
ಬೆಂಗಳೂರು (ಫೆ. 22): ಮುಡಾ ಹಗರಣ ಬೆನ್ನತ್ತಿದ್ದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ರಾಜಧಾನಿಯಲ್ಲಿ ಮತ್ತೊಂದು ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. ಪವಿತ್ರಾ ಎಂಬ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಸ್ನೇಹಮಯಿ ಕೃಷ್ಣ ಹಾಗೂ ಮೈಲಾರಪ್ಪ ಎಂಬುವವರ ವಿರುದ್ಧ ಎಫ್‌ಐಆರ್ (FIR) ದಾಖಲಿಸಿ ತನಿಖೆ ಆರಂಭಿಸಲಾಗಿದೆ.
ದೂರುದಾರೆ ಪವಿತ್ರಾ ಅವರ ಪತಿ ಕಳೆದ ವರ್ಷ ಆತ್ಮ1ಹತ್ಯೆ ಮಾಡಿಕೊಂಡಿದ್ದರು. ಆದರೆ, ಈ ಸಾವಿನ ಪ್ರಕರಣದಲ್ಲಿ ಸ್ನೇಹಮಯಿ ಕೃಷ್ಣ ಅನಗತ್ಯವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಪತಿಯ ಸಾವಿನ ಮರು ತನಿಖೆಗೆ ಆಗ್ರಹಿಸಿ ಸ್ನೇಹಮಯಿ ಕೃಷ್ಣ ಒತ್ತಡ ಹೇರುತ್ತಿರುವುದು ಮಾತ್ರವಲ್ಲದೆ, ಮೈಲಾರಪ್ಪ ಎಂಬುವವರ ವಿರುದ್ಧ ನೀಡಿದ್ದ ದೂರನ್ನು ವಾಪಸ್ ಪಡೆಯುವಂತೆ ತಮಗೆ ತಾಕೀತು ಮಾಡುತ್ತಿದ್ದಾರೆ ಎಂದು ಪವಿತ್ರಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸ್ನೇಹಮಯಿ ಕೃಷ್ಣ ಅವರು ಕಳೆದ ಡಿಸೆಂಬರ್ 5, 2025 ರಂದು ಪವಿತ್ರಾ ಅವರ ಮನೆ ವಿಳಾಸಕ್ಕೆ ಪತ್ರ ಬರೆದಿದ್ದರು ಎಂದು ಆರೋಪಿಸಲಾಗಿದೆ. ಈ ಪತ್ರದ ಮೂಲಕ ತಮಗೆ ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಮತ್ತು ಇದರಿಂದ ತಮ್ಮ ಕುಟುಂಬದ ನೆಮ್ಮದಿ ಸಂಪೂರ್ಣವಾಗಿ ಹಾಳಾಗಿದೆ ಎಂದು ಸಂತ್ರಸ್ತೆ ದೂರಿದ್ದಾರೆ.
ಆರಂಭದಲ್ಲಿ ಪವಿತ್ರಾ ಅವರು ನೀಡಿದ ದೂರಿನ ಮೇರೆಗೆ ಬಸವೇಶ್ವರನಗರ ಪೊಲೀಸರು ಕೇವಲ ಎನ್‌ಸಿಆರ್ (NCR) ದಾಖಲಿಸಿಕೊಂಡಿದ್ದರು. ಆದರೆ, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಈಗ ನ್ಯಾಯಾಲಯದ ವಿಶೇಷ ಅನುಮತಿಯನ್ನು ಪಡೆದು ಸ್ನೇಹಮಯಿ ಕೃಷ್ಣ ಮತ್ತು ಮೈಲಾರಪ್ಪ ವಿರುದ್ಧ ಅಧಿಕೃತವಾಗಿ ಎಫ್‌ಐಆರ್ ದಾಖಲಿಸಲಾಗಿದೆ. ಸದ್ಯ ಪೊಲೀಸರು ಈ ಪತ್ರದ ಮೂಲ ಮತ್ತು ದೂರಿನ ಸತ್ಯಾಸತ್ಯತೆಯ ಬಗ್ಗೆ ತನಿಖೆಗೆ ಮುಂದಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