
ಬೆಂಗಳೂರು (ಅ.18): ಕರ್ನಾಟಕದ ಮಾಜಿ ಡಾನ್ ಮುತ್ತಪ್ಪ ರೈ ಅವರ ನಿಧನದ ನಂತರ ಅವರ ಒಡೆತನದ ಸಾವಿರಾರು ಕೋಟಿ ರೂ. ಮೌಲ್ಯದ ಆಸ್ತಿಯನ್ನು ಭಾಗ ಮಾಡಿ ತನ್ನಿಬ್ಬರು ಮಕ್ಕಳು, 2ನೇ ಹೆಂಡತಿ, ಸಹೋದರನ ಪುತ್ರ ಹಾಗೂ ಮನೆ ಕೆಲಸದವರು ಸೇರಿದಂತೆ ಯಾರಾರಿಗೆ ಎಷ್ಟು ಆಸ್ತಿ ರೇಸಬೇಕು ಎಂದು ಬರೆದಿಟ್ಟಿದ್ರು. ಆದರೆ, ಮುತ್ತಪ್ಪ ರೈ ಮಕ್ಕಳು ಅವರ ತಂದೆಯ 2ನೇ ಹೆಂಡತಿಗೆ ತುಂಡು ಆಸ್ತಿ, ಬಿಡಿಗಾಸನ್ನೂ ನೀಡದೇ ಮನೆಯಿಂದ ಹೊರಗೆ ಹಾಕಿದ್ದರು. ಆದರೆ, ಇದನ್ನು ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿದ್ದ ಅನುರಾಧಾ ರೈ ಅವರಿಗೆ ಇದೀಗ ನೂರಾರು ಕೋಟಿ ರೂ. ಆಸ್ತಿ ಕೈ ಸೇರಿದೆ.
ರಾಜ್ಯದಲ್ಲಿ ಮುತ್ತಪ್ಪ ರೈ ದೊಡ್ಡ ಡಾನ್ ಆಗಿ ಮೆರೆದು ನಂತರ ಕಾನೂನು ಕಟ್ಟಳೆಗಳು ಬಿಗಿಯಾದ ನಂತರ ತನ್ನ ಎಲ್ಲ ಕೃತ್ಯಗಳನ್ನು ನಿಲ್ಲಿಸಿ ಸಾಮಾನ್ಯರಂತೆ ಜೀವನ ಮಾಡುತ್ತಿದ್ದರು. ಆದರೆ, ಮಾಜಿ ಡಾನ್ ಆಗಿವ ಮುನ್ನವೇ ಸಾವಿರಾರು ಕೋಟಿ ರೂ. ಮೌಲ್ಯದ ಆಸ್ತಿ ತನ್ನದಾಗಿಸಿಕೊಂಡಿದ್ದರು. ಆದರೆ, ಮೊದಲ ಹೆಂಡತಿ ಕ್ಯಾನ್ಸರ್‌ನಿಂದ ಬಳಿ ಸಾವನ್ನಪ್ಪಿದ್ದರು. ಇದಾದ ನಂತರ ಮುತ್ತಪ್ಪ ರೈನನ್ನು ಮಕ್ಕಳು ಚೆನ್ನಾಗಿ ನೋಡಿಕೊಳ್ಳದ ಕಾರಣ ತನಗೊಬ್ಬ ಹೆಂಡತಿಯ ಅಗತ್ಯವಿದೆ ಎಂದು ಅನುರಾಧ ರೈ ಅವರನ್ನು 2ನೇ ಹೆಂಡತಿಯಾಗಿ ಅಧಿಕೃತವಾಗಿ ಮದುವೆ ಮಾಡಿಕೊಂಡರು. ಅನುರಾಧ ಅವರೊಂದಿಗೆ ಕೆಲ ವರ್ಷಗಳ ಸಂಸಾರ ಮಾಡಿದ್ದ ಮುತ್ತಪ್ಪ ರೈಗೆ ಅನಾರೋಗ್ಯ ಕಾಣಿಸಿಕೊಳ್ಳುತ್ತಿದ್ದಂತೆ ಅವರ ಮಕ್ಕಳು 2ನೇ ಹೆಂಡತಿಗೆ ಆಸ್ತಿ ಕೊಡಬೇಕಾಗಬಹುದು ಎಂದು ಮನೆಯಿಂದ ಹೊರಗೆ ಹಾಕಿದ್ದರು. ಆದರೆ, ಇದನ್ನರಿತ ಮುತ್ತಪ್ಪ ರೈ ವಕೀಲರ ನೇತೃತ್ವದಲ್ಲಿ ವಿಲ್ ಬರೆಸಿಟ್ಟಿ ಹೆಂಡತಿಗೂ ಆಸ್ತಿ ಹಂಚಿಕೆ ಮಾಡಿದ್ದರು.
