ಅಧಿಕಾರಿಗಳ ವರ್ಗಾವಣೆಯಲ್ಲಿ ಕಾಂಗ್ರೆಸ್ ಭ್ರಷ್ಟಾಚಾರ, ಮಾಹಿತಿ ಬಹಿರಂಗಪಡಿಸಿದ ಮುಡಾ ಮಾಜಿ ಅಧ್ಯಕ್ಷ!

By Ravi JanekalFirst Published Mar 24, 2024, 6:16 PM IST
Highlights

ಕಾಂಗ್ರೆಸ್‌ಗೆ ಕರ್ನಾಟಕ ಸರ್ಕಾರ ಎಟಿಎಂ ಆಗಿದೆ ಎಂಬ ಆರೋಪವಿದೆ. ಅಧಿಕಾರಿಗಳು ಹಣ ಪಡೆದು ಸರ್ಕಾರಕ್ಕೆ ನೀಡುತ್ತಿರುವ ಅನುಮಾನವಿದೆ ಎಂದು ಮುಡಾ ಮಾಜಿ ಅಧ್ಯಕ್ಷ ರವಿಶಂಕರ್ ಮಿಜಾರ್ ಅನುಮಾನ ವ್ಯಕ್ತಪಡಿಸಿದರು.

ಮಂಗಳೂರು (ಮಾ.24): ಕಾಂಗ್ರೆಸ್ ಸರ್ಕಾರ ಹಣ ಪಡೆದು ಅಧಿಕಾರಿಗಳ ವರ್ಗಾವಣೆ ಮಾಡಿದೆ ಎಂಬ ಆರೋಪ ಕೇಳಿಬಂದಿತ್ತು. ಮನ್ಸೂರ್ ಅಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ಆಯುಕ್ತರಾಗಿ ನೇಮಕವಾಗಿ ಬಂದಾಗಲೇ ಒಂದು ರೀತಿಯ ಗುಸು ಗುಸು ಇತ್ತು. ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಹಣ ಸಂಗ್ರಹಿಸಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿತ್ತು. ಇದೀಗ ನಿಜವಾಗಿದೆ ಎಂದು ಮುಡಾ ಮಾಜಿ ಅಧ್ಯಕ್ಷ ರವಿಶಂಕರ್ ಮಿಜಾರ್ ತಿಳಿಸಿದರು.

ಮುಡಾ ಆಯುಕ್ತ ಮನ್ಸೂರ್ ಅಲಿ ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ವಿಚಾರ ಸಂಬಂಧ ಇಂದು ಸುದ್ದಿಗೋಷ್ಟಿ ನಡೆಸಿದ ಅವರು, ಕಾಂಗ್ರೆಸ್‌ಗೆ ಕರ್ನಾಟಕ ಸರ್ಕಾರ ಎಟಿಎಂ ಆಗಿದೆ ಎಂಬ ಆರೋಪವಿದೆ. ಅಧಿಕಾರಿಗಳು ಹಣ ಪಡೆದು ಸರ್ಕಾರಕ್ಕೆ ನೀಡುತ್ತಿರುವ ಅನುಮಾನವಿದೆ. ನಮ್ಮ ಅವಧಿಯಲ್ಲಿ ಅಧಿಕಾರಿಗಳನ್ನು ಹದ್ದುಬಸ್ತಿನಲ್ಲಿಡುವ ಕೆಲಸ ಆಗಿತ್ತು. ಈ ಪ್ರಕರಣದ ಬಗ್ಗೆ ಲೋಕಾಯುಕ್ತ ಪೊಲೀಸರು ಸರಿಯಾದ ತನಿಖೆ ನಡೆಸಲಿ ಎಂದು ಆಗ್ರಹಿಸಿದರು.

₹25 ಲಕ್ಷ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ 'ಮುಡಾ' ಆಯುಕ್ತ ಮನ್ಸೂರ್ ಅಲಿ!

ನಗರದ ಉದ್ಯಮಿಯೊಬ್ಬರಿಗೆ ಟಿಡಿಆರ್ ನೀಡಲು 25 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮನ್ಸೂರ್ ಅಲಿ. ನಿನ್ನೆ ಬ್ರೋಕರ್ ಸಲೀಂ ಮೂಲಕ ಹಣ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರಿಗೆ ರೆಡ್‌ ಹ್ಯಾಂಡ್ ಸಿಕ್ಕಿಬಿದ್ದಿದ್ದಾರೆ. ಭ್ರಷ್ಟಾಚಾರ ತಡೆ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧಕ್ಕಾಗಿ ಬ್ರೋಕರ್ ಸಲೀಂ ಮತ್ತು ಮುಡಾ ಆಯುಕ್ತ ಅಲಿಯನ್ನು ಬಂಧಿಸಿದ್ದಾರೆ. 

click me!