ವಜ್ರಮುಷ್ಠಿ ಕಾಳಗದಲ್ಲಿ ರಕ್ತ ಚಿಮ್ಮಿಸಿದ ಚನ್ನಪಟ್ಟಣದ ಜಟ್ಟಿ !

By Kannadaprabha News  |  First Published Oct 25, 2023, 4:59 AM IST

ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂಸವಾರಿಗೂ ಮುನ್ನಾ ನಡೆಯುವ ವಜ್ರಮುಷ್ಟಿ ಕಾಳಗದಲ್ಲಿ ಚನ್ನಪಟ್ಟಣದ ಪ್ರವೀಣ್ ಜಟ್ಟಿ ಎದುರಾಳಿ ಫೈಲ್ವಾನನ ನೆತ್ತಿಯಿಂದ ನೆತ್ತರು ಹರಿಸುವ ಮೂಲಕ ನಾಡಹಬ್ಬದಲ್ಲಿ ಬೊಂಬೆನಾಡಿನ ಹಿರಿಮೆ ಹೆಚ್ಚಿಸಿದ್ದಾರೆ.


ವಿಜಯ್ ಕೇಸರಿ

ಚನ್ನಪಟ್ಟಣ (ಅ.25): ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂಸವಾರಿಗೂ ಮುನ್ನಾ ನಡೆಯುವ ವಜ್ರಮುಷ್ಟಿ ಕಾಳಗದಲ್ಲಿ ಚನ್ನಪಟ್ಟಣದ ಪ್ರವೀಣ್ ಜಟ್ಟಿ ಎದುರಾಳಿ ಫೈಲ್ವಾನನ ನೆತ್ತಿಯಿಂದ ನೆತ್ತರು ಹರಿಸುವ ಮೂಲಕ ನಾಡಹಬ್ಬದಲ್ಲಿ ಬೊಂಬೆನಾಡಿನ ಹಿರಿಮೆ ಹೆಚ್ಚಿಸಿದ್ದಾರೆ.

Tap to resize

Latest Videos

ಐತಿಹಾಸಿಕ ಮೈಸೂರು ದಸರಾದಲ್ಲಿ ಮಹಾರಾಜರು ವಿಜಯ ಯಾತ್ರೆ ಹೊರಡುವ ಮುನ್ನ ನಡೆಯುವ ವ್ರಜಮುಷ್ಠಿ ಕಾಳಗದಲ್ಲಿ ಚನ್ನಪಟ್ಟಣವನ್ನು ಪ್ರತಿನಿಧಿಸಿದ್ದ ಉಸ್ತಾದ್ ಪುರುಷೋತ್ತಮ ಜಟ್ಟಿಯ ಶಿಷ್ಯ ಪ್ರವೀಣ್ ಜಟ್ಟಿ ಚಾಮರಾಜನಗರದ ಉಸ್ತಾದ್ ಬಾಲಾಜಿ ಅವರ ಶಿಷ್ಯ ಎಸ್. ಪ್ರದೀಪ್ ನೆತ್ತಿಗೆ ವಜ್ರನಖದಿಂದ ಹೊಡೆದು ರಕ್ತ ಚಿಮ್ಮಿಸಿದ್ದಾರೆ.

ಮೈಸೂರು ದಸರಾ: ಜಂಬೂಸವಾರಿ ಮೆರವಣಿಗೆಯಲ್ಲಿ ಈ ಬಾರಿ 49 ಸ್ತಬ್ಧಚಿತ್ರ

೧೩ಸೆಕೆಂಡ್‌ನಲ್ಲೇ ಕಾಳಗ ಅಂತ್ಯ: ವಿಜಯ ದಶಮಿ ಹಿನ್ನೆಲೆಯಲ್ಲಿ ಅರಮನೆಯ ಶ್ವೇತ ವರಹ ದೇವಸ್ಥಾನದ ಆವರಣದಲ್ಲಿ ವಜ್ರಮುಷ್ಟಿ ಕಾಳಗ ಆಯೋಜಿಸಿದ್ದು, ರಾಜವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪಟ್ಟದ ಕತ್ತಿಗೆ ಪೂಜೆ ಸಲ್ಲಿಸಿದ ಕೂಡಲೇ ಕಾಳಗ ಪ್ರಾರಂಭಗೊಂಡಿತು.

ಮಹಾರಾಜರು ವಿಜಯ ಯಾತ್ರೆಗೆ ಹೊರಡುವ ಮುನ್ನ ನಡೆಯುವ ಈ ಜಟ್ಟಿ ಕಾಳಗದಲ್ಲಿ ಚನ್ನಪ್ಪಟ್ಟಣ ಪ್ರವೀಣ್ ಜಟ್ಟಿ ಕೇವಲ ೧೩ ಸೆಕೆಂಡ್‌ನಲ್ಲಿ ಎದುರಾಳಿಯ ನೆತ್ತಿಯಿಂದ ರಕ್ತ ಚಿಮ್ಮಿಸಿದರು.

