ಕಾಂಗ್ರೆಸ್‌ಗೆ ಕೈ ಕೊಟ್ಟು, ಬಿಜೆಪಿಯಲ್ಲಿ ಕೆಆರ್‌ಪಿಪಿ ವಿಲೀನ ಮಾಡಿದ ಶಾಸಕ ಜನಾರ್ಧನರೆಡ್ಡಿ!

By Sathish Kumar KHFirst Published Mar 24, 2024, 5:28 PM IST
Highlights

ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತವನ್ನು ಹಾಕಿದ್ದ ಕೆಆರ್‌ಪಿಪಿ ಶಾಸಕ ಜನಾರ್ಧನರೆಡ್ಡಿ ಒಂದು ತಿಂಗಳು ಕಳೆಯುವಷ್ಟರಲ್ಲೇ ಬಿಜೆಪಿಗೆ ಘರ್ ವಾಪ್ಸಿ ಆಗುತ್ತಿದ್ದಾರೆ.

ಬೆಂಗಳೂರು (ಮಾ.24): ಕಳೆದ ತಿಂಗಳಷ್ಟೇ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಮತವನ್ನು ಹಾಕಿದ್ದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಶಾಸಕ ಜನಾರ್ಧನ ರೆಡ್ಡಿ, ಒಂದು ತಿಂಗಳಾಗುವ ಮುನ್ನವೇ ತಮ್ಮ ಮೂಲ ಪಕ್ಷ ಬಿಜೆಪಿಯ ಕಮಲ ಮುಡಿಯುತ್ತಿದ್ದಾರೆ. ಈ ಮೂಲಕ ಬಿಜೆಪಿಯಲ್ಲಿ ಕೆಆರ್‌ಪಿಪಿ ವಿಲೀನ ಮಾಡಲಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿ ಸ್ವತಂತ್ರ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಿದ್ದ ರೆಡ್ಡಿ ಬ್ರದರ್ಸ್‌ ರಾಜಕಾರಣ, ಗಣಿ ಕೇಸ್‌ನ ನಂತರ ಮುಕ್ತಾಯವಾಯಿತು ಎಂದು ಹೇಳಲಾಗುತ್ತಿತ್ತು. ಆದರೆ, ಕಳೆದ ವಿಧಾನಸಭಾ ಚುನಾವಣೆಯ ವೇಳೆ ಫೀನಿಕ್ಸ್‌ ಹಕ್ಕಿಯಂತೆ ಪುನಃ ಪುಟಿದೆದ್ದ ಜನಾರ್ಧನ ರೆಡ್ಡಿ ಸ್ವಂತ ಪಕ್ಷ ಕಟ್ಟಿ ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿಯೂ ಆಯ್ಕೆಯಾದರು. ಕಳೆದ ತಿಂಗಳು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಹಾಕಿದ್ದ ಜನಾರ್ಧನ ರೆಡ್ಡಿ ಅವರ ನಡೆಯಿಂದ ಎಲ್ಲರೂ ಶಾಕ್ ಆಗಿದ್ದರು. ಆದರೆ, ಈಗ ಲೋಕಸಭಾ ಚುನಾವಣೆ ಬರುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕೆಂಬ ನಿಟ್ಟಿನಲ್ಲಿ ಈಗ ಬಿಜೆಪಿಗೆ ಸೇರ್ಪಡೆಯಾಗಲು ನಿರ್ಧರಿಸಿದ್ದಾರೆ.

ಶಿವಮೊಗ್ಗ ಗೀತಾ ಶಿವರಾಜ್ ಕುಮಾರ್ ಡಮ್ಮಿ ಕ್ಯಾಂಡಿಡೇಟ್; ಈಶ್ವರಪ್ಪ ಡಬ್ಬ ಸೌಂಡ್: ವಾಗ್ದಾಳಿ ರಾಜಕಾರಣ

