ಶಿವಮೊಗ್ಗ ನಗರದಿಂದ ಗೋವಾ, ಆಂಧ್ರಪ್ರದೇಶ ಹಾಗೂ ತೆಲಂಗಾಣ ನಗರಗಳಿಗೆ ನೇರ ವಿಮಾನಯಾನ ಸೇವೆಗೆ ಸಂಸದ ಬಿ.ವೈ. ರಾಘವೇಂದ್ರ ಚಾಲನೆ ನೀಡಿದರು.
ಶಿವಮೊಗ್ಗ (ನ.21): ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ವಿಮಾನ ನಿಲ್ದಾಣ ನಿಲ್ದಾಣದಿಂದ ನೇರವಾಗಿ ಮೂರು ಹೊರ ರಾಜ್ಯಗಳೊಂದಿಗೆ ನೇರವಾಗಿ ಸಾರಿಗೆ ಸಂಪರ್ಕವನ್ನು ಸಾಧಿಸಿದೆ. ವಿಮಾನ ಸೇವೆಯ ಮೂಲಕ ಶಿವಮೊಗ್ಗ-ಗೋವಾ, ಶಿವಮೊಗ್ಗ-ತಿರುಪತಿ (ಆಂಧ್ರಪ್ರದೇಶ), ಶಿವಮೊಗ್ಗ-ಹೈದ್ರಾಬಾದ್ (ತೆಲಂಗಾಣ) ತಲುಪಬಹುದು. ಸ್ಟಾರ್ ಏರ್‌ಲೈನ್ಸ್‌ನಿಂದ ವಿಮಾನ ಸೇವೆಗೆ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅಧಿಕೃತ ಚಾಲನೆ ನೀಡಿದರು.
ಶಿವಮೊಗ್ಗದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಿರಂತರ ಶ್ರಮದಿಂದಾಗಿ ಸುಸಜ್ಜಿತ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗಿದೆ. ಕರ್ನಾಟಕ ವಿಧಾನಸಭಾ ಚುನಾವಣೆಗೂ ಮುನ್ನವೇ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಉತ್ತಮ ಯೋಜನೆಯಾಗಿದೆ ಎಂದು ಹೊಗಳಿಕೆ ನೀಡಿದ್ದರು. ಪ್ರಧಾನಿ ಮೋದಿ ಅವರೇ ಚಾಲನೆ ನೀಡಿದರೂ ಕೆಲವು ತಾಂತ್ರಿಕ ಕಾರಣಗಳಿಂದಾಗಿ ವಿಮಾನ ಸೇವೆ ಕೆಲವು ತಿಂಗಳು ವಿಳಂಬವಾಯಿತು. ಆದರೆ, ಶಿವಮೊಗ್ಗ- ಬೆಂಗಳೂರು ನಡುವೆ ಅಧಿಕೃತ ವಿಮಾನಯಾನ ಸೇವೆಯನ್ನು ಇಂಡಿಗೋ ಸಂಸ್ಥೆಯು ಆರಂಭಿಸಿದೆ. ಇದಾದ ನಂತರ ಈಗ ಶಿವಮೊಗ್ಗದಿಂದ ಗೋವಾ, ತಿರುಪತಿ ಹಾಗೂ ಹೈದರಾಬಾದ್ ನಗರಗಳಿಗೆ ನೇರ ವಿಮಾನಯಾ ಸೇವೆ ಆರಂಭಿಸಲಾಗಿದೆ.
ಕರ್ನಾಟಕದ ಜಾತಿ ಗಣತಿ ವರದಿ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ: ಪ್ರಬಲ ಸಮುದಾಯಗಳಿಂದ ವಿರೋಧ
ವಿಮಾನಯಾನ ಸೇವೆಗೆ ಚಾಲನೆ ನೀಡಿದ ನಂತರ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಪೋಸ್ಟ್ ಹಂಚಿಕೊಂಡಿರುವ ಸಂಸದ ಬಿ.ವೈ. ರಾಘವೇಂದ್ರ ಅವರು, 'ಇಂದು ಹೊಸದೊಂದು ಜಿಗಿತಕ್ಕೆ ಸಾಕ್ಷಿಯಾಯಿತು! ಇಂದಿನಿಂದ 3 ಹೊಸ ಮಾರ್ಗಗಳಲ್ಲಿ (ಶಿವಮೊಗ್ಗ-ಗೋವಾ, ಶಿವಮೊಗ್ಗ-ತಿರುಪತಿ, ಶಿವಮೊಗ್ಗ-ಹೈದ್ರಾಬಾದ್) ಸ್ಟಾರ್ ಏರ್‌ಲೈನ್ಸ್ ನ ವಿಮಾನ ಸಂಚಾರ ಅಧಿಕೃತವಾಗಿ ಆರಂಭಗೊಂಡಿದೆ ಎಂದು ತಿಳಿಸಲು ಖುಷಿಯಾಗುತ್ತಿದೆ.ಶಿವಮೊಗ್ಗ ಶಾಸಕ ಚನ್ನಬಸಪ್ಪ, ಸ್ಟಾರ್ ಏರ್‌ಲೈನ್ಸ್ ನ ಅಧಿಕಾರಿಗಳು ಈ ಸಂತಸದ ಕ್ಷಣದಲ್ಲಿ ನನ್ನೊಂದಿಗಿದ್ದರು.ಈ ವಿಮಾನ ಸೇವೆಯಿಂದ ಜಿಲ್ಲೆಯ ಸಂಪರ್ಕದ ಕೊಂಡಿ ಇನ್ನಷ್ಟು ವಿಸ್ತರಿಸಲಿದ್ದು, ನೆರೆ ರಾಜ್ಯಗಳ ಸಂಪರ್ಕ ಇನ್ನಷ್ಟು ಸುಲಭವಾಗಲಿದೆ' ಎಂದು ಪೋಸ್ಟ್ ಮಾಡಿಕೊಂಡಿದ್ದಾರೆ.
ವಿಮಾನದ ಟಿಕೆಟ್ ದರ, ಸಮಯದ ಮಾಹಿತಿ ಇಲ್ಲಿದೆ ನೋಡಿ..
ಶಿವಮೊಗ್ಗ-ಗೋವಾ: ಶಿವಮೊಗ್ಗದಿಂದ ಮಧ್ಯಾಹ್ನ 1.55ಕ್ಕೆ ಹೊರಡುವ ವಿಮಾನ ಮಧ್ಯಾಹ್ನ 2.40ಕ್ಕೆ ಗೋವಾ ತಲುಪಲಿದೆ. ಗೋವಾದಿಂದ ಮಧ್ಯಾಹ್ನ 3.10ಕ್ಕೆ ಹೊರಟು ಸಂಜೆ 4.05ಕ್ಕೆ ಶಿವಮೊಗ್ಗ ತಲುಪಲಿದೆ. ಬುಧವಾರ ಶಿವಮೊಗ್ಗದಿಂದ ಗೋವಾಕ್ಕೆ ಬೆಳಗ್ಗೆ 11 ಗಂಟೆಗೆ ಹೊರಡುವ ವಿಮಾನ ಬೆಳಗ್ಗೆ 11.50ಕ್ಕೆ ಗೋವಾ ತಲುಪಿ, ಅಲ್ಲಿಂದ ಮಧ್ಯಾಹ್ನ 12.20ಕ್ಕೆ ಹೊರಟು ಮಧ್ಯಾಹ್ನ1.10ಕ್ಕೆ ಶಿವಮೊಗ್ಗ ತಲುಪಲಿದೆ
ಶಿವಮೊಗ್ಗ-ಹೈದರಬಾದ್: ಹೈದರಬಾದ್‌ನಿಂದ ಬೆಳಗ್ಗೆ 9.35ಕ್ಕೆ ಹೊರಟು ಬೆಳಗ್ಗೆ 10.35ಕ್ಕೆ ಶಿವಮೊಗ್ಗ ತಲುಪಿ, ಮತ್ತೆ ಇಲ್ಲಿಂದ ಸಂಜೆ 4.30ಕ್ಕೆ ಹೊರಟು ಸಂಜೆ 5.30ಕ್ಕೆ ಹೈದರಾಬಾದ್ ತಲುಪಲಿದೆ.
ಶಿವಮೊಗ್ಗದಿಂದ ನ.21 ರಿಂದ ಸ್ಟಾರ್ ಏರ್ ವಿಮಾನ ಸೇವೆ
ಶಿವಮೊಗ್ಗ-ತಿರುಪತಿ: ಶಿವಮೊಗ್ಗದಿಂದ ಬೆಳಗ್ಗೆ 11ಕ್ಕೆ ಹೊರಟು 11.50ಕ್ಕೆ ತಿರುಪತಿ, ಅಲ್ಲಿಂದ ಮಧ್ಯಾಹ್ನ 12.15ಕ್ಕೆ ಹೊರಟು ಮಧ್ಯಾಹ್ನ 1.40ಕ್ಕೆ ಶಿವಮೊಗ್ಗ ತಲುಪಲಿದೆ. ಬುಧವಾರ ಶಿವಮೊಗ್ಗದಿಂದ ಮಧ್ಯಾಹ್ನ 1.40ಕ್ಕೆ ಹೊರಟು, 2.30ಕ್ಕೆ ತಿರುಪತಿ ತಲುಪಲಿದೆ. ಮತ್ತೆ ತಿರುಪತಿಯಿಂದ ಮಧ್ಯಾಹ್ನ 3ಕ್ಕೆ ಹೊರಟು 3.50ಕ್ಕೆ ಶಿವಮೊಗ್ಗ ತಲುಪಲಿದೆ.
ಶಿವಮೊಗ್ಗದಿಂದ ಬೆಂಗಳೂರಿಗೆ ಈಗಾಗಲೇ ಇಂಡಿಗೋ ಸಂಸ್ಥೆ ವಿಮಾನ ಸೇವೆ ಒದಗಿಸುತ್ತಿದೆ. ಮುಂದೆ ಶಿವಮೊಗ್ಗದಿಂದ ದೆಹಲಿ ಸೇರಿದಂತೆ ರಾಜ್ಯ, ದೇಶದ ವಿವಿಧ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಉದ್ದೇಶವಿದೆ.