
ಮೈಸೂರು(ಜ.22): ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಮುಡಾ (MUDA) ಹಗರಣದ ತನಿಖೆ ತೀವ್ರಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಹಾಗೂ ಮುಡಾ ಮಾಜಿ ಅಧ್ಯಕ್ಷ ಕೆ ಮರಿಗೌಡ ಅವರಿಗೆ ಜಾರಿ ನಿರ್ದೇಶನಾಲಯ (ED) ಬಿಸಿ ಮುಟ್ಟಿಸಿದೆ. ಅಕ್ರಮ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮರಿಗೌಡ ಅವರಿಗೆ ಸೇರಿದ ಕೋಟ್ಯಂತರ ರೂಪಾಯಿ ಮೌಲ್ಯದ ಸ್ಥಿರ ಆಸ್ತಿಗಳನ್ನು ಅಧಿಕಾರಿಗಳು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಮುಡಾ ಅಕ್ರಮದಲ್ಲಿ ಮರಿಗೌಡ ಅವರು ನೇರವಾಗಿ ಭಾಗಿಯಾಗಿರುವುದು ತನಿಖೆಯ ವೇಳೆ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಸೇರಿದ ಒಟ್ಟು 10 ಸ್ಥಿರ ಆಸ್ತಿಗಳನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ. ಇದರಲ್ಲಿ 6 ಅಕ್ರಮ ಮುಡಾ ನಿವೇಶನಗಳು, 3 ಇತರ ಸ್ಥಿರ ಆಸ್ತಿಗಳು ಹಾಗೂ ಬರೋಬ್ಬರಿ 20.85 ಕೋಟಿ ರೂಪಾಯಿ ಮಾರುಕಟ್ಟೆ ಮೌಲ್ಯದ ಒಂದು ಬೃಹತ್ ವಾಣಿಜ್ಯ ಕಟ್ಟಡ ಸೇರಿದೆ. ನಿಯಮಗಳನ್ನು ಗಾಳಿಗೆ ತೂರಿ ಈ ಆಸ್ತಿಗಳನ್ನು ಸಂಪಾದಿಸಿರುವುದು ಇಡಿ ದಾಳಿ ವೇಳೆ ಪತ್ತೆಯಾಗಿತ್ತು.
ಮುಡಾದ ಮಾಜಿ ಆಯುಕ್ತ ಜಿ ಟಿ ದಿನೇಶ್ ಕುಮಾರ್ ಅವರ ಸಹಾಯದಿಂದಲೇ ಮರಿಗೌಡ ಅವರು ಈ ಅಕ್ರಮ ನಿವೇಶನಗಳನ್ನು ಗಿಟ್ಟಿಸಿಕೊಂಡಿದ್ದಾರೆ ಎನ್ನಲಾಗಿದೆ. ಸೈಟ್ ಹಂಚಿಕೆಯಲ್ಲಿ ಕಾನೂನು ಮತ್ತು ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡಲಾಗಿದ್ದು, ದಿನೇಶ್ ಕುಮಾರ್ ಅವರು ಮರಿಗೌಡಗೆ ಅಕ್ರಮ ಎಸಗಲು ಪರೋಕ್ಷವಾಗಿ ಸಾಥ್ ನೀಡಿದ್ದಾರೆ ಎಂಬ ಅಂಶ ವಿಚಾರಣೆಯಲ್ಲಿ ಬಯಲಾಗಿದೆ. ಇದಕ್ಕೂ ಮುನ್ನ ಹಲವು ಬಾರಿ ಇಡಿ ವಿಚಾರಣೆಗೆ ಹಾಜರಾಗಿದ್ದ ಮರಿಗೌಡ, ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದರು.
460 ಕೋಟಿ ರೂ. ದಾಟಿದ ಒಟ್ಟು ಮುಟ್ಟುಗೋಲು ಮೊತ್ತ!
ಮುಡಾ ಹಗರಣದ ತನಿಖೆ ಆರಂಭವಾದ ದಿನದಿಂದ ಇಡಿ ಅಧಿಕಾರಿಗಳು ಹಂತ ಹಂತವಾಗಿ ದೊಡ್ಡ ಮೊತ್ತದ ಆಸ್ತಿಗಳನ್ನು ಜಪ್ತಿ ಮಾಡುತ್ತಿದ್ದಾರೆ. ಈ ಹಿಂದೆ 283 ಮುಡಾ ಸೈಟ್‌ಗಳು ಮತ್ತು 3 ವೈಯಕ್ತಿಕ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇಂದಿನ ಕಾರ್ಯಾಚರಣೆಯನ್ನೂ ಸೇರಿಸಿ, ಈ ಹಗರಣದಲ್ಲಿ ಇದುವರೆಗೆ ಅಂದಾಜು 460 ಕೋಟಿ ರೂಪಾಯಿ ಮೌಲ್ಯದ ಆಸ್ತಿಪಾಸ್ತಿಗಳನ್ನು ಇಡಿ ಮುಟ್ಟುಗೋಲು ಹಾಕಿಕೊಂಡಂತಾಗಿದೆ. ಈ ಬೆಳವಣಿಗೆಯು ಹಗರಣದ ಇತರ ಆರೋಪಿಗಳಲ್ಲಿ ನಡುಕ ಹುಟ್ಟಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