
ಮೈಸೂರು (ಅ.17): ಅಲ್ಲಿ ನಡೆದಿದ್ದು ಹುಲಿ ಸೆರೆ ಕಾರ್ಯಾಚರಣೆ. ಸರಿಯಾದ ಮುಂಜಾಗ್ರತಾ ಕ್ರಮ ಇಲ್ಲದೆ ನಡೆದ ಕಾರ್ಯಾಚರಣೆಯಲ್ಲಿ ಅಮಾಯಕ ರೈತನ ಬದುಕು ಕತ್ತಲಾಗಿದೆ. ಹುಲಿ ದಾಳಿಗೆ ಬಲಿಯಾಗಿ ಎರಡು ಕಣ್ಣು ಕಳೆದುಕೊಂಡಿರುವ ರೈತನ ಕುಟುಂಬಕ್ಕೆ ಸಿಎಂ ಸಾಂತ್ವನ ಹೇಳಿದ್ದಾರೆ. ಪರಿಹಾರದ ಜೊತೆಗೆ ಸಂಪೂರ್ಣ ಚಿಕಿತ್ಸೆಯ ಭರವಸೆ ನೀಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ರೈತನ ಮೇಲೆ ಹುಲಿ ದಾಳಿ
ಮೈಸೂರು ಜಿಲ್ಲೆಯಲ್ಲಿ ಹುಲಿ ದಾಳಿಗೆ ರೈತನ ಬದುಕು ಕತ್ತಲಾಗಿದೆ. ಹುಲಿ ಸರೆ ಕಾರ್ಯಾಚರಣೆ ನಡೆಸುವ ವೇಳೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ದಾಳಿ ಮಾಡಿದ ಹುಲಿ, ಗಂಭೀರವಾಗಿ ಗಾಯಗೊಳಿಸಿದ ಘಟನೆ ಮೈಸೂರು ಜಿಲ್ಲೆ ಸರಗೂರು ತಾಲೂಕಿನ ಬಡಗಲಪುರ ಗ್ರಾಮದಲ್ಲಿ ನಡೆದಿದೆ. 45 ವರ್ಷದ ಮಹದೇವೇಗೌಡ ಎಂಬುವರೇ ಹುಲಿ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ರೈತ.
ಅರಣ್ಯಾಧಿಕಾರಿಗಳ ನಿರ್ಲಕ್ಷ್ಯದಿಂದ ರೈತನ ಮೇಲೆ ಹುಲಿ ದಾಳಿ?
ಬಂಡೀಪುರ ಅರಣ್ಯ ಪ್ರದೇಶದ ಮೊಳೆಯೂರು ರೇಂಜ್ ವ್ಯಾಪ್ತಿಯಲ್ಲಿ ಹುಲಿ ಕಾಟ ಹೆಚ್ ಅಗಿತ್ತು. ಕಳೆದ 15 ದಿನಗಳಿಂದ ಬಡಗಲಪುರ ಗ್ರಾಮದ ಸುತ್ತಮುತ್ತ ಹುಲಿ ಉಪಟಳ ನೀಡುತ್ತಿತ್ತು. ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸಿ, ಸಾರ್ವಜನಿಕರಿಗೆ ತೊಂದರೆ ಕೊಡುತ್ತಿತ್ತು. ಇದರಿಂದ ಹುಲಿ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಕೂಂಬಿಗ್ ಕಾರ್ಯಾಚರಣೆಗೆ ಮಾಡುತ್ತಿದ್ದರು. ದಸರಾ ಆನೆ ಭೀಮಾ ನೇತೃತ್ವದಲ್ಲಿ ಕೂಂಬಿಂಗ್ ನಡೆಯುತ್ತಿತ್ತು. ಈ ವೇಳೆ ರೊಚ್ಚಿಗೆದ್ದ ಹುಲಿ ಅಣತಿ ದೂರದಲ್ಲಿ ಹತ್ತಿ ಬಿಡಿಸುವ ಕೆಲಸ ಮಾಡುತ್ತಿದ್ದ ರೈತ ಮಹದೇವೇಗೌಡ ಮೇಲೆ ದಾಳಿ ಮಾಡಿದೆ. ದಾಳಿಯಿಂದ ಮಹದೇವೇಗೌಡ ಮುಖದ ಬಲ ಭಾಗ ಸಂಪೂರ್ಣ ಕಿತ್ತುಬಂದಿದ್ದು, ಎರಡೂ ಕಣ್ಣುಗಳು ಸಂಪೂರ್ಣ ಹಾನಿಯಾಗಿವೆ.
ಅರಣ್ಯಾಧಿಕಾರಿಗಳ ವಿರುದ್ಧ ಸ್ಥಳೀಯರು ಅಕ್ರೋಶ:
ಹುಲಿ ದಾಳಿ ನಂತರ ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು, ಅರಣ್ಯ ಇಲಾಖೆಯ ವಾಹನಗಳ ಮೇಲೆ ಕಲ್ಲು ತೂರಾಟ ಮಾಡಿ ಸಂಪೂರ್ಣ ಜಖಂ ಮಾಡಿದ್ದರು.
ಗಾಯಾಳು ರೈತ ಕುಟುಂಬಕ್ಕೆ ಸಿಎಂ ಸಾಂತ್ವನ:
ಹುಲಿ ದಾಳಿಯಿಂದ ಗಂಭೀರವಾಗಿ ಗಾಯವಾಗಿರುವ ರೈತ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇಂದು ಸಿಎಂ ಸಿದ್ದರಾಮಯ್ಯ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ವೇಳೆ ಮುಖದ ಬಲ ಭಾಗ, ಕಣ್ಣುಗಳು ಸಂಪೂರ್ಣ ಹಾನಿಯಾಗಿದ್ದು, ವಾಪಸ್ ಬರುವುದು ಕಷ್ಟ ಅಂತ ಹೇಳಿದ್ದಾರೆ. ಅಲ್ಲದೆ ಸಂಪೂರ್ಣ ಗುಣಮುಖ ಆಗುವ ವರೆಗೂ ಸರ್ಕಾರವೇ ಚಿಕಿತ್ಸೆ ಕೊಡಿಸುವುದಾಗಿಯೂ ಭರವಣೆ ನೀಡಿದ್ದಾರೆ. ಇದರ ಜೊತೆಗೆ ಪರಿಹಾರವನ್ನು ಕೊಡುವುದಾಗಿ ತಿಳಿಸಿದ್ದಾರೆ.
ಒಟ್ಟಾರೆ ಸ್ಥಳೀಯರಿಗೆ ಯಾವುದೇ ಮಾಹಿತಿ ನೀಡದೆ ಇಂತಹ ಅಪಾಯಕಾರಿ ಕಾರ್ಯಾಚರಣೆ ನಡೆಸಿದ್ದೇ ಇಷ್ಟೆಲ್ಲ ಅನಾಹುತಕ್ಕೆ ಕಾರಣವಾಗಿದೆ. ಇದರಿಂದಾಗಿ ರೈತ ಮಹದೇವೇಗೌಡ ಬದುಕುಳಿದರೂ ಕತ್ತಲಲ್ಲೇ ಜೀವನ ನಡೆಸುವಂತಾಗಿದೆ.
ಕ್ಯಾಮೆರಾಮನ್ ನವೀನ್ ಜೊತೆಗೆ ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಮೈಸೂರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