INTERVIEW: ಕೇವಲ ಹೊಟ್ಟೆಕಿಚ್ಚಿಂದ ಹುಟ್ಟಿದ ಕೇಸ್‌ ಮುಡಾ - ಬೈರತಿ ಸುರೇಶ್

By Kannadaprabha News  |  First Published Aug 1, 2024, 9:08 AM IST

ಹಿಂದುಳಿದ ವರ್ಗಕ್ಕೆ ಸೇರಿದ ಒಬ್ಬ ವ್ಯಕ್ತಿ ಈ ರೀತಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿರೋದು ಸಹಿಸಲು ಪ್ರತಿಪಕ್ಷಗಳಿಗೆ ಆಗುತ್ತಿಲ್ಲ. ಕೇವಲ ಹೊಟ್ಟೆಕಿಚ್ಚಿಂದ ಹುಟ್ಟಿದ ಕೇಸ್‌ ಮುಡಾ ಹಗರಣ ಎಂದು ಆರೋಪ ಮಾಡುತ್ತಿದ್ದಾರೆ.


ಬೈರತಿ ಸುರೇಶ್,ನಗರಾಭಿವೃದ್ಧಿ ಸಚಿವ

ಸಂದರ್ಶನ: ಎಸ್‌.ಗಿರೀಶ್‌ ಬಾಬು

Tap to resize

Latest Videos

ಮುಡಾ ಹಾಗೂ ವಾಲ್ಮೀಕಿ ಪ್ರಕರಣಗಳ ಸಂಕಷ್ಟದಲ್ಲಿ ಇರುವ ರಾಜ್ಯ ಸರ್ಕಾರಕ್ಕೆ ಇದೀಗ ರಾಜ್ಯಪಾಲರ ಅಂಗಳಕ್ಕೆ ಬಂದಿರುವ ಪ್ರಾಸಿಕ್ಯೂಷನ್‌ ಮನವಿ ಎಂಬ ಹೊಸ ಸವಾಲು ಎದುರಾಗಿದೆ. ಇದರ ನಡುವೆಯೇ ಮುಡಾ ಪ್ರಕರಣ ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದಾಳ ಬೀಸಲಾರಂಭಿಸಿವೆ. ಸದನ ಕೋಲಾಹಲದ ನಂತರ ಪಾದಯಾತ್ರೆಗೂ ಸಜ್ಜಾಗಿವೆ. ಪ್ರತಿಪಕ್ಷಗಳು ಮಾಡುತ್ತಿರುವ ಆರೋಪಗಳು ಹಾಗೂ ಎತ್ತುತ್ತಿರುವ ಪ್ರಶ್ನೆಗಳಲ್ಲಿ ಎಷ್ಟು ತಥ್ಯವಿದೆ? ಮುಡಾ ಪ್ರಕರಣದ ಅಸಲಿಯತ್ತೇನು? ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದ ಪಾತ್ರವೇನು? ಪ್ರಭಾವ ಬಳಕೆಯಾಗಿದೆಯೇ? ಸಿದ್ದರಾಮಯ್ಯ ಡಿಸಿಎಂ ಆಗಿದ್ದಾಗ ಡಿ-ನೋಟಿಫೈ ಮಾಡಿಸಿದ್ದು ನಿಜವೇ? ಒಂದು ವೇಳೆ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ನೀಡಿದರೆ ಕಾಂಗ್ರೆಸ್ಸಿಗರ ನಡೆಯೇನು ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರಿಸಲು ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿದ್ದಾರೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌.

ಮುಡಾ, ವಾಲ್ಮೀಕಿ ಹಗರಣ ಸರ್ಕಾರವನ್ನು ಕಾಡುತ್ತಿದೆ. ಜತೆಗೆ ಪ್ರಾಸಿಕ್ಯೂಷನ್‌ ಬೆದರಿಕೆಯೂ ಆರಂಭವಾಗಿದೆ?

-‍‍ ಸಿ.ಜೆ. ಅಬ್ರಾಹಾಂ ಅನ್ನೋರು ಪ್ರಾಸಿಕ್ಯೂಷನ್‌ ಮಾಡುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ. ರಾಜ್ಯಪಾಲರು ಈ ಬಗ್ಗೆ ಅಭಿಪ್ರಾಯ ಕೇಳಿದ್ದಾರೆ. ಅದನ್ನು ಸಚಿವ ಸಂಪುಟದಲ್ಲಿಟ್ಟು, ಸಂಪುಟ ಏನು ಅಭಿಪ್ರಾಯ ಪಡುತ್ತದೆಯೋ ಅದನ್ನು ರಾಜ್ಯಪಾಲರಿಗೆ ಹೇಳುತ್ತೇವೆ. ಇದಾದ ನಂತರ ರಾಜ್ಯಪಾಲರು ಯಾವ ನಿರ್ಧಾರ ಮಾಡುತ್ತಾರೋ ಅದರ ಮೇಲೆ ನಮ್ಮ ಮುಂದಿನ ನಡೆ ನಿರ್ಧರಿಸುತ್ತೇವೆ. ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಒಂದು ಸುಭದ್ರ ಸರ್ಕಾರವನ್ನು ಕೆಡವಲು ಯಾರಾದರೂ ಪ್ರಯತ್ನಪಟ್ಟರೆ ನಾವು ಜನರ ಮುಂದೆ ಹಾಗೂ ನ್ಯಾಯಾಲಯದ ಮುಂದೆ ಹೋಗುತ್ತೇವೆ.

