
ಶಿವಮೊಗ್ಗ (ಜ.18): ಶಿವಮೊಗ್ಗದ ಶ್ರೀ ಸರಸ್ವತಿ ಸಂಗೀತ ವಿದ್ಯಾಲಯದ ರಜತ ಮಹೋತ್ಸವದ ಪ್ರಯುಕ್ತ ಸುಶ್ರಾವ್ಯ ಮತ್ತು ಶ್ರೀ ಸಾಯಿಶಕ್ತಿ ಸಂಗೀತ ವಿದ್ಯಾಲಯಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ 'ವೀಣಾ ತ್ರಿಶತೋತ್ಸವ' ಕಾರ್ಯಕ್ರಮವು ಅತ್ಯಂತ ವೈಭವದಿಂದ ನೆರವೇರಿತು. ಮೈಸೂರು ರಾಜವಂಶಸ್ಥರು ಹಾಗೂ ಮೈಸೂರು-ಕೊಡಗು ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಈ ದೈವಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಒಂದೇ ವೇದಿಕೆಯಲ್ಲಿ 301 ಕಲಾವಿದರಿಂದ ಮೊಳಗಿದ ವೀಣಾ ನಾದದ ಝೇಂಕಾರವು ಮಲೆನಾಡಿಗರನ್ನು ರೋಮಾಂಚನಗೊಳಿಸಿತು.
ತಾವೂ ಒಬ್ಬ ನುರಿತ ವೀಣಾ ವಾದಕರಾಗಿರುವ ಯದುವೀರ್ ಒಡೆಯರ್ ಅವರು ಕಾರ್ಯಕ್ರಮದುದ್ದಕ್ಕೂ ಸಂಗೀತದ ಮೇಲಿನ ತಮ್ಮ ಆಸಕ್ತಿಯನ್ನು ಮೆರೆದರು. ಸ್ವತಃ ವೇದಿಕೆಯ ಮೇಲೆ ವೀಣಾವಾದನ ಮಾಡುವ ಮೂಲಕ ಸಭಿಕರನ್ನು ಮಂತ್ರಮುಗ್ಧಗೊಳಿಸಿದ ಅವರು, 'ನಮ್ಮ ಶಾಸ್ತ್ರೀಯ ಸಂಗೀತ ಪರಂಪರೆಯನ್ನು ಉಳಿಸಿ, ಮುಂದಿನ ಪೀಳಿಗೆಗೆ ತಲುಪಿಸುತ್ತಿರುವ ಈ ಸಂಸ್ಥೆಯ ಕಾರ್ಯ ನಿಜಕ್ಕೂ ಶ್ಲಾಘನೀಯ' ಎಂದು ಪ್ರಶಂಸಿಸಿದರು. 301 ವೀಣಾವಾದಕರು ಏಕಕಾಲದಲ್ಲಿ ನಾದಸುಧೆ ಹರಿಸಿದ್ದು ಕಿವಿಗೆ ಹಬ್ಬದಂತಿತ್ತು.
ಈ ಕಾರ್ಯಕ್ರಮದಲ್ಲಿ ರಾಜಕೀಯ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಗಣ್ಯರು ಭಾಗವಹಿಸಿದ್ದರು. ಸಂಸದ ಬಿವೈ ರಾಘವೇಂದ್ರ, ಎಂಎಲ್‌ಸಿಗಳಾದ ಡಿಎಸ್ ಅರುಣ್ ಮತ್ತು ಡಾ ಧನಂಜಯ್ ಸರ್ಜಿ, ಶಿವಮೊಗ್ಗ ನಗರ ಶಾಸಕ ಎಸ್ಎನ್. ಚೆನ್ನಬಸಪ್ಪ ಹಾಗೂ ಮಾಜಿ ಶಾಸಕ ಬಿ ಪ್ರಸನ್ನ ಕುಮಾರ್ ಸೇರಿದಂತೆ ಹಲವು ಗಣ್ಯರು ವೇದಿಕೆಯ ಮೇಲೆ ಉಪಸ್ಥಿತರಿದ್ದು, ಸಂಸ್ಥೆಯ ಸಾಧನೆಯನ್ನು ಬೆಂಬಲಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