ರಾಜ್ಯ ಸರ್ಕಾರವು ಮುಜರಾಯಿ ಇಲಾಖೆಗೆ 10 ಕೋಟಿ ರೂ. ವೆಚ್ಚದಲ್ಲಿ ಸ್ವಂತ ಕಟ್ಟಡ ನಿರ್ಮಿಸಲು ಮುಂದಾಗಿದೆ. ಬೆಂಗಳೂರಿನಲ್ಲಿ ಹೊಯ್ಸಳ ಶೈಲಿಯ ಕಟ್ಟಡ ನಿರ್ಮಾಣವಾಗಲಿದ್ದು, ಮುಂಭಾಗವು ದೇವಾಲಯದ ಮಾದರಿಯಲ್ಲಿ ಇರಲಿದೆ.
ಬೆಂಗಳೂರು (ನ.29): ರಾಜ್ಯದಲ್ಲಿ ನೂರಾರು ದೇವಸ್ಥಾನಗಳಿಂದ ಹಿಂದೂಗಳು ನೀಡಿದ ದೇಣಿಗೆಯ ಕೋಟಿ ಕೋಟಿ ಹಣವನ್ನು ಸಂಗ್ರಹ ಮಾಡುತ್ತಿದ್ದ ಸರ್ಕಾರಕ್ಕೆ ಕೊನೆಗೂ ಎಚ್ಚರಿಕೆ ಆಗಿದೆ. ಇದೀಗ 10 ಕೋಟಿ ರೂ. ವೆಚ್ಚದಲ್ಲಿ ಮುಜರಾಯಿ ಇಲಾಖೆಗೆ ಸ್ವಂತ ಕಟ್ಟಡವನ್ನು ನಿರ್ಮಾಣ ಮಾಡಲು ಮುಂದಾಗಿದ್ದು, ಕಟ್ಟಡ ಮುಂಭಾಗವನ್ನು ದೇಗುಲದ ಮಾದರಿಯನ್ನು ನಿರ್ಮಾಣ ಮಾಡುವುದಕ್ಕೆ ನೀಲನಕ್ಷೆಯನ್ನು ಸಿದ್ಧಪಡಿಸಿದೆ.
ಹೌದು, ರಾಜ್ಯದಲ್ಲಿ ನೂರಾರು ದೇವಾಲಯಗಳಿದ್ದು, ಭಕ್ತರು ದೇಣಿಗೆ ಹಾಕುವ ಕೋಟಿ ಕೋಟಿ ಹಣವನ್ನು ಸರ್ಕಾರ ತನ್ನ ಸುಪರ್ದಿಗೆ ಪಡೆಯುತ್ತಿದೆ. ದೇವಾಲಯಗಳನ್ನು ಆದಾಯದ ಆಧಾರದಲ್ಲಿ ವಿವಿಧ ವರ್ಗಗಳನ್ನಾಗಿ ಮಾಡಿ ಪೂಜಾರಿಗಳಿಗೆ ಮಾಸಿಕ ವೇತನ ನಿಡಲಾಗುತ್ತದೆ. ಆದರೆ, ಹಿಂದೂ ದೇಗುಲಗಳ ಆದಾಯ ಪಡೆಯುತ್ತಿದ್ದ ಸರ್ಕಾರದ ಮುಜರಾಯಿ ಇಲಾಖೆಗೆ ಈವರೆಗೂ ಸ್ವಂತ ಕಟ್ಟಡವೇ ಇರಲಿಲ್ಲ. ಈ ಬಗ್ಗೆ ಎಚ್ಚೆತ್ತುಕೊಂಡ ಸರ್ಕಾರ ಈಗ ಮುಜರಾಯಿ ಇಲಾಖೆಗೆ ಸ್ವಂತ ಕಟ್ಟಡವನ್ನು ನಿರ್ಮಾಣ ಮಾಡಲು ಮುಂದಾಗಿದೆ. ರಾಜ್ಯದ ಆಡಳಿತ ಕೇಂದ್ರ ಬೆಂಗಳೂರಿನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಮುಜರಾಯಿ ಇಲಾಖೆ ಕಟ್ಟಡ ನಿರ್ಮಾಣಕ್ಕೆ ನೀಲನಕ್ಷೆ ಸಿದ್ಧಪಡಿಸಲಾಗಿದೆ.
ಬೆಂಗಳೂರಿನ ವಿಧಾನಸೌಧದ ತುಸು ದೂರದಲ್ಲಿರುವ ಎಂ.ಎಸ್. ಬಿಲ್ಡಿಂಗ್ ಸಮೀಪದಲ್ಲಿನ ರಾಮಾಂಜನೇಯ ದೇವಸ್ಥಾನದ ಬಳಿ ಮುಜರಾಯಿ ಇಲಾಖೆಯ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಈ ಜಾಗವು ಮುಜರಾಯಿ ಇಲಾಖೆಗೆ ಸೇರಿದ್ದು, ಇಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದೆ. ರಾಮಾಂಜನೇಯ ದೇವಸ್ಥಾನದ ಬಳಿ 20 ಗುಂಟೆ ಜಾಗದಲ್ಲಿ ಜಾಗದಲ್ಲಿ ಹೊಯ್ಸಳ ಶೈಲಿಯಲ್ಲಿ ಧಾರ್ಮಿಕ ಸೌಧ ನಿರ್ಮಾಣ ಮಾಡಲಾಗುತ್ತಿದೆ. ಈ ಕಟ್ಟಡದ ಮುಂಭಾಗ ದೇವಾಲಯದ ಮಾದರಿಯಲ್ಲಿ ಕಂಬದ ಮಂಟಪವನ್ನು ನಿರ್ಮಾಣ ಮಾಡಲಾಗುತ್ತದೆ. ಉಳಿದಂತೆ ಆಧುನಿಕ ಶೈಲಿಯಲ್ಲಿ ಕಟ್ಟಡ ನಿರ್ಮಿಸಲಾಗುತ್ತದೆ.
ಇದನ್ನೂ ಓದಿ: ಚಂದ್ರಶೇಖರ ಸ್ವಾಮೀಜಿ ಮುಟ್ಟಲು ಬಂದರೆ ಒಕ್ಕಲಿಗ ಸಮುದಾಯ ತಿರುಗಿ ಬೀಳಲಿದೆ: ಆರ್.ಅಶೋಕ ಎಚ್ಚರಿಕೆ
ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಧಾರ್ಮಿಕ ಸೌಧ ನಿರ್ಮಾಣಕ್ಕೆ ತಿರ್ಮಾನಿಸಲಾಗಿದೆ. ಶೀಘ್ರವೇ ಕಟ್ಟಡದ ಕಾಮಗಾರಿ ಆರಂಭಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಶಾಸಕ ಯತ್ನಾಳ್ ಹಿಂದೂ ಹುಲಿಯಲ್ಲ, ಹಿಂದೂ ಇಲಿ: ರೇಣುಕಾಚಾರ್ಯ ವಾಗ್ದಾಳಿ