ಮುಡಾ ವಿಚಾರದಲ್ಲಿ ಕೋರ್ಟ್ ತೀರ್ಪಿನ ಬಗ್ಗೆ ನಾನು ಕಾಮೆಂಟ್ ಮಾಡೊಲ್ಲ. ಆದರೆ ಈ ತೀರ್ಪಿನಿಂದ ನಮಗೆ ಸಮಾಧಾನ ಇಲ್ಲ ಅಂತಾ ಮಾತ್ರ ಹೇಳ್ತೇನೆ. ತೀರ್ಪು ಕೊಟ್ಟಾಗಿದೆ ಆದರೆ ನಮಗೆ ಸಮಾಧಾನ ಇಲ್ಲ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ ತಿಳಿಸಿದರು.
ಬೆಂಗಳೂರು (ಸೆ.26): ಮೈಸೂರು ಮುಡಾ ನಿವೇಶನ ಹಂಚಿಕೆ ಪ್ರಕರಣ ಸಿಎಂ ಸಿದ್ದರಾಮಯ್ಯ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಇಂದು ಸಿಎಂ ವಿರುದ್ಧ ಹಲವು ಸೆಕ್ಷನ್‌ಗಳಡಿ ಎಫ್‌ಐಆರ್ ದಾಖಲಾಗುವ ಸಾಧ್ಯತೆಯಿದೆ. ಒಂದು ವೇಳೆ ಪ್ರಕರಣಗಳು ದಾಖಲಾಗಿ ತನಿಖೆಗೆ ಮುಂದಾದರೆ ಯಾವ ರೀತಿ ಎದುರಿಸಬೇಕು ಎಂಬ ಬಗ್ಗೆ ಈಗಾಗಲೇ ಮಾತುಕತೆ ನಡೆಸಿರುವ ಸಿಎಂ ಸಿದ್ದರಾಮಯ್ಯ. ಅದಕ್ಕಾಗಿ ಲೀಗಲ್ ಟೀಂ ಜೊತೆ ಮಾತುಕತೆ ನಡೆಸಿದ್ದಾರೆ. ಅವರು ಏನು ಸಲಹೆ ಕೊಡುತ್ತಾರೋ ಎಂಬುದರ ಮೇಲೆ ಮುಂದಿನ ಕಾನೂನು ಹೋರಾಟದ ಬಗ್ಗೆ ತೀರ್ಮಾನವಾಗುತ್ತೆ.
ಈ ಬಗ್ಗೆ ಗೃಹ ಸಚಿವ ಡಾ ಜಿ ಪರಮೇಶ್ವರ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದು, ಈ ಪ್ರಕರಣದಲ್ಲಿ ನಮ್ಮ ಲೀಗಲ್ ಟೀಮ್ ಏನು ಸಲಹೆ ಕೊಡುತ್ತಾರೆ ನೋಡೋಣ. ಅದರ ಮೇಲೆ ತೀರ್ಮಾನ ಮಾಡ್ತೇವೆ. ಎಲ್ಲವನ್ನೂ ಕಾನೂನಾತ್ಮಕವಾಗಿ ಪರಿಶೀಲನೆ ಮಾಡಬೇಕಾಗುತ್ತದೆ. ನೆನ್ನೆ ಕೂಡ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ತೀರ್ಪು ಬಂದಿದೆ. ಸಿಆರ್‌ಪಿಸಿ ಸೆಕ್ಷನ್ ಕೋಟ್ ಮಾಡಿದ್ದಾರೆ. ಆ ಕಾನೂನು ಎಫೆಕ್ಟ್ ಮಾಡೋ ಹಾಗಿಲ್ಲ. BNSS ಅಡಿಯಲ್ಲಿ ಕೊಡಬೇಕಿತ್ತು ಅನ್ನೋ ಚರ್ಚೆ ಇದೆ. ಕಾನೂನು ತಂಡ ಹೇಗೆ ಸಲಹೆ ಕೊಡುತ್ತಾರೆ ಅದರ ಮೇಲೆ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.
ಮುಡಾ ಹಗರಣ ಉರುಳು ಮತ್ತಷ್ಟು ಬಿಗಿ: ಸಿಎಂ ವಿರುದ್ಧ ಇಂದು ಈ ಸೆಕ್ಷನ್‌ಗಳ ಮೇಲೆ ಕೇಸ್ ದಾಖಲು ಸಾಧ್ಯತೆ!
ಮುಂದಿನ ಕಾನೂನು ಹೋರಾಟದಲ್ಲಿ ಹಲವು ಹಂತಗಳಿವೆ. ಈಗ ಡಿವಿಜಿನಲ್ ಪೀಠಕ್ಕೆ ಹೋಗುತ್ತೇವೆ. ಅಲ್ಲೂ ಪರಿಹಾರ ಸಿಗದಿದ್ರೆ ಸುಪ್ರೀಂ ಕೋರ್ಟ್‌ಗೆ ಹೋಗುತ್ತೇವೆ. ಅದೆಲ್ಲವನ್ನು ಚರ್ಚೆ ಮಾಡಿ ಅಂತಿಮವಾಗಿ ತೀರ್ಮಾನ ಮಾಡುತ್ತೇವೆ ಎಂದರು.
