ಅರಮನೆ, ಪ್ರತಿಮೆಗಳಿಗೆ ತೊಂದರೆ, ಇಂದಿನಿಂದ ಪಾರಿವಾಳಗಳಿಗೆ ಕಾಳು ಹಾಕಬೇಡಿ: ಸಂಸದ ಯದುವೀರ್ ಒಡೆಯರ್

By Kannadaprabha NewsFirst Published Sep 23, 2024, 9:00 AM IST
Highlights

ಮದುವೆ ಮತ್ತು ಮೋಜಿಗಾಗಿ ಫೋಟೋ ತೆಗೆಸಿಕೊಳ್ಳುವವರಿಗೆ, ಪ್ರವಾಸಿಗರಿಗೆ ಮುದ ನೀಡುತ್ತಿದ್ದ ಮೈಸೂರು ಅರಮನೆಯ ಉತ್ತರ ದ್ವಾರದಲ್ಲಿನ ಪಾರಿವಾಳಗಳಿಗೆ ಸೋಮವಾರದಿಂದ ಕಾಳು ಹಾಕುವ ಪದ್ಧತಿ ನಿಲ್ಲಿಸಲಾಗಿದೆ.

ಮೈಸೂರು (ಸೆ.23): ಮದುವೆ ಮತ್ತು ಮೋಜಿಗಾಗಿ ಫೋಟೋ ತೆಗೆಸಿಕೊಳ್ಳುವವರಿಗೆ, ಪ್ರವಾಸಿಗರಿಗೆ ಮುದ ನೀಡುತ್ತಿದ್ದ ಮೈಸೂರು ಅರಮನೆಯ ಉತ್ತರ ದ್ವಾರದಲ್ಲಿನ ಪಾರಿವಾಳಗಳಿಗೆ ಸೋಮವಾರದಿಂದ ಕಾಳು ಹಾಕುವ ಪದ್ಧತಿ ನಿಲ್ಲಿಸಲಾಗಿದೆ.

ಪಾರಿವಾಳಗಳು ನಗರದ ಪಾರಂಪರಿಕ ಕಟ್ಟಡಗಳಲ್ಲಿ ಗೂಡು ಕಟ್ಟಿ ಅಲ್ಲಿಯೇ ಹಿಕ್ಕೆ ಹಾಕುವುದರಿಂದ ಕಟ್ಟಡಕ್ಕೆ ತೊಂದರೆಯಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ನಡೆದ ನಾಗರಿಕರ ಸಭೆ, ಸಂವಾದದ ಯಶಸ್ವಿಯಾಗಿ ಹಲವು ದಿನಗಳಿಂದ ಪರ-ವಿರೋಧಕ್ಕೆ ಎಡೆಮಾಡಿಕೊಟ್ಟಿದ್ದ ಸಮಸ್ಯೆಯನ್ನು ಮಾತುಕತೆಯ ಮೂಲಕ ಪರಿಹರಿಸುವಲ್ಲಿ ಯಶಸ್ವಿಯಾಯಿತು.

Latest Videos

ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌, ಪಾರಂಪರಿಕ ಕಟ್ಟಡ ತಜ್ಞರು ಮತ್ತು ನಗರದ ಪ್ರಮುಖರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ಸಭೆಯಲ್ಲಿ ಇತಿಹಾಸ ತಜ್ಞ ಪ್ರೊ.ಎನ್.ಎಸ್. ರಂಗರಾಜು ಮಾತನಾಡಿ, ಪಾರಿವಾಳಗಳ ಹಿಕ್ಕೆಯಿಂದ ಸುತ್ತಮುತ್ತಲಿನ ಪ್ರತಿಮೆಗಳು, ಅರಮನೆಗೆ ತೊಂದರೆಯಾಗುತ್ತಿದೆ. ಪಾರಿವಾಳಗಳಿಗೆ ಅರಮನೆ ಮುಂಭಾಗ ಆಹಾರ ನೀಡುವುದನ್ನು ನಿಲ್ಲಿಸಬೇಕು. ಇಕ್ಕೆಯಿಂದ ಬಿಡುಗಡೆಯಾಗುವ ಯೂರಿಕ್ ಆಸಿಡ್ ಪಾರಂಪರಿಕ ಕಟ್ಟಡಕ್ಕೆ ಧಕ್ಕೆಯನ್ನುಂಟು ಮಾಡುತ್ತಿದೆ ಎಂದರು.