ಜೈಹಿಂದ್ ಚಾನೆಲ್‌ನಲ್ಲಿ ಡಿಕೆಶಿ ಹೂಡಿಕೆ ನಿಜ: ಚಾನೆಲ್‌ ಮುಖ್ಯಸ್ಥ

ನಿಮ್ಮ ಖಾತೆಯ ವ್ಯಾಪ್ತಿಯಲ್ಲಿ ಬರುವ ಮುಡಾ ಮಹಾಭಾರತದ ಸದ್ದು ಜೋರಾಗಿದೆ?

- ಹಿಂದುಳಿದ ವರ್ಗಕ್ಕೆ ಸೇರಿದ ಒಬ್ಬ ವ್ಯಕ್ತಿ ಈ ರೀತಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿರೋದು ಸಹಿಸಲು ಪ್ರತಿಪಕ್ಷಗಳಿಗೆ ಆಗುತ್ತಿಲ್ಲ. ಅಲ್ಲದೆ, ಅವರ ವಿರುದ್ಧ ಆರೋಪ ಮಾಡಲು ಬೇರೆ ಏನೂ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಮೂರು ವರ್ಷದ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಕಾನೂನುಬದ್ಧವಾಗಿ ಸಿದ್ದರಾಮಯ್ಯ ಅವರ ಧರ್ಮಪತ್ನಿ ಪಾರ್ವತಿ ಅವರಿಗೆ ಮುಡಾ ನೀಡಿದ ನಿವೇಶನದ ವಿಚಾರ ಮುಂದಿಟ್ಟುಕೊಂಡು ಸುಳ್ಳು ಆರೋಪ ಮಾಡುತ್ತಿದ್ದಾರೆ. ಇದರ ಹಿಂದೆ ಹೊಟ್ಟೆಯುರಿ ಬಿಟ್ಟರೇ ಬೇರೆ ಯಾವ ಕಾರಣವೂ ಇಲ್ಲ.

ನೀವು ಮುಡಾ ಪ್ರಕರಣಕ್ಕೆ ಸಂಬಂಧಿಸಿದ ಕಡತಗಳನ್ನು ಹೆಲಿಕಾಪ್ಟರ್‌ನಲ್ಲಿ ಹೋಗಿ ತಂದುಬಿಟ್ರಂತೆ?

- ನನ್ನ ಮೇಲೆ ಇಂತಹ ಆರೋಪ ಮಾಡುವ ಯಾವುದೇ ವ್ಯಕ್ತಿ ಧರ್ಮಸ್ಥಳದ ಮಂಜುನಾಥ ಸ್ವಾಮಿ ಮುಂದೆ ಬಂದು ಆಣೆ ಮಾಡಲಿ. ಈ ಆರೋಪ ಮಾಡುವ ಆ ವಿಶ್ವನಾಥ್‌ ತಾನೂ ಪ್ರಾಮಾಣಿಕ ಜೀವನ ನಡೆಸಿದ್ದಾನಾ? ನಾನು ಅವನಂತೆ ರೋಲ್ ಕಾಲ್‌ ವ್ಯಕ್ತಿಯಲ್ಲ. ಈ ವಿಶ್ವನಾಥ್‌, ಸಿದ್ದರಾಮಯ್ಯ ಅವರ ಬಳಿ ಅಧಿಕಾರಿಗಳ ವರ್ಗಾವಣೆಗಾಗಿ ಬಂದಿದ್ದ. ಒಂದು ಗ್ಯಾಂಗ್‌ ಕಟ್ಟಿಕೊಂಡು ನನ್ನ ಬಳಿ ಬಂದು ಇದೇ ಮುಡಾದಲ್ಲಿ ಸೈಟ್‌ ಬೇಕು ಅಂತ ಕೇಳಿದ್ದ. ತನ್ನ ಸ್ವಂತ ಅಳಿಯನನ್ನು ಪಿಡಬ್ಯ್ಲುಡಿಗೆ ಛೀಫ್‌ ಎಂಜಿನಿಯರ್‌ ಮಾಡಬೇಕು ಅಂತ ಸಿದ್ದರಾಮಯ್ಯ ಅವರ ಬಳಿ ಬಂದಿದ್ದ. ಆದಾದ ಮೇಲೆ ತನಗೆ ಯಾರಿಂದಲಾದರೂ ಹಣದ ಸಹಾಯ ಮಾಡಿಸಿ ಅಂತ ಸಿದ್ದರಾಮಯ್ಯ ಅವರಲ್ಲಿ ದುಡ್ಡು ಕೇಳಿದ್ದ. ಇದಕ್ಕೆ ನಾವು ಸೊಪ್ಪು ಹಾಕಿರಲಿಲ್ಲ. ಅಷ್ಟೇ ಅಲ್ಲ, ಈತ ಜೆಡಿಎಸ್‌ಗೆ, ಕಾಂಗ್ರೆಸ್‌ಗೆ ದ್ರೋಹ ಮಾಡಿದ. ಬಿಜೆಪಿ ಎಂಎಲ್‌ಎ ಆಗಿದ್ದುಕೊಂಡು ಸಿದ್ದರಾಮಯ್ಯ ಅವರ ಬಳಿ ಬಂದು ಕಾಂಗ್ರೆಸ್‌ ಸೇರುತ್ತೇನೆ ಎಂದಿದ್ದ. ಇದಕ್ಕೆ ಸಿದ್ದರಾಮಯ್ಯ ಒಪ್ಪಲಿಲ್ಲ. ಈ ಎಲ್ಲ ಕಾರಣಗಳಿಂದಾಗಿ ವೈಯಕ್ತಿಕ ದ್ವೇಷದಿಂದ ಆತ ಆರೋಪ ಮಾಡುತ್ತಿದ್ದಾನೆ. ವಾಸ್ತವವಾಗಿ ಆತ ಹುಚ್ಚಾಸ್ಪತ್ರೆಯಲ್ಲಿ ಇರಬೇಕಾದವನು. ಮೊದಲು ಯಾರಾದರೂ ಅವನನ್ನು ಹುಚ್ಚಾಸ್ಪತ್ರೆಗೆ ಸೇರಿಸಲಿ.

