ದಸರಾ ಜ್ಯೋತಿ ಬೆಳಗಿದ ಬಾನು ಮುಷ್ತಾಕ್ ತೆರೆದಿಟ್ಟ ಹಿಂದೂಗಳ ಬಾಂಧವ್ಯದ 'ಬಾಗಿನ'ದ ಕಥನ!

Published : Sep 22, 2025, 11:25 AM IST
Banu Mushtaq Mysuru Dasara

ಸಾರಾಂಶ

ವಿಶ್ವವಿಖ್ಯಾತ ಮೈಸೂರು ದಸರಾವನ್ನು ಬುಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಉದ್ಘಾಟಿಸಿದರು. ಈ ವೇಳೆ ಸೌಹಾರ್ದತೆ, ಮಾನವೀಯ ಮೌಲ್ಯಗಳ ಕುರಿತು ಮಾತನಾಡಿದ ಅವರು, ಹಿಂದೂ-ಮುಸ್ಲಿಂ ಬಾಂಧವ್ಯವನ್ನು ಸಾರುವ ತಮ್ಮ 'ಬಾಗಿನ' ಎಂಬ ಕವನವನ್ನು ವಾಚಿಸಿದರು.

ಮೈಸೂರು (ಸೆ.22): ನಮ್ಮ ಸಂಸ್ಕೃತಿ ನಮ್ಮ ಬೇರು, ಸೌಹಾರ್ಧ ನಮ್ಮ ಶಕ್ತಿ, ಆರ್ಥಿಕತೆಯೇ ನಮ್ಮ ರೆಕ್ಕೆ, ವಿಶ್ವಕ್ಕೆ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಔದ್ಯೋಗಿಕವಾಗಿ ಭಾರತದ ನೆಲೆಯಲ್ಲಿ ನಮ್ಮ ಯುವ ಶಕ್ತಿಯೊಂದಿಗೆ ಸೇರಿ ಮಾನವೀಯ ಮೌಲ್ಯಗಳ ಪ್ರೀತಿಯ ಹೊಸ ಸಮಾಜವನ್ನು ಕಟ್ಟೋಣ. ಅದರಲ್ಲಿ ಎಲ್ಲರಿಗೂ ಸಮಪಾಲು, ಸಮಬಾಳು ಇರಲಿ. ನಮ್ಮ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಒಂದು ಚಿಗುರು ನಮ್ಮ ಎದೆಯಲ್ಲಿ ಒಡೆಯಲಿ ಎಂದು ಮೈಸೂರು ದಸರಾ ಉದ್ಘಾಟನೆ ಮಾಡಿದ ಹಾಗೂ ಬುಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಹೇಳಿದರು.

ಮೈಸೂರಿನಲ್ಲಿ ನಡೆದ ಸೋಮವಾರ ನಡೆದ ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ನಂತರ ಮಾತನಾಡಿದ ಅವರು, ಚಾಮುಂಡೇಶ್ವರಿ ಎಂದರೆ ಹೆಣ್ಣಿನಲ್ಲಿರುವ ಅಪಾರ ಶಕ್ತಿ. ಸ್ತ್ರೀತ್ವ ಎಂದರೆ ಕೇವಲ ಮೃದುತ್ವ, ತಾಳ್ಮೆ ಎಂದಲ್ಲ ಅಪಾರ ಗಟ್ಟಿ ಬದುಕಿನ ಹೋರಾಟ ಎಂಬುದನ್ನು ನಾವು ಅರಿಯಬೇಕಿದೆ. ಮೈಸೂರಿನ ಇಡೀ ಒಡೆಯರ್ ಅರಸೊತ್ತಿಗೆಯಲ್ಲಿ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಔದಾರ್ಯಕ್ಕೆ ಮಾದರಿಯಾಗಿದ್ದರು. ಸಂಪತ್ತು ಹಂಚಿಕೊಂಡರೆ ವೃದ್ಧಿಯಾಗುತ್ತದೆ, ಶಕ್ತಿಯನ್ನು ಹಂಚಿಕೊಂಡಾಗ ಮಾತ್ರ ದೀರ್ಘಕಾಲ ಬದುಕುತ್ತದೆ ಎಂದು ಹೇಳಿದ್ದರು. ನಾನು ಒಬ್ಬ ಸಾಹಿತಿ, ಕವಯಿತ್ರಿ ನನ್ನ ಕವನದ ಮೂಲಕ ಒಂದು ಸಂದೇಶ ನಿಮ್ಮ ಮುಂದೆ ಇಡುತ್ತೇನೆ ಎಂದರು.

