ಸಿದ್ದರಾಮಯ್ಯ ಮುಂದೆ ಎರಡು ಆಯ್ಕೆಗಳಿವೆ. ಕೇಜ್ರಿವಾಲ್ ಮಾಡಿದಂತೆ ಹಟ ಹಿಡಿದು ಅಧಿಕಾರದಲ್ಲಿ ಉಳಿಯುವುದು. ಆದರೆ, ಕೇಜ್ರಿವಾಲ್ ಮತ್ತು ಹೇಮಂತ್ ಸೊರೇನ್‌ರದು ಒಂದು ರೀತಿ ಸ್ವಂತ ಮಾಲಿಕತ್ವದ ಪಕ್ಷಗಳು. ಅಲ್ಲಿ ಏನು ಮಾಡಿದರೂ ರಾಜಕೀಯ ಅಸ್ತಿತ್ವದ ಹೋರಾಟವಾಗುತ್ತದೆ. ಇಲ್ಲಿ ಹಾಗಲ್ಲ. ಕಾಂಗ್ರೆಸ್ ರಾಷ್ಟ್ರೀಯ ಪಕ್ಷ. ಇಲ್ಲಿ ನಿರ್ಣಯ ಮಾಡುವವರು ಸಿದ್ದರಾಮಯ್ಯ ಅಲ್ಲ.q\
- ಪ್ರಶಾಂತ್ ನಾತು
ರಾಜಕಾರಣದಲ್ಲಿ ಯಾವುದೂ ಶಾಶ್ವತವಲ್ಲ, ಮಿತ್ರರೂ ಅಲ್ಲ ಶತ್ರುಗಳೂ ಅಲ್ಲ, ಕೊನೆಗೆ ನಿಲುವುಗಳೂ ಅಲ್ಲ. ನೋಡಿ 2011ರಲ್ಲಿ ಯಡಿಯೂರಪ್ಪ ವಿರುದ್ಧ ತನಿಖೆಗೆ ಆಗಿನ ರಾಜ್ಯಪಾಲರು ಅನುಮತಿ ನೀಡಿದಾಗ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರದಲ್ಲಿತ್ತು. ಆಗ ರಾಜ್ಯಪಾಲರು ತೆಗೆದುಕೊಂಡ ಕ್ರಮವನ್ನು ಇದೇ ಸಿದ್ದರಾಮಯ್ಯ ಬೆಂಬಲಿಸಿದ್ದರು. ಯಡಿಯೂರಪ್ಪ ಅಧಿಕಾರ ಕಳೆದುಕೊಂಡು ಜೈಲಿಗೆ ಹೋಗಿದ್ದರು. ಈಗ ಸಿದ್ದರಾಮಯ್ಯ(Siddaramaiah) ರಾಜ್ಯಪಾಲರಿಗೆ ನೋಟಿಸ್ ನೀಡುವ ಅಧಿಕಾರ ಇಲ್ಲವೆಂದು ಹೇಳುತ್ತಿದ್ದಾರೆ. ಆದರೆ, ಯಡಿಯೂರಪ್ಪ(Bs Yadiyurappa) ಮತ್ತು ಅವರ ಪುತ್ರ ಬಿ.ವೈ.ವಿಜಯೇಂದ್ರ(BY Vijanendra) ರಾಜ್ಯಪಾಲರು ತನಿಖೆಗೆ ಅನುಮತಿ ಕೊಡಬೇಕು, ಅದೇ ಸಂವಿಧಾನದ ಪ್ರಕಾರ ಸರಿ ಎಂದು ಹೇಳುತ್ತಿದ್ದಾರೆ. ಮುಡಾ ಹಗರಣ(MUDA Scam)ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಬಿಜೆಪಿ ಮತ್ತು ಜೆಡಿಎಸ್ ಪಾದಯಾತ್ರೆ ನಡೆಸುತ್ತಿವೆ. ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಕಾಂಗ್ರೆಸ್ ನಡೆಸುತ್ತಿರುವ ‘ಪ್ರಶ್ನೆ ಕೇಳಿ ಅಭಿಯಾನ’ ಇವೆಲ್ಲವೂ ಕೂಡ ಆಟದ ಮೈದಾನದ ಹೊರಗಿನ ಅಭಿಮಾನಿಗಳ ಡೊಳ್ಳಿನ ಸದ್ದೇ ಹೊರತು ಬೇರೆನೂ ಅಲ್ಲ. ಈಗ ಪ್ರಕರಣದಲ್ಲಿ ಮುಖ್ಯವಾಗಿ ರಾಜ್ಯಪಾಲ ಗೆಹಲೋತ್ ಅವರು ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲಿಸಲು ಅನುಮತಿ ಕೊಡುತ್ತಾರಾ, ಇಲ್ಲವಾ ಎಂಬುದೇ ಉಳಿದಿರುವ ಕುತೂಹಲ.
