
ಬೆಂಗಳೂರು (ಆ.22): ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿರುವ ಇನ್ನೊಂದು ಸುಳ್ಳು ಬಟಾಬಯಲಾಗಿದೆ. ಈ ಬಗ್ಗೆ ಸಿಎಂ ವಿರುದ್ಧ ದೂರುದಾರ ಸ್ನೇಹಮಯಿ ಕೃಷ್ಣ ಅವರೇ ಆರೋಪ ಮಾಡಿದ್ದಾರೆ. ರಿಟ್ ಅರ್ಜಿಯಲ್ಲಿ ಸಿಎಂ ನ್ಯಾಯಾಲಯದ ದಿಕ್ಕುತಪ್ಪಿಸುವ ಕೆಲಸ ಮಾಡಿದ್ದಾರೆ ಎಂದು ಅವರು ದೂರಿದ್ದಾರೆ. ಇದರಿಂದ ಸಿಎಂ ಪಾಲಿಗೆ ಮತ್ತೊಂದು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಪ್ರಕರಣದ ಬಗ್ಗೆ ಎಲ್ಲಾ ಗೊತ್ತಿದ್ರೂ ಅವರು ಸುಳ್ಳು ಹೇಳಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ತಿಳಿಸಿದ್ದಾರೆ. ಮುಡಾಗೆ ತಮ್ಮ ಪತ್ನಿ ಪಾರ್ವತಿ ಬರೆದ ಪತ್ರದ ಬಗ್ಗೆ ತನಗೆ ಗೊತ್ತೇ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ, ರಾಜ್ಯಪಾಲರು ನೀಡಿದ್ದ ಶೋಕಾಸ್ ನೋಟಿಸ್‌ಗೆ ಸಿಎಂ ಕೊಟ್ಟಿರುವ ಉತ್ತರದಲ್ಲಿಯೇ ಇದರ ಸ್ಪೋಟಕ ಮಾಹಿತಿಗಳಿವೆ. ನನ್ನ ಪತ್ನಿ ಮುಡಾಗೆ ಯಾವ ಪತ್ರವನ್ನ ಬರೆದಿಲ್ಲ ಎಂದು ಹೇಳುತ್ತಿದ್ದ ಸಿಎಂಗೆ ಇದರಿಂದ ಸಂಕಷ್ಟ ಕಾದಿದ್ಯಾ ಎನ್ನುವ ಪ್ರಶ್ನೆಗಳು ಬಂದಿವೆ.
ಸಿಎಂ ರಾಜ್ಯಪಾಲರಿಗೆ ಕೊಟ್ಟಿರುವ ಉತ್ತರದಲ್ಲಿ, 30ನೇ ಖಂಡಿಕೆ 15ನೇ ಅನೆಕ್ಶರ್‌ನಲ್ಲಿ ತಮ್ಮ ಪತ್ನಿ ಮುಡಾಗೆ ಪತ್ರ ಬರೆದಿರುವ ಬಗ್ಗೆ ಸಿಎಂ ಮಾಹಿತಿ ನೀಡಿದ್ದಾರೆ. 2014ರ ಜೂನ್ 23 ರಂದು ಮುಡಾಗೆ ಸಿಎಂ ಪತ್ನಿ ಪಾರ್ವತಿ ಪತ್ರ ಬರೆದಿದ್ದು, 3.16 ಎಕರೆ ಜಮೀನಿಗೆ ಬದಲಿ ಜಾಗ ಕೇಳಿದ್ದಾರೆ. ಈ ಅರ್ಜಿಯ ಬಗ್ಗೆ ಸಿಎಂಗೆ ಸಂಪೂರ್ಣ ಮಾಹಿತಿ ಇದ್ದರೂ, ನನ್ನ ಪತ್ನಿ ಮುಡಾಗೆ ಬರೆದಿರುವ ಪತ್ರ ಗೊತ್ತಿಲ್ಲ ಎಂದು ಸಿಎಂ ಹೇಳಿದ್ದರು.
