ಮೈಸೂರು ಒಂದೇ ತಿಂಗಳಲ್ಲಿ ನಾಲ್ವರ ಮೇಲೆ ಹುಲಿ ದಾಳಿ, ಮೂವರು ಸಾವು!

Kannadaprabha News   | Kannada Prabha
Published : Nov 08, 2025, 11:46 AM IST
Mysore: Tiger attacks four people in one month, three dead!

ಸಾರಾಂಶ

ಸರಗೂರು ತಾಲೂಕಿನ ಹೆಗ್ಗುಡಿಲು ಗ್ರಾಮದಲ್ಲಿ ಜಮೀನಿಗೆ ತೆರಳಿದ್ದ ರೈತನ ಮೇಲೆ ಹುಲಿ ದಾಳಿ ಮಾಡಿ ಬಲಿ ಪಡೆದಿದೆ. ಇದು ಒಂದು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ನಡೆದ ಮೂರನೇ ಸಾವಾಗಿದ್ದು, ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದಾರೆ.

ಮೈಸೂರು (ನ.8): ಮಾನವ ಕಾಡುಪ್ರಾಣಿಗಳ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಒಂದು ತಿಂಗಳ ಅಂತರದಲ್ಲಿ ಜಿಲ್ಲೆಯಲ್ಲಿ ಹುಲಿ ದಾಳಿಗೆ ಮೂರು ಜನ ರೈತರು ಬಲಿಯಾಗಿದ್ದಾರೆ. ಇದ್ರಿಂದ ಮೈಸೂರು ಗ್ರಾಮೀಣಾ ಭಾಗದ ಜನ ಬೆಚ್ಚಿಬಿದ್ದಿದ್ದಾರೆ. ಅದರಲ್ಲೂ ಕಾಡಂಚಿನ ಪ್ರದೇಶಗಳಲ್ಲಿ ಅರಣ್ಯ ಇಲಾಖೆ ವಿರುದ್ದ ಜನ ರೊಚ್ಚಿಗೆದ್ದಿದ್ದಾರೆ. ಕಾಡು ಪ್ರಾಣಿಗಳ ಹಾವಳಿಯಿಂದ ಕಾಡಂಚಿನ ಗ್ರಾಮಗಳಲ್ಲಿ ಜನ ನಿತ್ಯ ನರಕ ಅನುಭವಿಸುವಂತಾಗಿದೆ.

ಮೈಸೂರು ಜಿಲ್ಲೆಯಲ್ಲಿ ಹುಲಿಗಳ ಆರ್ಭಟ ಜೋರಾಗಿದ್ದು, ಜಿಲ್ಲೆಯ ಜನ ಬೆಚ್ಚಿಬಿದ್ದಿದ್ದಾರೆ. ಸರಗೂರು, ಹೆಚ್.ಡಿ ಕೋಟೆ ತಾಲ್ಲೂಕಿನಲ್ಲಿ ಹುಲಿ ದಾಳಿಗೆ ಇಬ್ಬರು ರೈತರು ಸಾವನ್ನಪ್ಪಿರುವ ಘಟನೆ ಮಾಸುವ ಮುನ್ನವೇ ಇದೀಗ ಸರಗೂರು ತಾಲೂಕಿನಲ್ಲಿ ಮತ್ತೊಬ್ಬ ರೈತ ಹುಲಿ ದಾಳಿಗೆ ಸಾವನ್ನಪ್ಪಿದ್ದು, ಕಾಡಂಚನ ಗ್ರಾಮಸ್ಥರು ಹುಲಿ ದಾಳಿ ಆತಂಕದಲ್ಲಿದ್ದಾರೆ. ಸರಗೂರು ತಾಲ್ಲೂಕಿನ ಹೆಗ್ಗೂಡಿಲು ಗ್ರಾಮದ ರೈತ ದಂಡನಾಯಕ 52 ಹುಲಿ ದಾಳಿಗೆ ಬಲಿಯಾಗಿರುವ ದುರ್ದೈವಿ.