ಮುಡಾದಲ್ಲಿ ನಿವೇಶನ ಪಡೆದ ಹಲವು ಪ್ರಭಾವಿಗಳ ಪಟ್ಟಿ ಬಿಡುಗಡೆ ಮಾಡಿದ್ದೀರಲ್ಲ. ಅದರ ಅರ್ಥ ಅವರು ಅಕ್ರಮ ಮಾಡಿದ್ದಾರೆ ಅಂತಲಾ?

- ಮೇಡಂ (ಸಿದ್ದರಾಮಯ್ಯ ಅವರ ಪತ್ನಿ) ಅವರು ಹೇಗೆ ಮುಡಾದಿಂದ ನಿವೇಶನ ಪಡೆದಿದ್ದಾರೋ ಅದೇ ರೀತಿ ಈ ಪ್ರಭಾವಿಗಳು ನಿವೇಶನ ಪಡೆದಿದ್ದಾರೆ ಎಂದಷ್ಟೇ ನಾನು ಹೇಳಿದ್ದು. ಅವರು ಅಕ್ರಮ ಮಾಡಿದ್ದಾರೆ ಎಂದು ನಾನು ಎಲ್ಲೂ ಹೇಳಿಲ್ಲ. ಒಂದು ವೇಳೆ ಅಕ್ರಮ ನಡೆದಿದ್ದರೆ ಅದರ ಬಗ್ಗೆ ಪರಿಶೀಲನೆ ನಡೆಸಲು ದೇಸಾಯಿ ಆಯೋಗವಿದೆ. ಅದು ಪರಿಶೀಲನೆ ಮಾಡಿ ವರದಿ ನೀಡಲಿದೆ.

ಮುಡಾ ಹೋರಾಟಕ್ಕೆ ಕಾಂಗ್ರೆಸ್ಸಿನ ಒಳಗಿನಿಂದಲೇ ಒತ್ತಡವಿದೆ ಎಂದು ವಿಜಯೇಂದ್ರ ಹೇಳುತ್ತಾರೆ?

- ಮಾನ್ಯ ವಿಜಯೇಂದ್ರ ಅವರು ಮೊದಲು ಅವರ ಪಕ್ಷದಲ್ಲಿ ಇರುವ ಒಡಕನ್ನು ಸರಿಪಡಿಸಿಕೊಳ್ಳಲಿ. ಒಂದು ಕಡೆ ಯತ್ನಾಳ್‌, ಮತ್ತೊಂದು ಕಡೆ ರಮೇಶ್ ಜಾರಕಿಹೊಳಿ ಪಾದಯಾತ್ರೆಗೆ ವಿರೋಧ ಮಾಡಿದ್ದಾರೆ. ಜಾರಕಿಹೊಳಿ ನಾವು ಯಾವುದೇ ಕಾರಣಕ್ಕೂ ವಿಜಯೇಂದ್ರ ಲೀಡರ್‌ಶಿಪ್‌ ಒಪ್ಪಲ್ಲ ಅಂತ ಹೇಳಿದ್ದಾರೆ. ಹೀಗಾಗಿ ಮೊದಲು ವಿಜಯೇಂದ್ರ ಬಿಜೆಪಿಯ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣವನ್ನು ನೋಡಿಕೊಳ್ಳಲಿ. ಕಾಂಗ್ರೆಸ್‌ನಲ್ಲಿ ತಂದಿಡುವ ಪ್ರಯತ್ನ ಬೇಡ. ನಮ್ಮ ನಾಯಕರು ಅವರ ಸಂಪರ್ಕದಲ್ಲಿ ಇರಲ್ಲ. ಕಾಂಗ್ರೆಸ್‌ನಲ್ಲಿ ಒಗ್ಗಟ್ಟಿದೆ. ನಮ್ಮ ಒಗ್ಗಟ್ಟು ಮುರಿಯಲು ಯತ್ನಿಸುವುದು ಬೇಡ.

ಮುಡಾದಲ್ಲಿ 4 ಸಾವಿರ ಕೋಟಿ ರು. ಮೌಲ್ಯದ ಒಂದು ಲಕ್ಷ ಚದರ ಅಡಿ ನಿವೇಶನಗಳನ್ನು ಸಿದ್ದರಾಮಯ್ಯ ಹಾಗೂ ಅವರ ಹಿಂಬಾಲಕರಿಗೆ ಹಂಚಿಕೆ ಮಾಡಲಾಗಿದೆ ಅಂತ ಪ್ರತಿಪಕ್ಷ ನಾಯಕ ಅಶೋಕ್‌ ಆರೋಪಿಸುತ್ತಾರೆ?

- ಮಾನ್ಯ ಅಶೋಕ್‌ ಅವರು ಮೈಸೂರನ್ನು ಬೆಂಗಳೂರು ಎಂದು ಭಾವಿಸಿಬಿಟ್ಟಂತಿದೆ. ಅಶೋಕ್‌ ಹೇಳುತ್ತಿರುವ ನಂಬರ್‌ ನೋಡಿದರೆ ಆಶ್ಚರ್ಯ ಆಗುತ್ತದೆ. ಅವರು ಯಾವುದಕ್ಕೆ ಹೋಲಿಕೆ ಮಾಡುತ್ತಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ. ಇಂತಹ ಆರೋಪದ ಬಗ್ಗೆ ದಾಖಲೆ, ಸಾಕ್ಷ್ಯ ಏನಾದರೂ ಇದ್ದರೆ ಅದನ್ನು ಅವರು ಆಯೋಗದ ಮುಂದೆ ನೀಡಲಿ. ಅಲ್ಲಿ ಉತ್ತರ ನೀಡಲು ನಾವು ಸಿದ್ಧರಿದ್ದೇವೆ. ಇಷ್ಟಕ್ಕೂ ರೈತರ ಜಮೀನು ಸ್ವಾಧೀನ ಮಾಡಿಕೊಂಡಿದ್ದಕ್ಕೆ ಅವರಿಗೆ ಪರಿಹಾರ ನೀಡಬೇಕೋ ಅಥವಾ ಬೇಡವೋ ಎಂಬುದನ್ನು ಅಶೋಕ್‌ ಮೊದಲು ಸ್ಪಷ್ಟಪಡಿಸಲಿ.