ಒಂದು ವೇಳೆ ಮುಖ್ಯಮಂತ್ರಿಗಳು ಮುಖ್ಯ ಕಾರ್ಯದರ್ಶಿ ಮೂಲಕ ಕೊಟ್ಟಿರುವ ಉತ್ತರ ಸಮರ್ಪಕವಾಗಿದೆ ಎಂದು ತಿಳಿದು ರಾಜ್ಯಪಾಲರು ಅನುಮತಿ ನಿರಾಕರಿಸಿದರೆ ವಿಷಯ ಸಮಾಪ್ತಿಯಾಗುತ್ತದೆ. ಆದರೆ, ರಾಜ್ಯಪಾಲರು ಅನುಮತಿ ನೀಡಿದರೆ ಏನಾಗಬಹುದು ಎನ್ನುವುದೇ ದೊಡ್ಡ ಕುತೂಹಲ. ಅನುಮತಿ ಕೊಟ್ಟರೆ ಮುಖ್ಯಮಂತ್ರಿಗಳಿಗೆ ಆದೇಶದ ವಿರುದ್ಧ ಹೈಕೋರ್ಟ್, ಸುಪ್ರೀಂಕೋರ್ಟ್ ಮೊರೆಹೋಗುವ ಕಾನೂನಿನ ವಿಕಲ್ಪ ಇದ್ದೇ ಇರುತ್ತದೆ. ಆದರೆ ರಾಜಕೀಯವಾಗಿ ಸಿದ್ದರಾಮಯ್ಯ ಭವಿಷ್ಯ ಏನು ಎನ್ನುವುದೇ ಕುತೂಹಲದ ಪ್ರಶ್ನೆ.
India Gate: ಮೋದಿ ಮತ್ತು ಆರೆಸ್ಸೆಸ್ ನಡುವೆ ಏನಾಗ್ತಿದೆ?
ಸಿದ್ದು ಮುಂದೆ ರಾಜಕೀಯ ಸಂದಿಗ್ಧ
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ರನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಜೈಲಿಗೆ ಹಾಕಿದರೂ ಅವರು ರಾಜೀನಾಮೆ ನೀಡಿರಲಿಲ್ಲ. ಹೀಗಾಗಿ ಪ್ರಕರಣ ದಾಖಲಾದಾಗ ಅಥವಾ ಜೈಲಿಗೆ ಹೋದಾಗ ರಾಜೀನಾಮೆ ಕೊಡುವುದು ಒಂದು ನೈತಿಕ ಪರಿಪಾಠವೇ ಹೊರತು ಕಾನೂನಿನ ಬಾಧ್ಯತೆಯೇನೂ ಅಲ್ಲ. ಹೀಗಾಗಿ ರಾಜ್ಯಪಾಲರು ಅನುಮತಿ ಕೊಟ್ಟು ನ್ಯಾಯಾಲಯದಲ್ಲಿ ವಿಚಾರಣೆ ಶುರುವಾದರೆ ಅದೇ ಕ್ಷಣದಲ್ಲಿ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದು ಕಾನೂನಿನಲ್ಲಿ ಎಲ್ಲಿಯೂ ಉಲ್ಲೇಖವಾಗಿಲ್ಲ. ಆದರೆ, ಆಗ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದು, ಅವರ ಅಧೀನದಲ್ಲಿರುವ ತನಿಖಾ ಸಂಸ್ಥೆಯಿಂದ ಪಾರದರ್ಶಕ ತನಿಖೆ ಅಸಾಧ್ಯ, ಹೀಗಾಗಿ ಕೇಂದ್ರೀಯ ತನಿಖಾ ಸಂಸ್ಥೆಗೆ ಕೊಡಬೇಕು ಎಂದು ದೂರುದಾರ ಕೇಳಿದರೆ ಸಿದ್ದರಾಮಯ್ಯ ಅವರ ರೊಟ್ಟಿಗೆ ಕೆಂಪುಖಾರ ಪ್ರಾಪ್ತಿ ಆದಂತೆಯೇ ಲೆಕ್ಕ. ಆಗ ಸಿದ್ದರಾಮಯ್ಯ ಮುಂದೆ ಉಳಿಯುವ ವಿಕಲ್ಪ- ಒಂದೋ ರಾಜೀನಾಮೆ ನೀಡಬೇಕು, ಇಲ್ಲವೇ ಕೇಜ್ರಿವಾಲ್ ಮಾಡಿದಂತೆ ಹಟ ಹಿಡಿದು ಅಧಿಕಾರದಲ್ಲಿ ಉಳಿಯಬೇಕು. ಆದರೆ, ಕೇಜ್ರಿವಾಲ್ ಅವರದು ಮತ್ತು ಹೇಮಂತ್ ಸೊರೇನ್‌ರದು ಒಂದು ರೀತಿ ಸ್ವಂತ ಮಾಲಿಕತ್ವದ ಪಕ್ಷಗಳು. ಅಲ್ಲಿ ಏನು ಮಾಡಿದರೂ ರಾಜಕೀಯ ಅಸ್ತಿತ್ವದ ಹೋರಾಟವಾಗುತ್ತದೆ. ಇಲ್ಲಿ ಹಾಗಲ್ಲ. ಕಾಂಗ್ರೆಸ್ ಒಂದು ರಾಷ್ಟ್ರೀಯ ಪಕ್ಷ. ಇಲ್ಲಿ ನಿರ್ಣಯ ಮಾಡುವವರು ಸಿದ್ದರಾಮಯ್ಯ ಅಲ್ಲ, ದೆಹಲಿಯಲ್ಲಿ ಕುಳಿತಿರುವ ರಾಹುಲ್ ಗಾಂಧಿ ಮತ್ತು ಅವರ ಸಲಹೆಗಾರರು.
ಕಾಂಗ್ರೆಸ್ಸಿನ ‘ಆಂತರಿಕ’ ರಾಜಕಾರಣ
2011ರಲ್ಲಿ ಇದೇ ರೀತಿಯ ಸನ್ನಿವೇಶ ಬಿಜೆಪಿಯಲ್ಲಿತ್ತು. ಅಂದಿನ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರನ್ನು ಬಿಜೆಪಿ ನಾಯಕರು ದೆಹಲಿ ಕಾಂಗ್ರೆಸಿನ ಏಜೆಂಟ್ ಎಂದು ಕೂಗುತ್ತಿದ್ದರು. ಆದರೆ, ಆಂತರ್ಯದಲ್ಲಿ ಯಡಿಯೂರಪ್ಪರನ್ನು ಇಳಿಸಿದ್ದರೆ ಕುರ್ಚಿ ಮೇಲೆ ಕೂರಲು ಅನಂತಕುಮಾರ್, ಸದಾನಂದಗೌಡ, ಜಗದೀಶ್ ಶೆಟ್ಟರ್ ತುದಿಗಾಲ ಮೇಲೆ ನಿಂತಿದ್ದರು. ಈಗಿನ ರಾಜ್ಯ ಕಾಂಗ್ರೆಸ್ ನಾಯಕರು ಕೂಡ ಮನಸ್ಸಿನೊಳಗೆ ಮಂಡಿಗೆ ಕಲ್ಪಿಸಿಕೊಳ್ಳುತ್ತಿದ್ದಾರೆ. ಆದರೆ, ರಾಜ್ಯಪಾಲರನ್ನು ಬಯ್ಯುತ್ತಿದ್ದಾರೆ. ರಾಜಕಾರಣಿಗಳೇ ಹೀಗೆ, ಅವರದು ತಿನ್ನುವ ಹಲ್ಲು ಮತ್ತು ತೋರಿಸುವ ಹಲ್ಲು ಬೇರೆ ಬೇರೆ! ಒಂದು ವೇಳೆ ಸಿದ್ದರಾಮಯ್ಯರನ್ನು ಇಳಿಸುವ ತೀರ್ಮಾನವನ್ನು ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಂಡರೆ, ಮುಖ್ಯಮಂತ್ರಿ ಆಗಲು ಡಿ.