ನೆತ್ತರು ಕೆಡವಿದ ಪ್ರವೀಣ್ ಜಟ್ಟಿ: ಮೈಸೂರು ದಸರಾದ ವಜ್ರಮುಷ್ಟಿ ಕಾಳಗದಲ್ಲಿ ಪಾಲ್ಗೊಳ್ಳುವ ಜಟ್ಟಿ ಪರಂಪರೆ ಇರುವುದು ರಾಜ್ಯದ ನಾಲ್ಕು ಕಡೆಗಳಲ್ಲಿ ಮಾತ್ರ. ಚನ್ನಪಟ್ಟಣ, ಬೆಂಗಳೂರು, ಮೈಸೂರು ಮತ್ತು ಚಾಮರಾಜ ನಗರದಲ್ಲಿ ಮಾತ್ರ ಈ ಪರಂಪರೆ ಉಳಿದುಕೊಂಡು ಬಂದಿದೆ. ವಜ್ರಮುಷ್ಠಿ ಕಾಳಗದಲ್ಲಿ ನಾಲ್ಕು ಮಂದಿ ಫೈಲ್ವಾನರು ಒಂದೇ ಬಾರಿ ಅಖಾಡಕ್ಕೆ ಇಳಿದು, ಎರಡು ಜೋಡಿಗಳು ಎದುರು ಬದುರಾಗಿ ದ್ವಂದ್ವ ಕಾಳಗ ನಡೆಸುತ್ತಾರೆ. ಅದರಂತೆ ಈ ಬಾರಿಯ ವಜ್ರಮುಷ್ಠಿ ಕಾಳಗದಲ್ಲಿ ಚನ್ನಪಟ್ಟಣದ ಪ್ರವೀಣ್ ಜಟ್ಟಿ ಚಾಮರಾಜನಗರದ ಎಸ್. ಪ್ರದೀಪ್‌ಗೆ ಮುಖಾಮುಖಿಯಾದರೆ, ಚಾಮರಾಜನಗರದ ವೆಂಕಟೇಶ್‌ ಜಟ್ಟಿ ಹಾಗೂ ಬೆಂಗಳೂರಿನ ಪ್ರಮೋದ್ ಜಟ್ಟಿ ನಡುವೆ ಮತ್ತೊಂದ ಕಾಳಗ ಜರುಗಿತು.

ಏನಿದು ವಜ್ರಮುಷ್ಟಿ ಕಾಳಗ: ಮೈಸೂರು ದಸರಾದ ವೇಳೆ ನಡೆಯುವ ಪ್ರಸಿದ್ಧ ವಜ್ರಮುಷ್ಟಿ ಕಾಳಗ ಹಲವು ವೈಶಿಷ್ಟ್ಯಗಳಿಂದ ಕೂಡಿದ್ದು, ತನ್ನದೇ ಆದ ಐತಿಹ್ಯ ಹೊಂದಿದೆ. ಈ ಕುಸ್ತಿಯಲ್ಲಿ ತಲೆಯನ್ನು ಬೋಳಿಸಿಕೊಂಡು ತಮ್ಮ ಕುಲದೇವಿ ನಿಂಬಾಂಜಾ ದೇವಿಯನ್ನು ಪೂಜಿಸಿ ಕುಸ್ತಿ ಅಖಾಡಕ್ಕಿಳಿಯುವ ಜಟ್ಟಿಗಳು ಬಲಗೈಗೆ ಪರಂಪರಾನುಗತವಾಗಿ ಬಂದಿರುವ ವಜ್ರನಖ ಎಂಬ ಆಯುಧವನ್ನು ಧರಿಸಿ, ಎಡಗೈಯನ್ನು ಬಟ್ಟೆಯಲ್ಲಿ ಕಟ್ಟಿಕೊಂಡು ಅಖಾಡದಲ್ಲಿ ಸೆಣಸುತ್ತಾರೆ. ಎದುರಾಳಿಯ ನೆತ್ತಿಗೆ ಬಲವಾಗಿ ಹೊಡೆದು ನೆತ್ತರು ಚಿಮ್ಮಿಸಿದ ನಂತರ ಮಹಾರಾಜರ ವಿಜಯಯಾತ್ರೆ ಆರಂಭಗೊವಾಗುವುದು ವಾಡಿಕೆ. ಇನ್ನು ವಜ್ರಮುಷ್ಟಿ ಕಾಳಗದಲ್ಲಿ ಧರಿಸುವ ವಜ್ರನಖವನ್ನು ಆನೆಯ ದಂತ ಅಥವಾ ಸಾರಂಗದ ಕೊಂಬಿನಿಂದ ಮಾಡಲಾಗುತ್ತದೆ. ಈ ಆಯುಧವನ್ನು ಕುಲದೇವಿಯೇ ದುಷ್ಟ ಶಿಕ್ಷಣೆಗಾಗಿ ನೀಡಿದ್ದಾಳೆ ಎಂಬುದು ಜಟ್ಟಿಗಳ ನಂಬಿಕೆಯಾಗಿದೆ.

