ಮೋದಿ ಭದ್ರತಾ ಪಡೆಗೆ ಮುಧೋಳ ನಾಯಿಗಳು: ಕರ್ನಾಟಕಕ್ಕೆ ಕೀರ್ತಿ

By Govindaraj SFirst Published Aug 18, 2022, 5:05 AM IST
Highlights

ಈಗಾಗಲೇ ಭಾರತೀಯ ಸೇನೆ, ಕರ್ನಾಟಕ ಪೊಲೀಸ್‌, ಕೇರಳ ಪೊಲೀಸ್‌ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಪ್ರಸಿದ್ಧ ಬಾಗಲಕೋಟೆ ಜಿಲ್ಲೆಯ ಮುಧೋಳ ಶ್ವಾನಗಳು ಈದೀಗ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಕ್ಷಣೆಗೆ ಒದಗಿಸುವ ವಿಶೇಷ ರಕ್ಷಣಾ ಪಡೆ (ಎಸ್‌ಪಿಜಿ)ಗೂ ಸೇರ್ಪಡೆಯಾಗಿವೆ.

ಬಾಗಲಕೋಟೆ (ಆ.18): ಈಗಾಗಲೇ ಭಾರತೀಯ ಸೇನೆ, ಕರ್ನಾಟಕ ಪೊಲೀಸ್‌, ಕೇರಳ ಪೊಲೀಸ್‌ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಪ್ರಸಿದ್ಧ ಬಾಗಲಕೋಟೆ ಜಿಲ್ಲೆಯ ಮುಧೋಳ ಶ್ವಾನಗಳು ಈದೀಗ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಕ್ಷಣೆಗೆ ಒದಗಿಸುವ ವಿಶೇಷ ರಕ್ಷಣಾ ಪಡೆ (ಎಸ್‌ಪಿಜಿ)ಗೂ ಸೇರ್ಪಡೆಯಾಗಿವೆ. ಮುಧೋಳ ತಾಲೂಕಿನ ತಿಮ್ಮಾಪುರದಲ್ಲಿರುವ ಮುಧೋಳ ನಾಯಿ ತಳಿ ಸಂವರ್ಧನೆ ಕೇಂದ್ರಕ್ಕೆ ಕಳೆದ ಏ.25ರಂದು ಎಸ್‌ಪಿಜಿ ವೈದ್ಯರ ತಂಡ ಹಾಗೂ ಇಬ್ಬರು ಯೋಧರ ತಂಡ ಭೇಟಿ ನೀಡಿ ಎರಡು ಗಂಡು ನಾಯಿ ಮರಿಗಳನ್ನು ಕೊಂಡೊಯ್ದಿದ್ದು, ಈ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.

ಮುಧೋಳ ನಾಯಿಯ ಗುಣ, ಚುರುಕುತನ, ಮತ್ತು ಅವುಗಳ ಕಾರ್ಯವೈಖರಿಯನ್ನು ಅರಿತಿರುವ ಎಸ್‌ಪಿಜಿ ತಂಡದ ವೈದ್ಯ ಡಾ.ಬಿ.ಎನ್‌.ಪಂಚಬುದ್ದೆ ಮತ್ತು ತರಬೇತುದಾರರ ತಂಡವು ದೆಹಲಿಯಿಂದ ಬಾಗಲಕೋಟೆ ಜಿಲ್ಲಾಡಳಿತ ಮತ್ತು ಎಸ್‌ಪಿ ಕಚೇರಿಯನ್ನು ಸಂಪರ್ಕಿಸಿತ್ತು. ತದನಂತರ ಮುಧೋಳಕ್ಕೆ ಆಗಮಿಸಿ ಈ ನಾಯಿಗಳನ್ನು ತೆಗೆದುಕೊಂಡು ಹೋಗಿತ್ತು. ಕಳೆದ ಏ.25ರಂದೇ ಎರಡು ಗಂಡು ನಾಯಿಗಳನ್ನು ಎಸ್‌ಪಿಜಿ ತಂಡವು ತೆಗೆದುಕೊಂಡು ಹೋಗಿ ತರಬೇತಿ ನೀಡುತ್ತಿದೆ. ಇದು ಸೂಕ್ಷ್ಮ ವಿಷಯವಾಗಿದ್ದರಿಂದ ಈವರೆಗೆ ಬಹಿರಂಗವಾಗಿರಲಿಲ್ಲ.

ಚುನಾವಣೆಗಳಲ್ಲಿ ಯಾವುದೆಲ್ಲಾ ಉಚಿತವಾಗಿ ಘೋಷಿಸಬಹುದು ಅನ್ನೋದನ್ನ ನಾವೇ ಹೇಳ್ತೀವಿ: ಸುಪ್ರೀಂ ಕೋರ್ಟ್‌

