BIG Breaking: ಸಿದ್ದರಾಮಯ್ಯ ಪತ್ನಿಗೆ ಕೊಟ್ಟಿದ್ದ 14 ಸೈಟು ವಾಪಸ್ ಪಡೆದ ಮುಡಾ!

By Sathish Kumar KHFirst Published Oct 1, 2024, 5:41 PM IST
Highlights

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ ನಿವೇಶನಗಳ ಆರೋಪದಲ್ಲಿ ತನಿಖೆ ಹಿನ್ನೆಲೆಯಲ್ಲಿ, ಪಾರ್ವತಿ ಸಿದ್ದರಾಮಯ್ಯ ಅವರು ನಿವೇಶನಗಳನ್ನು ಮುಡಾಗೆ ವಾಪಸ್ ನೀಡಿದ್ದಾರೆ. ಇದೀಗ ಮುಡಾ ಕೂಡ ಪಾರ್ವತಿ ಸಿದ್ದರಾಮಯ್ಯ ಅವರಿಗೆ ನೀಡಲಾಗಿದ್ದ ನಿವೇಶನವನ್ನು ರದ್ದುಗೊಳಿಸಿದೆ.

ಮೈಸೂರು (ಅ.01): ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) 14 ನಿವೇಶನಗಳನ್ನು ಪಡೆದಿದ್ದಾರೆಂಬ ಆರೋಪದಲ್ಲಿ ತನಿಖೆಗೆ ಜಾರಿ ನಿರ್ದೇಶನಾಲಯ (ಇಡಿ) ಎಂಟ್ರಿ ಕೊಟ್ಟ ಬೆನ್ನಲ್ಲಿಯೇ ಪಾರ್ವತಿ ಸಿದ್ದರಾಮಯ್ಯ ಅವರು ನಿವೇಶನಗಳನ್ನು ಮುಡಾಗೆ ವಾಪಸ್ ಕೊಡುವುದಾಗಿ ಪತ್ರ ಬರೆದಿದ್ದರು. ಪತ್ರ ಬರೆದು 24 ಗಂಟೆಯೊಳಗೆ ಮುಡಾದಿಂದ 14 ನಿವೇಶನಗಳನ್ನು ವಾಪಸ್ ಪಡೆದು, ಪಾರ್ವತಿ ಸಿದ್ದರಾಮಯ್ಯ ಅವರ ಹೆಸರಿಲ್ಲಿದ್ದ ನಿವೇಶನಗಳನ್ನು ರದ್ದುಗೊಳಿಸಲಾಗಿದೆ.

ರಾಜ್ಯ ರಾಜಕಾರಣದಲ್ಲಿ ಕಳೆದೆರಡು ತಿಂಗಳಿಂದ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಕ್ರಮವಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) 14 ನಿವೇಶನಗಳನ್ನು  ಪಡೆದಿದ್ದಾರೆ ಎಂಬ ಆರೋಪವು ಸಿಎಂ ಕುರ್ಚಿಗೆ ಕಂಟಕವಾಗಿತ್ತು. ರಾಜ್ಯದಲ್ಲಿ ಯಾವುದೇ ತನಿಖೆಗೂ ಹೆದರದೇ ಕಾನೂನು ಹೋರಾಟಕ್ಕೆ ಸಿದ್ಧವೆಂದು ಹೇಳಿದ್ದ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಸಂಸ್ಥೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಇದರ ಬೆನ್ನಲ್ಲಿಯೇ ಕೇಂದ್ರ ಸರ್ಕಾರದ ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯ (ಇಡಿ) ಮುಡಾ ಕೇಸಿಗೆ ಎಂಟ್ರಿ ಕೊಟ್ಟು ಇಸಿಐಆರ್ ದಾಖಲಿಸಿತ್ತು. ಇದರ ಬೆನ್ನಲ್ಲಿಯೇ ಪಾರ್ವತಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಇಷ್ಟೊಂದು ವಿವಾದಕ್ಕೆ ಕಾರಣವಾಗಿರುವ ಮುಡಾ ನಿವೇಶನಗಳು ಬೇಡವೆಂದು ಪತ್ರ ಬರೆದಿದ್ದರು. ಈ ಪತ್ರ ಬರೆದು ಕೇವಲ 24 ಗಂಟೆಯೊಳಗೆ ಮುಡಾ ಅಧಿಕಾರಿಗಳು ಪಾರ್ವತಿ ಸಿದ್ದರಾಮಯ್ಯ ಅವರಿಗೆ ಹಂಚಿಕೆ ಮಾಡಿದ್ದ ನಿವೇಶನಗಳನ್ನು ವಾಪಸ್ ಪಡೆದುಕೊಂಡಿದೆ.

