ತಮ್ಮ ವಿರುದ್ಧ ಶೇ.40 ಭ್ರಷ್ಟಾಚಾರ ಆರೋಪ ಮಾಡಿರುವ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸೇರಿದಂತೆ ಇನ್ನುಳಿದವರ ವಿರುದ್ಧ ಸಚಿವ ಮುನಿರತ್ನ ಕಾನೂನು ಸಮರಕ್ಕೆ ಇಳಿದಿದ್ದಾರೆ.
ಬೆಂಗಳೂರು, (ಸೆಪ್ಟೆಂಬರ್.19): ಸರ್ಕಾರದ ವಿರುದ್ಧ ಶೇ.40 ಭ್ರಷ್ಟಾಚಾರ ಆರೋಪ ಮಾಡಿರುವ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮತ್ತು 18 ಮಂದಿ ವಿರುದ್ಧ ಕ್ರಿಮಿನಲ್ ಮಾನಷ್ಟ ಕೇಸ್ ಹೂಡಿದ್ದೇನೆ ಎಂದು ತೋಟಗಾರಿಕಾ ಸಚಿವ ಮುನಿರತ್ನ ಹೇಳಿದ್ದಾರೆ.
ಇಂದು(ಸೋಮವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನನ್ನ ವಿರುದ್ಧ ಮಾಡಿದ ಆರೋಪವು ಸೇರಿದಂತೆ 40% ಕಮೀಷನ್ ಆರೋಪಕ್ಕೆ ದಾಖಲೆ ಕೊಡಿ ಎಂದು ದಾವೆ ಹೂಡಿದ್ದೇನೆ. 50 ಕೋಟಿ ಮಾನನಷ್ಟ ಪ್ರಕರಣವನ್ನು 4 ತಿಂಗಳ ಒಳಗಡೆ ಇತ್ಯರ್ಥ ಮಾಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡುತ್ತಿದ್ದೇವೆ ಸೆ.21ಕ್ಕೆ ಕೋರ್ಟ್‌ನಲ್ಲಿ ನನ್ನ ಹೇಳಿಕೆ ದಾಖಲಾಗುತ್ತದೆ. ನಂತರ ಅವರ ವಿರುದ್ಧ ಎಫ್‌ಐಆರ್ ದಾಖಲಾಗುತ್ತದೆ ಎಂದು ತಿಳಿಸಿದರು.
ಕಮಿಷನ್ ಆರೋಪ: ಕೆಂಪಣ್ಣ ಮೇಲೆ 50 ಕೋಟಿ ಮಾನನಷ್ಟ ಕೇಸ್ ಹಾಕುವೆ, ಮುನಿರತ್ನ
ಕೆಂಪಣ್ಣ ನನ್ನ ಮೇಲೆ ಆಧಾರ ರಹಿತ ಆರೋಪ ಮಾಡಿದ್ದಾರೆ. ಆಧಾರ ರಹಿತ ಆರೋಪ ಮಾಡಿದ್ದಕ್ಕೆ ನಾನು 7 ದಿನಗಳ ಒಳಗಡೆ ಕ್ಷಮೆ ಕೇಳುವಂತೆ ಸೂಚಿಸಿದ್ದೆ. ಆದರೆ ಅವರು ಕ್ಷಮೆ ಕೇಳದ ಹಿನ್ನೆಲೆಯಲ್ಲಿ ಮಾನನಷ್ಟ ಕೇಸ್ ಹೂಡಿದ್ದೇನೆ. ಚುನಾವಣೆ ನಡೆಯುವ ಮುನ್ನ ಇತ್ಯರ್ಥ ಆಗಬೇಕಾಗಿರುವುದರಿಂದ 4 ತಿಂಗಳ ಒಳಗಡೆ ಪ್ರಕರಣವನ್ನು ಮುಗಿಸುವಂತೆ ಸೆಕ್ಷನ್ 227 ಅನ್ವಯ ರಿಟ್ ಅರ್ಜಿ ಹಾಕುತ್ತಿದ್ದೇವೆ ಎಂದು ಹೇಳಿದರು.
