ಹಿರೇಮಗಳೂರು ಅರ್ಚಕ ಕಣ್ಣನ್‌ಗೆ ನೀಡಿದ್ದ ನೋಟಿಸ್ ವಾಪಸಾತಿಗೆ ಆದೇಶಿಸಿದ ಸಚಿವ ರಾಮಲಿಂಗಾರೆಡ್ಡಿ!

By Sathish Kumar KHFirst Published Jan 23, 2024, 5:38 PM IST
Highlights

ಚಿಕ್ಕಮಗಳೂರಿನ ಹಿರೇಮಗಳೂರು ಕಣ್ಣನ್ ಅವರಿಗೆ 10 ವರ್ಷದ ತಸ್ತಿಕ್ ಹಣ ವಾಪಸ್ ನೀಡುವಂತೆ ಕೊಟ್ಟಿದ್ದ ನೋಟಿಸ್ ವಾಪಸ್ ಪಡೆಯುವಂತೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಆದೇಶ ಹೊರಡಿಸಿದ್ದಾರೆ. 

ಚಿಕ್ಕಮಗಳೂರು (ಜ.23): ರಾಜ್ಯದಲ್ಲಿ ಅರ್ಚಕರಿಗೆ ನೀಡಲಾಗಿದ್ದ ಸಂಬಳವನ್ನು ವಾಪಸ್ ನೀಡುವಂತೆ ಜಾರಿಗೊಳಿಸಲಾಗಿದ್ದ ನೋಟಿಸ್ ಅನ್ನು ವಾಪಸ್ ಪಡೆದುಕೊಳ್ಳುವಂತೆ ಮುಜರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರು ಚಿಕ್ಕಮಗಳೂರು ಜಿಲ್ಲಾಡಳಿತಕ್ಕೆ ಆದೇಶ ನೀಡಿದ್ದಾರೆ.

ಚಿಕ್ಕಮಗಳೂರು ತಾಲೂಕಿನ ಹಿರೇಮಗಳೂರು ಕೋದಂಡರಾಮಸ್ವಾಮಿ ದೇವಾಲಯದ ಅರ್ಚಕರಾಗಿರುವ ಹಿರೇಮಗಳೂರು ಕಣ್ಣನ್‌ ಅವರು ಸಂಸ್ಕೃತವಲ್ಲದೇ ಕನ್ನಡದಲ್ಲಿಯೇ ಶ್ಲೋಕಗಳನ್ನು ಹೇಳುವ ಮೂಲಕ ರಾಜ್ಯದಲ್ಲಿಯೇ ಪ್ರಸಿದ್ಧಿಯಾಗಿದ್ದಾರೆ. ಆದರೆ, ಕಣ್ಣನ್ ಅವರಿಗೆ ಚಿಕ್ಕಮಗಳೂರು ತಾಲೂಕು ಆಡಳಿತದಿಂದ ನಿಮ್ಮ ದೇವಾಲಯದ ಆದಾಯ ಕಡಿಮೆಯಿದ್ದರೂ ನಿಮಗೆ ಮಾಸಿಕ 7,500 ರೂ.ಗಳಂತೆ ತಸ್ತಿಕ್‌ ಗೌರವಧನ ನೀಡಲಾಗುತ್ತಿದೆ. ನಿಮ್ಮ ದೇವಾಲಯದ ಆದಾಯ ಕಡಿಮೆಯಿದ್ದರೂ ನಿಮಗೆ ಹೆಚ್ಚಿನ ತಸ್ತಿಕ್‌ ನೀಡಲಾಗಿದೆ. ಆದ್ದರಿಂದ ನೀವು ಕಳೆದ 10 ವರ್ಷಗಳಲ್ಲಿ ಮಾಸಿಕವಾಗಿ ಪಡೆದ ಹಣದಲ್ಲಿ ತಲಾ 4,500 ರೂ.ಗಳಂತೆ ಒಟ್ಟು 4,74 ಸಾವಿರ ರೂ. ಹಣವನ್ನು ಸರ್ಕಾರಕ್ಕೆ ಹಿಂದಿರುಗಿಸಬೇಕು ಎಂದು ನೋಟಿಸ್ ಜಾರಿ ಮಾಡಲಾಗಿತ್ತು.