ನಾನು ಇದುವರೆಗೂ ಸುಮಾರು ಕಾರ್ಯಕ್ರಮ ನಡೆಸಿದ್ದೇನೆ, ಆಹ್ವಾನಿತಳಾಗಿದ್ದೇನೆ ನೂರಾರು ಸಾರಿ ದೀಪಗಳನ್ನು ಬೆಳಗಿಸಿದ್ದೇನೆ, ನೂರಾರು ಸಾರಿ ಪುಷ್ಪಾರ್ಚನೆ ಮಾಡಿದ್ದೇನೆ, ಮಂಗಳಾರತಿ ಕೂಡ ಸ್ವೀಕರಿಸಿದ್ದೇನೆ. ನಾಳೆ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಬುಕರ್ ಬಾನು ಬದುಕು ಬರಹ ಎಂಬ ಪುಸ್ತಕ ಪ್ರಕಟವಾಗುತ್ತಿದೆ. ಅದರಲ್ಲಿ ನನ್ನ ಆತ್ಮಕಥೆಯ ಒಂದು ಭಾಗ ಪ್ರಕಟವಾಗಲಿದೆ. ಅದರಲ್ಲಿ ನನ್ನ ಮತ್ತು ಹಿಂದು ಧರ್ಮದೊಂದಿಗಿನ ಸಂಬಂಧ, ಬಾಂಧವ್ಯ ಹೇಗಿದೆ ಎಂಬುದನ್ನು ನಾನು ಬರೆದಿದ್ದೇನೆ ಎಂದು ತಿಳಿಸಿದರು.

ಒಬ್ಬ ಮುಸ್ಲಿಂ ಹೆಣ್ಣುಮಗಳು ಬಾಗಿನ ಪಡೆದಾಗ ಅವರ ಮನಸ್ಸಿನಲ್ಲಿ ಉತ್ಪನ್ನವಾಗುವ ಭಾವನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಎಂದು ಈ ಕವನ ವಾಚನ ಮಾಡಿದರು.

