ವಾರದಲ್ಲಿ ಮೇಲ್ಸೇತುವೆಗಳ ಕಾಮಗಾರಿ ಆರಂಭಕ್ಕೆ ಸಂಸದ ನಳಿನ್‌ ಸೂಚನೆ

Published : Jul 02, 2023, 06:42 AM IST
ವಾರದಲ್ಲಿ ಮೇಲ್ಸೇತುವೆಗಳ ಕಾಮಗಾರಿ ಆರಂಭಕ್ಕೆ ಸಂಸದ ನಳಿನ್‌ ಸೂಚನೆ

ಸಾರಾಂಶ

ಮಂಗಳೂರಿನ ನಂತೂರು,  ಕೆಪಿಟಿ ಹಾಗೂ ಕೂಳೂರುಗಳಲ್ಲಿ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆ ಕಾಮಗಾರಿಗೆ ಅಡೆತಡೆಯಾಗಿರುವ ಪರಿಕರಗಳನ್ನು ಕೂಡಲೇ ಸ್ಥಳಾಂತರಿಸಲು ಕ್ರಮಕೈಗೊಳ್ಳಬೇಕು. ಇನ್ನು ಒಂದು ವಾರದಲ್ಲಿ ಇಲ್ಲಿ ಕಾಮಗಾರಿ ಆರಂಭಿಸುವಂತೆ ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರು ಹೆದ್ದಾರಿ ಇಲಾಖಾ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಮಂಗಳೂರು (ಜು.2):  ಮಂಗಳೂರಿನ ನಂತೂರು,  ಕೆಪಿಟಿ ಹಾಗೂ ಕೂಳೂರುಗಳಲ್ಲಿ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆ ಕಾಮಗಾರಿಗೆ ಅಡೆತಡೆಯಾಗಿರುವ ಪರಿಕರಗಳನ್ನು ಕೂಡಲೇ ಸ್ಥಳಾಂತರಿಸಲು ಕ್ರಮಕೈಗೊಳ್ಳಬೇಕು. ಇನ್ನು ಒಂದು ವಾರದಲ್ಲಿ ಇಲ್ಲಿ ಕಾಮಗಾರಿ ಆರಂಭಿಸುವಂತೆ ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರು ಹೆದ್ದಾರಿ ಇಲಾಖಾ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಅವರು ಶನಿವಾರ ಇಲ್ಲಿನ ಜಿ.ಪಂ. ನೇತ್ರಾವತಿ ಸಭಾಂಗಣದಲ್ಲಿ ದ.ಕ.ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ(ದಿಶಾ) ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

 

ಪಕ್ಷಕ್ಕೆ ಮುಜುಗರ ತರುವ ಬಿಜೆಪಿಗರ ಬಾಯಿಗೆ ಬೀಗ..!

ಪಾಲನಾ ವರದಿ ವೇಳೆ ವಿವಿಧ ಹೆದ್ದಾರಿ ಕಾಮಗಾರಿಗಳ ಪ್ರಗತಿ ಪ್ರಸ್ತಾಪಿಸಿದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಇಲಾಖೆ(ಎನ್‌ಎಚ್‌ಐಎ) ಎಂಜಿನಿಯರ್‌ ಅನಿರುದ್ಧ ಕಾಮತ್‌, ಬಿ.ಸಿ.ರೋಡ್‌-ಪೆರಿಯಶಾಂತಿ ಹೆದ್ದಾರಿಯಲ್ಲಿ 48.48 ಕಿ.ಮೀ. ಪೈಕಿ 14.2 ಕಿ.ಮೀ. ಕಾಮಗಾರಿ ಮುಕ್ತಾಯವಾಗಿದ್ದು, ಶೇ.31.4 ಪ್ರಗತಿ ಆಗಿದೆ. ಪೆರಿಯಶಾಂತಿ-ಅಡ್ಡಹೊಳೆಯ 8.5 ಕಿ.ಮೀ. ಕಾಮಗಾರಿ ಮುಗಿದಿದ್ದು, ಶೇ.61 ಪ್ರಗತಿ ಆಗಿದೆ. ಈ ಕಾಮಗಾರಿಗಳು 2023ರ ಡಿಸೆಂಬರ್‌ಗೆ ಮುಕ್ತಾಯಗೊಳ್ಳಲಿದೆ. ಕಲ್ಲಡ್ಕದಲ್ಲಿ ಮೇಲ್ಸೇತುವೆ ಕಾಮಗಾರಿ ಶೇ.34ರಷ್ಟುಮುಕ್ತಾಯವಾಗಿದ್ದು, 2024ರ ಮೇ ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಕುಲಶೇಖರ-ಸಾಣೂರು ಹೆದ್ದಾರಿ ಕಾಮಗಾರಿ ಶೇ.21ರಷ್ಟುಆಗಿದೆ, ಇಲ್ಲಿ 48 ಕಿ.ಮೀ. ಪೈಕಿ 15 ಕಿ.ಮೀ. ಕಾಮಗಾರಿ ಪೂರ್ತಿಯಾಗಿದ್ದು, 2024 ಅಕ್ಟೋಬರ್‌ ವೇಳೆಗೆ ಪೂರ್ತಿಯಾಗಲಿದೆ. ಆದರೆ ಹೆದ್ದಾರಿಯಲ್ಲಿರುವ ವಿದ್ಯುತ್‌ ಲೈನ್‌ ಮತ್ತಿತರ ಪರಿಕರಗಳ ಹಸ್ತಾಂತರಗೊಳ್ಳದೆ, ಭೂಸ್ವಾಧೀನ ಸಮಸ್ಯೆಯಿಂದ ನಂತೂರು, ಕೆಪಿಟಿ, ಕೂಳೂರುಗಳಲ್ಲಿ ಕಾಮಗಾರಿ ನಡೆಸಲು ಕಷ್ಟವಾಗಿದೆ ಎಂದರು.