ಕೆ.ಶಿವಕುಮಾರ್ ಎಷ್ಟು ಪ್ರಯತ್ನ ಮಾಡುತ್ತಾರೋ ಅಷ್ಟೇ ಹರಸಾಹಸವನ್ನು ಅವರನ್ನು ಮುಖ್ಯಮಂತ್ರಿ ಆಗದಂತೆ ತಡೆಯಲು ಸತೀಶ್ ಜಾರಕಿಹೊಳಿ, ಎಂ.ಬಿ.ಪಾಟೀಲ್, ಜಮೀರ್ ಅಹ್ಮದ್ ಖಾನ್, ಕೆ.ಎನ್.ರಾಜಣ್ಣ ತರಹದ ನಾಯಕರು ಮಾಡುತ್ತಾರೆ. ಆದರೆ, ಇಬ್ಬರ ಜಗಳದಲ್ಲಿ ಮೂರನೆಯವನಿಗೆ ಲಾಭ ಎಂಬಂತೆ ಬಣ ತಿಕ್ಕಾಟ ಬೇಡ, ಸರ್ವಸಮ್ಮತಿಯಿಂದ ದಲಿತರ ಕೋಟಾದಲ್ಲಿ ನನ್ನನ್ನು ಮುಖ್ಯಮಂತ್ರಿ ಮಾಡಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರಯತ್ನ ಪಟ್ಟೇಪಡುತ್ತಾರೆ ಎನ್ನುವುದು ಕೂಡ ಗೊತ್ತಿರುವ ಸಂಗತಿ. ಪ್ಲಾನ್ ಎ ಪ್ರಕಾರ ಶತಾಯಗತಾಯ ಅಧಿಕಾರದಲ್ಲಿ ಉಳಿಯಲು ಸಿದ್ದರಾಮಯ್ಯ ಪ್ರಯತ್ನ ಮಾಡೇ ಮಾಡುತ್ತಾರೆ. ಆದರೆ, ಪ್ಲಾನ್ ಬಿ ಪ್ರಕಾರ ಸಿದ್ದರಾಮಯ್ಯ ಮನಸ್ಸಿನಲ್ಲಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆದರೆ ಆಗಲಿ ಅಂತ ಇದೆಯಾ ಅಥವಾ ಯಾವುದೇ ಕಾರಣಕ್ಕೂ ಡಿ.ಕೆ.ಯನ್ನು ಮುಖ್ಯಮಂತ್ರಿ ಮಾಡಲು ಬಿಡುವುದಿಲ್ಲ ಎಂದು ಇದೆಯಾ ಎನ್ನುವುದು ಪರಿಸ್ಥಿತಿ ಬಂದಾಗ ಮಾತ್ರ ಗೊತ್ತಾಗಬಹುದು. ಒಂದಂತೂ ನಿಜ, ಬರೀ ಸಿದ್ದರಾಮಯ್ಯ ಮಾತ್ರ ಸಂಕಷ್ಟದಲ್ಲಿಲ್ಲ. ಸ್ವಲ್ಪ ದಾರಿ ತಪ್ಪಿದರೆ ರಾಜ್ಯ ಕಾಂಗ್ರೆಸ್‌ನಲ್ಲಿ ಭಯಂಕರ ಬಿಕ್ಕಟ್ಟು ಸೃಷ್ಟಿಯಾದರೂ ಆಶ್ಚರ್ಯ ಇಲ್ಲ.