ಇದನ್ನೂ ಓದಿ: ಹಣಕಾಸು ವಿಚಾರಕ್ಕೆ ಬಾರಲ್ಲಿ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ, ಉದ್ಯಮಿ ನಾಯ್ದು ಫೈಟ್: ಪೊಲೀಸ್ ಠಾಣೆಗೆ ಪರಸ್ಪರ ದೂರು
ಮುತ್ತಪ್ಪ ರೈ ಅವರ ಸಾವಿನ ಬೆನ್ನಲ್ಲಿಯೇ ದೊಡ್ಡ ಮಟ್ಟದಲ್ಲಿ ಅವರ ಮೃತದೇಹ ಮೆರವಣಿಗೆ ಮಾಡಿ ಅಂತ್ಯಕ್ರಿಯೆ ನಡೆಸಲಾಗಿತ್ತು. ಇದಾದ ನಂತರ ಆಸ್ತಿ ಹಂಚಿಕೆ ವಿಚಾರ ಬಂದಾಗ ಮುತ್ತಪ್ಪ ರೈ ಬರೆದಿಟ್ಟ ವಿಲ್ ಅನ್ನು ಮರೆಮಾಚಿದ ಮಕ್ಕಳಾದ ರಾಖಿ ರೈ ಮತ್ತು ರಿಕ್ಕಿ ರೈ ಯಾರಿಗೂ ತುಂಡು ಆಸ್ತಿ ಕೊಡದೇ ತಾವೇ ಇಟ್ಟುಕೊಂಡಿದ್ದರು. ಆದರೆ, ಮುತ್ತಪ್ಪ ರೈ ಅವರನ್ನು ಕಾನೂನಾತ್ಮಕವಾಗಿ ಮದುವೆಯಾಗಿ ಸಂಸಾರ ಮಾಡಿದ್ದರೂ ಯಾವುದೇ ತುಂಡು ಆಸ್ತಿ ಕೊಡದಿದ್ದಕ್ಕೆ ಅನುರಾಧ ರೈ ಅವರು ಕೋರ್ಟ್ ಮೊರೆ ಹೋಗಿದ್ದರು. ಇದೀಗ ಬೆಂಗಳೂರಿನ 19 ನೇ ಸಿಟಿ ಸಿವಿಲ್ ಹಾಗೂ ಸೆಷನ್ಸ್ ಕೋರ್ಟ್ ನಲ್ಲಿ ಆಸ್ತಿ ವಿವಾದ ಇತ್ಯರ್ಥವಾಗಿದೆ.