ಮುಡಾ ವಿಚಾರದಲ್ಲಿ ವಿಪರೀತ ಆರೋಪಗಳಿವೆ. ಪಾರ್ವತಿ ಅವರಿಗೆ ಕಾನೂನುಬದ್ಧವಾಗಿ ನಿವೇಶನ ನೀಡಿಲ್ಲ ಅನ್ನೋದೆ ಮುಖ್ಯ ಆರೋಪ?

- ಏಕೆ ಕಾನೂನು ಬದ್ಧವಾಗಿಲ್ಲ? ಪಾರ್ವತಿಯವರ ತವರು ಮನೆಯಿಂದ ಬಂದಿದ್ದ ಜಮೀನು ಅದು. ಅವರಿಗೆ ಮಾಹಿತಿ ನೀಡದೆಯೇ ಮುಡಾ ಅದನ್ನು ವಶಕ್ಕೆ ಪಡೆದಿತ್ತು. ಮಾಹಿತಿ ನೀಡದೆ ಒಬ್ಬ ವ್ಯಕ್ತಿಯ ಜಮೀನು ವಶಕ್ಕೆ ಪಡೆಯುವುದು ಭೂ ಅತಿಕ್ರಮಣಕ್ಕೆ ಸಮ. ಇಂತಹ ಪ್ರಕರಣಗಳಲ್ಲಿ ಲ್ಯಾಂಡ್‌ ಟು ಲ್ಯಾಂಡ್‌ ನೀಡಬೇಕು ಅಂದರೆ ವಶಕ್ಕೆ ಪಡೆದ ಜಮೀನಿನ ವಿಸ್ತೀರ್ಣದಷ್ಟೇ, ಅಭಿವೃದ್ಧಿ ಮಾಡಿಲ್ಲದ ಮುಡಾ ಜಾಗವನ್ನು ನೀಡಬೇಕು ಎಂದು ಹೈಕೋರ್ಟ್ ಆದೇಶವಿದೆ. ಅದೇ ರೀತಿ ಪ್ರಕರಣವೊಂದರಲ್ಲಿ ಮಹಿಳೆಯೊಬ್ಬರಿಗೆ ಎರಡು ಎಕರೆ ಜಮೀನು ನೀಡಿದ ಉದಾಹರಣೆಯೂ ಇದೆ. ಆದರೆ, ಆ ರೀತಿ ಮಾಡಿದರೆ ಮುಡಾ ಹರಾಜಾಗುತ್ತದೆ ಎಂದು ಕಾರಣಕ್ಕೆ ಕಾಯ್ದೆಯಲ್ಲಿ 50:50 ಪರ್ಸೆಂಟ್‌ ಲೆಕ್ಕದಲ್ಲಿ ಅಭಿವೃದ್ಧಿಪಡಿಸಿದ ಜಮೀನು ನೀಡಬಹುದು ಎಂಬ ಅವಕಾಶ ಬಳಸಿಕೊಂಡು ನಿವೇಶನವನ್ನು ನೀಡಲಾಗಿದೆ. ಇದರಲ್ಲಿ ತಪ್ಪೇನು?

ಅಷ್ಟು ಸರಳವಲ್ಲ. ಮುಡಾ ಭೂಸ್ವಾಧೀನ ಮಾಡಿಕೊಂಡಿದ್ದ ಜಾಗವನ್ನು ಸಿದ್ದರಾಮಯ್ಯ ಡಿಸಿಎಂ ಆಗಿದ್ದಾಗ ಡಿ-ನೋಟಿಫೈ ಮಾಡಲಾಗಿತ್ತಂತೆ?

- ಈ ಆರೋಪ ಸರಿಯಿಲ್ಲ. ಕೆಸರೆ ಗ್ರಾಮದ ಜಾಗದ ಸ್ವಾಧೀನ ಸಂಬಂಧ 1992ರಲ್ಲಿ ಮುಡಾ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ಜಮೀನಿನ ಮೂಲ ಮಾಲೀಕ ದೇವರಾಜು ಅವರು 1996ರಲ್ಲಿ ತಮ್ಮ ಜಮೀನನ್ನು ಡಿ-ನೋಟಿಫೈ ಮಾಡಬೇಕು ಎಂದು ಮನವಿ ಮಾಡಿದ್ದರು. ಈ ಮನವಿಯು ಆಗಿನ ನಗರಾಭಿವೃದ್ಧಿ ಸಚಿವರಾಗಿದ್ದ ಬಿ.ಎನ್‌.ಬಚ್ಚೇಗೌಡರು ನೇಮಕ ಮಾಡಿದ್ದ ಹಿರಿಯ ಐಎಎಸ್‌ ಅಧಿಕಾರಿ ವಿ.ಬಾಲಸುಬ್ರಹ್ಮಣ್ಯನ್‌ ನೇತೃತ್ವದ ಹೈಪವರ್ ಕಮಿಟಿಗೆ ಬಂದಿತು. ಆ ಸಮಿತಿಯು ಸದರಿ ಜಮೀನು ಸೇರಿದಂತೆ ಒಟ್ಟು 19 ಜಮೀನನ್ನು ಡಿ-ನೋಟಿಫೈ ಮಾಡಿತು. ಈ ಜಮೀನು ಡಿ-ನೋಟಿಫೈ ಆದಾಗ ಇದನ್ನು ಪಾರ್ವತಿ ಅವರ ಸಹೋದರ ಮಲ್ಲಿಕಾರ್ಜುನ ಸ್ವಾಮಿ ಖರೀದಿ ಕೂಡ ಮಾಡಿರಲಿಲ್ಲ. ಹೀಗಿರುವಾಗ ಡಿ-ನೋಟಿಫೈ ಸಂಬಂಧ ಸಿದ್ದರಾಮಯ್ಯ ಪಾತ್ರ ವಹಿಸುವ ಪ್ರಶ್ನೆ ಎಲ್ಲಿಂದ ಬರುತ್ತದೆ? ಇಷ್ಟಕ್ಕೂ ಅವರು ಡಿಸಿಎಂ ಆಗಿದ್ದರೇ ಹೊರತು ಆ ಸಂಬಂಧಿ ಖಾತೆಯನ್ನೇನೂ ನಿರ್ವಹಿಸುತ್ತಿರಲಿಲ್ಲ.