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ನಾಳೆ ಬೆಳಗ್ಗೆ ಬಿಜೆಪಿ ಕಚೇರಿಗೆ ಬರೋಕೆ ಹೇಳಿದ್ದಾರೆ. ನಾಳೆ ಬೆಳಗ್ಗೆ 10 ಗಂಟೆಗೆ ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ್ ಸಮ್ಮುಖದಲ್ಲಿ ನಾಳೆ ಬಿಜೆಪಿ ಸೇರುತ್ತೇನೆ. ಲೋಕಸಭಾ ಚುನಾವಣೆ ‌ನಿಲ್ಲುವ ವಿಚಾರ ಇಲ್ಲ. ಮೋದಿಯವರು ಮೂರನೇ ಬಾರಿ ಪ್ರಧಾನಿ ಆಗಬೇಕು. ನಾನು ಪಕ್ಷಕ್ಕೆ ಸೇರ್ಪಡೆಯಾಗಿ ಪಕ್ಷಕ್ಕೆ ದುಡಿಯುತ್ತೇನೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಲೋಕಸಭಾ ಚುನಾವಣೆ ಭಾರಿ ರಂಗೇರಿದ್ದು, ಘಟಾನುಘಟಿ ನಾಯಕರು ತಮ್ಮ ರಾಜಕೀಯ ಚಾಣಾಕ್ಷ ನಡೆಯನ್ನು ಮುಂದಿಡುತ್ತಿದ್ದಾರೆ. ಇನ್ನು ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ಕಾರಣಕರ್ತರಲ್ಲಿ ಒಬ್ಬರಾಗಿದ್ದ ಶಾಸಕ ಜನಾರ್ಧನ ರೆಡ್ಡಿ ಅವರು ಗಣಿ ಕೇಸಿನಲ್ಲಿ ಜೈಲು ಸೇರಿದ್ದರು. ಆದರೆ, ಜೈಲಿನಿಂದ ಬಂದ ನಂತರ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪುನಃ ರಾಜಕೀಯಕ್ಕೆ ಬರುವ ಇಂಗಿತ ವ್ಯಕ್ತಪಡಿಸಿದ್ದರು. ಇನ್ನು ತಾವು ಕಟ್ಟಿ ಬೆಳೆಸಿದ್ದ ಬಿಜೆಪಿ ಪಕ್ಷದ ಟಿಕೆಟ್ ಕೇಳಿದರು. ಜೈಲು ಶಿಕ್ಷೆ ಅನುಭವಿಸಿ ಬಂದ ಹಿನ್ನೆಲೆಯಲ್ಲಿ ಅವರಿಗೆ ಟಿಕೆಟ್ ಕೊಡಲು ನಿರಾಕರಿಸಲಾಯಿತು.

ಇದರಿಂದ ಕುಪಿತಗೊಂಡ ಜನಾರ್ಧನರೆಡ್ಡಿ ಅವರು ರಾಷ್ಟ್ರೀಯ ಪಕ್ಷ ಬಿಜೆಪಿಗೆ ಸೆಡ್ಡು ಹೊಡೆದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ) ಸ್ಥಾಪಿಸಿದರು. ರಾಜ್ಯದ 224 ಕ್ಷೇತ್ರಗಳಲ್ಲಿ ಏಳೆಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಪೈಪೋಟಿ ನೀಡಿದರು. ಈ ವೇಳೆ ಮುಖ್ಯವಾಗಿ ಬಳ್ಳಾರಿ, ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳ (ಮಾಜಿ ಸಚಿವ ಶ್ರೀರಾಮುಲು ಸೇರಿ ಹಲವರು) ಸೋಲಿಗೆ ಕಾರಣವಾಗಿದ್ದರು.

 ಸೋಮಣ್ಣನವರೇ ಯಡಿಯೂರಪ್ಪ- ವಿಜಯೇಂದ್ರ ನಿಮ್ ಪರ ತುಮಕೂರಿಗೆ ಪ್ರಚಾರಕ್ಕೆ ಬರ್ತಾರಾ?

ಸ್ವಂತ ಪಕ್ಷ ಕಟ್ಟಿ ಶಾಸಕನಾಗಿ ವಿಧಾನಸಭೆಗೆ ಬಂದ ಜನಾರ್ಧನ ರೆಡ್ಡಿ ಅವರ ಪಕ್ಷ ಸಂಘಟನೆ ಹಾಗೂ ರಾಜಕೀಯ ಚತುರತೆಯನ್ನು ಬಿಜೆಪಿ ಹೈಕಮಾಂಡ್‌ ಮನಗಂಡಿದೆ. ಜೊತೆಗೆ, ಬಳ್ಳಾರಿ ಹಾಗೂ ಕೊಪ್ಪಳ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಜನಾರ್ಧನ ರೆಡ್ಡಿಯ ಸಹಕಾರ ಅಗತ್ಯವೆಂಬುದೂ ಮನವರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಗೂ ಮುನ್ನವೇ ಶಾಸಕ ಜನಾರ್ಧನ ರೆಡ್ಡಿ ಅವರು ಬಿಜೆಪಿಗೆ ಸೇರ್ಪಡೆ ಆಗಲಿದ್ದಾರೆ. ಆದರೆ, ಕೆಆರ್‌ಪಿಪಿ ಪಕ್ಷ ವಿಲೀನ ಮಾಡುತ್ತಾರಾ? ಅಥವಾ ವಿಸರ್ಜನೆ ಮಾಡುತ್ತಾರಾ? ಎಂಬ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ.

click me!