ಪ್ರಯಾಣಿಕರ ದಟ್ಟಣೆ, ಮುರುಡೇಶ್ವರ- ಬೆಂಗಳೂರು ರೈಲು ಮತ್ತೆ 3 ತಿಂಗಳು ವಿಸ್ತರಣೆ

By Suvarna News  |  First Published Mar 5, 2023, 5:32 PM IST

ಮುರುಡೇಶ್ವರ- ಪಡೀಲ್ ಬೈಪಾಸ್‌- ಯಶವಂತಪುರ ಸಾಪ್ತಾಹಿಕ ಸ್ಪೆಷಲ್ ಎಕ್ಸ್‌ಪ್ರೆಸ್‌ (06563/06564) ರೈಲು ಕರಾವಳಿಯ ಜನರ ಬೇಡಿಕೆ ಹಾಗೂ ಪ್ರಯಾಣಿಕರ ದಟ್ಟಣೆ ಹಿನ್ನೆಲೆಯಲ್ಲಿ ಮುಂದಿನ ಮೂರು ತಿಂಗಳು, ಅಂದರೆ 2023 ಜೂನ್‌ ಕೊನೆ ತನಕ ಮತ್ತೆ ವಿಸ್ತರಣೆಗೊಂಡಿದೆ.


ಮಂಗಳೂರು (ಮಾ.5): ಕಳೆದ ಚಳಿಗಾಲದ ಅವಧಿಯಲ್ಲಿ ತಾತ್ಕಾಲಿಕವಾಗಿ ಆರಂಭಿಸಲಾಗಿದ್ದ ಮುರುಡೇಶ್ವರ- ಪಡೀಲ್ ಬೈಪಾಸ್‌- ಯಶವಂತಪುರ ಸಾಪ್ತಾಹಿಕ ಸ್ಪೆಷಲ್ ಎಕ್ಸ್‌ಪ್ರೆಸ್‌ (06563/06564) ರೈಲು ಕರಾವಳಿಯ ಜನರ ಬೇಡಿಕೆ ಹಾಗೂ ಪ್ರಯಾಣಿಕರ ದಟ್ಟಣೆ ಹಿನ್ನೆಲೆಯಲ್ಲಿ ಮುಂದಿನ ಮೂರು ತಿಂಗಳು, ಅಂದರೆ 2023 ಜೂನ್‌ ಕೊನೆ ತನಕ ಮತ್ತೆ ವಿಸ್ತರಣೆಗೊಂಡಿದೆ. ಈ ಕುರಿತು ನೈಋುತ್ಯ ರೈಲ್ವೆಯು ಗುರುವಾರ ಅಧಿಸೂಚನೆ ಹೊರಡಿಸಿದೆ. ವಾರಕ್ಕೊಮ್ಮೆ ಯಶವಂತಪುರದಿಂದ ಶನಿವಾರ ರಾತ್ರಿ 11.55 ಕ್ಕೆ ಹೊರಡುವ ರೈಲು ಮರುದಿನ ಮಧ್ಯಾಹ್ನ 1 ಗಂಟೆಗೆ ಮುರುಡೇಶ್ವರ ತಲುಪುತ್ತಿದೆ. ಮುರುಡೇಶ್ವರದಿಂದ ಭಾನುವಾರ ಮಧ್ಯಾಹ್ನ 1.30 ಕ್ಕೆ ಹೊರಡುವ ರೈಲು ಮರುದಿನ ಬೆಳಗ್ಗೆ 4 ಕ್ಕೆ ಯಶವಂತಪುರ ತಲುಪುತ್ತಿದೆ.