 

ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರ ಸಿಎಂ ಸಭೆಯ ನಿರ್ಣಯಕ್ಕೆ ಆಕ್ಷೇಪ: ಸಂಸದ ಯದುವೀರ ಒಡೆಯರ್

ಅರಮನೆ ಸುತ್ತಲಿನ ಮಹಾರಾಜರ ಪ್ರತಿಮೆಗಳ ಮೇಲೆ ಕುಳಿತು ಇಕ್ಕೆ ಹಾಕುವುದರಿಂದ ಹಾನಿಯಾಗಲಿದೆ. ಪಾರಿವಾಳ ತನ್ನ ಆಹಾರವನ್ನು ನೈಸರ್ಗಿಕವಾಗಿ ಹುಡುಕಿಕೊಂಡು ಹೋಗಬೇಕು. ಅವುಗಳಿಗೆ ಹುಟ್ಟುಹಬ್ಬ, ಮದುವೆ ಫೋಟೋ ಶೂಟ್ ನೆಪದಲ್ಲಿ ಆಹಾರ ನೀಡಿ ಪಾರಂಪರಿಕ ಕಟ್ಟಡಗಳಿಗೆ ಧಕ್ಕೆ ತರುವುದು ಬೇಡ ಎಂದು ಸಲಹೆ ನೀಡಿದರು.
ಮೊದಲು ಪಾರಿವಾಳಗಳು ಮುನ್ನೂರಷ್ಟು ಇತ್ತು. ಆಹಾರ ನೀಡುವುದು ಹೆಚ್ಚಾದ ಮೇಲೆ ಈಗ ಮೂರು ಸಾವಿರಕ್ಕೂ ಹೆಚ್ಚು ಇವೆ. ಪ್ರತಿಮೆಗಳ ಬಳಿ ಹೆಗ್ಗಣಗಳು ಬಿಲ ತೋಡಿವೆ. ಏನಾದರೂ ಪಾರಿವಾಳ ಸತ್ತು ಹೋದರೆ ಅದನ್ನು ತಿನ್ನಲು ಹೆಗ್ಗಣಗಳು ಬಿಲ ತೋಡಲಿವೆ. ಅಂದಾಜು 300 ಬಿಲಗಳನ್ನು ಮಾಡಿಕೊಂಡಿವೆ. ಇಕ್ಕೆಯಿಂದ ದೊಡ್ಡ ಸಮಸ್ಯೆಯಾಗಲಿದೆ ಎಂದರು.

ಸಂಘ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಬಿ.ಎಸ್. ಪ್ರಶಾಂತ್ ಮಾತನಾಡಿ, ಮೈಸೂರು ಪಾರಂಪರಿಕ ನಗರವಾಗಿದೆ. ಅರಮನೆ ನೋಡಲು ಬರುವುದರಿಂದ ನಮ್ಮ ಆರ್ಥಿಕತೆಗೆ ಅರಮನೆಯೇ ಒಂದು ಆಧಾರ. ಸುತ್ತಮುತ್ತಲಿನ ಪ್ರವಾಸಿ ತಾಣಗಳು, ಪ್ರತಿಮೆಗಳು ಆಕರ್ಷಣೀಯವಾಗಿದೆ. ಹಾಗಾಗಿ, ನಾವು ಅರಮನೆಗೆ ಸಣ್ಣ ಧಕ್ಕೆ ಇಲ್ಲದಂತೆ ಕಾಪಾಡಿಕೊಳ್ಳಲು ಆಹಾರ ನಿಲ್ಲಿಸುವುದನ್ನು ತಡೆಯಬೇಕು ಎಂದರು.
ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ರಘು ಕೌಟಿಲ್ಯ ಮಾತನಾಡಿ, ಅರಮನೆಯ ಬಳಿ ಪಾರಿವಾಳಗಳಿಗೆ ಆಹಾರ ನೀಡುವುದನ್ನು ನಿಲ್ಲಿಸಬೇಕು. ಬೇಕಾದರೆ ಅವರ ಮನೆ ಮುಂದೆ ಸಾಕಿ ಆಹಾರ ಹಾಕಲಿ. ಒಂದು ವೇಳೆ ಕಾಳು ಹಾಕುವುದನ್ನು ನಿಲ್ಲಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದರು.