ಸರ್ಕಾರ ಸಚಿವರ ಮೇಲೆ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿಕೊಂಡು ಬರ್ತಿದೆ. ಗುತ್ತೆಗೆದಾರರ ಸಂಘದವರು ಒಂದು ವರ್ಷಗಳಿಂದ ಆರೋಪ ಮಾಡ್ತಿದ್ದಾರೆ. ಆ ಮೇಲೆ ಮುಖ್ಯಮಂತ್ರಿಗಳು ಅವರನ್ನು ಕರೆದು ಮಾತಾಡಿದ್ರು, ಆರೋಪ ಮಾಡಿದ್ದನ್ನು ಬಿಟ್ಟಿಲ್ಲ. ಇವಾಗ ವಿಪಕ್ಷ ನಾಯಕರ ಮನೆಗೆ ಹೋಗಿ, ನನ್ನ ಮೇಲೆ ಆರೋಪ ಮಾಡಿದ್ದಾರೆ. ನಾನು ದೆಹಲಿ ಪ್ರವಾಸ ಸಂದರ್ಭದಲ್ಲಿ ಕೆಂಪಣ್ಣ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಬಗ್ಗೆ ಹೇಳಿದ್ದೆ. ಆ ಮೇಲೆ ಕೆಂಪಣ್ಣ ಬಳಿ ಇರುವ ದಾಖಲೆಗಳನ್ನು ಲೋಕಾಯುಕ್ತಕ್ಕೆ ಕೊಡಿ ಎಂದು ಕೇಳಿದ್ವಿ. 7 ದಿನಗಳ ಕಾಲಾವಕಾಶ ಕೊಟ್ರು ಅವ್ರು ಯಾವುದೇ ರೀತಿಯ ಪ್ರತಿಕ್ರಿಯೆ ಕೊಟ್ಟಿಲ್ಲ. ಅವ್ರು ಎಲ್ಲಿಯೂ ದಾಖಲೆ ಕೊಡುವ ಕೆಲಸ ಮಾಡಿಲ್ಲ. ಅವ್ರು ಕ್ಷಮೆನೂ ಕೇಳಿಲ್ಲ, ನಾನು ಕಳೆದ ತಿಂಗಳ 29ಕ್ಕೆ ಅವ್ರಿಗೆ ನೋಟಿಸ್ ಕೊಟ್ಟಿದ್ದೆ. ಆದರೆ ಅವರು ದಾಖಲೆ ಬಿಡುಗಡೆ ಮಾಡದೆ ಇರೋದಕ್ಕೆ 30ಕ್ಕೆ ನ್ಯಾಯಾಲಯದಲ್ಲಿ ದಾವೆ ಹೂಡಿದ್ದೆ. ಇವಾಗ ಅವರ ವಿರುದ್ಧ 50 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ ಎಂದರು.
ಕೈ ಮುಗೀತೇನೆ, ನನ್ನ ವಿರುದ್ಧ ಕೇಸ್ ಹಾಕಿ: ಕೆಂಪಣ್ಣ
ಪ್ರಕರಣದ ಆರೋಪಿಗಳು ಯಾವುದೇ ಆಸ್ತಿ ಪರಭಾರೆ ಮಾಡುವಂತಿಲ್ಲ. ಯಾವುದೇ ಇಲಾಖೆಯಲ್ಲಿ ಯಾವುದೇ ಕಾಮಗಾರಿ ಮಾಡಿದ್ದರೆ ಅದರ ಬಿಲ್ ಬಿಡುಗಡೆ ಆಗಬಾರದು. ಅವರ ಕುಟುಂಬದಲ್ಲಿ ಯಾವುದೇ ವಿಲ್ ಮಾಡುವಂತಿಲ್ಲ. ಎಲ್ಲದಕ್ಕೂ ಇನ್‌ಜಂಕ್ಷನ್ ಆರ್ಡರ್ ತರಲಾಗಿದ್ದು ಎಲ್ಲಾ 18 ಮಂದಿಗೂ ಇದು ಅನ್ವಯವಾಗಲಿದೆ ಸ್ಪಷ್ಟಪಡಿಸಿದರು.
ಸವಾಲು ಹಾಕಿದ್ದ ಕೆಂಪಣ್ಣ
ಸಚಿವ ಮುನಿರತ್ನ ಅವರು ನನ್ನ ವಿರುದ್ಧ 50 ಕೋಟಿ ರು. ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿರುವುದು ತುಂಬಾ ಸಂತಸದ ಸಂಗತಿ. ಅವರನ್ನು ಕೈಮುಗಿದು ಪ್ರಾರ್ಥಿಸುತ್ತೇನೆ. ಮೊದಲು ಮೊಕದ್ದಮೆ ದಾಖಲಿಸಲಿ. ನ್ಯಾಯಾಲಯಕ್ಕೆ ಎಲ್ಲಾ ರೀತಿಯ ದಾಖಲೆಗಳನ್ನೂ ಸಲ್ಲಿಸುತ್ತೇವೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ತಿರುಗೇಟು ನೀಡಿದ್ದರು.
ನಾವು ಈಗಾಗಲೇ ಆಯ್ದ ಮೂರ್ನಾಲ್ಕು ಸಚಿವರು, ಐದಾರು ಶಾಸಕರ ಭ್ರಷ್ಟಾಚಾರದ ಬಗ್ಗೆ ದಾಖಲೆ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದೇವೆ. ಅದಕ್ಕೆ ಸಚಿವರೇ ವೇದಿಕೆ ಒದಗಿಸುವುದಾದರೆ ನಾವು ಯಾಕೆ ಬೇಡ ಎನ್ನಬೇಕು. ದಯವಿಟ್ಟು ನ್ಯಾಯಾಲಯದಲ್ಲಿ ಅವರು ದೂರು ದಾಖಲಿಸಲಿ ಎಂದೂ ಅವರು ಸವಾಲು ಹಾಕಿದ್ದರು.