ಇನ್ನು ಸ್ನೇಹಮಯಿ ಕೃಷ್ಣ ಅವರು ರಿಟ್ ಅರ್ಜಿಯಲ್ಲಿ ಸಿಎಂ ನ್ಯಾಯಾಲಯದ ದಿಕ್ಕುತಪ್ಪಿಸುವ ಕೆಲಸ ಮಾಡಿದ್ದಾರೆ ಎಂದೂ ಗಂಭೀರ ಆರೋಪ ಮಾಡಿದ್ದಾರೆ. ಮುಡಾ ಹಗರಣ ವಿಚಾರವಾಗಿ ಸಿಎಂ ವಿರುದ್ಧ ಸ್ನೇಹಮಯಿ ಕೃಷ್ಣ ದೂರು ನೀಡಿದ್ದಾರೆ. ಪತ್ನಿ ಪಾರ್ವತಿ ಮುಡಾಗೆ ಪತ್ರ ಬರೆದಿರುವುದು ಸಿದ್ದರಾಮಯ್ಯಗೆ ಮೊದಲೇ ಗೊತ್ತಿತ್ತು. ಸಿದ್ದರಾಮಯ್ಯ ಒಟ್ಟು 713 ಪುಟಗಳ ದಾಖಲೆ ಒಳಗೊಂಡ ರಿಟ್ ಅರ್ಜಿಯನ್ನು ಕೋರ್ಟ್‌ಗೆ ಹಾಕಿದ್ದಾರೆ. 531ನೇ ಪುಟವಾಗಿ ಪಾರ್ವತಿ ಬರೆದ ಅರ್ಜಿಯ ಮೊದಲ ಪುಟ ಇದೆ. ಆದರೆ 532ನೇ ಪುಟದಲ್ಲಿ ಪಾರ್ವತಿ ಅವರು ಬರೆದ ಎರಡನೇ ಪುಟ ಇಲ್ಲ. ಅದರಲ್ಲೂ ಎರಡನೇ ಪುಟದಲ್ಲಿ ಸಾಕ್ಷ್ಯ ನಾಶ ಎನ್ನುವ ರೀತಿಯಲ್ಲಿ ವೈಟ್ನರ್ ಹಾಕಿ ಅಳಿಸುವ ಪ್ರಯತ್ನ ಮಾಡಲಾಗಿದೆ. 532ನೇ ಪುಟದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ನಡಾವಳಿ ಪತ್ರ ಇದೆ. ವೈಟ್ನರ್ ಹಾಕಿದ ಕಾರಣಕ್ಕಾಗಿ ಎರಡನೇ ಪುಟ ಬಿಟ್ಟು ಕೇವಲ ಒಂದು ಪುಟ ಮಾತ್ರ ಕೋರ್ಟ್‌ಗೆ ಕೊಟ್ಟಿದ್ದಾರೆ. ಆ ಮೂಲಕ ರಾಜ್ಯ ಜನರಿಗೆ ಹಾಗೂ ಕೋರ್ಟ್‌ಗೆ ಸತ್ಯ ಮುಚ್ಚಿಡುತ್ತಿದ್ದಾರೆ. ಇದೇ ವಿಚಾರದಲ್ಲಿ ರಾಜ್ಯಪಾಲರಿಗೆ ಬರೆದಿರುವ ಶೋಕಾಸ್ ನೋಟಿಸ್‌ನಲ್ಲೂ ಸಿಎಂ ಹೇಳಿದ್ದಾರೆ.
ಏನಿದು ಮುಡಾ ಹಗರಣ? ಸಿಎಂ ಸಿದ್ದರಾಮಯ್ಯ ಪ್ರಾಸಿಕ್ಯೂಷನ್ ಗಾಳಕ್ಕೆ ಸಿಕ್ಕಿಬಿದ್ದಿದ್ದು ಹೇಗೆ?
ಶೋಕಾಸ್ ನೋಟಿಸ್ ಉತ್ತರದ 30 ನೇ ಖಂಡಿಕೆಯಲ್ಲಿ ತಮ್ಮ ಪತ್ನಿ ಪತ್ರ ಬರೆದ ಮಾಹಿತಿ ಕೊಟ್ಟಿದ್ದಾರೆ. ಈ ಎಲ್ಲಾ ಲೋಪಗಳೇ ಹೈಕೋರ್ಟ್ ನಲ್ಲಿ ನಮಗೆ ವರ ಆಗಲಿದೆ. ಕೋರ್ಟ್ ನಮ್ಮ ವಾದವನ್ನು ನಂಬಲು ಅನುಕೂಲ ಆಗಲಿದೆ ಎಂದು ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.
ಕೋರ್ಟ್‌ನಲ್ಲಿ ತನಿಖೆಗೆ ಆದೇಶ ಸಿಕ್ರೆ ತಕ್ಷಣ ಸಿದ್ದರಾಮಯ್ಯ ವಿರುದ್ದ ಎಫ್ಐಆರ್! ಸಿಎಂಗೆ ದೂರುದಾರರ ಚೆಕ್ ಮೇಟ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