ಸಂದೇಹದ ಪ್ರಶ್ನೆಗಳು ಏನು?
1992ರಲ್ಲಿ ಮುಡಾ ಕೆಸರೆ ಗ್ರಾಮದ 3 ಎಕರೆ 16 ಗುಂಟೆ ಜಾಗವನ್ನು ಸ್ವಾಧೀನ ಪಡಿಸಿಕೊಂಡು ನಿವೇಶನ ಮಾಡಲು ಶುರುಮಾಡಿದ ನಂತರ ಏಕಾಏಕಿ ಆ ಜಾಗವನ್ನು1996ರಿಂದ 98ರ ಅವಧಿಯಲ್ಲಿ ಕೃಷಿ ಚಟುವಟಿಕೆ ನಡೆಸಲು ಡಿನೋಟಿಫೈ ಮಾಡಿದ್ದು ಯಾಕೆ? ಮತ್ತು ಆಗ ಉಪಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಇದ್ದರು ಎನ್ನುವುದು ಕಾಕತಾಳೀಯವೇ ಎಂಬುದು ತನಿಖೆಯಿಂದ ಗೊತ್ತಾಗಬೇಕು. ರಾಜ್ಯ ಸರ್ಕಾರವೇ ಕೊಟ್ಟಿರುವ ದಾಖಲೆಗಳ ಪ್ರಕಾರ ಕೃಷಿಗೆಂದು ಡಿನೋಟಿಫೈ ಮಾಡಿಸಿಕೊಂಡ ನಿವೇಶನವನ್ನು ಭೂಮಾಲೀಕ ದೇವರಾಜ 2004ರಲ್ಲಿ ಸಿದ್ದರಾಮಯ್ಯ ಬಾಮೈದ ಮಲ್ಲಿಕಾರ್ಜುನ್ ಸ್ವಾಮಿಗೆ ಮಾರಿದ್ದು ಕಾಕತಾಳೀಯ ಅನ್ನಿಸುವುದಿಲ್ಲ. ದಾಖಲೆಗಳ ಪ್ರಕಾರ 2004ರಲ್ಲಿ ಮಲ್ಲಿಕಾರ್ಜುನ್ ಭೂಮಿ ತೆಗೆದುಕೊಳ್ಳುವ ಮುಂಚೆಯೇ ದೇವರಾಜ್ ಅವರ ಜಾಗದಲ್ಲಿ ನಿವೇಶನಗಳಾಗಿ, ಆ ಜಾಗ ತೆಗೆದುಕೊಂಡವರು ಹಣ ಕಟ್ಟಿಲ್ಲ ಎಂದು ವಾಪಸ್ ಕೊಟ್ಟು ಡಿನೋಟಿಫೈ ಮಾಡಿ, ನಂತರ ಅದನ್ನು ಸಿದ್ದರಾಮಯ್ಯ ಬಾಮೈದ ಖರೀದಿ ಮಾಡಿ ಅಕ್ಕನಿಗೆ ಕೊಟ್ಟಿದ್ದರ ಹಿಂದೆ ಸಿದ್ದರಾಮಯ್ಯ ಬಳಿಯಿದ್ದ ಅಧಿಕಾರ ಕೆಲಸ ಮಾಡಿತ್ತಾ ಅನ್ನೋದು ಪೂರ್ಣ ಪಾರದರ್ಶಕ ತನಿಖೆಯಿಂದ ಗೊತ್ತಾಗಬೇಕಿದೆ. ಕೊನೆಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಹಾಕಿಕೊಂಡ ಬದಲಿ ನಿವೇಶನದ ಅರ್ಜಿ 2021ರಲ್ಲಿ ಭೂಮಿ ಕಳೆದುಕೊಂಡ ಜಾಗದಲ್ಲಿ 600ಕ್ಕೂ ಹೆಚ್ಚು ನಿವೇಶನಗಳು ಖಾಲಿ ಉಳಿದಿದ್ದರೂ ಕೂಡ ಇನ್ನೂ ಹೆಚ್ಚು