ಕವನ ಶೀರ್ಷಿಕೆ ಬಾಗಿನ

ಮೊರ ಕೇರುತ್ತೆ ಅದು, ಇಲ್ಲಿ ಅಲ್ಲಿ ಮತ್ತು ಎಲ್ಲೆಲ್ಲೂ..
ಅಂದು ಸೇವಂತಿಗೆ ಹೂವು ಚೆಲ್ಲನೆ ನಗು ಚಿಮುಕಿಸುತ್ತಿತ್ತು
ದಿನ ತುಂಬಿದ್ದ ಮೋಡ ಎರಡೂ ಕೈಯಲ್ಲಿ ಸೊಂಟ ಹಿಡಿದು ಬೆವರಿನಿಂದ ತೊಯ್ದು ಉಸ್‌ ಎಂದಾಗ
ಆಕಾಶ ಭೂಮಿ ಮತ್ತು ಸಮಸ್ತವೂ ಗಲ ಗಲ ಎಂದು ಚಿಮ್ಮುತ್ತಿದ್ದವು.
ಅಸೂಯೆಯಿಂದ ಸೂರ್ಯ ಕೆಂಪಾಗಿದ್ದ, ನನಗಿಲ್ಲದ ವಾಸ್ಯದಲ್ಲಿ ಇವಳೇಗೆ ಮಿನುಗುತ್ತಿದ್ದಾಳೆ ನೋಡಿ ಎಂದು
ಅದೇನೋ ಎಂದಿನ ದಿನವಾಗಿರಲಿಲ್ಲ, ಸಂಭ್ರಮಕ್ಕೆ ದೊಡ್ಡ ಮುಳ್ಳು, ಚಿಕ್ಕಮುಳ್ಳು ಅಂಟಿ ಜೂಜಾಟವಾಡುತ್ತಿದ್ದವಲ್ಲ
ಅಚ್ಚ ಕೃಷಿಕ ಬಸವರಾಜಣ್ಣನ ಎಡ ಹೆಗಲಿನ ವಲ್ಲಿಯೊಡನೆ ಮಣ್ಣಿನ ಗುಣ ಹೀರಿದ್ದ ನಾನು
ಬಾನುವಿನಿಂದ ಜಯ ಆಗಿದ್ದು ಹೀಗೆ..
ಯಾವುದೇ ಗೋಡೆಗಳಿರಲಿಲ್ಲ ಬಿಡಿ, ಪ್ರೀತಿಯ ಒಳ ಒರತೆಗಳು ಜಿನುಗುವುದು ಹೀಗೆಯೇ ನೋಡಿ
ಸಾಬರ ಮಗಳು, ಸಾಬರ ಸೊಸೆಗೆ ಜೀವದುಂಬಿದ ಹಸಿ ಮಣ್ಣಿನ ಬಾಗಿನ
ಜಯಾ ನಡಿಯವ್ವ ಹಬ್ಬಕ್ಕೆ, ಅರಿಶಿಣದ ಎಲೆ, ಕಡುಬು, ಗಂಡನ ಮನೆಯ ಕಸೂತಿ ನೆರಿಗೆಗಳ ಸದಾ ಚಿಮ್ಮುತ್ತಿದ್ದರೂ
ಎದೆಯಾಳದಲ್ಲಿ ಪಿಸುಗುಟ್ಟಿದ್ದು ಆ.. ಎಲೆಹಸಿರು ವಾತ್ಸಲ್ಯವ ನೇಯ್ದ ಸಾದಾ ಸೀರೆ
ಮಡಿಲಲ್ಲಿ ತುಂಬಿಸಿ ಕವುಚಿದ ಮರವ, ಮರಳುವ ದಾರಿಯಲ್ಲಿ ನಿಂತು
ಅರಳಿ ಮರವ ಕೇಳಿದ್ದೆ, ಹೇಗೆ ಕೊಂಡೊಯ್ಯಲಿ ಇದನ್ನು ನನ್ನತ್ತೆ ಮನೆಗೆ
ಅರಿಶಿಣ ಕುಂಕುಮದೊಡನೆ, ಹೇಗೆ ಬಿಡಿಸಲು ಬಾಂಧವ್ಯದ ಎಳೆಗಳ ರಂಗೋಲಿಯನ್ನು ಸಾಬರ ಮನೆ ಬಾಗಿಲಲ್ಲಿ,
ಕೊಡಲೇ ಯಾರಿಗಾದರೂ ದಾರಿ ಹೋಕರಿಗೆ, ಕೊಡಬಹುದೇ ಯಾರಿಗಾದರೂ ಆ ಒಲವನ್ನು, ಆ ಬಲವನ್ನು, ಆ ಪಿತೃ ವಾಯತ್ಸಲ್ಯದ ಮಾತೃತ್ವವನ್ನು,
ನೆನೆಸಿಕೊಂಡಾಗ ಈಗಲೂ ಕಣ್ಣಂಚಿನಲ್ಲಿ ತೇವ, ಮೊರದ ತುಂಬಾ ಬದುಕಿನ ಪಸೆಯ ಹಸೆಯ ಬರೆದ ಬೇಸಿಗೆ ಹಕ್ಕಿಗೆ ವಿದಾಯ..
ಬಸವರಾಜಣ್ಣ ನೀವು ಕೊಟ್ಟ ಮೊರ ಹೇಳುತ್ತೆ, ಮಿಡಿಯುತ್ತೆ, ಸಹಸ್ರ ಆರೋಪಗಳ ಎದುರು ಒಂಟಿಯಾಗಿ ನಿಲ್ಲುತ್ತದೆ..
ದ್ವೇಷದ ಎಲ್ಲ ಭಾಷೆಗಳನ್ನು ಕವುಚಿ ಹಾಕುತ್ತೆ, ಮುಂಜಾವಿನ ಹೊಂಬೆಳಕಿನೊಂದಿಗೆ ಪ್ರೀತಿಯ ನಿರ್ಮಲ ಅಲೆಗಳು ಮೊರದ ತುಂಬಾ ತೂರುತ್ತಿರುತ್ತವೆ...

ಎಷ್ಟೇ ಸವಾಲುಗಳು ಬಂದರೂ ಕೂಡ ದಿಟ್ಟವಾಗಿ ನಿಂತು ನನ್ನನ್ನು ಆಹ್ವಾನಿಸಿ, ಈ ಕಾರ್ಯಕ್ರಮದಲ್ಲೊ ನಾನು ಭಾಗವಹಿಸಲಿಕ್ಕೆ ಕರ್ನಾಟಕ ಸರ್ಕಾರದ ಪರವಾಗಿ ನನಗೆ ಆಹ್ವಾನವನ್ನು ನೀಡಿ, ನೈತಿಕವಾದಂತಹ ಬೆಂಬಲವನ್ನು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎನ್ನುವ ಮೂಲಕ ತಮ್ಮ ಭಾಷಣ ಮುಗಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದರ್ಶನ್ ಪತ್ನಿ ವಿಜಯಲಕ್ಷ್ಮೀ ನಿಂದನೆ ಪ್ರಕರಣ: ನಕಲಿ ಖಾತೆಗಳ ಮಾಹಿತಿ ಕೋರಿ ಮೆಟಾಗೆ ಸಿಸಿಬಿ ಪತ್ರ
‘ಹೇಟ್‌’ಬುಕ್‌ ಕಮೆಂಟ್‌ಗಳಿಗೆ ದ್ವೇಷದ ಬಿಲ್‌ ಕಡಿವಾಣ?