15 ದಿನಕ್ಕೊಮ್ಮೆ ಪರಿಶೀಲನೆಗೆ ಡಿಸಿಗೆ ಸೂಚನೆ:

ಎನ್‌ಎಚ್‌ಐಎ, ರಾಷ್ಟ್ರೀಯ ಹೆದ್ದಾರಿ ಇಲಾಖೆಗಳ ಎಲ್ಲ ಕಾಮಗಾರಿ ಪ್ರಗತಿ ಕುರಿತಂತೆ ಪ್ರತಿ 15 ದಿನಕ್ಕೊಮ್ಮೆ ಪರಿಶೀಲನಾ ಸಭೆ ನಡೆಸುವಂತೆ ಜಿಲ್ಲಾಧಿಕಾರಿಗೆ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಸೂಚಿಸಿದರು. ಗೇಲ್‌ ಗ್ಯಾಸ್‌ ಪೈಪ್‌ಲೈನ್‌ ಕಾಮಗಾರಿಗೆ ಪಾಲಿಕೆಯ ಪೂರ್ವಾನುಮತಿ ಪಡೆದೇ ನಡೆಸಬೇಕು. ಕಾಮಗಾರಿ ಬಗ್ಗೆ ಪಾಲಿಕೆಗೆ ಹಾಗೂ ನಾಗರಿಕರಿಗೆ ಮಾಹಿತಿ ನೀಡಬೇಕು. ಈ ವೇಳೆ ಉಂಟಾಗುವ ನೀರಿನ ಸಂಪರ್ಕ ಕಡಿತ, ವಿದ್ಯುತ್‌ ವ್ಯತ್ಯಯಗಳನ್ನು ಕಾಮಗಾರಿ ನಡೆಸುವವರೇ ಸರಿಪಡಿಸಬೇಕು. ನಿಗದಿತ ಸಮಯದೊಳಗೆ ಕಾಮಗಾರಿ ಮುಕ್ತಾಯಕ್ಕೆ ಕ್ರಮ ಕೈಗೊಳ್ಳಬೇಕು. ಮಳೆಗಾಲದಲ್ಲಿ ಹೆದ್ದಾರಿ ಕಾಮಗಾರಿ ವೇಳೆ ನಾಗರಿಕರಿಗೆ, ವಾಹನಗಳ ಸಂಚಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದರು.