ಬೆಲೆಬಾಳುವ ಮೈಸೂರಿನ ವಿಜಯನಗರ ಬಡಾವಣೆಯಲ್ಲಿ 14 ನಿವೇಶನ ಕೊಟ್ಟಿದ್ದು ಹೇಗೆ, ಯಾಕೆ? ಎನ್ನುವ ಪ್ರಶ್ನೆಗಳಿಗೆ ತನಿಖೆಯಿಂದಲೇ ಉತ್ತರ ಸಿಗಬೇಕಿದೆ. ಒಂದು ವೇಳೆ ಹಗರಣ ಹೊರಬಂದಾಗ ಉಳಿದ ವಿಷಯಗಳನ್ನು ಮಾಜಿ ನ್ಯಾಯಮೂರ್ತಿಗಳ ಆಯೋಗಕ್ಕೆ ಕೊಟ್ಟು, ಸಿದ್ದರಾಮಯ್ಯ ಪತ್ನಿ ನಿವೇಶನ ತೆಗೆದುಕೊಂಡ ವಿಷಯವನ್ನು ಮಾತ್ರ ತಕ್ಕಮಟ್ಟಿಗೆ ವಿಶ್ವಾಸಾರ್ಹತೆ ಉಳಿಸಿಕೊಂಡಿರುವ ಲೋಕಾಯುಕ್ತಕ್ಕೆ ಕೊಟ್ಟಿದ್ದರೆ ಇವತ್ತು ಈ ಸ್ಥಿತಿ ಬರುತ್ತಿರಲಿಲ್ಲವೇನೋ.
ಬಿಜೆಪಿ-ಜೆಡಿಎಸ್‌ಗೆ ಲಾಭ-ನಷ್ಟ
ಈಗಿನ ರಾಜಕಾರಣಕ್ಕೆ ಮತ್ತು ಇವತ್ತಿನ ರಾಜಕಾರಣಿಗಳಿಗೆ ತಾಳ್ಮೆ ಕಡಿಮೆ, ತರಾತುರಿ ಜಾಸ್ತಿ. ಬಹುತೇಕ ಅಕ್ಟೋಬರ್‌ನಲ್ಲಿ ಮಹಾರಾಷ್ಟ್ರ ಮತ್ತು ಹರ್ಯಾಣ ಎರಡೂ ರಾಜ್ಯಗಳನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿರುವ ಬಿಜೆಪಿಗೆ ಕರ್ನಾಟಕದ ಮೇಲೆ ಕಣ್ಣು ಇರುವಂತೆ ಕಾಣುತ್ತಿದೆ. ಅದಕ್ಕೆ ಸರಿಯಾಗಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಎರಡು ಭ್ರಷ್ಟಾಚಾರದ ಅಸ್ತ್ರಗಳನ್ನು ಬಿಜೆಪಿಗೆ ಕೊಟ್ಟು ಕುಳಿತಿದೆ. ಬಿಜೆಪಿಗೆ ಸಿದ್ದರಾಮಯ್ಯರನ್ನು ಅಲುಗಾಡಿಸಿದಷ್ಟೂ ರಾಜಕೀಯ ಲಾಭ ಜಾಸ್ತಿ ಎಂದು ತಿಳಿದಿದೆ. ಒಂದು ವೇಳೆ ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುವ ಸ್ಥಿತಿ ನಿರ್ಮಾಣವಾದರೆ ಕಾಂಗ್ರೆಸ್‌ನ ಕುರುಬ ಮತ್ತು ಇತರ ಹಿಂದುಳಿದ ವೋಟ್‌ಬ್ಯಾಂಕ್ ಚೆಲ್ಲಾಪಿಲ್ಲಿಯಾಗಿ ನಮಗೆ ನೇರ ಲಾಭ ತರುತ್ತದೆ ಎನ್ನುವುದು ಬಿಜೆಪಿಯ ಲೆಕ್ಕಾಚಾರ. ನಾವು ಸಿದ್ದರಾಮಯ್ಯ ವಿರುದ್ಧ ಇದ್ದೇವೆಯೇ ಹೊರತು ಕುರುಬರ ವಿರುದ್ಧ ಅಲ್ಲ ಅನ್ನೋದನ್ನು ತೋರಿಸಲು ವಿಜಯಶಂಕರರನ್ನು ಮೇಘಾಲಯದ ರಾಜ್ಯಪಾಲರನ್ನಾಗಿ ಮಾಡಿದ್ದು ಕಾಕತಾಳೀಯ ಅಲ್ಲ. ಒಂದು ವೇಳೆ ಡಿ.ಕೆ. ಸಿಎಂ ಆದರೆ ಮುಸ್ಲಿಂ ಬಿಟ್ಟು ಉಳಿದ ಜಾತಿಗಳು ಕಾಂಗ್ರೆಸ್‌ನಿಂದ ದೂರ ಬಂದರೆ, ಬರೀ ಲಿಂಗಾಯತ ವೋಟ್ ಬ್ಯಾಂಕ್ ಮೇಲೆ ಅವಲಂಬಿತ ಆಗಿರುವುದು ತಪ್ಪುತ್ತದೆ. ಅಷ್ಟೇ ಅಲ್ಲ, ಬಿಜೆಪಿ 100ರ ಆಸುಪಾಸು ಇರುವುದನ್ನು ಪೂರ್ಣ ಬಹುಮತಕ್ಕೆ ಕೊಂಡೊಯ್ಯಬಹುದು ಅನ್ನೋ ದೂರದ ಗಣಿತವೂ ಕಾಣುತ್ತಿದೆ. ಒಂದು ವೇಳೆ ಡಿ.ಕೆ. ಬದಲು ಬೇರೆ ಯಾರಾದರೂ ಮುಖ್ಯಮಂತ್ರಿ ಆದರೆ 1994ರಲ್ಲಿ ಆದಂತೆ ಕಾಂಗ್ರೆಸ್‌ನಲ್ಲಿ ಭಿನ್ನಮತ ಜಾಸ್ತಿಯಾಗಿ ಕಾಂಗ್ರೆಸ್ 170ರಿಂದ 30ಕ್ಕೆ ಬರುವ ಸ್ಥಿತಿಗೆ ಕಾರಣವಾಗಬಹುದು ಎಂಬ ಲೆಕ್ಕಾಚಾರವೂ ಬಿಜೆಪಿಯಲ್ಲಿದೆ.
ಇನ್ನು, ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಇಬ್ಬರಿಗೂ ಸಿದ್ದರಾಮಯ್ಯ ಮೇಲೆ ಯಾವುದೇ ಪ್ರೀತಿ ಉಳಿದಿಲ್ಲ. ಆದರೆ ಸಿದ್ದರಾಮಯ್ಯ ಹೋಗಿ ಡಿ.ಕೆ. ಬಂದರೆ ನಮ್ಮ ಬಳಿ ಇರುವ ಒಕ್ಕಲಿಗ ವೋಟ್ ಬ್ಯಾಂಕ್ ಛಿದ್ರಗೊಂಡು ಇನ್ನಷ್ಟು ತೊಂದರೆ ಆಗಬಹುದು, ಅದರ ಬದಲು ಮಲ್ಲಿಕಾರ್ಜುನ ಖರ್ಗೆ ಅಥವಾ ಜಿ.ಪರಮೇಶ್ವರ್ ತರಹದವರು ಸಿಎಂ ಆದರೆ ಒಕ್ಕಲಿಗರು ಇನ್ನಷ್ಟು ತಮ್ಮ ಬೆನ್ನ ಹಿಂದೆ ಕ್ರೋಡೀಕರಣಗೊಳ್ಳಬಹುದು ಎಂದು ಎಚ್‌ಡಿಕೆಗೆ ಅನ್ನಿಸಿದೆ. ಹೀಗಾಗಿ ಜೆಡಿಎಸ್ ತುಂಬಾ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ.