ಅರ್ಚಕರಿಂದ 10 ವರ್ಷದ ಸಂಬಳ ವಾಪಸ್ ಕೇಳಿದ ಸರ್ಕಾರ: ಎಲ್ಲರಿಗೂ ನೋಟಿಸ್ ಜಾರಿ

ಹಿರೇಮಗಳೂರಿನ ಅರ್ಚಕರಿಗೆ ವೇತನ ತಡೆ ಹಿಡಿದು ನೋಟಿಸ್ ಕೊಟ್ಟ ವಿಚಾರದ ಬಗ್ಗೆ ಏಷ್ಯಾನೆಟ್ ಸುವರ್ಣನ್ಯೂಸ್‌ನೊಂದಿಗೆ ಮಾತನಾಡಿದ ಮುಜರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರು, ಹಿರೇಮಗಳೂರು ಕಣ್ಣನ್ ಅವರಿಗೆ ನೀಡಿರುವ ನೋಟಿಸ್ ವಾಪಾಸ್ ಪಡೆಯಲು ಸೂಚನೆ ನೀಡಿದ್ದಾರೆ. ಈ ಘಟನೆಯಲ್ಲಿ ಹಿರೇಮಗಳೂರು ಕಣ್ಣನ್ ಹೆಚ್ಚು ಹಣ ಪಡೆದಿದ್ದು ಅವರ ತಪ್ಪಲ್ಲ. ಇದು ಸ್ಥಳೀಯ ತಹಶೀಲ್ದಾರರ ಎಡವಟ್ಟು ಆಗಿದೆ. ಆದ್ದರಿಂದ ಕಣ್ಣನ್‌ ಅವರಿಗೆ ನೀಡಲಾದ ನೋಟಿಸ್ ವಾಪಾಸ್ ಪಡೆಯಲು ಆಯುಕ್ತರಿಗೆ ಹೇಳಿದ್ದೇನೆ ಎಂದರು.

ಪ್ರತಿವರ್ಷ ದೇವಸ್ಥಾನಕ್ಕೆ ತಾಸ್ತಿಕ್ ಹಣ ಅಂತ ಕೊಡ್ತಾರೆ. ಮೊದ್ಲು 12 ಸಾವಿರ ರೂ. ಇತ್ತು. ಆ ನಂತರ 24 ಸಾವಿರ ರೂ. ಹಣವನ್ನು ಮಾಡಿದರು. 2012ರವರೆಗೂ ವಾರ್ಷಿಕ 24 ಸಾವಿರ ರೂ. ತಸ್ತಿಕ್ ಹಣ ಕೊಡಲಾಗುತ್ತಿತ್ತು. ಆ ಬಳಿಕ ಆ ಹಣದ ಮೊತ್ತವನ್ನು ಹೆಚ್ಚಳ ಮಾಡಲಾಗಿದೆ. ಆದರೆ, ಸ್ಥಳೀಯ ತಹಶೀಲ್ದಾರರು ವಾರ್ಷಿಕ 24 ಸಾವಿರ ರೂ. ತಸ್ತಿಕ್ ಹಣ ಕೊಡುವ ಬದಲಾಗಿ ವಾರ್ಷಿಕ 90 ಸಾವಿರ ರೂ. (ಮಾಸಿಕ 7,500 ರೂ.) ಹಣವನ್ನು ಕೊಟ್ಟು ಸಮಸ್ಯೆ ಮಾಡಿದ್ದಾರೆ. ಇದರಿಂದ ಹಣವನ್ನು ವಾಪಸ್ ನೀಡುವಂತೆ ನೋಟಿಸ್‌ ನೀಡಲಾಗಿದೆ ಎಂದು ವಿವರಿಸಿದರು.

ರಾಮ ಮಂದಿರದಲ್ಲಿ 3 ಲಕ್ಷ ಭಕ್ತರಿಂದ ಬಾಲರಾಮನ ದರ್ಶನ, ದಾಖಲೆ ಬರೆದ ಅಯೋಧ್ಯೆ!

ಸರ್ಕಾರದ ಆದೇಶವನ್ನು ಮೀರಿ ತಹಸೀಲ್ದಾರರು ಹಿರೇಮಗಳೂರು ಕಣ್ಣನ್ ಅವರಿಗೆ ಕಳೆದ 10 ವರ್ಷಗಳಿಂದ ವಾರ್ಷಿಕ 24 ಸಾವಿರ ರೂ. ಬದಲಾಗಿ, 90 ಸಾವಿರ ರೂ. ಹಣವನ್ನು ನೀಡಿ ಸರ್ಕಾರಕ್ಕೆ ನಷ್ಟವನ್ನು ಮಾಡಿದ್ದಾರೆ. ಆದ್ದರಿಂದ ಈ ನಷ್ಟವನ್ನು ತಹಶೀಲ್ದಾರ್ ಅವರಿಂದ ಹಣ ವಾಪಾಸ್ ಪಡೆಯಬೇಕು. ಯಾವುದೇ ಕಾರಣಕ್ಕೂ ಕಣ್ಣನ್ ಅವರಿಂದ ಹಣ ವಾಪಾಸ್ ಪಡೆಯೋದಿಲ್ಲ. ನಮ್ಮಲ್ಲಿರುವ ಸೆಂಟ್ರಲ್ ಫಂಡ್ ನಿಂದ ಹಣ ನೀಡಲಾಗುತ್ತದೆ. ಹಿರೇಮಗಳೂರು ಕಣ್ಣನ್ ಈ ಬಗ್ಗೆ ಚಿಂತೆ ಮಾಡ್ಬೇಕಿಲ್ಲ. ಬೇರೆ ಯಾವುದೇ ಮುಜರಾಯಿ ದೇವಾಲಯದಲ್ಲಿ ಇಂಥ ಸಮಸ್ಯೆ ಆಗಿಲ್ಲ. ಈ ಕೂಡಲೆ ನಾನು ಸಮಸ್ಯೆ ಬಗೆಹರಿಸುತ್ತೇನೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ಇದರ ಬೆನ್ನಲ್ಲಿಯೇ ಮುಜರಾಯಿ ಇಲಾಖೆ ಆಯುಕ್ತರಿಗೆ ಪತ್ರ ಬರೆದು ಆದೇಶ ನೀಡಿದ್ದಾರೆ.

click me!