
ಮಂಗಳೂರು (ಅ.17): 1995 ರಿಂದ 2014ರ ವರೆಗೆ ಬೆಳ್ತಂಗಡಿ ಹಾಗೂ ಧರ್ಮಸ್ಥಳ ಔಟ್‌ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರಿಗೂ ವಿಶೇಷ ತನಿಖಾ ತಂಡ(ಎಸ್‌ಐಟಿ)ದ ತನಿಖೆಯ ಬಿಸಿ ಮುಟ್ಟಿದೆ. ಈ ಅವಧಿಯಲ್ಲಿ ಆತ್ಮ*ಹತ್ಯೆ ನಡೆಸಿದ ವ್ಯಕ್ತಿಗಳ ಶವಗಳ ವಿಲೇವಾರಿ ವೇಳೆ ಅಕ್ರಮವಾಗಿದೆ ಎಂದು ಆರೋಪಿಸಿ ದೂರುದಾರ ಗಿರೀಶ್ ಮಟ್ಟೆಣ್ಣವರ್, ಜಯಂತ್ ಟಿ, ಮಹೇಶ್ ಶೆಟ್ಟಿ ತಿಮರೋಡಿ ದೂರು ನೀಡಿದ ಹಿನ್ನೆಲೆಯಲ್ಲಿ ಎಸ್‌ಐಟಿ ವಿಚಾರಣೆಗೆ ಹಾಜರಾಗುವಂತೆ ಅಂದು ಇಲ್ಲಿ ಕರ್ತವ್ಯ ನಿರ್ವಹಿಸಿದ್ದ ಪೊಲೀಸರನ್ನು ಕರೆಸಿಕೊಂಡಿದೆ.
ಸದ್ಯ ವಿವಿಧ ಠಾಣೆಗಳಲ್ಲಿ ಈ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶವ ವಿಲೇವಾರಿ ದಾಖಲೆ ಪರಿಶೀಲನೆ ವೇಳೆ ಗೊಂದಲ ಕಂಡುಬಂದಿದ್ದು, ಈ ಪೊಲೀಸರ ಮೇಲೆ ಅರಣ್ಯ ಭೂಮಿಯಲ್ಲಿ ಶವ ದಫನ ಮಾಡಿರುವ ಆರೋಪ ಸೇರಿದಂತೆ ಆತ್ಮಹತ್ಯೆ ಮಾಡಿಕೊಂಡವರ ಶವಗಳನ್ನು ಒಂದೇ ದಿನದಲ್ಲಿ ದಫನ ಸೇರಿದಂತೆ ವಿವಿಧ ಆರೋಪಗಳಿಗೆ ಸಂಬಂಧಿಸಿ ಎಸ್‌ಐಟಿ ತನಿಖೆ ನಡೆಸುತ್ತಿದೆ. ಧರ್ಮಸ್ಥಳ ಔಟ್ ಪೋಸ್ಟ್‌ನಲ್ಲಿ ಆಗ ಕರ್ತವ್ಯದಲ್ಲಿದ್ದ ಬಹುತೇಕ ಎಲ್ಲ ಪೊಲೀಸರಿಗೂ ಎಸ್ಐಟಿ ಬುಲಾವ್ ಮಾಡಿದ್ದು, ಅವರಿಂದ ಹೇಳಿಕೆ ದಾಖಲು ಪ್ರಕ್ರಿಯೆ ಆರಂಭಿಸಲಾಗಿದೆ.
ಒಂದೇ ಜಾಗದಲ್ಲಿ 10 ಶವ ಹೂತಿದ್ದೇನೆ ಎಂದಿದ್ದ ಬುರುಡೆ ಕೇಸಿನ ಆರೋಪಿ ಚಿನ್ನಯ್ಯ ಬೆಳ್ತಂಗಡಿ ನ್ಯಾಯಾಲಯದಲ್ಲಿ ಬಿಎನ್ಎಸ್ 183 ಅಡಿಯಲ್ಲಿ ಈ ಹೇಳಿಕೆ ನೀಡಿದ್ದ. ಹಾಗಾಗಿ ಸದ್ಯ ಶಿವಮೊಗ್ಗ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಚಿನ್ನಯ್ಯನನ್ನು ಕೋರ್ಟ್ ಅನುಮತಿ ಪಡೆದು ಶಿವಮೊಗ್ಗ ಜೈಲಿನಲ್ಲೇ ಎಸ್‌ಐಟಿ ತಂಡ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಆರೋಪಿ ಚಿನ್ನಯ್ಯ 10 ಶವ ಹೂತು ಹಾಕಿದ್ದು ಯಾವಾಗ ಎಂದು ಪತ್ತೆ ಹಚ್ಚಲು ಎಸ್‌ಐಟಿ ತಂಡ ದಾಖಲೆಗಳ ಹುಡುಕಾಟ ನಡೆಸುತ್ತಿದೆ. ಮತ್ತೆ ಎಲ್ಲ ಆತ್ಮಹತ್ಯೆಗಳ ಮರಣೋತ್ತರ ಪರೀಕ್ಷಾ ವರದಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. 10 ಶವ ಹೂತು ಹಾಕಿದ ಕುರಿತು ಧರ್ಮಸ್ಥಳ ಗ್ರಾಮ ಪಂಚಾಯ್ತಿನಿಂದಲೂ ಮಾಹಿತಿ ಸಂಗ್ರಹಿಸುತ್ತಿದ್ದು, ತನಿಖಾಧಿಕಾರಿ ಜೀತೇಂದ್ರ ಕುಮಾರ್ ದಯಮಾ ನೇತೃತ್ವದಲ್ಲಿ ಇದರ ವಿಚಾರಣೆ ನಡೆಯುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