Satta Bazar Prediction: ಲೋಕಸಮರದಲ್ಲಿ 400 ರ ಗಡಿ ದಾಟುತ್ತಾ NDA? ಸಟ್ಟಾ ಬಜಾರ್ ಅಚ್ಚರಿಯ ಭವಿಷ್ಯ!
ರಾಜ್ಯಪಾಲರಿಗಿರುವ ಅಧಿಕಾರ ಎಷ್ಟು?
ಸಂವಿಧಾನದ ವಿಧಿ 163ರ ಪ್ರಕಾರ ಕೇಂದ್ರದಿಂದ ನೇಮಕಗೊಂಡ ರಾಜ್ಯಪಾಲರು ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಮಂತ್ರಿ ಪರಿಷತ್ತಿನ ಸಲಹೆ ಪಡೆಯುವ ನಿಯಮವಿದೆ. ಆದರೆ, ಸ್ವತಃ ಮುಖ್ಯಮಂತ್ರಿಗಳ ವಿರುದ್ಧ ಅಧಿಕಾರ ದುರುಪಯೋಗದ ಪ್ರಶ್ನೆ ಬಂದಾಗ ರಾಜ್ಯಪಾಲರು ತಮ್ಮ ವಿವೇಚನೆಯಿಂದ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವಿದೆ. ಆದರೆ, ಲೋಕಾಯುಕ್ತ, ಸಿಬಿಐ ಅಥವಾ ಎಸ್ಐಟಿ ತರಹದ ತನಿಖಾ ಸಂಸ್ಥೆಗಳ ವರದಿ ಇಲ್ಲದೇ ರಾಜ್ಯಪಾಲರು ಅನುಮತಿ ನೀಡತೊಡಗಿದರೆ ಚುನಾಯಿತ ಸರ್ಕಾರಗಳ ಸ್ಥಿರತೆ ಹೇಗೆ ಸಾಧ್ಯವಾಗುತ್ತದೆ ಎನ್ನುವುದು ಒಂದು ಆಯಾಮದ ಪ್ರಶ್ನೆಯಾದರೆ, ಯಾವ ಮುಖ್ಯಮಂತ್ರಿ ವಿರುದ್ಧವೂ ಅವರ ಸಚಿವ ಸಂಪುಟ ತನಿಖೆಯ ತೀರ್ಮಾನ ತೆಗೆದುಕೊಳ್ಳದೆ ಇದ್ದಾಗ, ಅವರ ಅಧೀನದಲ್ಲಿರುವ ತನಿಖಾ ಸಂಸ್ಥೆಗಳು ಹೇಗೆ ವರದಿ ನೀಡಲು ಸಾಧ್ಯ? ಆಗ ಅಧಿಕಾರದಲ್ಲಿರುವ ಜನಪ್ರತಿನಿಧಿಗಳ ವಿರುದ್ಧ ಗಂಭೀರ ದೂರುಗಳು ಬಂದಾಗ ತನಿಖೆಯನ್ನೇ ನಡೆಸದೇ ಇರುವ ಸ್ಥಿತಿ ಬಂದರೆ ಜನಸಾಮಾನ್ಯರಿಗೆ ಸರ್ಕಾರದ ಮುಖ್ಯಸ್ಥರಾಗಿ ಕುರ್ಚಿಯಲ್ಲಿ ಕುಳಿತವರ ಮೇಲೆ ವಿಶ್ವಾಸ ಹೇಗೆ ಉಳಿಯುತ್ತದೆ ಅನ್ನೋದು ಇನ್ನೊಂದು ಆಯಾಮದ ಪ್ರಶ್ನೆ. ರಾಜ್ಯಪಾಲರ ಯಾವುದೇ ನಿರ್ಣಯ ಕರ್ನಾಟಕದ ರಾಜಕಾರಣದ ದಿಕ್ಕನ್ನು ಬದಲಿಸಲಿದೆ ಎನ್ನುವುದು ಪಕ್ಕಾ.