ಇವತ್ತು ಮನುಷ್ಯ ಮತ್ತು ಪ್ರಕೃತಿಯ ನಡುವೆ ಸಂಘರ್ಷ ನಡೆಯುತ್ತಿದೆ. ಈ ಸಂಘರ್ಷದಲ್ಲಿ ಮನುಷ್ಯ ಸೋಲಬೇಕು. ಆ ಸೋಲಿನಿಂದ ಮನುಷ್ಯನೂ ಬದಕುತ್ತಾನೆ. ಅರಣ್ಯದೊಂದಿಗೆ ಸಕಲ ಜೀವರಾಶಿಗಳೂ ಬದುಕುಳಿಯುತ್ತವೆ. ಸೋಲದಿದ್ದರೆ ಯಾರೂ ಉಳಿಯುವುದಿಲ್ಲ ಎಂದು ನಟ ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದರು.
ಬೆಂಗಳೂರು (ಜ.05): ಇವತ್ತು ಮನುಷ್ಯ ಮತ್ತು ಪ್ರಕೃತಿಯ ನಡುವೆ ಸಂಘರ್ಷ ನಡೆಯುತ್ತಿದೆ. ಈ ಸಂಘರ್ಷದಲ್ಲಿ ಮನುಷ್ಯ ಸೋಲಬೇಕು. ಆ ಸೋಲಿನಿಂದ ಮನುಷ್ಯನೂ ಬದಕುತ್ತಾನೆ. ಅರಣ್ಯದೊಂದಿಗೆ ಸಕಲ ಜೀವರಾಶಿಗಳೂ ಬದುಕುಳಿಯುತ್ತವೆ. ಸೋಲದಿದ್ದರೆ ಯಾರೂ ಉಳಿಯುವುದಿಲ್ಲ ಎಂದು ನಟ ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದರು. ‘ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ’ ವತಿಯಿಂದ ಹಮ್ಮಿಕೊಂಡಿರುವ 4ನೇ ಆವೃತ್ತಿಯ ‘ವನ್ಯಜೀವಿಗಳ ಸಂರಕ್ಷಣೆ ಅಭಿಯಾನ’ದ ರಾಯಭಾರಿಯೂ ಆದ ಅವರು, ಬುಧವಾರ ನಗರದಲ್ಲಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಮನುಷ್ಯ ಈ ಸಂಘರ್ಷದಲ್ಲಿ ಕಾಡನ್ನು ನಾಶಪಡಿಸುತ್ತಾ ವನ್ಯಜೀವಿಗಳ ಆವಾಸತಾಣ ಮತ್ತು ಅವುಗಳ ಬೇಟೆಗಳನ್ನು ಮನುಷ್ಯ ನಾಶ ಮಾಡುತ್ತಾ ಹೋದರೆ ಅವು ನಾಡಿಗೆ ನುಗ್ಗಿ ಮನುಷ್ಯರನ್ನು ಬೇಟೆಯಾಡುತ್ತವೆ. ಇದರಿಂದ ಮನುಷ್ಯ ಮತ್ತು ವನ್ಯಜೀವಿಗಳ ನಡುವೆ ಸಂಘರ್ಷ ಹೆಚ್ಚಾಗುತ್ತದೆ. ಮನುಷ್ಯ ತನ್ನ ಬಲದಿಂದ ವನ್ಯಜೀವಿಗಳನ್ನು ಕೊಲ್ಲಬಹುದು. ಆದರೆ, ಅವುಗಳು ನಾಶವಾದರೆ ಅರಣ್ಯ ನಾಶವಾಗಿ ಹೋಗುತ್ತದೆ ಎಂದರು. ಪ್ರಕೃತಿ ಕೊಟ್ಟಿರುವ ಸಂಪನ್ಮೂಲ, ಸಸ್ಯಕಾಶಿ, ವನ್ಯಜೀವಿಗಳನ್ನು ಸಂರಕ್ಷಿಸಿಕೊಂಡು ಅವುಗಳ ಜೊತೆ ಹೆಜ್ಜೆ ಹಾಕಿದರೆ ಮಾತ್ರ ಮನುಷ್ಯ ಉಳಿಯುತ್ತಾನೆ. ಇಂತಹ ಅನಾಹುತ ಆಗಬಾರದು ಎಂದರೆ ವನ್ಯಜೀವಿ ಸಂರಕ್ಷಣೆ ಬಹಳ ಮುಖ್ಯ. ಹಾಗಾಗಿ ಮನುಷ್ಯ ಮರ ಕಡಿಯುವ ಜತೆಗೆ ಹೆಚ್ಚು ಗಿಡಗಳನ್ನು ನೆಟ್ಟು ಬೆಳೆಸುವ ಕಾರ್ಯ ಮಾಡಬೇಕು ಎಂದರು.