ಯಾವ ಕಾರಣಕ್ಕೆ ಡಿ-ನೋಟಿಫೈ ಮಾಡಿದರು?

- ದೇವರಾಜು ನೀಡಿದ ಮನವಿ ಮೇರೆಗೆ ಆಗ ಡಿ-ನೋಟಿಫೈ ಮಾಡಲಾಗಿತ್ತು. ದೇವರಾಜು ಅವರು ಕೃಷಿ ಜಮೀನು ನಮ್ಮ ಜೀವನಾಧಾರ ಎಂಬ ಕಾರಣ ನೀಡಿರುತ್ತಾರೆ. ಇದೇ ರೀತಿ 19 ಪ್ರಕರಣಗಳು ನಡೆಯುತ್ತವೆ. ಆದರೆ, ಉಳಿದ 18 ಪ್ರಕರಣಗಳ ಬಗ್ಗೆ ಯಾರೂ ಮಾತನಾಡುತ್ತಿಲ್ಲ.

ಜಮೀನಿನ ಪಹಣಿಯಲ್ಲಿ ಮುಡಾ ಹೆಸರಿದೆ ಅಂತ ಆರೋಪ‍‍‍ವಿದೆ?

- ಇಲ್ಲ. ಯಾವ ಕಾರಣಕ್ಕೂ ಪಹಣಿಯಲ್ಲಿ ಮುಡಾ ಹೆಸರು ಇರಲಿಲ್ಲ. ಪಹಣಿಯಲ್ಲಿ ಇದ್ದದ್ದು ನಿಂಗಾ ಅಲಿಯಾಸ್‌ ಜವರ ಎಂದು. ನಂತರ ಅವರ ಪುತ್ರ ದೇವರಾಜ್ ಅವರ ಹೆಸರು ಬರುತ್ತದೆ.

ದೇವರಾಜು ಅವರ ಕುಟುಂಬದವರಲ್ಲಿ ಕೆಲವರು ಈ ಜಮೀನು ಮಾರಾಟಕ್ಕೆ ವಿರೋಧಿಸಿದ್ದರಂತೆ?

- ದೇವರಾಜು ಅವರ ಕುಟುಂಬದವರೆಲ್ಲ ತಹಶೀಲ್ದಾರ್ ಮುಂದೆ ಹಾಜರಾಗಿ, ತಮಗೆ ಬೇರೆ ಜಮೀನು ನೀಡಿರುವುದರಿಂದ ಸದರಿ ಜಮೀನಿನ ಸರ್ವಾಧಿಕಾರವನ್ನು ದೇವರಾಜುಗೆ ಬಿಟ್ಟುಕೊಟ್ಟಿರುವುದಾಗಿ ಅಫಿಡವಿಟ್‌ ನೀಡಿದ್ದಾರೆ. ಅದರಂತೆ ಜಮೀನನ್ನು ಮಾರಾಟ ಮಾಡುವ ಅಧಿಕಾರ ದೇವರಾಜು ಹೊಂದಿರುತ್ತಾರೆ. ಇದಕ್ಕೆ ಸಂಬಂಧಿಸಿದ ದಾಖಲೆಯೂ ಇದೆ.

ಕೆಟಿಸಿಪಿ ಕಾಯ್ದೆಯ ಪ್ರಕಾರ 2017ಕ್ಕೆ ಮುನ್ನ ಸ್ವಾಧೀನ ಅಥವಾ ವಶಕ್ಕೆ ಪಡೆದ ಜಮೀನಿಗೆ ಈ 50-50 ಪರ್ಸೆಂಟ್‌ ವ್ಯವಸ್ಥೆ ಅನ್ವಯಿಸೋದಿಲ್ಲವಂತಲ್ಲ?