ವಾರಾಂತ್ಯದ ಶನಿವಾರ ಬೆಂಗಳೂರಿನಿಂದ ರಾತ್ರಿ ತಡವಾಗಿ ಹೊರಡುವ ಕಾರಣದಿಂದ ಬೆಂಗಳೂರಿನಲ್ಲಿ ಇರುವ ದ.ಕ., ಉಡುಪಿ, ಕುಂದಾಪುರ ಕಡೆಯ ಕರಾವಳಿಯ ಹೊಟೇಲ್ ಉದ್ಯಮಿಗಳು, ಕಾರ್ಮಿಕರು ದಿನದ ಕೆಲಸ ಮುಗಿಸಿ ಊರಿಗೆ ತೆರಳಲು ಹೆಚ್ಚು ಉಪಯುಕ್ತವಾಗಿತ್ತು. ಪ್ರತೀ ಪ್ರಯಾಣದಲ್ಲೂ ಈ ರೈಲು ಭರ್ತಿಯಾಗಿ ಟಿಕೆಟ್‌ಗಳು ವೈಟಿಂಗ್‌ ಲಿಸ್ಟ್‌ನಲ್ಲಿ ಇರುತ್ತಿತ್ತು.

Tap to resize

Latest Videos

undefined

2022 ಡಿಸೆಂಬರ್‌ನಲ್ಲಿ ಈ ರೈಲು ಆರಂಭಿಸಲಾಗಿತ್ತು.ಹೆಚ್ಚಿನ ಪ್ರಯಾಣಿಕರು ಇರುವ ಹಿನ್ನೆಲೆಯಲ್ಲಿ ಈ ರೈಲನ್ನು ದಿನಂಪ್ರತಿ ಓಡಿಸುವ ಕುರಿತು ರೈಲ್ವೆ ಮಂಡಳಿ ಚಿಂತನೆ ನಡೆಸುತ್ತಿದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿದೆ.

ಮಂಗಳೂರು ಸೆಂಟ್ರಲ್‌-ಜಂಕ್ಷನ್‌ ನಡುವೆ ಹಳಿ ದ್ವಿಗುಣ ಕಾಮಗಾರಿ
ಮಂಗಳೂರು(ಮಾ.5): ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ಹೊಸ ಪ್ಲಾಟ್‌ಫಾರಂ ಕಾರ್ಯ ಪೂರ್ಣಗೊಂಡ ಬಳಿಕ ಕೊಂಕಣ ಕಡೆಗೆ ಹಾಗೂ ಬೆಂಗಳೂರು ಕಡೆಗೆ ರೈಲ್ವೆ ಟ್ರಾಫಿಕ್‌ ಹೆಚ್ಚುವ ನಿರೀಕ್ಷೆ ಇರುವ ಕಾರಣ ಮಂಗಳೂರು ಸೆಂಟ್ರಲ್‌ ಹಾಗೂ ಜಂಕ್ಷನ್‌ ಮಧ್ಯೆ ಹಳಿ ದ್ವಿಗುಣ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ದ.ಕ. ಸಂಸದ ನಳಿನ್‌ ಕುಮಾರ್‌ ಆಗ್ರಹಿಸಿದ್ದಾರೆ. ಪಾಲಕ್ಕಾಡ್‌ನಲ್ಲಿ ಗುರುವಾರ ನಡೆದ ವಿಭಾಗೀಯ ಸಂಸದರ ಸಭೆಯಲ್ಲಿ ಲಿಖಿತವಾಗಿ ವಿವಿಧ ಬೇಡಿಕೆಗಳನ್ನು ಅವರು ಮಂಡಿಸಿದ್ದಾರೆ.