ವನ್ಯಜೀವಿ ಸಂರಕ್ಷಣಾ ಅಭಿಯಾನಕ್ಕೆ ರಿಷಬ್ ಶೆಟ್ಟಿ ರಾಯಭಾರಿ
ಪರಿಸರ ಸಂರಕ್ಷಿಸದಿದ್ದರೆ ಕಲಿಯುಗ ಬೇಗ ಅಂತ್ಯ: ಅರಣ್ಯ, ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆ ಬಗ್ಗೆ ಪ್ರತಿಯೊಬ್ಬರೂ ಜಾಗೃತರಾಗದಿದ್ದರೆ ಕಲಿಯುಗದ ಅಂತ್ಯ ಬಹಳ ಬೇಗ ಎದುರಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ. ‘ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ’ ವತಿಯಿಂದ ಹಮ್ಮಿಕೊಂಡಿರುವ 4ನೇ ಆವೃತ್ತಿಯ ‘ವನ್ಯಜೀವಿಗಳ ಸಂರಕ್ಷಣೆ ಅಭಿಯಾನ’ಕ್ಕೆ ಬುಧವಾರ ನಗರದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ನಾಲ್ಕನೇ ನಾಲ್ಕು ಯುಗಗಳಲ್ಲಿ ಒಳ್ಳೆಯ ಯುಗಗಳೆಲ್ಲಾ ಮುಗಿದು ಕೊನೆಯ ಕಲಿಯುಗದ ಕಾಲಘಟ್ಟದಲ್ಲಿ ನಾವಿದ್ದೇವೆ.
ಇದು ಬರೀ ಅನಾಹುತಗಳ ಯುಗ. ಪರಿಸರ ಹಾಗೂ ವನ್ಯ ಜೀವಿಗಳ ಸಂರಕ್ಷಣೆಯ ಮೂಲಕ ಈ ಅನಾಹುತಗಳನ್ನು ಮುಂದೂಡದೆ ಹೋದರೆ ಕಲಿಯುಗದ ಅಂತ್ಯ ಬಹಳ ಬೇಗ ಎದುರಾಗುತ್ತದೆ. ಇದೇ ಆಶಯದಿಂದಲೇ ನಮ್ಮ ಪ್ರಧಾನಿ ಮೋದಿ ಅವರು ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಕುರಿತು ಮಾತನಾಡುವಾಗ ‘ಯುದ್ಧ ಮಾಡುವ ಕಾಲವಲ್ಲ’ ಎಂದು ಹೇಳಿದರು ಎಂದು ಭಾವಿಸಿದ್ದೇನೆ ಎಂದರು. ನಾನೊಬ್ಬ ರಾಜಕಾರಣಿಯಾಗಿ ಮಾತನಾಡದೆ ಸಾಮಾನ್ಯ ಪರಿಸರ ಕಾಳಜಿಯಿಂದ ಮಾತನಾಡುವುದಾದರೆ, ಇಂದು ಮನುಷ್ಯ ಮತ್ತು ವನ್ಯಜೀವಿಗಳ ಸಂಘರ್ಷ ಬಹಳ ದೊಡ್ಡಮಟ್ಟದಲ್ಲಿದೆ.