ಲೋಕ ಅದಾಲತ್ ಮೂಲಕ ಕೋರ್ಟ್‌ನಲ್ಲಿ ಸಂಧಾನ ಮಾಡಿ ಆಸ್ತಿ ವಿವಾದವನ್ನು ಇತ್ಯರ್ಥ ಮಾಡಲಾಗಿದೆ. ಮುತ್ತಪ್ಪ ರೈ ಸಾವಿಗೂ ಮುನ್ನ 2019 ರಲ್ಲಿ ಆಸ್ತಿಗೆ ಸಂಬಂಧಿಸಿದಂತೆ ವಿಲ್ ಮಾಡಿದ್ದರು. ವಕೀಲ ನಾರಾಯಣಸ್ವಾಮಿ ಅವರನ್ನ ವಿಲ್ ಎಕ್ಸಿಕ್ಯೂಟರ್ ಆಗಿ ನೇಮಿಸಿ, ವಕೀಲೆ ಗೀತಾರಾಜ್ ಎಂಬುವವರ ಮೂಲಕ ಆಸ್ತಿಗೆ ಸಂಬಂಧಿಸಿದಂತೆ ವಿಲ್ ಬರೆಸಿದ್ದರು. ಒಟ್ಟು ಸಾವಿರ ಕೋಟಿಗೂ ಅಧಿಕ ಮೌಲ್ಯದ ಆಸ್ತಿಗೆ ಸಂಬಂಧಿಸಿದಂತೆ 41 ಪುಟಗಳ ವಿಲ್ ಬರೆಸಿದ್ದರು ಈ ವಿಲ್‌ನಲ್ಲಿ ಮುತ್ತಪ್ಪ ರೈ ಅವರು ತಮ್ಮ ಪುತ್ರರಾದ ರಾಖಿ ರೈ, ರಿಕ್ಕಿ ರೈ, ಸಹೋದರನ ಪುತ್ರ ಅಶ್ವಿನ್ ರೈ,ತನ್ನ 2ನೇ ಪತ್ನಿ ಅನುರಾಧ ರೈ ಹಾಗೂ ಮನೆ ಕೆಲಸದವರ ಬಗ್ಗೆಯೂ ವಿಲ್‌ನಲ್ಲಿ ಆಸ್ತಿ ಹಂಚಿಕೆ ಮಾಡಿದ್ದರು. ಇನ್ನು ಮುತ್ತಪ್ಪ ರೈ 2020 ರಲ್ಲಿ ನಿಧನರಾಗಿದ್ದರು.
ಇದನ್ನೂ ಓದಿ: ಮುತ್ತಪ್ಪ ರೈ ಆಸ್ತಿ ಮಾರದಂತೆ ಆದೇಶ
ಮುತ್ತಪ್ಪ ರೈ ಸಾವಿನ ಅಚರ 2ನೇ ಹೆಂಡತಿ ಅನುರಾಧ ರೈ ಆಸ್ತಿಯಲ್ಲಿ ಪಾಲು ಕೇಳಿ ರಾಖಿ ರೈ, ರಿಕ್ಕಿ ರೈ ಅವರನ್ನು ಪ್ರತಿವಾದಿಗಳಾಗಿ ಮಾಡಿ ಕೋರ್ಟ್ ನಲ್ಲಿ ದಾವೆ ಹೂಡಿದ್ದರು. ಆದರೆ, ಈ ಕೇಸಿಗೆ ಸಂಬಂಧಪಟ್ಟಂತೆ ಇದೀಗ ಇಬ್ಬರೂ ಕಾಂಪ್ರಮೈಸ್ ಮಾಡಿಕೊಂಡು ತಾವೇ ಕುಟುಂಬದಲ್ಲಿ ಆಸ್ತಿ ಹಂಚಿಕೆ ಮಾಡಿಕೊಳ್ಳುವುದಾಗಿ ಕೋರ್ಟ್ ಮುಂದೆ ಒಪ್ಪಿಕೊಂಡಿದ್ದಾರೆ. ಇದರ ಅನ್ವಯ ಅನುರಾಧ ರೈ ಅವರಿಗೆ ಸುಮಾರು 100 ಕೋಟಿ ಮೌಲ್ಯದ ಆಸ್ತಿಯನ್ನ ಹಂಚಿಕೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಅನುರಾಧ ರೈಗೆ ಕೊಡಲಾಗಿರುವ ಆಸ್ತಿ ವಿವರ:
* ಅನುರಾಧ ರೈಗೆ 7 ಕೋಟಿ ರೂ. ನಗದು ಹಣ
* ಮಂಡ್ಯದ ಪಾಂಡವಪುರದ ಬಳಿ 22 ಎಕರೆ ಜಮೀನು
* ಮೈಸೂರಿನಲ್ಲಿ 4,800 ಚದರಡಿ ನಿವೇಶನ ಹಾಗೂ ಅದೇ ನಿವೇಶನದಲ್ಲಿನ ಮನೆ
* ನಂದಿಬೆಟ್ಟ ಬಳಿಯ ಕೆಂಪತಿಮ್ಮನಹಳ್ಳಿಯಲ್ಲಿ 5.5 ಎಕರೆ ಜಮೀನು
* ಒಟ್ಟಾರೆ ಅನುರಾಧ ರೈಗೆ ಕೊಟ್ಟ ಆಸ್ತಿ ಮೌಲ್ಯ 100 ರೂ. ಎಂದು ಅಂದಾಜಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