ಬ್ರಹ್ಮರಕೂಟ್ಲುವಿನಲ್ಲಿ ಬ್ರಹ್ಮಸ್ಥಾನ ಸ್ಥಳಾಂತರಗೊಂಡರೆ, ಅಲ್ಲಿ ನಾಲ್ಕು ಪಥದ ಕಾಮಗಾರಿ ನಡೆಸಬೇಕು. ಸುರತ್ಕಲ್‌ನ ಎನ್‌ಐಟಿಕೆ ಹಳೆ ಟೋಲ್‌ಗೇಟ್‌ನು ತೆರವುಗೊಳಿಸಬೇಕು ಎಂದು ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

ಕಾಮಗಾರಿ ತಡೆದರೆ ಮತ್ತೆ ವಿಳಂಬ:

ಟೆಂಡರ್‌ ಹಂತದಲ್ಲಿರುವ ಕಾಮಗಾರಿಗೆ ರಾಜ್ಯ ಸರ್ಕಾರ ತಡೆಹಿಡಿದೆ. ಇದರಿಂದಾಗಿ ಮತ್ತೆ ಕಾಮಗಾರಿ ನಡೆಸಬೇಕಾದರೆ, ಎಲ್ಲ ಕಡತಗಳು ಬೆಂಗಳೂರಿಗೆ ಹೋಗಿ ಮರು ಅನುಮೋದನೆಗೊಂಡು ಬರಬೇಕು. ಇದಕ್ಕೆ ಸಾಕಷ್ಟುಸಮಯ ಹಿಡಿಯುತ್ತದೆ. ಪಾಲಿಕೆ ವ್ಯಾಪ್ತಿಯಲ್ಲಿ ಸ್ಮಾರ್ಚ್‌ಸಿಟಿ ಸೇರಿದಂತೆ ವಿವಿಧ ಕಾಮಗಾರಿ ಅನುಷ್ಠಾನಗೊಳ್ಳದೆ ಆರಂಭದಲ್ಲೇ ವಿಳಂಬವಾಗುವಂತೆ ಆಗಿದೆ. ಇದನ್ನು ಸರ್ಕಾರದ ಗಮನಕ್ಕೆ ತರುವಂತೆ ಶಾಸಕ ವೇದವ್ಯಾಸ್‌ ಕಾಮತ್‌ ಹೇಳಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಸ್ಮಾರ್ಚ್‌ಸಿಟಿ ಅನುಷ್ಠಾನವಾಗುತ್ತಿದೆ. ಆದರೆ ಬದಿಬದಿಗಳಲ್ಲಿ ತಳ್ಳುಗಾಡಿ ವ್ಯಾಪಾರಸ್ಥರು ಎಲ್ಲೆಂದರಲ್ಲಿ ಫುಟ್‌ಪಾತ್‌ಗಳಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಅವರಿಗೆ ಪ್ರತ್ಯೇಕ ಜಾಗದಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ವೇದವ್ಯಾಸ್‌ ಕಾಮತ್‌ ಆಗ್ರಹಿಸಿದರು.

ಕಿನ್ನಿಗೋಳಿ ಹಾಗೂ ಬಜಪೆಯಲ್ಲಿ ಬಡವರಿಗೆ ಮನೆ ನಿರ್ಮಾಣ ಕಾಮಗಾರಿ ವಿಳಂಬವಾಗಿದೆ. ಅಲ್ಲಿ ಸಿವಿಲ್‌ ಎಂಜಿನಿಯರ್‌ರ ಕೊರತೆ ಇದ್ದು, ಇದನ್ನು ಸರಿಪಡಿಸಬೇಕಾಗಿದೆ. ಮನೆ ಮಂಜೂರಾದರೂ ಕಾಮಗಾರಿ ನಡೆಸದಿದ್ದರೆ, ಬೇರೆ ಫಲಾನುಭವಿ ಆಯ್ಕೆಗೆ ಮುಂದಾಗುವಂತೆ ಶಾಸಕ ಉಮಾನಾಥ ಕೋಟ್ಯನ್‌ ಅಧಿಕಾರಿಗಳ ಗಮನ ಸೆಳೆದರು.

ಪುಂಜಾಲಕಟ್ಟೆ-ಚಾರ್ಮಾಡಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ನಿಗದಿತ ಸ್ಕೆಚ್‌ನಂತೆಯೇ ನಡೆಸಬೇಕು. ಇಲ್ಲಿ ಮಾಜಿ ಶಾಸಕರು ಹಸ್ತಕ್ಷೇಪಕ್ಕೆ ಮುಂದಾಗಿದ್ದು, ಇದಕ್ಕೆ ಅವಕಾಶ ನೀಡಬಾರದು ಎಂದು ಶಾಸಕ ಹರೀಶ್‌ ಪೂಂಜಾ ಆಗ್ರಹಿಸಿದರು. ನಿಗದಿತ ಸ್ಕೆಚ್‌ ಪ್ರಕಾರವೇ ಕಾಮಗಾರಿ ನಡೆಸುವಂತೆ ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ ನಳಿನ್‌ ಕುಮಾರ್‌ ಸೂಚಿಸಿದರು.