ಆನೆ, ಚಿರತೆ ಸೇರಿದಂತೆ ಕಾಡು ಪ್ರಾಣಿಗಳು ನಾಡಿಗೆ ಬರುತ್ತಿರುವುದಕ್ಕೆ ಕಾರಣ ಮನುಷ್ಯರಾದ ನಾವು ಅವುಗಳ ಜಾಗವನ್ನು ಅತಿಕ್ರಮಣ, ಒತ್ತುವರಿ ಮಾಡುತ್ತಿರುವುದಕ್ಕೆ. ಈಗಲೂ ಎಚ್ಚೆತ್ತುಕೊಳ್ಳದೆ ಹೋದರೆ ಮುಂದೆ ಇದು ಇನ್ನಷ್ಟು ಹೆಚ್ಚಾಗುವುದರಲ್ಲಿ ಸಂದೇಹವೇ ಇಲ್ಲ. ಈ ಬಗ್ಗೆ ಯಾರು ಮಾತನಾಡುವುದಿಲ್ಲ. ಒತ್ತುವರಿಯಾಗಿರುವ ಅರಣ್ಯ ಭೂಮಿಯ ಮೇಲೆ ಹಕ್ಕು ನೀಡಲು ಪ್ರತಿಭಟನೆಗಳು ಹೆಚ್ಚಾದಾಗ ಮಾಧ್ಯಮಗಳ ಮೇಲೂ ಒತ್ತಡ ಹೆಚ್ಚುತ್ತದೆ. ಆದರೂ, ಒತ್ತಡಕ್ಕೆ ಒಳಗಾಗದೆ ಈ ಭೂಮಿಯ ಮೇಲೆ ಮನುಷ್ಯರಂತೆ ಎಲ್ಲ ಜೀವ ಸಂಕುಲಕ್ಕೂ ಬದುಕುವ ಹಕ್ಕಿದೆ ಎಂಬ ನೈಜ ಧರ್ಮವನ್ನು ಅರಿತು ಮಾಧ್ಯಮಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು.
ಸುದ್ದಿ ನೀಡುವುದಷ್ಟೇ ಅಲ್ಲ, ಪರಿಸರ ಸಂರಕ್ಷಣೆಯೂ ಮಾಧ್ಯಮಗಳ ಹೊಣೆ: ರವಿ ಹೆಗಡೆ
ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು. ಈ ನಿಟ್ಟಿನಲ್ಲಿ ‘ಏಷ್ಯಾನೆಟ್ ಸುವರ್ಣನ್ಯೂಸ್ ಮತ್ತು ಕನ್ನಡಪ್ರಭ’ ನಿರಂತರವಾಗಿ ಅಭಿಯಾನ ನಡೆಸಿಕೊಂಡು ಬರುತ್ತಿರುವುದು ಅತ್ಯಂತ ಅಭಿನಂದನಾರ್ಹ ಎಂದರು. ಪ್ರಾಣಿಗಳು ಓಟು ಹೊಂದಿಲ್ಲದ ಕಾರಣಕ್ಕೆ ಅವುಗಳ ಜಾಗವನ್ನು ಕಿತ್ತುಕೊಂಡು ಓಡಿಸುತ್ತಿದ್ದೇವೆ. ಎಲ್ಲಿ ನೋಡಿದರೂ ಒತ್ತುವರಿಯಾಗಿರುವ ಸರ್ಕಾರಿ, ಅರಣ್ಯ ಭೂಮಿಗೆ ಹಕ್ಕು ನೀಡಿ ಎನ್ನುವ ಒತ್ತಾಯವೇ ಹೆಚ್ಚುತ್ತಿದೆ. ಆನೆ, ಹುಲಿ, ಸಿಂಹ ಮತ್ತಿತರ ವನ್ಯಜೀವಿಗಳಿರುವುದರಿಂದಲೇ ನಮ್ಮಲ್ಲಿ ಇನ್ನೂ ಕಾಡು ಉಳಿದುಕೊಂಡಿದೆ. ಅವುಗಳನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ವನ್ಯಜೀವಿಗಳು ನಾಶವಾದರೆ ಕಾಡು ನಾಶವಾಗುತ್ತದೆ. ಕಾಡು ನಾಶವಾದರೆ ನಾಡೂ ನಾಶವಾಗುತ್ತದೆ. ಮನುಕುಲವೂ ನಾಶವಾಗುತ್ತದೆ ಎಂದು ಹೇಳಿದರು.