ಈ ಭಾಗದ ನಾಗರಿಕರಿಂದ ರೈಲು ಸೇವೆ ಹೆಚ್ಚಳದ ಬಗ್ಗೆ ನಿರಂತರ ಬೇಡಿಕೆ ಇದೆ. ಹಾಗಾಗಿ ನಂಬರು 16575/76 ಯಶವಂತಪುರ ಮಂಗಳೂರು ಜಂಕ್ಷನ್‌, ನಂಬರು 12133/34 ಸಿಎಸ್‌ಎಂಟಿ ಮುಂಬಯಿ ಮಂಗಳೂರು ಜಂಕ್ಷನ್‌, ನಂ.07377/78 ವಿಜಯಪುರ ಮಂಗಳೂರು ಜಂಕ್ಷನ್‌ ಎಕ್ಸ್‌ಪ್ರೆಸ್‌ ಇವೇ ಮೊದಲಾದ ರೈಲುಗಳನ್ನು ಜಂಕ್ಷನ್‌ನಿಂದ ಸೆಂಟ್ರಲ್‌ಗೆ ವಿಸ್ತರಣೆ ಮಾಡಬೇಕಾಗುತ್ತದೆ. ಹಾಗೂ ಈ ವಿಸ್ತರಣೆಗೆ ಈಗಾಗಲೇ ರೈಲ್ವೆ ಆಡಳಿತ ಒಪ್ಪಿಗೆ ಸೂಚಿಸಿರುತ್ತದೆ. ಇವೆರಡು ನಿಲ್ದಾಣಗಳ ಮಧ್ಯೆ ತಡೆಯಿಲ್ಲದ ರೈಲು ಸಂಚಾರಕ್ಕಾಗಿ ಹಳಿ ದ್ವಿಗುಣಗೊಳಿಸುವ ಕಾರ್ಯವನ್ನು ಆದ್ಯತೆಯಲ್ಲಿ ಕೈಗೆತ್ತಿಕೊಳ್ಳಬೇಕು. ಇದರಲ್ಲಿ ಬಹುತೇಕ ಕೆಲಸವಾಗಿದ್ದರೂ 2 ಕಿ.ಮೀ ಭಾಗ ಬಾಕಿ ಇದ್ದು ಅದನ್ನು ಮುಗಿಸಬೇಕು ಎಂದು ನಳಿನ್‌ ಕುಮಾರ್‌ ಕಟೀಲ್‌ ಒತ್ತಾಯಿಸಿದ್ದಾರೆ.

ರೈಲು ಪ್ರಯಾಣಿಕರಿಗೆ ಸಂತಸದ ಸುದ್ದಿ, ಕರ್ನಾಟಕದ ಹಲವು ನಿಲ್ದಾಣದಲ್ಲಿ 1 ನಿಮಿಷ ವಿವಿಧ ರೈಲುಗಳ ನಿಲುಗಡೆ

ಹೊಸ ರೈಲು ಬೇಡಿಕೆ:
ಮಂಗಳೂರು ಸೆಂಟ್ರಲ್‌ ಮತ್ತು ರಾಮೇಶ್ವರಂ ಮಧ್ಯೆ ಮಂಗಳೂರು ಶೋರ್ನೂರು, ಪಾಲಕ್ಕಾಡ್‌, ಪೊಲ್ಲಾಚಿ, ಪಳನಿ, ದಿಂಡಿಗಲ್‌, ಮದುರೈ, ರಾಮೇಶ್ವರಂ ರೈಲು ಪ್ರಾರಂಭಿಸುವಂತೆ ಒತ್ತಾಯಿಸಿದ್ದಾರೆ.

ವೇತನ ಹೆಚ್ಚಳಕ್ಕೆ ಆಗ್ರಹ: ಮಾರ್ಚ್ 24 ರಿಂದ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೌಕರರ ಮುಷ್ಕರ

ಮಂಗಳೂರು ಅತಿ ವೇಗವಾಗಿ ಬೆಳೆಯುವ ವಾಣಿಜ್ಯ ನಗರಿಯಾಗಿರುವುದರಿಂದ ಎರ್ನಾಕುಳಂ ಅಥವಾ ಕೊಚ್ಚುವೇಲಿ ಬದಲು ಮಂಗಳೂರು ಸೆಂಟ್ರಲ್‌ನಿಂದಲೇ ಹೊರಡುವಂತೆ ಮಂಗಳೂರು-ದೆಹಲಿ ಮಧ್ಯೆ ಪ್ರತ್ಯೇಕ ರೈಲು ಪ್ರಾರಂಭಿಸುವ ಅವಶ್ಯಕತೆ ಇದೆ. ನಂ.06484/85, 06486/87 ಮಂಗಳೂರು ಸೆಂಟ್ರಲ್‌ ಕಬಕ ಪುತ್ತೂರು ಮಂಗಳೂರು ಸೆಂಟ್ರಲ್‌ ರೈಲುಗಳನ್ನೂ ಸುಬ್ರಹ್ಮಣ್ಯ ರೋಡ್‌ ವರೆಗೆ ವಿಸ್ತರಣೆ ಮಾಡುವಂತೆ ನಳಿನ್‌ ಕುಮಾರ್‌ ಕಟೀಲ್‌ ಒತ್ತಾಯಿಸಿದ್ದಾರೆ.

click me!