ಮುಡಾ ಹಗರಣ ಒಂದೇ ಕೈಯಲ್ಲಿ ಚಪ್ಪಾಳೆ ತಟ್ಟಿದಂತಾಯ್ತು, ಅಧಿಕಾರಿಗಳದ್ದಷ್ಟೇ ತಪ್ಪಂತೆ: ಸ್ನೇಹಮಯಿ ಕೃಷ್ಣ

Published : Jan 29, 2026, 11:47 AM IST
Snehamayi krishna

ಸಾರಾಂಶ

ಮುಡಾ 50:50 ನಿವೇಶನ ಹಂಚಿಕೆ ಹಗರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಲೋಕಾಯುಕ್ತರ 'ಬಿ' ರಿಪೋರ್ಟ್ ಅಂಗೀಕರಿಸಿ, ಸಿಎಂ ಸಿದ್ದರಾಮಯ್ಯಗೆ ರಿಲೀಫ್ ನೀಡಿದೆ. ಈ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿರುವ ದೂರುದಾರ ಸ್ನೇಹಮಯಿ ಕೃಷ್ಣ, ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಘೋಷಿಸಿದ್ದಾರೆ.

ಮೈಸೂರು/ಬೆಂಗಳೂರು (ಜ.29):: ಬಹುಚರ್ಚಿತ ಮುಡಾ 50:50 ಅನುಪಾತದ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಲೋಕಾಯುಕ್ತ ಪೊಲೀಸರ 'ಬಿ' ರಿಪೋರ್ಟ್ (B-Report) ಅಂಗೀಕರಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬಕ್ಕೆ ಬಿಗ್ ರಿಲೀಫ್ ನೀಡಿದೆ. ಆದರೆ, ಈ ತೀರ್ಪಿನ ಬಗ್ಗೆ ದೂರುದಾರ ಸ್ನೇಹಮಯಿ ಕೃಷ್ಣ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, 'ಇದು ಒಂದೇ ಕೈಯಲ್ಲಿ ಚಪ್ಪಾಳೆ ಹೊಡೆದಂತೆ, ಒಂದೇ ಬೆರಳಲ್ಲಿ ಚಿಟಿಕೆ ಹೊಡೆದಂತೆ ಇದೆ,' ಎಂದು ವ್ಯಂಗ್ಯವಾಡಿದ್ದಾರೆ.

ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿರುವ ಸ್ನೇಹಮಯಿ ಕೃಷ್ಣ, ನ್ಯಾಯಾಲಯದ ತೀರ್ಪಿನ ತರ್ಕವನ್ನು ಪ್ರಶ್ನಿಸಿದ್ದಾರೆ. 'ನಿವೇಶನ ಪಡೆದ ಫಲಾನುಭವಿಗಳು ಯಾವುದೇ ತಪ್ಪು ಮಾಡಿಲ್ಲ, ಕೇವಲ ಅಧಿಕಾರಿಗಳು ಮಾತ್ರ ತಪ್ಪು ಮಾಡಿದ್ದಾರೆ ಎಂದರೆ ಹೇಗೆ? ಪ್ರಭಾವಿ ವ್ಯಕ್ತಿಗಳು ಅಥವಾ ಫಲಾನುಭವಿಗಳ ಒತ್ತಡವಿಲ್ಲದೆ, ಅಧಿಕಾರಿಗಳು ಸ್ವತಃ ತಾವೇ ಮುಂದಾಗಿ ಏಕೆ ನಿಯಮ ಉಲ್ಲಂಘಿಸಿ ಲಾಭ ಮಾಡಿಕೊಡುತ್ತಾರೆ? ಈ ಹಗರಣದಲ್ಲಿ ಅಧಿಕಾರಿಗಳಿಗೆ ಆದ ವೈಯಕ್ತಿಕ ಲಾಭವಾದರೂ ಏನು?' ಎಂದು ಪ್ರಶ್ನಿಸಿದ್ದಾರೆ.

ಸಿಎಂ ಆತ್ಮಸಾಕ್ಷಿಗೆ ಸವಾಲು:

ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ವಾಗ್ದಾಳಿ ಮುಂದುವರಿಸಿದ ಸ್ನೇಹಮಯಿ ಕೃಷ್ಣ, 'ಸಿದ್ದರಾಮಯ್ಯನವರಿಗೆ ಆತ್ಮಸಾಕ್ಷಿ ಇದ್ದರೆ ನಾನು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಲಿ. ಅವರ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಮತ್ತು ಪತ್ನಿ ಪಾರ್ವತಿ ಅವರಿಗೆ ತಾವು ಖರೀದಿಸುತ್ತಿರುವ ಜಮೀನಿನ ಬಗ್ಗೆ ಕನಿಷ್ಠ ಜ್ಞಾನವೂ ಇರಲಿಲ್ಲವೇ? ಮಲ್ಲಿಕಾರ್ಜುನ ಸ್ವಾಮಿ ಜಾಗ ಪಡೆದಾಗ ಅಲ್ಲಿ ಉದ್ಯಾನವನ, ರಸ್ತೆಗಳು ನಿರ್ಮಾಣವಾಗಿರಲಿಲ್ಲವೇ? ಅಭಿವೃದ್ಧಿ ಹೊಂದಿದ ಜಾಗವನ್ನು ಕೃಷಿ ಭೂಮಿ ಎಂದು ಹೇಗೆ ನೋಂದಣಿ ಮಾಡಿಕೊಂಡರು? ಈ ಬಗ್ಗೆ ಸಿಎಂ ಮೌನ ಮುರಿಯಬೇಕು' ಎಂದು ಸವಾಲು ಹಾಕಿದ್ದಾರೆ.

ಹೈಕೋರ್ಟ್‌ಗೆ ಮೇಲ್ಮನವಿ:

ಜನಪ್ರತಿನಿಧಿಗಳ ನ್ಯಾಯಾಲಯವು ಯಾವ ಮಾನದಂಡಗಳ ಆಧಾರದ ಮೇಲೆ ಬಿ ರಿಪೋರ್ಟ್ ಅಂಗೀಕರಿಸಿದೆ ಎಂಬುದು ತೀರ್ಪಿನ ಸಂಪೂರ್ಣ ಪ್ರತಿ ಸಿಕ್ಕ ಬಳಿಕ ತಿಳಿಯಲಿದೆ. ಆದರೆ, ಈ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಕೃಷ್ಣ ಸ್ಪಷ್ಟಪಡಿಸಿದ್ದಾರೆ. 'ನನ್ನ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಸಿದ್ದರಾಮಯ್ಯ (ಎ1), ಪಾರ್ವತಿ (ಎ2), ಮಲ್ಲಿಕಾರ್ಜುನ ಸ್ವಾಮಿ (ಎ3) ಹಾಗೂ ದೇವರಾಜು (ಎ4) ಈ ಪ್ರಕರಣದಲ್ಲಿ ತಪ್ಪಿತಸ್ಥರು ಎಂಬುದನ್ನು ಸಾಬೀತುಪಡಿಸಲು ಹೈಕೋರ್ಟ್ ಮೊರೆ ಹೋಗುತ್ತೇನೆ' ಎಂದು ಅವರು ಶಪಥ ಮಾಡಿದ್ದಾರೆ.

ಇತರರಿಗೆ ಎಚ್ಚರಿಕೆ:

ಈ ತೀರ್ಪಿನಿಂದಾಗಿ ಮುಡಾ 50:50 ಯೋಜನೆಯಡಿ ನಿವೇಶನ ಪಡೆದ ಇತರರು ತಾವು ಸುರಕ್ಷಿತ ಎಂದು ಭಾವಿಸುವಂತಿಲ್ಲ. ನ್ಯಾಯಾಲಯವು ತನಿಖೆಯನ್ನು ಮುಂದುವರಿಸುವಂತೆ ಸೂಚನೆ ನೀಡಿದೆ. ಹೀಗಾಗಿ ಅಧಿಕಾರಿಗಳು ಮತ್ತು ಇತರ ಫಲಾನುಭವಿಗಳ ಮೇಲಿನ ತೂಗುಗತ್ತಿ ಇನ್ನೂ ನಿವಾರಣೆಯಾಗಿಲ್ಲ ಎಂದು ಸ್ನೇಹಮಯಿ ಕೃಷ್ಣ ಅಭಿಪ್ರಾಯಪಟ್ಟಿದ್ದಾರೆ. ಒಟ್ಟಾರೆಯಾಗಿ, ಕೆಳಹಂತದ ನ್ಯಾಯಾಲಯದಲ್ಲಿ ಹಿನ್ನಡೆಯಾಗಿದ್ದರೂ, ಕಾನೂನು ಹೋರಾಟವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುವ ದೃಢ ನಿರ್ಧಾರವನ್ನು ದೂರುದಾರರು ಪ್ರಕಟಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬರಡು ನೆಲದಲ್ಲಿ ದೇಶದ ಬೃಹತ್‌ ಸಾಮ್ರಾಜ್ಯ!
Tumakur: 70 ಲಕ್ಷ ವಿದ್ಯುತ್‌ ಬಿಲ್‌ ಪಾವತಿಸಲು ಬಡವಾದ ಸರ್ಕಾರ, ಸಿದ್ದಗಂಗಾ ಮಠಕ್ಕೆ ನೀರು ಬಂದ್!