ಮಳೆಗಾಲದಲ್ಲಿ ತುರ್ತು ಸಂದರ್ಭಗಳಲ್ಲಿ ಅನುಕೂಲವಾಗಲು ಉಜಿರೆ ಬದಲು ಚಾರ್ಮಾಡಿಯಲ್ಲಿ ಕ್ರೇನ್‌ ಸನ್ನದ್ಧ ಸ್ಥಿತಿಯಲ್ಲಿ ಇರಿಸುವಂತೆ ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಸೂಚನೆ ನೀಡಿದರು.

ಪಾಲಿಕೆ ಮೇಯರ್‌ ಜಯಾನಂದ ಅಂಚನ್‌, ಜಿ.ಪಂ. ಸಿಇಒ ಡಾ.ಆನಂದ್‌, ಪಾಲಿಕೆ ಆಯುಕ್ತ ಆನಂದ್‌ ಇದ್ದರು.

ಬ್ಯಾಂಕ್‌ಗಳಲ್ಲಿ ಕನ್ನಡ ಬಲ್ಲವರ ನೇಮಿಸಲು ಸೂಚನೆ

ದ.ಕ. ಜಿಲ್ಲೆಯ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಇಂಗ್ಲಿಷ್‌ ಹಾಗೂ ಹಿಂದಿ ಭಾಷೆ ಮಾತ್ರ ಗೊತ್ತಿರುವ ಅಧಿಕಾರಿಗಳಿಂದಾಗಿ ಗ್ರಾಮೀಣ ಜನತೆಗೆ ವಹಿವಾಟು ನಡೆಸಲು ಭಾಷಾ ತೊಡಕು ಉಂಟಾಗುತ್ತಿದೆ. ಇದನ್ನು ನಿವಾರಿಸಲು ಸ್ಥಳೀಯ ಭಾಷೆ ಬಲ್ಲ ಅಧಿಕಾರಿ ಅಥವಾ ಸಿಬ್ಬಂದಿ ನೇಮಿಸುವಂತೆ ಈಗಾಗಲೇ ಕೇಂದ್ರ ಸರ್ಕಾರ ಕೂಡ ಸೂಚನೆ ನೀಡಿದೆ. ಇದು ಸರಿಯಾಗಿ ಪಾಲನೆಯಾಗುತ್ತಿಲ್ಲ. ಇದರಿಂದಾಗಿ ಗ್ರಾಮೀಣ ಜನತೆ ಸಹಕಾರಿ ಬ್ಯಾಂಕ್‌ಗಳತ್ತ ಮುಖಮಾಡುವಂತಾಗಿದೆ ಎಂದು ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

ಇದು ಪಕ್ಕಾ ಶೇ.60 ಕಮಿಷನ್‌ ಸರ್ಕಾರ, ನಾವು ಕಾದು ನೋಡುತ್ತೇವೆ: ನಳಿನ್‌ ಕುಮಾರ್‌ ಕಟೀಲ್‌

ಈ ಬಗ್ಗೆ ಉತ್ತರಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಕನ್ನಡ ಗೊತ್ತಿರದ ಅಧಿಕಾರಿ/ಸಿಬ್ಬಂದಿಗಳ ಪಟ್ಟಿಸಿದ್ಧಪಡಿಸಿ ಜಿ.ಪಂ.ಗೆ ಸಲ್ಲಿಸಿ, ಬ್ಯಾಂಕ್‌ಗಳಲ್ಲಿ ಕನ್ನಡ ಗೊತ್ತಿರುವವರನ್ನು ನೋಡೆಲ್‌ ಆಗಿ ನೇಮಕಗೊಳಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಲೀಡ್‌ ಬ್ಯಾಂಕ್‌ ಅಧಿಕಾರಿಗೆ ಸೂಚನೆ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

KMF vs Amul: ನಂದಿನಿ ಮೊಸರಿನ ದರ ಏರಿಕೆ ಬೆನ್ನಲ್ಲೇ, ಅಮುಲ್ ಮೊಸರು ₹10 ರ ಇಳಿಕೆ!
Karnataka News Live: Bantwal - ಸೈಕಲ್ ಏರಿ ಹಳ್ಳಿಹಳ್ಳಿಗೆ ಸಂಚರಿಸುವ ಜನಪರ ವೈದ್ಯ 68ರ ಅಬ್ಬು ಪಂಡಿತರು!