ಹೆಗ್ಗೂಡಿಲು ಗ್ರಾಮದ ರೈತ ದಂಡನಾಯಕ ಜಮೀನಿಗೆ ತೆರಳುತ್ತಿದ್ದ ವೇಳೆ ಹುಲಿ ದಾಳಿ ನಡೆಸಿ ಸುಮಾರು ಅರ್ಧ ಕಿಲೋಮೀಟರ್ ದೂರ ಎಳೆದೊಯ್ದಿದೆ‌. ರೈತನ ತೊಡೆ, ತಲೆ ಭಾಗ ತಿಂದು ಹಾಕಿದೆ. ನುಗು ವನ್ಯಜೀವಿಧಾಮ ವ್ಯಾಪ್ತಿಯ ಅರಣ್ಯದಲ್ಲಿ ಘಟನೆ ನಡೆದಿದ್ದು, ಸುತ್ತಮುತ್ತಲ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.

ಹುಲಿ ದಾಳಿ ನಡೆದ ಹೆಗ್ಗೂಡಿಲು ಗ್ರಾಮಕ್ಕೆ ಅರಣ್ಯಾಧಿಕಾರಿಗಳು, ಸಿಬ್ಬಂದಿ ತೆರಳಿದಾಗ ಹುಲಿ ದಾಳಿಯಿಂದ ರೊಚ್ಚಿಗೆದ್ದಿದ್ದ ಗ್ರಾಮಸ್ಥರು ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ್ರು. ಅಧಿಕಾರಿಗಳು ರೈತರ ನಡುವೆ ಮಾತಿನ ಚಕಮಕಿ, ತಳ್ಳಾಟ ನೂಕಾಟವೂ ಆಯ್ತು. ಈ ವೇಳೆ RFO ಅಮೃತಾ ಮೇಲೆ ಗ್ರಾಮಸ್ಥರು ಹಲ್ಲೆ ಮಾಡಿದ್ದಾರೆ ಅನ್ನೋ ಆರೋಪವೂ ಕೇಳಿ ಬಂತು. ನಂತರ ಆರ್ಎಫ್ಓ ಅಮೃತಾರನ್ನ ಸಿಬ್ಬಂದಿ ಸ್ಥಳದಿಂದ ಕರೆದೊಯ್ದರು. ಹುಲಿ ದಾಳಿ ತಡೆಯಲು ಅರಣ್ಯ ಇಲಾಖೆ ವಿಫಲರಾಗಿದ್ದಾರೆ ಅಂತಾ ಆಕ್ರೋಶಗೊಂಡ ರೈತರು ಹುಲಿ ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ.

ಒಂದು ತಿಂಗಳು, ನಾಲ್ವರ ಮೇಲೆ ಹುಲಿ ದಾಳಿ!

ಇನ್ನು ಜಿಲ್ಲೆಯಲ್ಲಿ ಒಂದು ತಿಂಗಳ ಅಂತರದಲ್ಲಿ ಇದುವರೆಗೂ ನಾಲ್ಕು ಜನ ರೈತರ ಮೇಲೆ ಹುಲಿ ದಾಳಿ ನಡೆದಿದ್ದು, ಮೂವರು ಬಲಿಯಾಗಿ ಮತ್ತೊಬ್ಬ ರೈತ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಹೆಚ್.ಡಿ.ಕೋಟೆ, ಸರಗೂರು ಹಾಗೂ ನಂಜನಗೂಡು ತಾಲೂಕುಗಳಲ್ಲಿ ಹುಲಿ ದಾಳಿ ಹೆಚ್ಚಾಗಿರೋದ್ರಿಂದ ಅರಣ್ಯ ಇಲಾಖೆಯವರು ನಿರಂತರವಾಗಿ ರೈತರ ಹತ್ಯೆ ಮಾಡುತ್ತಿದ್ದಾರೆ‌ ಅಂತಾ ರೈತರು ಆಕ್ರೋಶ ಹೊರಹಾಕಿದ್ರು. ಹುಲಿಗಳ ಸೆರೆ ಹಿಡಿಯುವ ಕೆಲಸ ಆಗುತ್ತಿಲ್ಲ. ಹುಲಿಗಳನ್ನ ಹಿಡಿಯಲು ಆಗದಿದ್ದರೆ ರಾಜೀನಾಮೆ ಕೊಟ್ಟು ಹೋಗಿ. ಅರಣ್ಯ ಪ್ರದೇಶದಂಚಿನಲ್ಲಿ ರೆಸಾರ್ಟ್‌ಗಳಿವೆ. ರಾಜಕಾರಣಿಗಳು ಮೋಜುಮಸ್ತಿ ಮಾಡುತ್ತಿದ್ದಾರೆ. ಮೊದಲು ಇದಕ್ಕೆ ಕಡಿವಾಣ ಹಾಕಿ. ರೈತರ ಮೇಲೆ ದಾಳಿ ಆದಾಗ ಬರೋದನ್ನ ಬಿಟ್ಟು ಮೊದಲೇ ಮುಂಜಾಗ್ರತಾ ಕ್ರಮ ವಹಿಸಿ. ಕಾಡುಪ್ರಾಣಿಗಳ ದಾಳಿಗೆ ಸಾವನ್ನಪ್ಪಿರೋ ರೈತರಿಗೆ 50 ಲಕ್ಷ ಪರಿಹಾರ ಕೊಡಬೇಕು. ಹುಲಿಗಳನ್ನ ಸೆರೆ ಹಿಡಿಯಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಎಚ್ಚರಿಕೆ ನೀಡಿದ್ರು.