ಅರಮನೆಯ ಒಳಭಾಗದಲ್ಲಿರುವ ಕರಿಕಲ್ಲು ತೊಟ್ಟಿ ಅಖಾಡದಲ್ಲಿ ನಡೆಯುವ ಈ ಕುಸ್ತಿಗೆ ಖುದ್ದು ಮೈಸೂರು ಅರಸರೇ ನಿಂತು ಚಾಲನೆ ನೀಡುತ್ತಾರೆ. ಅರಮನೆಯ ಮೊದಲ ಮಹಡಿಯಲ್ಲಿ ನಿಂತು ಮಹಾರಾಜರು ಚಾಲನೆ ನೀಡಿದ ಬಳಿಕ ಅಖಾಡ ಆರಂಭಗೊಳ್ಳುತ್ತದೆ. ಜಟ್ಟಿಗಳ ನೆತ್ತರು ನೆಲಕ್ಕೆ ಬಿದ್ದರೆ ನಾಡಿಗೆ ಶುಭಸೂಚಕ ಎಂಬ ಪ್ರತೀತಿ ಇದ್ದು, ಅದರಂತೆ ವಜ್ರಮುಷ್ಠಿ ಕಾಳಗವನ್ನು ನಡೆಸಿಕೊಂಡು ಬರಲಾಗುತ್ತಿದೆ.

೬ ತಿಂಗಳ ತಯಾರಿ: ಗರಡಿ ಮನೆಯಲ್ಲಿನ ಉಸ್ತಾದ್‌ಗಳು ಸಭೆ ಸೇರಿ ವಜ್ರಮುಷ್ಠಿ ಕಾಳಗದಲ್ಲಿ ಭಾಗಿಯಾಗುವ ಜಟ್ಟಿಯನ್ನು ಆಯ್ಕೆ ಮಾಡುತ್ತಾರೆ. ದಸಾರದ ಆರಂಭಕ್ಕೂ ಆರು ತಿಂಗಳು ಮೊದಲೇ ಭಾಗವಿಸುವ ಜಟ್ಟಿಯನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಜಟ್ಟಿಗಳು ಹಿರಿಯ ಉಸ್ತಾದ್ ಮಾರ್ಗದರ್ಶನಲ್ಲಿ ೬ ತಿಂಗಳು ಕಾಲ ತಾಲೀಮು ನಡೆಸಿ ತಯಾರಿ ನಡೆಸುತ್ತಾರೆ. ನವರಾತ್ರಿ ಆರಂಭಗೊಳ್ಳುತ್ತಿದ್ದಂತೆ ಊಟ, ಹಾಗೂ ದೈನಂದಿನ ಚಟುವಟಿಕೆಯಲ್ಲಿ ಹಲವಾರು ಕಟ್ಟುನಿಟ್ಟಿನ ಪದ್ದತಿಯನ್ನು ಅಳವಡಿಕೊಂಡು ಅಖಾಡಕ್ಕೆ ಅಣಿಯಾಗುತ್ತಾರೆ. ಅದರಂತೆ ಈ ಬಾರಿ ಚನ್ನಪಟ್ಟಣದ ಪ್ರವೀಣ್ ಜಟ್ಟಿ ತಾಲೀಮು ನಡೆಸಿ ವಜ್ರಮುಷ್ಠಿ ಕಾಳಗದಲ್ಲಿ ಭಾಗಿಯಾಗಿದ್ದರು.

 

ದಸರಾ ಹಬ್ಬ: ಊರಿಗೆ ಹೊರಟವರಿಂದ ತುಂಬಿ ತುಳುಕಿದ ಕೆಎಸ್ಸಾರ್ಟಿಸಿ ನಿಲ್ದಾಣ

ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ನಡೆಯುವ ವಜ್ರಮುಷ್ಟಿ ಕಾಳಗದಲ್ಲಿ ಭಾಗಿಯಾಗಿ ಎದುರಾಳಿಯ ನೆತ್ತರಿನಿಂದ ಮೊದಲಿಗೆ ರಕ್ತ ಚಿಮ್ಮಿಸಿರುವುದು ಸಂತಸ ತಂದಿದೆ. ನಮ್ಮ ಪರಂಪರೆಯನ್ನು ಮುಂದುವರಿಸುವಲ್ಲಿ ನನ್ನನ್ನು ಅಯ್ಕೆ ಮಾಡಿ ಮಾರ್ಗದರ್ಶನ ನೀಡಿದ ಎಲ್ಲ ಉಸ್ತಾದ್‌ಗಳಿಗೂ ಅಭಾರಿಯಾಗಿದ್ದಾನೆ.

- ಪ್ರವೀಣ್ ಜಟ್ಟಿ, ವಜ್ರಮುಷ್ಟಿ ಕಾಳಗದಲ್ಲಿ ಭಾಗವಹಿಸಿದ್ದ ಪೈಲ್ವಾನ್

click me!