Latest Videos

ನನ್ನ ಮೇಲಿನ ತೇಜೋವಧೆಗೆ ಮನನೊಂದು, ಪತ್ನಿ 14 ಸೈಟು ವಾಪಸ್ ಕೊಟ್ರು: ಸಿದ್ದರಾಮಯ್ಯ

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಡಾದವರು ಕೊಟ್ಟ ನಿವೇಶನವನ್ನು ತೆಗೆದುಕೊಂಡಿದ್ದೆ ಈಗ ದೊಡ್ಡ ವಿವಾದವಾಗಿದೆ. ಇದರಿಂದ ಮನನೊಂದು ನನ್ನ ಪತ್ನಿ ನಿವೇಶನವನ್ನು ವಾಪಾಸ್ಸು ನೀಡಿದ್ದಾರೆ. ಮುಡಾ ವಿಚಾರದಲ್ಲಿ ಯಾವ ಆಧಾರದ ಮೇಲೆ ಹಣದ ಅಕ್ರಮ ವರ್ಗಾವಣೆಯ ಕೇಸ್‌ ದಾಖಲಿಸಲಾಗಿದೆ ಎಂಬುದು ನನಗೆ ಗೊತ್ತಾಗಿಲ್ಲ. ಮುಡಾದವರು ಕೊಟ್ಟ ಬದಲಿ ನಿವೇಶನ ಪಡೆದಿರುವುದು ತಪ್ಪು ಎನ್ನುತ್ತಿದ್ದಾರೆ. ಇಲ್ಲಿ ಎಲ್ಲಿಯೂ ಹಣದ ಅಕ್ರಮ ವರ್ಗಾವಣೆ ಪ್ರಶ್ನೆ ಬರುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಇಡೀ ಪ್ರಕರಣದಲ್ಲಿ ನನ್ನ ಪಾತ್ರ ಏನೂ ಇಲ್ಲ ಎಂದಿದ್ದರು.

 

ಬಿ.ಎಸ್.‌ ಯಡಿಯೂರಪ್ಪ ಅವರು ಅಕ್ರಮವಾಗಿ ಡಿನೋಟಿಫೈ ಮಾಡಿದ್ದರು, ಆದರೆ ಇಲ್ಲಿ ಇಡೀ ಪ್ರಕರಣದಲ್ಲಿ ನನ್ನ ಪಾತ್ರವೇ ಇಲ್ಲ. ನಾನೇನಾದರೂ ಮುಡಾಗೆ ಆದೇಶ ಮಾಡಿದ್ದೇನಾ? ಸೂಚನೆ ನೀಡಿದ್ದೇನಾ? ವಿನಾಕಾರಣ ನನ್ನ ರಾಜೀನಾಮೆ ಕೇಳುತ್ತಿದ್ದಾರೆ. ತಪ್ಪೇ ಮಾಡದಿರುವ ನಾನು ರಾಜೀನಾಮೆ ಯಾಕೆ ನೀಡಬೇಕು? ಎಂದು ಸಿಎಂ ಸಿದ್ದರಾಮಯ್ಯ ಮಾಧ್ಯಮಗಳಿಗೆ ರಾಜೀನಾಮೆ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

click me!