಾರ್ಟ್‌ಅಪ್‌ಗಳನ್ನು ಹುಟ್ಟು ಹಾಕುವ ಗುರಿ ಹೊಂದಿದ್ದು, ಇದಕ್ಕೆ ಪ್ರೋತ್ಸಾಹ ನೀಡಲು 518.27 ಕೋಟಿ ರು. ಅನುದಾನ ಮೀಸಲಿಡಲಾಗಿದೆ.
ಈ ಬಗ್ಗೆ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ರಾಜ್ಯವನ್ನು ನವೋದ್ಯಮ ಕ್ಷೇತ್ರದಲ್ಲಿ ಮುಂಚೂಣಿ ಸ್ಥಾನಕ್ಕೆ ಕೊಂಡೊಯ್ಯಲು ನೀತಿ ಸಹಕಾರಿ. ಬೆಂಗಳೂರಿನ ಹೊರಗೂ ನಾವೀನ್ಯತೆ ವಿಸ್ತರಿಸಲು ವಿಶೇಷ ಒತ್ತು ನೀಡಲಾಗುತ್ತದೆ. ಸ್ಥಾಪನೆಯಾಗಲಿರುವ 25 ಸಾವಿರ ಸ್ಟಾರ್ಟ್‌ಅಪ್‌ಗಳ ಪೈಕಿ ಕನಿಷ್ಠ 10ಸಾವಿರ ಸ್ಟಾರ್ಟ್‌ಅಪ್‌ಗಳನ್ನು ಬೆಂಗಳೂರಿನ ಹೊರಗಿನ ಕ್ಲಸ್ಟರ್‌ಗಳಿಂದ ಉತ್ತೇಜಿಸುವ ಗುರಿ ಹಾಕಿಕೊಳ್ಳಲಾಗಿದೆ. ಇದು ರಾಜ್ಯದಲ್ಲಿ ಸಮಾನ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಗೆ ಸಹಕಾರಿ ಎಂದರು.ಕರ್ನಾಟಕ ನವೋದ್ಯಮ ನೀತಿಯು ಭವಿಷ್ಯದ ತಂತ್ರಜ್ಞಾನಗಳಾದ ಕೃತಕ ಬುದ್ಧಿಮತ್ತೆ, ಕ್ವಾಂಟಮ್ ಕಂಪ್ಯೂಟಿಂಗ್, ಬ್ಲಾಕ್‌ಚೈನ್ ಮತ್ತು ಬಾಹ್ಯಾಕಾಶ ತಂತ್ರಜ್ಞಾನದಂತಹ ಕ್ಷೇತ್ರಗಳಲ್ಲಿ ನಾವೀನ್ಯತೆಗೆ ಪ್ರೋತ್ಸಾಹಿಸಲು ಗಮನಹರಿಸಲಿದೆ. ರಾಜ್ಯದ ಯಶಸ್ವಿ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಈ ನೀತಿ ರೂಪಿಸಲಾಗಿದೆ ಎಂದರು.
ಈ ನೀತಿ ಅಡಿ ಸ್ಟಾರ್ಟ್‌ಅಪ್‌ಗಳಿಗೆ ಎಲಿವೇಟ್ ಗ್ರಾಂಟ್-ಇನ್-ಏಡ್, ಸೀಡ್ ಫಂಡ್, ಫಂಡ್ ಆಫ್ ಫಂಡ್ಸ್, ಜಿಎಸ್‌ಟಿ ಮರುಪಾವತಿ, ಪೇಟೆಂಟ್ ಫೈಲಿಂಗ್ ವೆಚ್ಚ, ಗುಣಮಟ್ಟ ಪ್ರಮಾಣೀಕರಣ ವೆಚ್ಚ, ಮತ್ತು ಪಿಎಫ್ ಮರುಪಾವತಿಯಂತಹ ಹಲವಾರು ಆರ್ಥಿಕ ಪ್ರೋತ್ಸಾಹಗಳನ್ನು ನೀಡಲಾಗುತ್ತದೆ.
ಅಲ್ಲದೇ, ದೇಶದ ಸ್ಟಾರ್ಟ್‌ಅಪ್ ರಾಜಧಾನಿಯಾಗಿರುವ ಬೆಂಗಳೂರು, ಜಾಗತಿಕ ಮಟ್ಟದಲ್ಲಿ 10ನೇ ಸ್ಥಾನದಲ್ಲಿದ್ದು, ಈ ನೀತಿ ಕರ್ನಾಟಕದ ನಾಯಕತ್ವವನ್ನು ಇನ್ನಷ್ಟು ಗಟ್ಟಿಗೊಳಿಸಲಿದೆ. ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ನಾವೀನ್ಯತೆಯಲ್ಲಿ ರಾಜ್ಯದ ಪರಂಪರೆ ಮುಂದುವರೆಸಿಕೊಂಡು ಹೋಗಲು ಈ ನೀತಿ ಒಂದು ಮಹತ್ವದ ಹೆಜ್ಜೆ ಎಂದು ಮಾಹಿತಿ ನೀಡಿದರು.
ರಾಜ್ಯದ ಯಾವುದೇ ಪೊಲೀಸ್ ಠಾಣೆಯು ವ್ಯಕ್ತಿಯೊಬ್ಬರನ್ನು ಬಂಧಿಸಿದಾಗ ನಿಯಮಿತ ನಮೂನೆಯಲ್ಲಿ ಬಂಧಿತ ವ್ಯಕ್ತಿಯ ಮಾಹಿತಿ ನಿರ್ವಹಿಸುವುದು ಕಡ್ಡಾಯಗೊಳಿಸುವ ನಿಯಮಗಳಿಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಬಂಧಿತ ವ್ಯಕ್ತಿ ಮಾಹಿತಿ ಒಳಗೊಂಡ ದಾಖಲೆ ನಿರ್ವಹಣೆ ಕಡ್ಡಾಯ ನಿಯಮಾವಳಿ -2025ಕ್ಕೆ ಸಂಪುಟ ಅನುಮೋದನೆ ನೀಡಿದೆ.
ಸಂಪುಟದ ಇತರ ತೀರ್ಮಾನಗಳು:
-ಒಬಿಸಿ ವರ್ಗಗಳಿಗೆ ಮೀಸಲಿದ್ದರೂ ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲದ ಹಿನ್ನೆಲೆಯಲ್ಲಿ 67 ಉರ್ದು ಶಿಕ್ಷಕರ ಹುದ್ದೆಯನ್ನು ಸಾಮಾನ್ಯ ವರ್ಗಕ್ಕೆ ಪರಿವರ್ತಿಸಲು ನಿರ್ಧಾರ.
- ಕೊರಟಗೆರೆ ಪಟ್ಟಣ ಪಂಚಾಯ್ತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸಲು ನಿರ್ಧಾರ.
- ಯಾದಗಿರಿಯ ದೋರನಹಳ್ಳಿ ಗ್ರಾಪಂ ಅನ್ನು ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿಸಲು ತೀರ್ಮಾನ.
- ವಿಜಯಪುರ ಮಹಾನಗರ ಪಾಲಿಕೆಗೆ ಹೆಚ್ಚುವರಿ ಗ್ರಾಮಗಳನ್ನು ಸೇರ್ಪಡೆ ಮಾಡಲು ನಿರ್ಧಾರ.
- ಬೀದರ್‌ನ ರಾಜೇಶ್ವರಿ ಗ್ರಾ.ಪಂ.ಯನ್ನು ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿಸಲು ಒಪ್ಪಿಗೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