ಸಂಸದ ಯದುವೀರ್ ಪಾರಿವಾಳಗಳ ಬಗ್ಗೆ ಮೊದಲು ದೂರು ಬಂದಿದ್ದು, ತಾಯಿ ಪ್ರಮೋದಾದೇವಿ ಒಡೆಯರ್‌ ಅವರಿಂದ. ಅವರಿಗೆ ಸಾಕಷ್ಟು ದೂರುಗಳು ಪಾರಿವಾಳಗಳ ಬಗ್ಗೆ ಬಂದಿತ್ತು. ಇದು ವನ್ಯಜೀವಿ ಸಂತತಿಗೆ ಸೇರಿದ ಪಕ್ಷಿಯಾಗಿದೆ. ಇವುಗಳಿಗೆ ಅಹಾರ ಕೊಡುವ ಅವಶ್ಯಕತೆ ಇಲ್ಲ. ಪಾರಿವಾಳಗಳ ಯೂರಿಕ್‌ ಆಸಿಡ್ ನಿಂದ ಪಾರಂಪರಿಕ ಕಟ್ಟಡಗಳಿಗೆ ಧಕ್ಕೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಅರಮನೆ ಕರೆಂಟ್​ ಬಿಲ್​ ಎಷ್ಟು? ದಂಪತಿ ಜಗಳವಾದ್ರೆ ಸಾರಿ ಕೇಳೋದ್ಯಾರು? ತರ್ಲೆ ಪ್ರಶ್ನೆಗಳಿಗೆ ಯದುವೀರ್​ ಉತ್ತರ ಹೀಗಿದೆ...

ಸಂವಾದದ ಕೊನೆಯಲ್ಲಿ ಮಾತನಾಡಿದ ಖಬೂತರ್ ದಾನ್ ಜೈನ್ ಸಂಘಟನೆ ಮುಖ್ಯಸ್ಥ ವಿನೋದ್ ಮಾತನಾಡಿ, ನಾಳೆಯಿಂದ ಪಾರಿವಾಳಗಳಿಗೆ ಆಹಾರ ನೀಡುವುದನ್ನು ನಿಲ್ಲಿಸುತ್ತೇವೆ. ಈಗಾಗಲೇ ಪ್ರತಿಯೊಬ್ಬರೂ ಸಾಕಷ್ಟು ವಿಚಾರಗಳನ್ನು ಚರ್ಚೆ ಮಾಡಿದ್ದಾರೆ. ಪಾರಿವಾಳಗಳಿಂದ ಅರಮನೆ, ಪ್ರತಿಮೆಗಳಿಗೆ ಆಗುತ್ತಿರುವ ಹಾನಿ ಬಗ್ಗೆ ಹೇಳಿರುವುದರಿಂದ ನಾವು ಯಾರಿಗೂ ತೊಂದರೆ ಕೊಡುವುದಿಲ್ಲ. ಸೋಮವಾರದಿಂದ ಕಾಳು ಹಾಕುವುದನ್ನು ನಿಲ್ಲಿಸುತ್ತೇವೆ ಎಂದು ಘೋಷಿಸಿದರು.

ಸಭೆಯಲ್ಲಿ ಮಾಜಿ ಶಾಸಕ ಎಲ್. ನಾಗೇಂದ್ರ, ಮೈಸೂರು ಗ್ರಾಹಕರ ಪರಿಷತ್‌ನ ಭಾಮಿ ವಿ.ಶೆಣೈ, ನಗರಪಾಲಿಕೆ ಆಯುಕ್ತ ಅಸಾದ್ ಉರ್ ರೆಹಮಾನ್ ಷರೀಫ್ ಮೊದಲಾದವರು ಇದ್ದರು.

click me!