
ಬೆಂಗಳೂರು (ನ.29): ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅವರನ್ನು ಸರ್ಕಾರ ಮುಟ್ಟಲು ಬಂದರೆ ಇಡೀ ಒಕ್ಕಲಿಗ ಸಮುದಾಯ ತಿರುಗಿ ಬೀಳಲಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಒಕ್ಕಲಿಗರ ಮಠಕ್ಕೆ ಭೇಟಿ ನೀಡಿ, ಸ್ವಾಮೀಜಿಯವರನ್ನ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಸ್ವಾಮೀಜಿ ಕುಮಾರ ಚಂದ್ರಶೇಖರನಾಥ ಅವರಿಗೆ ಧೈರ್ಯ ಹೇಳಿದ್ದೇವೆ ಹಾಗೂ ಒಕ್ಕಲಿಗ ಸಮಾಜದೊಂದಿಗೆ ನಾವಿದ್ದೇವೆ ಎಂದು ಹೇಳಿದ್ದೇವೆ. ವಕ್ಫ್ ಮಂಡಳಿ ಹಿಂದೂಗಳ, ಧಾರ್ಮಿಕ ಸಂಸ್ಥೆಗಳ ಜಮೀನುಗಳನ್ನು ನುಂಗುತ್ತಿದೆ. ಪ್ರತಿ ಜಿಲ್ಲೆಯಲ್ಲಿ ಪಹಣಿ ಬದಲಿಸಲಾಗುತ್ತಿದೆ. ಹಿಂದೂಗಳಿಗೆ ಗುತ್ತಿರುವ ಅನ್ಯಾಯದ ವಿರುದ್ಧ ಅವರು ಮಾತನಾಡಿದ್ದು, ಬಳಿಕ ಅದರಲ್ಲಿ ತಪ್ಪಿದ್ದರೆ ಕ್ಷಮೆ ಕೇಳುವುದಾಗಿ ಹೇಳಿದ್ದಾರೆ. ಇಷ್ಟಾದರೂ ಒಬ್ಬ ಮತಾಂಧ ದೂರು ನೀಡಿದ್ದಕ್ಕೆ ಅದರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದರೆ ಸರ್ಕಾರಕ್ಕೆ ಎಷ್ಟು ಧೈರ್ಯ ಇದೆ ಎಂದು ಪ್ರಶ್ನಿಸಿದರು.
ಅಸಾದುದ್ಧೀನ್ ಓವೈಸಿ ದೇಶಕ್ಕೆ ಬೆದರಿಕೆ ಹಾಕುತ್ತಾರೆ. ಆಂಧ್ರ ಪ್ರದೇಶದಲ್ಲಿ ಮೌಲ್ವಿ ಒಬ್ಬ ಸರ್ಕಾರಕ್ಕೆ ಬೆದರಿಕೆ ಹಾಕುತ್ತಾನೆ. ಸುಪ್ರೀಂ ಕೋರ್ಟ್ ಆದೇಶಕ್ಕೆ ಬೆಲೆ ಕೊಡಲ್ಲ ಎಂದು ಕೆಲವರು ಹೇಳುತ್ತಾರೆ. ನಮ್ಮ ದೇಶದ ಮಾಜಿ ಪ್ರಧಾನಮಂತ್ರಿ ದೇವೇಗೌಡರು ಮತ್ತು ಅವರ ಕುಟುಂಬವನ್ನೇ ಖರೀದಿ ಮಾಡುತ್ತೇನೆಂದು ಸಚಿವ ಜಮೀರ್ ಅಹಮದ್ ಖಾನ್ ಹೇಳಿದ್ದರು. ಆದರೆ, ಸರ್ಕಾರ ಅದರ ವಿರುದ್ಧ ಕ್ರಮ ವಹಿಸಿಲ್ಲ. ಒಕ್ಕಲಿಗರ ವಿರುದ್ಧ ಕಾಂಗ್ರೆಸ್ ದ್ವೇಷ ಸಾಧಿಸುವುದು ಹೇಯ. ಸರ್ಕಾರ ಸ್ವಾಮೀಜಿಯವರನ್ನು ಮುಟ್ಟುವ ಕೆಲಸ ಮಾಡಿದರೆ ಇಡೀ ಒಕ್ಕಲಿಗ ಸಮುದಾಯ ತಿರುಗಿ ಬೀಳಲಿದೆ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಅನ್ಯಕೋಮಿನ ಕುರಿತ ಹೇಳಿಕೆಗೆ ಕ್ಷಮೆಯಾಚಿಸಿದ ಸ್ವಾಮೀಜಿ ಮೇಲೆ ಎಫ್‌ಐಆರ್ ಖಂಡನೀಯ; ಜೆಡಿಎಸ್
ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಆಡಳಿತ ನಡೆಸುವ ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜೈಕಾರ ಹಾಕಿದವರ ವಿರುದ್ಧ ಸರ್ಕಾರ ಕ್ರಮ ವಹಿಸಿಲ್ಲ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಮಯಕ್ಕೆ ತಕ್ಕಂತೆ ಬದಲಾಗುತ್ತಾರೆ. ಒಮ್ಮೆ ಒಕ್ಕಲಿಗರ ಪರ ಮಾತಾಡಿದರೆ, ಮತ್ತೊಮ್ಮೆ ಭಯೋತ್ಪಾದಕರನ್ನು ತಮ್ಮ ಬ್ರದರ್ ಎನ್ನುತ್ತಾರೆ. ಆದರೆ, ಬಿಜೆಪಿ ಎಂದಿಗೂ ಹಿಂದೂಗಳ ಪರ ನಿಲ್ಲಲಿದೆ. ಸ್ವಾಮೀಜಿಯವರಿಗೆ ತಿಳಿ ಹೇಳುವ ಬದಲು ಪೊಲೀಸರು ನೋಟಿಸ್ ನೀಡಿದ್ದಾರೆ. ಈಗ ಒಕ್ಕಲಿಗ ಸಮುದಾಯ ಎಚ್ಚೆತ್ತುಕೊಳ್ಳಬೇಕಿದೆ. ಒಕ್ಕಲಿಗ ಸಮುದಾಯದ ವಿರುದ್ಧ ಸರ್ಕಾರ ಈ ರೀತಿ ದ್ವೇಷ ಕಾರುತ್ತಿರುವುದನ್ನು ಸಮುದಾಯದ ಜನರು ಗಮನಿಸಬೇಕಿದೆ. ಸ್ವಾಮೀಜಿಗೆ ಕಿರುಕುಳ ನೀಡಿದರೆ ಬಿಜೆಪಿ ಬೀದಿಗಿಳಿದು ಹೋರಾಟ ಮಾಡಲಿದೆ ಎಂದರು.
ಇದನ್ನೂ ಓದಿ: ಶಾಸಕ ಯತ್ನಾಳ್ ಹಿಂದೂ ಹುಲಿಯಲ್ಲ, ಹಿಂದೂ ಇಲಿ: ರೇಣುಕಾಚಾರ್ಯ ವಾಗ್ದಾಳಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