ಮನ್‌ ಕೀ ಬಾತ್‌ನಲ್ಲಿ ಪ್ರಸ್ತಾಪ: ಪ್ರಧಾನಿ ಮೋದಿ ಈ ಹಿಂದೆ ಮನ್‌ ಕೀ ಬಾತ್‌ನಲ್ಲೂ ಮುಧೋಳ ನಾಯಿಗಳ ಸಾಮರ್ಥ್ಯ, ಕಾರ್ಯವೈಖರಿ ಬಗ್ಗೆ ಬಣ್ಣಿಸಿದ್ದರು. ಈ ನಾಯಿಯನ್ನು ಮನೆಗಳಲ್ಲಿ ಸಾಕಿದರೆ ಸ್ವದೇಶಿ ತಳಿಗೆ ಉತ್ತೇಜನ ನೀಡಿದ ಹಾಗಾಗುತ್ತದೆ. ಆತ್ಮನಿರ್ಭರ ಹಾಗೂ ಸ್ವಾವಲಂಬಿ ಭಾರತ ನಿರ್ಮಾಣದ ಭಾಗವಾಗಿ ಈ ಶ್ವಾನವನ್ನು ಮನೆಯಲ್ಲಿ ಸಾಕಿ ಬೆಳೆಸಿ ಎಂದು ಕರೆ ನೀಡಿದ್ದರು. ಕೇರಳ ಪೊಲೀಸ್‌ ಕೆ9 ಪಡೆ, ಕೆಎಸ್‌ ಕರ್ನಾಟಕ ಪೊಲೀಸ್‌ ಪಡೆ, ಬಿಎಸ್‌ಎಫ್‌ ಹಾಗೂ ಸೇನೆಯಲ್ಲಿ ಈಗಾಗಲೇ ಈ ಮುಧೋಳ ನಾಯಿಗಳು ಕಾರ್ಯನಿರ್ವಹಿಸುತ್ತಿವೆ. ಈಗ ಪ್ರಧಾನಿ ಭದ್ರತೆಗೂ ಸೇರ್ಪಡೆಯಾಗುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿವೆ.

ಮುಧೋಳ ನಾಯಿ ವಿಶೇಷತೆ: ತೆಳ್ಳಗಿನ ದೇಹ, ಎತ್ತರದ ದೇಹ, ಉದ್ದನೆಯ ಕಾಲು, ಸಣ್ಣ ತಲೆ ಈ ನಾಯಿಯ ವಿಶೇಷತೆ. ಈ ತಳಿಯ ನಾಯಿಗಳನ್ನು ಹೆಚ್ಚಾಗಿ ಬೇಟೆಗಾರರು ಬಳಸುತ್ತಾರೆ. ಹೆಚ್ಚಿನ ಗ್ರಹಣ ಶಕ್ತಿ, ಚುರುಕುಮತಿ ಮತ್ತು ದಣಿವರಿಯದೆ ಬಹುದೂರ ಓಡುವ ಸಾಮರ್ಥ್ಯದಿಂದಾಗಿ ಈ ನಾಯಿಗಳು ಹಿಂದೆ ರಾಜರ ಕಾಲದಲ್ಲೂ ಸೇನೆಯ ಭಾಗವಾಗಿತ್ತು. ಸುಮಾರು 72 ಸೆ.ಮೀ.ವರೆಗೆ ಬೆಳೆಯುವ ಈ ನಾಯಿಗಳು 22ರಿಂದ 22 ಕೆ.ಜಿಯಷ್ಟುತೂಕ ಹೊಂದಿರುತ್ತವೆ. ಬಿಳಿ, ಬೂದು, ಚಾಕಲೇಟ್‌ ಅಥವಾ ಕಪ್ಪು ಬಣ್ಣ ಹೊಂದಿರುತ್ತವೆ. ನಿಯತ್ತಿಗಾಗಿ ಹೆಸರುವಾಸಿಯಾಗಿರುವ ಈ ನಾಯಿಯ ತಳಿ ಶಿವಾಜಿ ಮಹಾರಾಜರ ಸೇನೆಯ ಭಾಗವೂ ಆಗಿತ್ತು. ಈ ನಾಯಿಗಳಿಗೆ ವಿಶೇಷ ತರಬೇತಿ ನೀಡಿ ಮರಾಠ ಸೇನೆಯಲ್ಲಿ ಶತ್ರುಗಳ ಜಾಡು ಹಿಡಿಯಲು ಬಳಸಲಾಗುತ್ತಿತು

ಎನ್‌ಎಸ್‌ಎ ಅಜಿತ್‌ ಧೋವಲ್‌ ಭದ್ರತೆಯಲ್ಲಿ ಲೋಪ ಪ್ರಕರಣ, 3 ಕಮಾಂಡೋಗಳ ಸಸ್ಪೆಂಡ್‌!

ಮುಧೋಳ ನಾಯಿ ಇತಿಹಾಸ ರೋಚಕ: ಕ್ರಿಸ್ತಪೂರ್ವ 500ರಲ್ಲೇ ಮುಧೋಳ ನಾಯಿ ಇತ್ತು. ಮುಧೋಳ ಭಾಗದಲ್ಲಿ ಈ ನಾಯಿ ಕಂಡುಬರುತ್ತಿತ್ತು. ಹೀಗಾಗಿ ಇದಕ್ಕೆ ‘ಮುಧೋಳ ನಾಯಿ’ ಎನ್ನುತ್ತಾರೆ. ಮುಧೋಳರ ರಾಜ ಮಾಲೋಜಿರಾವ್‌ ಘೋರ್ಪಡೆ ಅವರು ಈ ನಾಯಿಯ ತಳಿ ನಶಿಸದಂತೆ 19ನೇ ಶತಮಾನದಲ್ಲಿ ಪೋಷಿಸಿದರು. ರಾಜ-ಮಹಾರಾಜರ ಕಾಲದಲ್ಲಿ ಇವನ್ನು ರಕ್ಷಣೆಗೆ ಬಳಸಿಕೊಳ್ಳಲಾಗುತ್ತಿತ್ತು. ಈಗಲೂ ಅನೇಕ ಕುಟುಂಬಗಳು ಮುಧೋಳ ನಾಯಿಯ ಸಂರಕ್ಷಣೆ ಮಾಡುತ್ತಿವೆ. ಸಪೂರ ದೇಹ, ವೇಗದ ಓಟ ಇದರ ವೈಶಿಷ್ಟ್ಯ.

click me!