ಬಿಜೆಪಿಯವರು ಸ್ವಾಭಾವಿಕವಾಗಿ ವಿರೋಧ ಪಕ್ಷವಾಗಿ ಅವರ ಕೆಲಸ ಅವರು ಮಾಡ್ತಾರೆ ಮಾಡಲಿ ಬಿಡಿ. ಕಾನೂನಾತ್ಮಕವಾಗಿ ನಾವು ಏನು ಹೋರಾಟ ಮಾಡಬೇಕು ಮಾಡುತ್ತೇವೆ. ಕಾನೂನು ಹೆಚ್ಚಾ..? ಬಿಜೆಪಿ ಅವರ ಅಭಿಪ್ರಾಯಗಳು ಹೆಚ್ಚಾ..? ಅವರ ಅಭಿಪ್ರಾಯಗಳಿಗಿಂತ ಕಾನೂನು ಹೆಚ್ಚಾಗುತ್ತದೆ. ತನಿಖೆಗೆ ಸಿಬಿಐ ನಡೆಸಬೇಕು ಎಂಬ ಬಿಜೆಪಿ ಆಗ್ರಹಿಸಿದ್ದಾರೆ. ಆಗ್ರಹಿಸಲಿ ಬಿಡಿ ಈ ದೇಶದಲ್ಲಿ ಕಾನೂನು ಇದೆ. ಅವರು ಹೇಳಿದ್ದೇ ನಡೆಯುತ್ತಾ? ಅದಕ್ಕೆ ನಾನು ಹೇಳಿದ್ದು, ಕಾನೂನು ಹೆಚ್ಚಾ? ನಮ್ಮ ಅಭಿಪ್ರಾಯಗಳು ಹೆಚ್ಚಾ ಅಂತಾ. ಬಿಜೆಪಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂಬ ದುರುದ್ದೇಶದಿಂದ ಇಲ್ಲಸಲ್ಲದ ಆರೋಪ, ಆಪಾದನೆಗಳನ್ನು ಮಾಡುತ್ತಿದ್ದಾರೆ. ಆದರೆ ಕಾನೂನು ಇದೆಯಲ್ಲ ಕಾನೂನಿಗೋಸ್ಕರ ಹೋರಾಟ ಮಾಡುತ್ತೇವೆ ಎಂದರು.
ನಾನು ಕೋರ್ಟ್ ತೀರ್ಪಿನ ಬಗ್ಗೆ ಕಾಮೆಂಟ್ ಮಾಡೊಲ್ಲ. ಈ ತೀರ್ಪಿನಿಂದ ನಮಗೆ ಸಮಾಧಾನ ಇಲ್ಲ ಅಂತಾ ಮಾತ್ರ ಹೇಳ್ತೇನೆ. ತೀರ್ಪು ಕೊಟ್ಟಾಗಿದೆ ಆದರೆ ನಮಗೆ ಸಮಾಧಾನ ಇಲ್ಲ. ನಮ್ಮ ಅಹವಾಲು ಪ್ರೇಯರ್ ಏನಿತ್ತು ನಾವು ಕೊಟ್ಟ ಮಾಹಿತಿ ಏನಿತ್ತು ಅದನ್ನ ಪರಿಗಣಿಸಿಲ್ಲ. ಮುಂದೆ ವಿಭಾಗೀಯ ಪೀಠ, ಸುಪ್ರೀಂ ಕೋರ್ಟ್ ಗೆ ಹೋಗುವುದಕ್ಕೆ ಅವಕಾಶಗಳಿವೆ. ನಾವು ಕಾನೂನು ಹೋರಾಟ ಮುಂದುವರಿಸುತ್ತೇವೆ ಎಂದರು.
ನನ್ನ ಸಲಹೆ ನಿರ್ಲಕ್ಷ್ಯ ಮಾಡಿ ಕ್ಯಾಕ್ಟಸ್ ಗುಂಪಿನ ಮಾತು ಕೇಳಿ ಸಿದ್ದರಾಮಯ್ಯಗೆ ಈ ಸ್ಥಿತಿ ಬಂದಿದೆ: ಎಚ್ ವಿಶ್ವನಾಥ
ಇನ್ನು ರಾಜ್ಯಪಾಲರು ಮುಡಾ ಬಳಿಕ ಅರ್ಕಾವತಿ ಸೇರಿದಂತೆ ಹಲವು ವರದಿ ಕೇಳಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವರು, ರಾಜ್ಯಪಾಲರ ಎಲ್ಲಾ ಪತ್ರಗಳಿಗೆ ಉತ್ತರ ಕೊಡಬೇಕಾಗಿಲ್ಲ. ಪ್ರತಿನಿತ್ಯ ಪತ್ರ ಬರೆದು ಕೇಳಿದರೆ ಉತ್ತರ ಕೊಡಬೇಕು ಅಂತೇನಿಲ್ಲ. ಆದರೂ ಕೆಲವೊಂದು ನೀತಿ ನಿರೂಪಣೆ ವಿಚಾರದಲ್ಲಿ ಮಾಹಿತಿ ನೀಡುತ್ತೇವೆ. ದಿನಾ ಪತ್ರ ಬರೆದು ಉತ್ತರ ಕೊಡಿ ಅಂದ್ರೆ ಕೊಡೋಕೆ ಆಗೊಲ್ಲ. ಎಂದರು ಇದೇ ವೇಳೆ ಅರ್ಕಾವತಿ ವಿರುದ್ಧ ನಿರ್ಣಯ ತೆಗೆದುಕೊಳ್ಳುತ್ತೀರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಕ್ಯಾಬಿನೆಟ್ ನಲ್ಲಿ ಏನಾಗುತ್ತೋ ನೋಡೋಣ ಎಂದರು.