- ಏನಾಗಿತ್ತು ಎಂದರೆ, ಜಮೀನೊಂದನ್ನು ಮಾಲೀಕರ ಗಮನಕ್ಕೆ ತರದೇ ಮುಡಾ ಅತಿಕ್ರಮಿಸಿ ನಿವೇಶನ ನಿರ್ಮಾಣ ಮಾಡಿರುತ್ತದೆ. ಅದನ್ನು ಪ್ರಶ್ನಿಸಿ ಮಹಿಳೆಯೊಬ್ಬರು ನ್ಯಾಯಾಲಯಕ್ಕೆ ಹೋಗುತ್ತಾರೆ. ನ್ಯಾಯಾಲಯವೂ ಲ್ಯಾಂಡ್‌ ಟು ಲ್ಯಾಂಡ್‌ ನೀಡುವಂತೆ ಆದೇಶ ಮಾಡುತ್ತದೆ. ಅದರಂತೆ ಸದರಿ ಮಹಿಳೆಗೆ 2 ಎಕರೆ ಜಮೀನು ಕೂಡ ಮುಡಾ ನೀಡುತ್ತದೆ. ಈ ಆದೇಶವನ್ನು ಪಾಲಿಸುತ್ತಾ ಹೋದರೆ ಆಗ ಮುಡಾ ಹರಾಜಾಗಿಬಿಡುತ್ತದೆ ಎಂಬ ಕಾರಣಕ್ಕೆ 2017ಕ್ಕೆ ಕೆಟಿಪಿಸಿ ಕಾಯ್ದೆಗೆ ತಿದ್ದುಪಡಿ ತಂದು ಇಂತಹ ಪ್ರಕರಣಗಳಲ್ಲಿ, ಅದು ಇನ್ನು ಮುಂದೆಯಾಗಲೀ ಅಥವಾ ಈ ಹಿಂದೆ ನಡೆದ ಪ್ರಕರಣವಾಗಿರಲಿ, ಜಮೀನಿನ ಮಾಲೀಕರು ಒಪ್ಪಿದರೆ 50:50 ಪರ್ಸೆಂಟ್‌ ಶೇರಿಂಗ್ ಅಡಿಯಲ್ಲಿ ಅಭಿವೃದ್ಧಿಪಡಿಸಿದ ಜಮೀನು ನೀಡಬಹುದು ಎಂಬ ಅವಕಾಶ ಮಾಡಿಕೊಳ್ಳಲಾಗಿದೆ. ಇದು ಹಿಂದೆ ನಡೆದ ಪ್ರಕರಣಗಳಿಗೂ ಅನ್ವಯವಾಗುತ್ತದೆ.

ಮುಡಾ ತಮ್ಮ ಜಮೀನಿನಲ್ಲಿ ಅಕ್ರಮವಾಗಿ ನಿವೇಶನ ಅಭಿವೃದ್ಧಿಪಡಿಸುತ್ತಿದ್ದರೂ ಸುಮ್ಮನಿದ್ದು, ಎಲ್ಲ ಆದ ಮೇಲೆ ಪರ್ಯಾಯ ನಿವೇಶನ ಕೇಳಲು ಮುಂದಾಗಿದ್ದು ಏಕೆ?

- ಇಲ್ಲ. ಈ ನಿವೇಶನವನ್ನು ಸಹೋದರ ಮಲ್ಲಿಕಾರ್ಜುನ ಸ್ವಾಮಿ ಅವರು ಪಾರ್ವತಿ ಅವರಿಗೆ ರಿಜಿಸ್ಟರ್‌ ಮಾಡಿಕೊಟ್ಟಾಗ ಸದರಿ ಜಾಗ ನಿವೇಶನವಾಗಿ ಅಭಿವೃದ್ಧಿಯಾಗಿರಲಿಲ್ಲ. 2004ಕ್ಕೆ ಮಲ್ಲಿಕಾರ್ಜುನ ಸ್ವಾಮಿ ಮೂಲ ಮಾಲೀಕ ದೇವರಾಜು ಅವರಿಂದ ಜಮೀನು ಖರೀದಿಸುತ್ತಾರೆ. 2005ರಲ್ಲಿ ಮಲ್ಲಿಕಾರ್ಜುನಸ್ವಾಮಿ ಸದರಿ ಜಮೀನನ್ನು ಭೂ ಪರಿವರ್ತನೆ ಮಾಡಿಕೊಳ್ಳುತ್ತಾರೆ. ಭೂ ಪರಿವರ್ತನೆ ಮಾಡುವುದು ಜಿಲ್ಲಾಧಿಕಾರಿಗಳು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿರುತ್ತಾರಲ್ಲ. ಆಗ ಆ ಜಾಗ ನಿಲ್‌ ಎನ್‌ಕ್ರಂಬನ್ಸ್‌ ಆಗಿರಲೇಬೇಕಲ್ಲ. ಅಂದರೆ, ಅಲ್ಲಿ ಯಾರೂ ಶೆಡ್‌ ಕಟ್ಟಿರಬಾರದು, ರಸ್ತೆ, ಪಾರ್ಕು, ಸರ್ಕಾರಿ ಜಾಗ ಏನೂ ಆಗಿರಬಾರದು. ಆಗ ತಾನೇ ಡಿ.ಸಿ. ಅವರು ಅದನ್ನು ಪರಿವರ್ತನೆ ಮಾಡಿಕೊಡುವುದು. ಮುಡಾ ನಿವೇಶನ ಮಾಡಿದ್ದರೆ ಅದು ಡಿ.ಸಿ. ಗಮನಕ್ಕೆ ಬರುತ್ತಿರಲಿಲ್ಲವೇ?

ಹಾಗಿದ್ದರೆ ತಮ್ಮ ಜಮೀನು ಮುಡಾ ನಿವೇಶನ ಮಾಡಿದೆ ಎಂಬುದು ಗಮನಕ್ಕೆ ಬಂದಿದ್ದು ಯಾವಾಗ ?