ಸಫಾರಿ ಸಂಪೂರ್ಣ ಬಂದ್

ಮತ್ತೊಂದೆಡೆ ಸರಣಿ ಹುಲಿ ದಾಳಿಗೆ ಮೂವರು ರೈತರು ಸಾವನ್ನಪ್ಪಿದ ಘಟನೆಯಿಂದ ಕಡೆಗೂ ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿದೆ. ಅರಣ್ಯ ಪ್ರದೇಶದಲ್ಲಿ ನಡೆಯುತ್ತಿದ್ದ ಸಫಾರಿಯನ್ನ ಸಂಪೂರ್ಣವಾಗಿ ಬಂದ್ ಮಾಡಿದೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ, ಬಂಡೀಪುರ, ನಾಗರಹೊಳೆ‌ ಅರಣ್ಯ ಪ್ರದೇಶದಲ್ಲಿ ಸಫಾರಿ ಜೊತೆಗೆ ಟ್ರಕಿಂಗ್ ಗೂ ಬ್ರೇಕ್ ಹಾಕಿದ್ದು, ಸಫಾರಿ ಚಾಲಕರು ಸೇರಿ ಎಲ್ಲಾ ಸಿಬ್ಬಂದಿ ಹುಲಿ ಸೆರೆ ಕಾರ್ಯಾಚರಣೆಗೆ ನಿಯೋಜನೆ ಆಗುವಂತೆ ಸೂಚನೆ ನೀಡಿದ್ದಾರೆ.

ಒಟ್ಟಾರೆ, ಮೈಸೂರು ಜಿಲ್ಲೆಯಲ್ಲಿ ಜಾನುವಾರುಗಳು ಮತ್ತು ಮನುಷ್ಯರ ಮೇಲೆ ಹುಲಿ ದಾಳಿ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಸಾರ್ವಜನಿಕರು ಆತಂಕಗೊಂಡಿದ್ದಾರೆ. ಇದೀಗ ಸ್ಥಳಕ್ಕಾಗಮಿಸಿರುವ ಆರಣ್ಯ ಆಧಿಕಾರಿಗಳು ಹುಲಿ ಸರೆಗೆ ಬಲೆ ಬೀಸಿದ್ದಾರೆ.

ಕ್ಯಾಮೆರಾಮನ್ ನವೀನ್ ಜೊತೆಗೆ ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಮೈಸೂರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಮತ್ತೊಂದು ಲವ್ ಜಿಹಾದ್ ಕೇಸ್; ಇಸ್ಲಾಂಗೆ ಮತಾಂತರ ಆಗದಿದ್ರೆ ಹುಡುಗಿಯನ್ನ 32 ಪೀಸ್ ಮಾಡೋದಾಗಿ ಬೆದರಿಕೆ!
Justice for Bongo: ಮಗು ಹುಟ್ಟಿದ್ದಕ್ಕೆ ಸಾಕಿ ಸಲುಹಿದ ಶ್ವಾನ ಕೊಂದ್ರಾ ಪಾಪಿಗಳು? ಸಿಲಿಕಾನ್ ಸಿಟಿಯಲ್ಲಿ 'ಬೋಂಗೋ' ಸಾವಿನ ರೋಚಕ ಕಹಾನಿ!