- 2010ಕ್ಕೆ ಮಲ್ಲಿಕಾರ್ಜುನ ಸ್ವಾಮಿ ಅವರು ಪಾರ್ವತಿ ಅವರಿಗೆ ಅರಿಶಿಣ ಕುಂಕುಮಕ್ಕೆ ದಾನ ಪತ್ರ ಮಾಡಿಕೊಡುತ್ತಾರೆ. ಆಗಲೂ ಈ ವಿಚಾರ ಅವರ ಗಮನಕ್ಕೆ ಬಂದಿಲ್ಲ. ಏಕೆಂದರೆ, ಅಲ್ಲಿ ನಿವೇಶನ ಆಗಿರಲಿಲ್ಲ. ಇದಾದ ನಂತರ 2014ರ ವೇಳೆಗೆ ಮುಡಾ ಅದನ್ನು ಅತಿಕ್ರಮಿಸಿದ ವಿಚಾರ ಗಮನಕ್ಕೆ ಬರುತ್ತದೆ. ಆ ಕೂಡಲೇ ಅವರು ಲ್ಯಾಂಡ್‌ ಟು ಲ್ಯಾಂಡ್‌ ಕೊಡಿ ಎಂದು ಮುಡಾಗೆ ಮನವಿ ಮಾಡುತ್ತಾರೆ. ಮುಡಾ 2018ರಲ್ಲಿ 50:50 ಸೂತ್ರದಲ್ಲಿ ಅಭಿವೃದ್ಧಿ ಹೊಂದಿದ್ದ ಜಮೀನು ಪಡೆಯಲು ಒಪ್ಪುವಿರಾ ಎಂದು ಕೇಳುತ್ತದೆ. ಇದಕ್ಕೆ ಅವರು ಒಪ್ಪಿದ್ದರಿಂದ ಬದಲಿ ನಿವೇಶನ ನೀಡುತ್ತದೆ.

ಬದಲಿ ನಿವೇಶನವನ್ನು ಅತ್ಯಂತ ಬೆಲೆಬಾಳುವ ಲೇಔಟ್‌ನಲ್ಲಿ ಪಡೆದುಕೊಂಡರಲ್ಲ. ಅದು ತಪ್ಪಲ್ಲವೇ?

- ಬದಲಿ ನಿವೇಶನ ನೀಡಿ ಎಂದು ಕೇಳಿದ್ದರೇ ಹೊರತು ಇಂತಹ ಕಡೆಯೇ ನೀಡಿ ಎಂದು ಮನವಿ ಮಾಡಿರಲಿಲ್ಲ. ವಿಜಯನಗರದಲ್ಲಿ ನಿವೇಶನವನ್ನು ನೀಡಿದ್ದು ಮುಡಾದ ಸ್ವಯಂ ನಿರ್ಧಾರ. ಆಗ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ವಿಜಯನಗರದಲ್ಲಿ ಬದಲಿ ನಿವೇಶನವನ್ನು ಕೇವಲ ಪಾರ್ವತಿಯವರಿಗೆ ಮಾತ್ರವಲ್ಲ, ಇದೇ ರೀತಿ 125 ನಿವೇಶನಗಳನ್ನು ಅಲ್ಲಿ ನೀಡಲಾಗಿದೆ. ಉಳಿದವುಗಳ ಬಗ್ಗೆ ಏಕೆ ಯಾರೂ ಚಕಾರವೆತ್ತುತ್ತಿಲ್ಲ?

ತಾಂತ್ರಿಕ ಕಾರಣ ನೀಡಿ ಸಮರ್ಥನೆ ಮಾಡಿಕೊಳ್ಳುತ್ತಿದ್ದೀರಾ. ಆದರೆ, ನೈತಿಕತೆ ವಿಷಯ ಬಂದಾಗ...

- (ಪ್ರಶ್ನೆಯನ್ನು ತುಂಡರಿಸಿ) ತಾಂತ್ರಿಕಾಗಿ, ನೈತಿಕವಾಗಿ ಎಲ್ಲ ರೀತಿಯಲ್ಲೂ ಸೈಟ್ ಪಡೆದಿರುವುದು ಸರಿಯಾಗಿಯೇ ಇದೆ. ಏಕೆ ಮುಖ್ಯಮಂತ್ರಿ ಹುದ್ದೆಯಲ್ಲಿದ್ದವರ ಪತ್ನಿಯಾದ ಕಾರಣಕ್ಕೆ ಪಾರ್ವತಿ ಅವರು ತಮ್ಮ ಜಮೀನಿಗೆ ಸಂಬಂಧಿಸಿದ ಹಕ್ಕನ್ನು ಕಳೆದುಕೊಳ್ಳಬೇಕಾ? ಇದನ್ನು ಬೇರೆಯವರಿಗೆ ನೀಡಿದರೆ ವಿರೋಧ ಪಕ್ಷಗಳು ಒಪ್ಪುತ್ತಿದ್ದವಾ? ಸಿದ್ದರಾಮಯ್ಯ ಅವರ ಪತ್ನಿ ಎಂಬ ಕಾರಣಕ್ಕೆ ಈ ರೀತಿ ಸೀನ್ ಕ್ರಿಯೇಟ್‌ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಕುಟುಂಬ 3.16 ಎಕರೆ ಜಮೀನನ್ನು ಮುಡಾಗೆ ಬಿಟ್ಟುಕೊಡುವಷ್ಟು ಶ್ರೀಮಂತ ಕುಟುಂಬವೇನಲ್ಲ. ಸಿದ್ದರಾಮಯ್ಯ ಪ್ರಾಮಾಣಿಕ ಜೀವನ ಮಾಡಿಕೊಂಡು ಬಂದಿರುವವರು. ಬೇರೆ ಮುಖ್ಯಮಂತ್ರಿಗಳ ರೀತಿ ಸಿದ್ದರಾಮಯ್ಯ ದರ್ಬಾರ್‌ ಮಾಡಲ್ಲ. ಅವರ ಬಳಿ ಅಕ್ರಮ ದುಡ್ಡು ಇಲ್ಲ. ಆಸ್ತಿಯೂ ಇಲ್ಲ. ಹೀಗಿರುವಾಗ ಪತ್ನಿಯ ಕುಟುಂಬದಿಂದ ಬಂದಿದ್ದನ್ನು ಕಿತ್ತುಕೊಂಡುಬಿಟ್ಟರೆ ಅವರು ಏನು ಮಾಡಬೇಕು?

ಆ ರೀತಿಯೇ ಇದ್ದರೆ ತಮ್ಮ ಚುನಾವಣಾ ಅಫಿಡವಿಟ್ನಲ್ಲಿ ತೋರಿಸಬೇಕಿತ್ತಲ್ಲವೇ?

- ಈ ಜಮೀನು ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಇರಲಿಲ್ಲ. ಪತ್ನಿ ಪಾರ್ವತಿ ಹೆಸರಿನಲ್ಲಿ ಇತ್ತು. ಕೈತಪ್ಪಿನಿಂದ 2013ರ ಚುನಾವಣಾ ಅಫಿಡವಿಟ್ನಲ್ಲಿ ಈ ಮಾಹಿತಿ ನೀಡುವುದು ತಪ್ಪಿಹೋಗಿತ್ತು. ಅದು ಗಮನಕ್ಕೆ ಬಂದ ತಕ್ಷಣ ಲೋಕಾಯುಕ್ತ ಅಫಿಡವಿಟ್‌ನಲ್ಲಿ ಈ ಮಾಹಿತಿ ನೀಡಿದ್ದಾರೆ. ನಂತರ 2018 ಹಾಗೂ 2023ರ ಚುನಾವಣೆಯ ಅಫಿಡವಿಟ್‌ನಲ್ಲೂ ಈ ಮಾಹಿತಿ ನೀಡಿದ್ದಾರೆ. ಕಣ್ತಪ್ಪಿನಿಂದ ಮಿಸ್‌ ಆಗಿದ್ದನ್ನು ಲೋಕಾಯುಕ್ತಕ್ಕೆ ನೀಡುವ ಅಫಿಡವಿಟ್ನಲ್ಲಿ ತೋರಿಸುವುದು ಸಾಮಾನ್ಯ ಸಂಗತಿ. ಅದನ್ನು ಮಾಡಿದ್ದಾರೆ. ಬಚ್ಚಿಡಬೇಕು ಎಂಬ ಉದ್ದೇಶಕ್ಕಲ್ಲ.

ಅಧಿಕಾರಿಗಳನ್ನು ವರ್ಗಾವಣೆ ಮಾತ್ರ ಮಾಡಿದಿರಿ. ಸಸ್ಪೆಂಡ್‌ ಮಾಡಲಿಲ್ಲ ಏಕೆ? ರಕ್ಷಿಸುವ ಉದ್ದೇಶಕ್ಕಾ?

- ಈ ವಿಚಾರ ಗಮನಕ್ಕೆ ಬಂದ ಕೂಡಲೇ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು ಅವರು ಯಾವುದೇ ದಾಖಲೆಯನ್ನು ಟ್ಯಾಂಪರ್‌ ಮಾಡದಿರಲಿ ಎಂಬ ಕಾರಣಕ್ಕೆ. ತಪ್ಪು ಮಾಡಿದ್ದರೆ ಸದರಿ ಅಧಿಕಾರಿ ಎಷ್ಟೇ ಪ್ರಭಾವಿಯಾಗಿದ್ದರೂ ಆತನನ್ನು ಸಸ್ಪೆಂಡ್‌ ಅಷ್ಟೇ ಏಕೆ ಡಿಸ್‌ಮಿಸ್ ಮಾಡಲು ಹಿಂಜರಿಯುವುದಿಲ್ಲ. ಮೊದಲು ತನಿಖೆ ನಡೆದು ವರದಿ ಬರಲಿ. ನಮಗೆ ಯಾರನ್ನೂ ರಕ್ಷಿಸುವ ಉದ್ದೇಶವಿಲ್ಲ.

ಮುಡಾ ಕೇಸಲ್ಲಿ ಸಿಎಂಗೆ ಸಂಕಷ್ಟ: ಪ್ರಾಸಿಕ್ಯೂಷನ್‌ ಭೀತಿಯಲ್ಲಿ ಸಿದ್ದು..!

ಇಷ್ಟೊಂದು ಕ್ಲಾರಿಟಿ ನಿಮಗೆ ಇದ್ದರೆ ಸದನದಲ್ಲಿ ಚರ್ಚಿಸಬೇಕಿತ್ತು. ಆದರೆ, ಪಲಾಯನ ಮಾಡಿದರು ಅಂತಾರಲ್ಲ ಪ್ರತಿಪಕ್ಷ ನಾಯಕರು?

- ಪಲಾಯನ ಮಾಡಿಲ್ಲ. ಈ ವಿಚಾರ ಚರ್ಚೆಗೆ ನಾವು ದಾಖಲೆ ಸಹಿತ ಸನ್ನದ್ಧರಾಗಿದ್ದೆವು. ಆದರೆ, ಆಯೋಗ ಅರೆ ನ್ಯಾಯಾಂಗ ಸಂಸ್ಥೆ. ಅದು ತನಿಖೆ ಮಾಡುತ್ತಿದ್ದಾಗ ಸದನದಲ್ಲಿ ಚರ್ಚೆ ಮಾಡಬಾರದು. ಇದರಿಂದ ಆಯೋಗದ ಮೇಲೆ ಪ್ರಭಾವ ಬೀರಿದಂತಾಗುತ್ತದೆ ಎಂದು ಸಭಾಪತಿ ಹಾಗೂ ಸಭಾಧ್ಯಕ್ಷರು ತೀರ್ಮಾನ ಮಾಡಿದ್ದರಿಂದ ಸದನದಲ್ಲಿ ಚರ್ಚೆ ನಡೆಯಲಿಲ್ಲ.

click me!